2019ರ ವಿಶ್ವಕಪ್‌ನ 5 ಅತ್ಯಂತ ಕಿರಿಯ ಆಟಗಾರರಿವರು

By Web DeskFirst Published May 30, 2019, 9:34 PM IST
Highlights

12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವ ಕ್ರಿಕೆಟಿಗರು ಮಿಂಚಲು ರೆಡಿಯಾಗಿದ್ದಾರೆ. ಈ ಬಾರಿ ವಿಶ್ವಕಪ್ ಆಡುತ್ತಿರುವ ಅತಿ ಕಿರಿಯರ ಆಟಗಾರರ ಪಟ್ಟಿಯಲ್ಲಿ ಆಫ್ಘಾನಿಸ್ತಾನದ ಇಬ್ಬರು, ಪಾಕಿಸ್ತಾನದ ಇಬ್ಬರು ಯುವ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. 

ಅತಿ ಕಿರಿಯ ವಯಸ್ಸಿನಲ್ಲೇ ಏಕದಿನ ವಿಶ್ವಕಪ್ ಆಡುವ ಅವಕಾಶ ಎಲ್ಲಾ ಆಟಗಾರರಿಗೂ ಸಿಗುವುದಿಲ್ಲ. ಈ ವಿಶ್ವಕಪ್‌ಗೆ ಆಯ್ಕೆಯಾಗಿರುವ 5 ಅತಿ ಕಿರಿಯ ಆಟಗಾರರ ಪರಿಚಯ ಇಲ್ಲಿದೆ.

1. ಮುಜೀಬ್ ರಹಮಾನ್

2017ರಲ್ಲಿ 16 ವರ್ಷವಿದ್ದಾಗಲೇ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಆಫ್ಘಾನಿಸ್ತಾನದ ಮುಜೀಬ್ ರಹಮಾನ್, 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸ್ಪಿನ್ ಬೌಲರ್ ಆಗಿರುವ ಮುಜೀಬ್ ಐಪಿಎಲ್, ಬಿಗ್‌ಬ್ಯಾಶ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

2. ಶಾಹೀನ್ ಅಫ್ರಿದಿ

2018ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ, ಆಡಿರುವ 14 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ವಿಶ್ವಕಪ್‌ನಲ್ಲಿ ಪಾಕ್ ಬೌಲಿಂಗ್ ಪಡೆ ಮುನ್ನಡೆಸುವ ನಿರೀಕ್ಷೆ ಮೂಡಿಸಿದ್ದಾರೆ.

3.ಮೊಹಮದ್ ಹುಸ್ನೈನ್

2 ತಿಂಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಪಾಕಿಸ್ತಾನದ ಬಲಗೈ ವೇಗಿ ಮೊಹಮದ್ ಹುಸ್ನೈನ್, ಆಡಿರುವ 5 ಪಂದ್ಯಗಳಲ್ಲಿ 5 ವಿಕೆಟ್ ಕಿತ್ತಿದ್ದಾರೆ. ಸ್ವಿಂಗ್ ಹಾಗೂ ವೇಗದಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಬಲ್ಲ ಬೌಲರ್ ಈತ.

4. ರಶೀದ್ ಖಾನ್

ಆಫ್ಘಾನಿಸ್ತಾದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಸಂಪಾದಿಸಿದ್ದಾರೆ. ಐಪಿಎಲ್, ಬಿಗ್ ಬ್ಯಾಶ್ ಸೇರಿದಂತೆ ಪ್ರಮುಖ ಟಿ20 ಲೀಗ್ ಗಳಲ್ಲಿ ಯಶಸ್ಸು ಕಂಡಿರುವ ರಶೀದ್, ಈ ವಿಶ್ವಕಪ್‌ನಲ್ಲಿ ಎಲ್ಲರ ಕುತೂಹಲ ಕೆರಳಿಸಿದ್ದಾರೆ.

5.ಆವಿಷ್ಕಾ ಫರ್ನಾಂಡೋ

2016ರಲ್ಲೇ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟರೂ, 21 ವರ್ಷದ ಆವಿಷ್ಕಾ ಫರ್ನಾಂಡೋ ಈ ವರೆಗೂ ಆಡಿರುವುದು ಕೇವಲ 6 ಏಕದಿನ ಮಾತ್ರ. ಏಕೈಕ ಅರ್ಧಶತಕ ಬಾರಿಸಿದ್ದರೂ, ಅವರ ಪ್ರತಿಭೆ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಲಂಕಾ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

click me!