2002ರಲ್ಲಿ ಲಂಡನ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಟೀಂ ಇಂಡಿಯಾಗೆ ಆಸರೆಯಾಗಿದ್ದು, ಯುವರಾಜ್ ಸಿಂಗ್ ಹಾಗೂ ಮೊಹಮದ್ ಕೈಫ್ ಜೋಡಿ. ಇದು ಯುವರಾಜ್ ವೃತ್ತಿಜೀವನದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ.
146 ರನ್‌ಗೆ 5 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಯುವರಾಜ್ ಸಿಂಗ್ 63 ಎಸೆತಗಳಲ್ಲಿ 69 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ನೀಡಿದ್ದ 326 ರನ್ ಗುರಿಯನ್ನು ಇಂಡಿಯಾ ದಾಟುತ್ತಿದ್ದಂತೆ ಗಂಗೂಲಿ ಶರ್ಟ್ ಬಿಚ್ಚಿ ಕುಣಿದಾಡಿದ್ದು, ಇನ್ನೂ ಕ್ರಿಕೆಟ್ ಪ್ರಿಯರ ಕಣ್ಣಂಗಳಲ್ಲಿ ಹಸಿರಾಗಿದೆ.
2007 ಟಿ20 ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ
2007ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 6 ಬಾಲಿಗೆ 6 ಸಿಕ್ಸರ್ ಸಿಡಿಸುವ ಜತೆಗೆ, 16 ಎಸೆತಗಳಲ್ಲಿ 54 ರನ್ ಸ್ಫೋಟಿಸಿ ಟಿ-20ರಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 148 ರನ್ ಗಳಿಸಿದ್ದರು.
ಒಂದೇ ಓವರ್‌ನಲ್ಲಿ 6 ಸಿಕ್ಸರ್
2007ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬೋರ್ಡ್ ಬೌಲಿಂಗ್‌ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದರು. ಪಂದ್ಯದ 19ನೇ ಓವರ್‌ನಲ್ಲಿ ಈ ಅಭೂತ ಪೂರ್ವ ಸಾಧನೆ ಮೂಡಿಬಂತು. 2007ರ ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಹರ್ಷಲ್ ಗಿಬ್ಸ್ ಈ ಸಾಧನೆ ಮಾಡಿದ್ದರು.
ಯುವರಾಜ್ ಸಿಂಗ್ ವಿದಾಯ- ಬಾಲಿವುಡ್ ಸೆಲೆಬ್ರೆಟಿಗಳ ಟ್ವಿಟರ್ ಪ್ರತಿಕ್ರಿಯೆ!
2011 ವಿಶ್ವಕಪ್ ಹೀರೋ
2011 ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 362 ರನ್ ಸಿಡಿಸಿದ್ದ ಯುವಿ, 15 ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿದ್ದರು.
27 ಬಾರಿ ಪಂದ್ಯಶ್ರೇಷ್ಠ
ಸ್ಟೈಲಿಶ್ ಆಟಗಾರ ಯುವಿ ಒಟ್ಟು 27 ಏಕದಿನ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ 13ನೇ ಹಾಗೂ ಭಾರತದ 4ನೇ ಕ್ರಿಕೆಟಿಗರಾಗಿದ್ದಾರೆ. ಈ ಸಾಲಿನಲ್ಲಿ ಸಚಿನ್ ತೆಂಡುಲ್ಕರ್(62) ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ(32), ಸೌರವ್ ಗಂಗೂಲಿ(31) ನಂತರದ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 7 ಬಾರಿ ಪಂದ್ಯಶ್ರೇಷ್ಠಕ್ಕೆ ಭಾಜನರಾಗಿದ್ದು, ಈ ಸಾಧನೆ ಮಾಡಿದ ಭಾರತೀಯ ಕ್ರಿಕೆಟಿಗರ ಸಾಲಿನಲ್ಲಿ 3ನೇ ಸಾಲಿನಲ್ಲಿದ್ದಾರೆ. ವಿರಾಟ್ (10), ರೋಹಿತ್ ಶರ್ಮಾ(8) ಮೊದಲೆರಡು ಅಗ್ರಸ್ಥಾನದಲ್ಲಿದ್ದಾರೆ.