ಹರಾಜಿನಲ್ಲಿ ಅಚ್ಚರಿ ಮೂಡಿಸಿದ ಆಟಗಾರರಿವರು

By Suvarna Web DeskFirst Published Feb 20, 2017, 9:23 AM IST
Highlights

ತಮಿಳುನಾಡಿನ ತಂಗರಾಸು ನಟರಾಜನ್, ಮುರುಗನ್ ಅಶ್ವಿನ್, ಹೈದರಾಬಾದ್‌ನ ಮೊಹ್ಮದ್ ಸಿರಾಜ್, ಕರ್ನಾಟಕದ ಕೆ. ಗೌತಮ್, ರಾಜಸ್ತಾನದ ಅಂಕಿತ್ ಚೌಧರಿ ಅಚ್ಚರಿಯ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಬೆಂಗಳೂರು(ಫೆ.20): ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 30 ದೇಶಿಯ ಆಟಗಾರರನ್ನು ಮೊದಲ ಬಾರಿಗೆ ಖರೀದಿಸಲಾಗಿದೆ. ಇದರಲ್ಲಿ ಐವರು ಆಟಗಾರರ ದೊಡ್ಡ ಮೊತ್ತಕ್ಕೆ ಖರೀದಿಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ತಮಿಳುನಾಡಿನ ತಂಗರಾಸು ನಟರಾಜನ್, ಮುರುಗನ್ ಅಶ್ವಿನ್, ಹೈದರಾಬಾದ್‌ನ ಮೊಹ್ಮದ್ ಸಿರಾಜ್, ಕರ್ನಾಟಕದ ಕೆ. ಗೌತಮ್, ರಾಜಸ್ತಾನದ ಅಂಕಿತ್ ಚೌಧರಿ ಅಚ್ಚರಿಯ ಮೊತ್ತಕ್ಕೆ ಬಿಡ್ ಆಗಿದ್ದು, ಈ ಆಟಗಾರರ ಡಿಟೇಲ್ಸ್ ಇಲ್ಲಿದೆ.

ಅಚ್ಚರಿ ತಂದ ಆಟಗಾರರು

ತಂಗರಾಸು ನಟರಾಜನ್ - 3 ಕೋಟಿ (ಕಿಂಗ್ಸ್ ಪಂಜಾಬ್)

ತಮಿಳುನಾಡಿನ ಎಡಗೈ ವೇಗದ ಬೌಲರ್ ಆಗಿರುವ ನಟರಾಜನ್, 2016ರ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌'ಪಿಎಲ್)ನಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡದ ಪರ ಕಣಕ್ಕಿಳಿದಿದ್ದ ನಟರಾಜನ್ 7 ಪಂದ್ಯಗಳಿಂದ 10 ವಿಕೆಟ್ ಕಿತ್ತಿದ್ದಾರೆ. ಸೂಪರ್ ಓವರ್ ಪ್ರದರ್ಶನದಲ್ಲಿ ನಟರಾಜನ್ 6 ಯಾರ್ಕರ್ ಬಾಲ್‌'ಗಳನ್ನು ಎಸೆದು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. 7.33ರ ಎಕಾನಮಿ ಹೊಂದಿರುವ ನಟರಾಜನ್, ಈ ಆವೃತ್ತಿಯ ರಣಜಿ ಟ್ರೋಫಿಯ 9 ಪಂದ್ಯಗಳಿಂದ 27 ವಿಕೆಟ್ ಪಡೆದಿದ್ದಾರೆ.

ಮೊಹ್ಮದ್ ಸಿರಾಜ್ - 2.60 ಕೋಟಿ (ಎಸ್‌'ಆರ್‌'ಎಚ್)

22 ವರ್ಷ ವಯಸ್ಸಿನ ಹೈದರಾಬಾದ್ ತಂಡದ ವೇಗಿ ಮೊಹ್ಮದ್ ಸಿರಾಜ್, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಅಂತರ ವಲಯ ಟಿ20 ಟೂರ್ನಿಯಲ್ಲಿ ಸಿರಾಜ್ 6.57ರ ಎಕಾನಮಿಯಲ್ಲಿ 9 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದಾರೆ.

ಕೃಷ್ಣಪ್ಪ ಗೌತಮ್- 2 ಕೋಟಿ (ಮುಂಬೈ ಇಂಡಿಯನ್ಸ್)

ಆಲ್ರೌಂಡರ್ ಆಟಗಾರರಾಗಿರುವ ಕರ್ನಾಟಕದ ಕೆ. ಗೌತಮ್, ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 8 ಪಂದ್ಯಗಳಿಂದ 27 ವಿಕೆಟ್ ಕಿತ್ತಿದ್ದಾರೆ. ಇದರಲ್ಲಿ ಗೌತಮ್ ತಮಿಳುನಾಡು ವಿರುದ್ಧ 108ರನ್‌'ಗಳಿಗೆ 7 ವಿಕೆಟ್ ಪಡೆದು ಕರ್ನಾಟಕ ತಂಡವನ್ನು ಕ್ವಾರ್ಟರ್‌'ಫೈನಲ್‌'ಗೆ ಕೊಂಡೊಯ್ದಿದ್ದು ಜೀವಮಾನ ಶ್ರೇಷ್ಠ ಸಾಧನೆಯಾಗಿದೆ. ಕಳೆದ ವಾರವಷ್ಟೇ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗೌತಮ್ ಭಾರತ ಎ ತಂಡದಲ್ಲಿ ಆಡಿದ್ದಾರೆ. ಪ್ರಸಕ್ತ ಸಾಲೀನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಗೌತಮ್ 7.01ರ ಎಕಾನಮಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ 19ರನ್‌'ಗಳಿಗೆ 4 ವಿಕೆಟ್ ಪಡೆದಿರುವುದು ಬೆಸ್ಟ್ ಬೌಲಿಂಗ್ ಆಗಿದೆ.

ಅಂಕಿತ್ ಚೌಧರಿ - 2 ಕೋಟಿ (ಆರ್‌ಸಿಬಿ)

27 ವರ್ಷ ವಯಸ್ಸಿನ ರಾಜಸ್ತಾನದ ವೇಗದ ಬೌಲರ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಅಂಕಿತ್, ರಣಜಿಯಲ್ಲಿ ರಾಜಸ್ತಾನ ಪರ 21 ವಿಕೆಟ್ ಕಿತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಅಂಕಿತ್ 26ರನ್‌'ಗಳಿಗೆ 4 ವಿಕೆಟ್ ಪಡೆದಿದ್ದರು. ಆರ್‌ಸಿಬಿ ತಂಡ 7 ವೇಗದ ಬೌಲರ್‌ಗಳನ್ನು ಕೈ ಬಿಟ್ಟಿದ್ದರಿಂದ ವೇಗಿಗಳ ಅವಶ್ಯಕತೆ ಇತ್ತು. ಅಲ್ಲದೇ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ತಂಡದಿಂದ ಹೊರ ಹೋಗಿದ್ದು, ಆರ್‌ಸಿಬಿ ಕಾಂಬೀನೇಷನ್‌'ಗಾಗಿ ವೇಗಿಗಳು ಅಗತ್ಯವಾಗಿ ಬೇಕಿತ್ತು. ಹೀಗಾಗಿ ಅಂಕಿತ್ ಚೌಧರಿ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.

ಮುರುಗನ್ ಅಶ್ವಿನ್ - 1 ಕೋಟಿ (ಡಿಡಿ)

ಕಳೆದ ವರ್ಷ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪರ ಕಣಕ್ಕಿಳಿದಿದ್ದ ತಮಿಳುನಾಡಿನ ಮುರುಗನ್ ಅಶ್ವಿನ್ ಅವರನ್ನು ಈ ಬಾರಿ ಡೆಲ್ಲಿ ತಂಡ ಖರೀದಿಸಿದೆ. ಕಳೆದ ಬಾರಿ ರೈಸಿಂಗ್ ಪುಣೆ 4.5ಕೋಟಿ ನೀಡಿ ಖರೀದಿಸಿತ್ತು. ಪುಣೆ ಪರ ಎಂ. ಅಶ್ವಿನ್ 28.5 ಓವರ್‌'ಗಳಲ್ಲಿ 7 ವಿಕೆಟ್ ಪಡೆದಿದ್ದರು. 26 ವರ್ಷ ವಯಸ್ಸಿನ ಅಶ್ವಿನ್ ಅಂತರ ವಲಯ ರಾಜ್ಯ ಟಿ20 ಟೂರ್ನಿಯಲ್ಲಿ 5 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯ 4 ಪಂದ್ಯಗಳಿಂದ 6.85ರ ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದಾರೆ. ಟಿಎನ್‌'ಪಿಎಲ್‌'ನಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಆಡಿದ್ದ ಅಶ್ವಿನ್ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.

 

click me!