
ದುಬೈ(ಏ.10): ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ ಆತಿಥ್ಯ ವಹಿಸಲಿದೆ. ಏಷ್ಯಾಕಪ್ ಟೂರ್ನಿಯು ಇದೇ ಸೆಪ್ಟಂಬರ್ 13ರಿಂದ 28ರವರೆಗೆ ನಡೆಯಲಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿಯು ಭಾರತ-ಪಾಕಿಸ್ತಾನ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಉದ್ದೇಶಪೂರ್ವಕವಾಗಿಯೇ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವ ನಿರ್ಧಾರಕ್ಕೆ ಬಂದಿದೆ ಎಂದು ಎಸಿಸಿ ಹಾಗೂ ಪಿಸಿಬಿ ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾರೆ.
ಈ ವರ್ಷ ಏಷ್ಯಾಕಪ್ ಟೂರ್ನಿಯಲ್ಲಿ ಪೂರ್ಣಾವಧಿ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಪ್ಘಾನಿಸ್ತಾನ ತಂಡಗಳು ಕಣಕ್ಕಿಳಿಯುತ್ತಿವೆ. ಆರನೇ ತಂಡವಾಗಿ ಯುಎಇ, ಹಾಂಗ್'ಕಾಂಗ್, ನೇಪಾಳ, ಸಿಂಗಾಪುರ , ಮಲೇಷ್ಯಾ ಮತ್ತು ಓಮ್ ಇವುಗಳ ಪೈಕಿ ಅಗ್ರಸ್ಥಾನ ಪಡೆಯುವ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಇದು 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಾಗಿದ್ದು, ಮೊದಲ 12 ಟೂರ್ನಿಗಳು ಏಕದಿನ ಟೂರ್ನಿಗಳಾಗಿದ್ದರೆ, ಕಳೆದ ಬಾರಿ ನಡೆದ 2016ನೇ ಏಷ್ಯಾಕಪ್ ಟೂರ್ನಿಯು ಟಿ20 ಪಂದ್ಯಾವಳಿಯಾಗಿ ಬದಲಾಗಿತ್ತು. ಎರಡು ವರ್ಷ ಹಿಂದೆ ನಡೆದ ಏಷ್ಯಾಕಪ್ ಫೈನಲ್'ನಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.