ಸೆಂಚುರಿ ಬಾರಿಸಿಯೂ ಅನ್’ಲಕ್ಕಿ ದಾಖಲೆಗೆ ಪಾತ್ರವಾದ ಕೆ.ಎಲ್ ರಾಹುಲ್..!

First Published Jul 8, 2018, 3:43 PM IST
Highlights

ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಒಟ್ಟು 34 ಬಾರಿ ಶತಕಗಳು ಸಿಡಿದಿವೆ. ಆದರೆ ಐದು ಬಾರಿ ಬ್ಯಾಟ್ಸ್’ಮನ್ ಶತಕ ಸಿಡಿಸಿದರೂ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಆ ನತದೃಷ್ಟ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ಇದೀಗ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರು[ಜು.08]: ಕ್ರಿಕೆಟ್’ನಲ್ಲಿ ಶತಕ ಬಾರಿಸುವುದು ಬ್ಯಾಟ್ಸ್’ಮನ್ ಪಾಲಿಗೆ ಯಾವಾಗಲೂ ಸ್ಮರಣೀಯವಾಗಿಯೇ ಇರುತ್ತದೆ. ಅದರಲ್ಲೂ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಸಿಡಿಸುವುದು ನಿಜಕ್ಕೂ ಸಾಧನೆಯೇ ಸರಿ. ಚುಟುಕು ಮಾದರಿಯ ಕ್ರಿಕೆಟ್’ನಲ್ಲಿ ಮೂರಂಕಿ ಮೊತ್ತ ದಾಖಲಿಸಿದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಗೋದು ಬಹುತೇಕ ಪಕ್ಕಾ. ಇದುವರೆಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಒಟ್ಟು 34 ಬಾರಿ ಶತಕಗಳು ಸಿಡಿದಿವೆ. ಆದರೆ ಐದು ಬಾರಿ ಬ್ಯಾಟ್ಸ್’ಮನ್ ಶತಕ ಸಿಡಿಸಿದರೂ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಆ ನತದೃಷ್ಟ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ಇದೀಗ ಸೇರ್ಪಡೆಗೊಂಡಿದ್ದಾರೆ. ಅದು ಒಮ್ಮೆ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಎರಡು ಬಾರಿ ಟಿ20 ಕ್ರಿಕೆಟ್’ನಲ್ಲಿ ಶತಕ ಸಿಡಿಸಿದರೂ ರಾಹುಲ್ ಪಂದ್ಯಶ್ರೇಷ್ಠ ಪಡೆಯಲು ವಿಫಲವಾಗಿದ್ದು ಮಾತ್ರ ದುರಂತ...

1. ಕೆ.ಎಲ್ ರಾಹುಲ್:


ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಾಹುಲ್ ಟಿ20 ಕ್ರಿಕೆಟ್’ನಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ರೋಹಿತ್ ಶರ್ಮಾ ಬಳಿಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಭಾರತ ಪರ 2 ಶತಕ ಸಿಡಿಸಿದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ರಾಹುಲ್ ಪಾತ್ರರಾಗಿದ್ದರು. ಆದಾಗಿಯೂ ರಾಹುಲ್ ಪಂದ್ಯಶ್ರೇಷ್ಠ ಗೌರವದಿಂದ ವಂಚಿತರಾದರು. ಕಾರಣ ಕುಲ್ದೀಪ್ ಯಾದವ್ ಕೇವಲ 24 ರನ್ ನೀಡಿ 5 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ.

2. ಮಾರ್ಟಿನ್ ಗಪ್ಟಿಲ್:


ಫೆಬ್ರವರಿ 16, 2018ರಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಬರೋಬ್ಬರಿ 488 ರನ್’ಗಳು ದಾಖಲಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡದ ಕ್ರಿಕೆಟಿಗ ಗಪ್ಟಿಲ್ ಕೇವಲ 54 ಎಸೆತಗಳಲ್ಲಿ 105 ರನ್ ಸಿಡಿಸಿದ್ದರು. ಆದರೆ ಡಾರ್ಶಿ ಶಾರ್ಟ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಕೇವಲ 18.4 ಓವರ್’ಗಳಲ್ಲಿ ಜಯದ ನಗೆ ಬೀರಿತು. ಶಾರ್ಟ್ 76 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

3. ಕೆ.ಎಲ್ ರಾಹುಲ್:


ಕನ್ನಡಿಗ ರಾಹುಲ್ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸಿದಾಗಲೂ ಕೂಡಾ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ವಂಚಿತರಾಗಿದ್ದರು. ವೆಸ್ಟ್’ಇಂಡಿಸ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ ಅಜೇಯ 110 ರನ್ ಸಿಡಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಎವಿನ್ ಲೆವಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.

4. ರೋಹಿತ್ ಶರ್ಮಾ:


2015ರ ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟಿ20 ಪಂದ್ಯದಲ್ಲಿಯೇ ರೋಹಿತ್ ಶರ್ಮಾ ಸ್ಫೋಟಕ ಶತಕ ಸಿಡಿಸಿದ್ದರು. ಬಲಿಷ್ಠ ಹರಿಣಗಳ ಬೌಲಿಂಗ್ ಪಡೆಗೆ ತಕ್ಕ ತಿರುಗೇಟು ನೀಡಿದ್ದ ರೋಹಿತ್ 66 ಎಸೆತಗಳಲ್ಲಿ 106 ರನ್ ಚಚ್ಚಿದ್ದರು. ಆದರೆ ಜೆ.ಪಿ ಡುಮಿನಿಯ ಆಕರ್ಷಕ ಅರ್ಧಶತಕ ಭಾರತದ ಗೆಲುವನ್ನು ಕಸಿದುಕೊಂಡಿತು. ಡುಮಿನಿಗೆ ಪಂದ್ಯಪುರುಷೋತ್ತಮ ಗೌರವಕ್ಕೆ ಭಾಜನರಾದರು.

5. ಫಾಫ್ ಡು ಪ್ಲೆಸಿಸ್:


ವೆಸ್ಟ್’ಇಂಡಿಸ್ ಎದುರು 2015ರಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೇವಲ 56 ಎಸೆತಗಳಲ್ಲಿ 119 ರನ್ ಸಿಡಿಸಿದ್ದರು. ಆಫ್ರಿಕಾ ಪರ ನಾಯಕನ ಆಟವಾಡಿದ ಡು ಪ್ಲೆಸಿಸ್ ಶತಕದ ಆಸರೆಯೊಂದಿಗೆ ತಂಡ ಬರೋಬ್ಬರಿ 231 ರನ್ ಕಲೆಹಾಕಿತ್ತು. ಆಫ್ರಿಕಾಗೆ ಪ್ರಬಲ ತಿರುಗೇಟು ನೀಡಿದ ಕೆರಿಬಿಯನ್ನರು ಇನ್ನೂ 4 ಎಸೆತಗಳಿರುವಂತೆಯೇ ಜಯದ ನಗೆ ಬೀರಿದರು. ಮಿಂಚಿನ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 41 ಎಸೆತಗಳಲ್ಲಿ 90 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. 

click me!