World Athletics Championship 6 ಮಂದಿ ಫೈನಲ್‌ಗೆ, 1 ಪದಕ: ಭಾರತದ ಶ್ರೇಷ್ಠ ಪ್ರದರ್ಶನ

Published : Jul 25, 2022, 10:44 AM IST
World Athletics Championship 6 ಮಂದಿ ಫೈನಲ್‌ಗೆ, 1 ಪದಕ: ಭಾರತದ ಶ್ರೇಷ್ಠ ಪ್ರದರ್ಶನ

ಸಾರಾಂಶ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ಅಥ್ಲೆಟಿಕ್ಸ್‌ ಕೂಟದಲ್ಲಿ 6 ಮಂದಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಶ್ರೇಷ್ಠ ಪ್ರದರ್ಶನ

ಯುಜೀನ್‌(ಜು.25): ಜುಲೈ 15ಕ್ಕೆ ಆರಂಭಗೊಂಡ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಸೋಮವಾರ ಮುಕ್ತಾಯಗೊಳ್ಳಲಿದ್ದು, ಭಾರತ 1 ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದಲ್ಲಿ ಭಾರತದ ಒಟ್ಟು ಆರು ಅಥ್ಲೀಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಈ ಪೈಕಿ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಚೋಪ್ರಾ ಏಕೈಕ ಪದಕ ಗೆದ್ದುಕೊಂಡಿದ್ದಾರೆ. ಉಳಿದಂತೆ ಲಾಂಗ್‌ಜಂಪ್‌ನಲ್ಲಿ ಶ್ರೀಶಂಕರ್‌ ಮುರಳಿ, 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಾಬ್ಳೆ, ಮಹಿಳೆಯರ ಜಾವೆಲಿನ್‌ನಲ್ಲಿ ಅನ್ನು ರಾಣಿ, ಪುರುಷರ ಜಾವೆಲಿನ್‌ನಲ್ಲಿ ರೋಹಿತ್‌ ಯಾದವ್‌ ಹಾಗೂ ಟ್ರಿಪಲ್‌ ಜಂಪ್‌ನಲ್ಲಿ ಎಲ್ಡೊಸ್‌ ಪೌಲ್‌ ಫೈನಲ್‌ ಪ್ರವೇಶಿಸಿದ್ದರು. 

ಇದು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. 2003ರಲ್ಲಿ ಅಂಜು ಬಾಬಿ ಜಾರ್ಜ್ ಲಾಂಗ್‌ ಜಂಪ್‌ನಲ್ಲಿ ಕಂಚು ಗೆದ್ದ ಬಳಿಕ ಭಾರತ ಯಾವುದೇ ಪದಕ ಪಡೆದಿರಲಿಲ್ಲ. ಕೂಟದಲ್ಲಿ ಆತಿಥೇಯ ಅಮೆರಿಕ 10 ಚಿನ್ನ ಸೇರಿ 28 ಪದಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇಥಿಯೋಪಿಯಾ 4 ಚಿನ್ನ ಸೇರಿದಂತೆ 10 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಫೈನಲ್‌ನಲ್ಲಿ ನೀರಜ್‌ ಶೋ ಹೇಗಿತ್ತು?

ನೀರಜ್‌ ಚೋಪ್ರಾ ಪದಕ ಹಾದಿ ಕಠಿಣವಾಗಿತ್ತು. ಮೊದಲ ಪ್ರಯತ್ನ ಫೌಲ್‌ ಆದ ಬಳಿಕ 2 ಮತ್ತು 3ನೇ ಪ್ರಯತ್ನದಲ್ಲಿ ನೀರಜ್‌ ಕ್ರಮವಾಗಿ 82.39 ಮೀ. ಹಾಗೂ 86.37 ಮೀ. ದೂರ ಎಸೆದರು. ಮೂರು ಪ್ರಯತ್ನಗಳ ಬಳಿಕ 4ನೇ ಸ್ಥಾನದಲ್ಲಿ ಉಳಿದುಕೊಂಡಿದ್ದ ನೀರಜ್‌, 4ನೇ ಪ್ರಯತ್ನದಲ್ಲಿ 88.13 ಮೀ. ಎಸೆದು 2ನೇ ಸ್ಥಾನಕ್ಕೇರಿದರು. ಕೊನೆ 2 ಪ್ರಯತ್ನಗಳು ಫೌಲ್‌ ಆದರೂ ಮುನ್ನಡೆ ಕಾಯ್ದುಕೊಂಡ ನೀರಜ್‌ ಪದಕ ಹೆಕ್ಕಿದರು.

World Athletics Championship ಪದಕ ಗೆಲ್ಲಲು ನೀರಜ್‌ ಚೋಪ್ರಾ 7 ತಿಂಗಳ ತಯಾರಿ

ಇನ್ನು ಪೀಟರ್ಸ್‌ 6 ಪ್ರಯತ್ನಗಳಲ್ಲಿ 3 ಬಾರಿ 90 ಮೀ. ಗಡಿ ದಾಟಿದರು. ಮೊದಲ ಪ್ರಯತ್ನದಲ್ಲೇ 90.21 ಮೀ. ದೂರ ಎಸೆದ ಅವರು, 2ನೇ ಬಾರಿ 90.46 ಮೀ. ಎಸೆದು ಅಗ್ರಸ್ಥಾನ ಕಾಯ್ದುಕೊಂಡರು. ಕೊನೆ ಪ್ರಯತ್ನದಲ್ಲಿ 90.54 ಮೀ. ಎಸೆದು ದೊಡ್ಡ ಅಂತರದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಅವರ ಯಾವುದೇ ಎಸೆತಗಳು ಫೌಲ್‌ ಆಗಲಿಲ್ಲ.

ನೀರಜ್‌ ಚೋಪ್ರಾ ಭಾರತದ ಶ್ರೇಷ್ಠಾತಿ ಶ್ರೇಷ್ಠ ಅಥ್ಲೀಟ್‌?

ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕದ ಮೂಲಕ ಭಾರತೀಯರ ಮನೆಮಾತಾಗಿದ್ದ ನೀರಜ್‌ ಚೋಪ್ರಾ ವಿಶ್ವ ಅಥ್ಲೆಟಿಕ್ಸ್‌ನಲ್ಲೂ ಪದಕ ಗೆಲ್ಲುವ ಮೂಲಕ ಭಾರತದ ಶ್ರೇಷ್ಠಾತಿ ಶ್ರೇಷ್ಠ ಅಥ್ಲೀಟ್‌ ಎನಿಸಿಕೊಂಡಿದ್ದಾರೆ. 2016ರಲ್ಲಿ ದಕ್ಷಿಣ ಏಷ್ಯನ್‌ ಗೇಮ್ಸ್‌ ಹಾಗೂ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, 2017ರಲ್ಲಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದರು. 2018ರ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ನಲೂ ಅವರು ಚಿನ್ನದ ಪದಕ ಪಡೆದಿದ್ದರು.

ಟ್ರಿಪಲ್‌ ಜಂಪ್‌: ಎಲ್ಡೋಸ್‌ ಪೌಲ್‌ ನಿರಾಸೆ

ಯುಜೀನ್‌(ಅಮೆರಿಕ): ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ಮೊದಲ ಟ್ರಿಪಲ್‌ ಜಂಪ್‌ ಪಟು ಎನಿಸಿಕೊಂಡಿದ್ದ ಎಲ್ಡೊಸ್‌ ಪೌಲ್‌ ಪದಕ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಭಾನುವಾರ ಮೊದಲ ಮೂರು ಪ್ರಯತ್ನಗಳಲ್ಲಿ 16.79 ಮೀ. ದೂರ ಜಿಗಿದ ಪೌಲ್‌ ಅಂತಿಮ ಸುತ್ತು ಪ್ರವೇಶಿಸಲು ವಿಫಲರಾದರು. ಇನ್ನು, ಪುರುಷರ 4*400 ಮೀ. ರಿಲೇ ಸ್ಪರ್ಧೆಯಲ್ಲಿ ಭಾರತ ಹೀಟ್ಸ್‌ನಲ್ಲಿ 6, ಒಟ್ಟಾರೆ 12ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!