34 ವಾರಗಳ ಗರ್ಭಿಣಿ.. ತುಂಬು ಬಸುರಿಯಾದರೂ 7 ವಿಶ್ವ ಮ್ಯಾರಥಾನ್ ಓಡಿ ಮುಗಿಸಿದ 38ರ ಮಹಿಳೆ!

Published : Nov 22, 2026, 06:12 PM IST
Deirdre Keane

ಸಾರಾಂಶ

ನ್ಯೂಯಾರ್ಕ್‌ನ 38 ವರ್ಷದ ಡಿಯರ್ಡ್ರೆ ಕೀನ್ 34 ವಾರಗಳ ಗರ್ಭಿಣಿಯಾಗಿದ್ದಾಗಲೇ ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ. ವೈದ್ಯರ ಸಲಹೆ ಹಾಗೂ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳೊಂದಿಗೆ ಅವರು..

34 ವಾರಗಳ ಗರ್ಭಿಣಿಯಾಗಿದ್ದರೂ 38 ವರ್ಷದ ಡಿಯರ್ಡ್ರೆ ಕೀನ್ ಅವರು ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ಪೂರ್ಣಗೊಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ. ವೈದ್ಯರ ಕಟ್ಟುನಿಟ್ಟಿನ ಸಲಹೆಗಳ ನಡುವೆಯೇ ಈ ವರ್ಷದ ಏಳೂ 'ವರ್ಲ್ಡ್ ಮ್ಯಾರಥಾನ್ ಮೇಜರ್ಸ್' ಸ್ಪರ್ಧೆಗಳನ್ನು ಅವರು ಯಶಸ್ವಿಯಾಗಿ ಓಡಿ ಮುಗಿಸಿದ್ದಾರೆ.

34 ವಾರಗಳ ಗರ್ಭಿಣಿಯೊಬ್ಬರು ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. 38 ವರ್ಷದ ಡಿಯರ್ಡ್ರೆ ಕೀನ್ ಈ ಅಚ್ಚರಿಯ ಸಾಧನೆ ಮಾಡಿದ ನ್ಯೂಯಾರ್ಕ್ ಮೂಲದ ಮಹಿಳೆ. ಈ ವರ್ಷ ನಡೆದ ಏಳೂ ವಿಶ್ವ ಮ್ಯಾರಥಾನ್ ಮೇಜರ್ಸ್‌ ಸ್ಪರ್ಧೆಗಳಲ್ಲಿ ಇವರು ಭಾಗವಹಿಸಿ ಫಿನಿಶ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ನವೆಂಬರ್ 1ರಂದು ನಡೆದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್‌ ಅನ್ನು ಕೇವಲ 4 ಗಂಟೆ, 6 ನಿಮಿಷ ಹಾಗೂ 55 ಸೆಕೆಂಡ್‌ಗಳಲ್ಲಿ ಇವರು ಪೂರ್ಣಗೊಳಿಸಿದ್ದಾರೆ ಎಂದು 'ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.

ಇದೊಂದು ಅಸಾಧಾರಣ ಅನುಭವ

ವೃತ್ತಿಯಲ್ಲಿ ನರ್ಸ್ ಪ್ರಾಕ್ಟೀಷನರ್ ಹಾಗೂ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿರುವ ಕೀನ್, ನ್ಯೂಯಾರ್ಕ್ ಮ್ಯಾರಥಾನ್‌ಗೂ ಮುನ್ನ ಟೋಕಿಯೊ, ಬೋಸ್ಟನ್, ಲಂಡನ್, ಸಿಡ್ನಿ, ಬರ್ಲಿನ್ ಹಾಗೂ ಚಿಕಾಗೊ ಮ್ಯಾರಥಾನ್‌ಗಳಲ್ಲೂ ಓಡಿದ್ದರು. ಈ ಎಲ್ಲ ಪ್ರತಿಷ್ಠಿತ ಸ್ಪರ್ಧೆಗಳನ್ನು ಒಟ್ಟಾಗಿ 'ವರ್ಲ್ಡ್ ಮ್ಯಾರಥಾನ್ ಮೇಜರ್ಸ್' ಎಂದು ಕರೆಯಲಾಗುತ್ತದೆ. ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೀನ್, ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮ್ಯಾರಥಾನ್‌ ಓಡುವುದು ಅಸಾಮಾನ್ಯ ವಿಚಾರ ಅನ್ನೋದು ನನಗೆ ತಿಳಿದಿತ್ತು ಎಂದಿದ್ದಾರೆ.

ಒಟ್ಟು 11 ಸ್ಪರ್ಧೆಗಳಿಗೆ ಇವರು ರಿಜಿಸ್ಟರ್ ಮಾಡಿಕೊಂಡಿದ್ದರು. ಇದರಲ್ಲಿ 7 ಪ್ರಮುಖ ಮ್ಯಾರಥಾನ್‌ಗಳು, 2 ಅಲ್ಟ್ರಾ ಮ್ಯಾರಥಾನ್, ಒಂದು ಐರನ್‌ಮ್ಯಾನ್ ಹಾಗೂ ಐರ್ಲೆಂಡ್‌ನ ಟ್ರಯಲ್ ಮ್ಯಾರಥಾನ್ ಸೇರಿತ್ತು. ಮಾರ್ಚ್‌ನಲ್ಲಿ ಟೋಕಿಯೊ ಮ್ಯಾರಥಾನ್ ಮುಗಿಸಿದ ಬಳಿಕ, ಏಪ್ರಿಲ್‌ನಲ್ಲಿ ಬೋಸ್ಟನ್ ಹಾಗೂ ಲಂಡನ್ ಸ್ಪರ್ಧೆಗಳ ನಡುವೆ ತಪಾಸಣೆ ಮಾಡಿದಾಗಲೇ ತಾನು ಗರ್ಭಿಣಿ ಎಂಬುದು ಅವರಿಗೆ ಗೊತ್ತಾಗಿದ್ದು.

ವೈದ್ಯರ ಸಲಹೆಯಂತೆ ಹೆಜ್ಜೆ

ಗರ್ಭಿಣಿ ಎಂದು ತಿಳಿದ ಮೇಲೂ ಕೀನ್ ಓಡುವುದನ್ನು ನಿಲ್ಲಿಸಲಿಲ್ಲ. ಆದರೆ ದೈಹಿಕ ಒತ್ತಡ ಕಡಿಮೆ ಮಾಡಲು ಐರನ್‌ಮ್ಯಾನ್ ಹಾಗೂ ಒಂದು ಅಲ್ಟ್ರಾ ಮ್ಯಾರಥಾನ್‌ ಕೈಬಿಟ್ಟರು. ಆರಂಭದಲ್ಲಿ ಪತಿ ಬ್ರಯಾನ್‌ಗೆ ಕೊಂಚ ಆತಂಕವಿತ್ತು. ಆದರೆ ಪ್ರತಿ ಸ್ಪರ್ಧೆಯನ್ನೂ ಎಚ್ಚರಿಕೆಯಿಂದ ನಿರ್ಣಯಿಸಿ ಮುಂದುವರಿಯಲು ಇಬ್ಬರೂ ನಿರ್ಧರಿಸಿದರು. ವೇಗ ಹೆಚ್ಚಿಸಲು ಹೋಗದೆ, ಅಗತ್ಯವಿದ್ದರೆ ನಡೆಯುವ ಲೆಕ್ಕಾಚಾರದಲ್ಲಿ ತರಬೇತಿ ಪಡೆದರು. ಸಂಪೂರ್ಣವಾಗಿ ವೈದ್ಯರ ಒಪ್ಪಿಗೆ ಪಡೆದೇ ಅವರು ಸ್ಪರ್ಧೆಗಿಳಿದಿದ್ದರು.

ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕಾಂಶದ ಬಗ್ಗೆ ಗಮನಹರಿಸುವುದು ಹಾಗೂ ಸ್ನಾಯು ಸೆಳೆತ ಕಂಡುಬಂದರೆ ತಕ್ಷಣ ಓಟ ನಿಲ್ಲಿಸುವಂತೆ ವೈದ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರಂತೆಯೇ, 25ನೇ ವಾರದಲ್ಲಿ ಸಿಡ್ನಿ, 29ನೇ ವಾರದಲ್ಲಿ ಬರ್ಲಿನ್ ಹಾಗೂ 31ನೇ ವಾರದಲ್ಲಿ ಚಿಕಾಗೊ ಮ್ಯಾರಥಾನ್ ಮುಗಿಸಿದ ಕೀನ್, ಅಂತಿಮವಾಗಿ 34ನೇ ವಾರದಲ್ಲಿ ನ್ಯೂಯಾರ್ಕ್ ಸಿಟಿ ಮ್ಯಾರಥಾನ್‌ನ ಫಿನಿಶಿಂಗ್ ಲೈನ್ ತಲುಪಿದ್ದಾರೆ.

ಬೆನ್ನೆಲುಬಾಗಿ ನಿಂತ ಪತಿ, ಗೆಳೆಯರ ಸಾಥ್

ಗರ್ಭಾವಸ್ಥೆಯ ಅತ್ಯಂತ ಸೂಕ್ಷ್ಮ ಸಮಯವಿದ್ದಿದ್ದರಿಂದ ಈ ಕೊನೆಯ ಸ್ಪರ್ಧೆ ಕೀನ್‌ಗೆ ತುಂಬಾನೇ ಎಮೋಷನಲ್ ಆಗಿತ್ತು. ದಾರಿಯುದ್ದಕ್ಕೂ ಗೆಳೆಯರು ಹುರಿದುಂಬಿಸಿದರೆ, ಪತಿ ಬ್ರಯಾನ್ ಓಟದ ನಡುವೆ ಹಲವು ಬಾರಿ ಕುಡಿಯುವ ನೀರು ತಂದುಕೊಟ್ಟರು. ಮ್ಯಾನ್‌ಹ್ಯಾಟನ್‌ನ ಅಪ್ಪರ್ ಈಸ್ಟ್ ಸೈಡ್‌ನಲ್ಲಿರುವ ವೀಲ್ ಕಾರ್ನೆಲ್ ಮೆಡಿಕಲ್ ಸೆಂಟರ್ ಬಳಿಯೇ ಈ ಮ್ಯಾರಥಾನ್ ಸಾಗಿತ್ತು. ವಿಶೇಷವೆಂದರೆ, ಕೀನ್ ಹೆರಿಗೆಗಾಗಿ ಆಯ್ಕೆ ಮಾಡಿಕೊಂಡಿರುವುದು ಇದೇ ಆಸ್ಪತ್ರೆಯನ್ನು!

ಕೀನ್ ಸಾಧನೆ ಬರೀ ಗರ್ಭಾವಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ಈವರೆಗೆ ಒಟ್ಟು 74 ಮ್ಯಾರಥಾನ್ ಹಾಗೂ ಅಲ್ಟ್ರಾ ಮ್ಯಾರಥಾನ್‌ಗಳನ್ನು ಅವರು ಪೂರ್ಣಗೊಳಿಸಿದ್ದಾರೆ. 2023ರಲ್ಲಿ, ಕೇವಲ ಏಳು ದಿನಗಳಲ್ಲಿ ಏಳು ಖಂಡಗಳ ಏಳು ಮ್ಯಾರಥಾನ್‌ ಮುಗಿಸುವ 'ವರ್ಲ್ಡ್ ಮ್ಯಾರಥಾನ್ ಚಾಲೆಂಜ್'ನಲ್ಲೂ ಅವರು ಪಾಲ್ಗೊಂಡಿದ್ದರು. ಆ ವರ್ಷ ಈ ಚಾಲೆಂಜ್ ಪೂರ್ಣಗೊಳಿಸಿದ ಮಹಿಳೆಯರ ಪೈಕಿ ಅತ್ಯಂತ ವೇಗದ ಓಟಗಾರ್ತಿ ಎಂಬ ಹೆಗ್ಗಳಿಕೆಯೂ ಡಿಯರ್ಡ್ರೆ ಕೀನ್ ಅವರದ್ದಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಓವರ್‍‌ನಲ್ಲಿ 4 ಬಾಲ್‌ಗೆ 4 ವಿಕೆಟ್! 23 ವರ್ಷದ ವೇಗಿ ಮೇಲೆ ಕಣ್ಣಿಟ್ಟ ಐಪಿಎಲ್ ಫ್ರಾಂಚೈಸಿಗಳು!
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನವೇ ಅಧಿಕೃತವಾಗಿ ಈ ರಾಜಕೀಯ ಪಕ್ಷ ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ..! ಸಿಕ್ತು ಮಹತ್ವದ ಜವಾಬ್ದಾರಿ