ಸ್ವಾತಂತ್ರ್ಯ ದಿನಾಚರಣೆಗೆ ಟೀಂ ಇಂಡಿಯಾ ಭರ್ಜರಿ ಗಿಫ್ಟ್ ನೀಡಿದೆ. ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಗೆದ್ದುಕೊಂಡ ಟೀಂ ಇಂಡಿಯಾ, ಇಂಡಿಪೆಂಡೆನ್ಸ್ ಡೇ ಸೆಲೆಬ್ರೇಷನ್ ಡಬಲ್ ಮಾಡಿದೆ. 3ನೇ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್
ಟ್ರಿನಿಡಾಡ್(ಆ.15): ಭಾರತದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರವನ್ನು ಟೀಂ ಇಂಡಿಯಾ ಇಮ್ಮಡಿಗೊಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ನೆರವಿನಿಂದ ಟೀಂ ಇಂಡಿಯಾ ಡಕ್‌ವರ್ತ್ ನಿಯಮದ ಪ್ರಕಾರ 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಸಿಕೊಂಡಿತು.
ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಬಿಟ್ಟು ಬಿಡದೆ ಮಳೆ ಕಾಡಿತು. ಹೀಗಾಗಿ ಪಂದ್ಯ ಕೆಲಕಾಲ ಸ್ಛಗಿತಗೊಂಡಿತ್ತು. ಹೀಗಾಗಿ ಪಂದ್ಯವನ್ನು 35 ಓವರ್‌ಗೆ ಸೀಮಿತಗೊಳಿಸಲಾಯಿತು. ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 240 ರನ್ ಸಿಡಿಸಿತು. ವಿದಾಯದ ಪಂದ್ಯವಾಡಿದ ಕ್ರಿಸ್ ಗೇಲ್ 41 ಎಸೆತದಲ್ಲಿ 72 ರನ್ ಸಿಡಿಸಿದರು.
241 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ರೋಹಿತ್ ಆಸರೆಯಾಗಲಿಲ್ಲ. ರೋಹಿತ್ 10 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಹೋರಾಟ ಪಂದ್ಯದ ಗತಿ ಬದಲಿಸಿತು. ಧವನ್ 36 ರನ್ ಸಿಡಿಸಿ ಔಟಾದರು. ರಿಷಬ್ ಪಂತ್ ಅವರಸಕ್ಕೆ ಬಿದ್ದು ವಿಕೆಟ್ ಕೈಚೆಲ್ಲಿದರು. ಕೊಹ್ಲಿಗೆ ಮತ್ತೆ ಶ್ರೇಯಸ್ ಅಯ್ಯರ್ ಆಸರೆಯಾದರು.
ಕೊಹ್ಲಿ ಹಾಗೂ ಅಯ್ಯರ್ ಹೋರಾಟ ಟೀಂ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಿತು. ಇತ್ತ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಸೆಂಚುರಿ ಸಿಡಿಸಿದರು. ಈ ಮೂಲಕ ಸತತ 2 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 43ನೇ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿದರು. 2ನೇ ಏಕದಿನ ಪಂದ್ಯದಲ್ಲೂ ಅಯ್ಯರ್ ಹೋರಾಟ ಭಾರತಕ್ಕೆ ಗೆಲುವು ತಂದುಕೊಟ್ಟಿತ್ತು.
ಅಯ್ಯರ್ 41 ಎಸೆತದಲ್ಲಿ 65 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ ಜೊತೆ ಹೋರಾಟ ಮುಂದುವರಿಸಿದ ಕೊಹ್ಲಿ 99 ಎಸೆತದಲ್ಲಿ ಅಜೇಯ 114 ರನ್ ಚಚ್ಚಿದರು. ಜಾದವ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು, 32.3 ಓವರ್‌ಗಳಲ್ಲಿ ಗುರಿ ತಲುಪಿತು. ಡಕ್‌ವರ್ತ್ ನಿಯಮದ ಪ್ರಕಾರ ಭಾರತ 6 ವಿಕೆಟ್ ಗೆಲುವು ಸಾಧಿಸಿತು.
ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2 ಮತ್ತು 3ನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಟಿ20 ಸರಣಿಯನ್ನು 3-0 ಅಂತರದಲ್ಲಿ ಕೊಹ್ಲಿ ಸೈನ್ಯ ಕೈವಶ ಮಾಡಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆ ದಿನ ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾ ಭರ್ಜರಿ ಗಿಫ್ಟ್ ನೀಡಿದೆ.