
ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಚನ್ನಮ್ಮನ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಆಗಮಿಸಿದರು. ವೇದಿಕೆ ಮೇಲಿನ ಗಣ್ಯರ ಹೆಸರು ಹೇಳುತ್ತಾ ಯತ್ನಾಳರ ಕೂಡ ಹೆಸರು ಕೂಡ ಉಲ್ಲೇಖಿಸಿದರು. ಇದರಿಂದ ಶಾಸಕ ಯತ್ನಾಳರ ಅಭಿಮಾನಿಗಳು ಭಾರೀ ಕೇಕೆ, ಸಿಳ್ಳೆ ಹಾಕಿದರು.
ಇದು ಯತ್ನಾಳರ ಕ್ಷೇತ್ರ, ಇಲ್ಲಿ ಯತ್ನಾಳರ ಅಭಿಮಾನಿಗಳಿದ್ದಾರೆ ಎಂಬುದು ಗೊತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿಗಳ ಮಾತಿಗೆ ಮತ್ತಷ್ಟು ಖುಷಿಯಾದ ಜನ ಇನ್ನೂ ಜೋರಾಗಿ ಚಪ್ಪಾಳೆ ಹೊಡೆದರು.
ಇದರಿಂದ ಸ್ಪೂರ್ತಿಗೊಂಡ ಸಿದ್ದರಾಮಯ್ಯ ಅವರು, ನೀವು ಯತ್ನಾಳರ ಅಭಿಮಾನಿಗಳು ಮಾತ್ರವಲ್ಲ, ನೀವು ನಮ್ಮ ಅಭಿಮಾನಿಗಳು ಕೂಡ ಎಂದು ಬಿಟ್ಟರು. ಆದರೆ ಇದನ್ನು ಒಪ್ಪದ ಕೆಲವರು ಸಿಎಂ ಸಾಹೇಬರೇ ನಾವು ನಿಮ್ಮ ಅಭಿಮಾನಿಗಳಲ್ರೀ.... ನಾವು ಯತ್ನಾಳರ ಅಭಿಮಾನಿಗಳು ಮಾತ್ರ ಎಂದು ಘೋಷಣೆ ಕೂಗಿದರು. ಆದರೆ ಇಂಥದ್ದನ್ನೆಲ್ಲ ಬ್ಯಾಲೆನ್ಸ್ ಮಾಡಿ ಅನುಭವವಿರುವ ಸಿದ್ದರಾಮಯ್ಯನವರು ನಿಮ್ಮೆಲ್ಲರ ಆಶೀರ್ವಾದದಿಂದಲೇ ನಾವು 136 ಸ್ಥಾನಗಳನ್ನು ಗೆದ್ದಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿನ ಎಂಟು ಕ್ಷೇತ್ರಗಳಲ್ಲಿ ನಾವೇ ಆರು ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂದು ಹೇಳಿ ಮಾತು ಮುಂದುವರೆಸಿದರು.
ಕಾರವಾರದಲ್ಲಿ ರಾಜ್ಯ ಮಟ್ಟದ ಉತ್ಸವ ಎಂಬ ಹಣೆಪಟ್ಟಿ ಹೊತ್ತ ಕರಾವಳಿ ಉತ್ಸವ ಏಳು ದಿನಗಳ ಕಾಲ ನಡೆಯಿತು. ಆದರೆ ಉತ್ಸವದಲ್ಲಿ ನಕಲಿ ವಿಐಪಿ, ವಿವಿಐಪಿಗಳ ಹಾವಳಿಯಿಂದಾಗಿ ಹೈರಾಣಾದವರು ಮಾತ್ರ ಪೊಲೀಸರು!
ಸರ್ಕಾರಿ ಉತ್ಸವವಾದ ಕರಾವಳಿ ಉತ್ಸವದಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಉತ್ಸವಕ್ಕೆ ಕೊಡುಗೆ ನೀಡಿದವರಿಗಾಗಿ ವಿಐಪಿ, ವಿವಿಐಪಿ ಪಾಸ್ ನೀಡಲಾಗಿತ್ತು. ಎಷ್ಟು ಸಂಖ್ಯೆಯಲ್ಲಿ ಪಾಸ್ ನೀಡಲಾಗಿದೆಯೋ ಅಷ್ಟೇ ಸಂಖ್ಯೆಯಲ್ಲಿ ಖುರ್ಚಿಗಳನ್ನೂ ಹಾಕಲಾಗಿತ್ತು.
ಆದರೆ ಉತ್ಸವ ಆರಂಭವಾದ ಎರಡೇ ದಿನದಲ್ಲಿ ವಿಐಪಿ, ವಿವಿಐಪಿ ಗೇಟ್‌ಗಳಲ್ಲಿ ಭದ್ರತೆಗೆ ನಿಯೋಜಿತ ಪೊಲೀಸರು ಕಕ್ಕಾಬಿಕ್ಕಿಯಾದರು. ಒಳಗಡೆ ಹಾಕಲಾದ ಕುರ್ಚಿಗಳು ಭರ್ತಿಯಾದರೂ ಜನ ವಿವಿಐಪಿ ಪಾಸ್ ಹಿಡಿದು ಬರುತ್ತಲೇ ಇದ್ದರು.
ಈ ವೇಳೆ ಪಾಸ್ ಇದ್ದರೂ ಒಳಕ್ಕೆ ಬಿಡದ ಬಗ್ಗೆ ಪೊಲೀಸರ ಮೇಲೆ ಆಕ್ರೋಶ, ಕೋಪ ತಾಪಗಳ ಸುರಿಮಳೆಯಾಯಿತು. ವಿವಿಐಪಿಗಳನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿತು.
ಅಸಲಿಗೆ ಆಗಿದ್ದೇನೆಂದರೆ ವಿವಿಐಪಿ ಪಾಸ್‌ಗಳನ್ನು ಅಂಥದ್ದೇ ಪೇಪರ್ ಬಳಸಿ ಕಲರ್ ಪ್ರಿಂಟರಿನಲ್ಲಿ ನಕಲು ಮಾಡಲಾಗಿತ್ತು. ಈ ನಕಲಿ ಟಿಕೆಟ್ ಪಡೆದವರು ಮುಂಚಿತವಾಗಿ ಬಂದು ಸೀಟು ಗಿಟ್ಟಿಸಿಕೊಂಡರೆ ಅಸಲಿ ಟಿಕೆಟ್ ಪಡೆದವರು ಪೊಲೀಸರೊಂದಿಗೆ ಹೋರಾಡಬೇಕಾಯಿತು. ಇದರಿಂದಾಗಿ ಪ್ರತಿ ದಿನವೂ ಗೇಟ್‌ಗಳ ಬಳಿ ಗದ್ದಲ, ಗಲಾಟೆ. ನಕಲಿ ಪಾಸ್ ಮೂಲ ಪತ್ತೆ ಹಚ್ಚುವ ಗೋಜಿಗೆ ಯಾರೂ ಮುಂದಾಗಲೇ ಇಲ್ಲ. ಏಕೆಂದರೆ ಕರಾವಳಿ ಉತ್ಸವ ಅಷ್ಟರಲ್ಲಿ ಮುಗಿದೇ ಹೋಗಿತ್ತು.
ಮೈಸೂರಿನ ಕಲಾಮಂದಿರದಲ್ಲಿ ಕಳೆದ ವಾರ ಕುಂಬಾರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಮಾನ್ಯವಾಗಿ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗ ಸಭಿಕರೊಂದಿಗೆ ಒಂದಷ್ಟು ‘ಸಂವಾದ’ ನಡೆಯೋದು ಗ್ಯಾರಂಟಿ!.
ಮೊನ್ನೆ ಕೂಡ ಅದೇ ರೀತಿ ಆಯ್ತು. ‘ಹಿಂದುಳಿದ ವರ್ಗಗಳ ಜನ ಚೆನ್ನಾಗಿ ಓದಬೇಕು. ವಿಚಾರಗಳನ್ನು ತಿಳಿದುಕೊಳ್ಳಬೇಕು’ ಎಂದರು. ಈ ಹಂತದಲ್ಲಿ ‘ರಾಮಾಯಣ ಬರೆದೋರು ಯಾರು?’ ಎಂದು ಸಭಿಕರಿಗೆ ಪ್ರಶ್ನೆ ಹಾಕಿದರು. ‘ವಾಲ್ಮೀಕಿ’ ಎಂಬ ಉತ್ತರ ಬಂತು. ನೆಕ್ಸ್ಟ್ ‘ಮಹಾಭಾರತ ಬರೆದೋರು ಯಾರು?’ ಎಂದು ಕೇಳಿದಾಗ, ಹಿಂಬದಿಯ ಸಾಲಿನಲ್ಲಿ ಕುಳಿತಿದ್ದವನೊಬ್ಬ ‘ಸಿದ್ದರಾಮಯ್ಯ ಸಾ..’ ಎಂದರು, ಆಗ ಸಿದ್ದರಾಮಯ್ಯ ‘ಹೇಯ್ ಸುಮ್ನೆ ಕೂರು. ಮಹಾಭಾರತ ಬರೆದಿದ್ದು ನಾನಲ್ಲ, ವ್ಯಾಸರು’ ಎಂದರು.
ಬಹುಶಃ ಅವತ್ತಿನ ಪತ್ರಿಕೆಗಳಲ್ಲಿ ‘ಅರಸು ದಾಖಲೆ ಮುರಿದು ಹೊಸ ದಾಖಲೆ ಬರೆದ ಸಿದ್ದರಾಮಯ್ಯ’ ಎಂಬುದನ್ನು ಓದಿಕೊಂಡು ಆತ ‘ಮಹಾಭಾರತ’ ಅಂದ್ಕೊಂಡಿರಬೇಕು!!
ಮನೆಯಲ್ಲಿ ಅಬ್ಬಬ್ಬಾ ಅಂದ್ರೆ 100-200 ಗ್ರಾಂ. ಚಿನ್ನ ಕಳ್ಳತನ ಆಗಿರಬಹುದು ಎಂದು ಅಂದುಕೊಂಡಿದ್ದ ವ್ಯಕ್ತಿಗೆ ಪೊಲೀಸರು ಕಳ್ಳರಿಂದ ಪತ್ತೆ ಮಾಡಿದ 787 ಗ್ರಾಂ. ಚಿನ್ನಾಭರಣ ನೀಡಿದಾಗ ಗಾಬರಿಯಾಗಬೇಕೋ ಅಥವಾ ಹೆಂಡತಿಯ ಇನ್‌ವೆಸ್ಟ್ ಬುದ್ಧಿಗೆ ಶಹಬ್ಬಾಸ್‌ಗಿರಿ ಕೊಡಬೇಕೋ ಅಂತಲೇ ಗೊತ್ತಾಗಲಿಲ್ಲ!
ಆಗಿದ್ದು ಇಷ್ಟೇ... ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಹೊಸ ವರ್ಷದ ಪಾರ್ಟಿಗೆ ಹೊರ ರಾಜ್ಯಕ್ಕೆ ಉದ್ಯಮಿಯೊಬ್ಬರು ಹೋಗಿದ್ದರು. ಸದಾಶಿವನಗರದ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕೆಲಸದಾಳುಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ 787 ಗ್ರಾಂ. ಚಿನ್ನಾಭರಣ, 291 ಗ್ರಾಂ. ಬೆಳ್ಳಿ ಹಾಗೂ 7 ದುಬಾರಿ ವಾಚ್‌ಗಳು ಸೇರಿ ಒಟ್ಟು 1.37 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಅವರು, ಉದ್ಯಮಿಗೆ ತಮ್ಮ ಹೆಂಡ್ತಿ ಬಳಿ ಮುಕ್ಕಾಲು ಕೆ.ಜಿ. ಬಂಗಾರದ ಒಡವೆ ಇದ್ದಿದ್ದು ಗೊತ್ತಾಗಿದ್ದು, ಅವರ ಮನೆ ಕೆಲಸದಾಳು ಚಿನ್ನ ಕದ್ದು ಸಿಕ್ಕಿ ಬಿದ್ದಾಗಲೇ ಅಂತೆ ಹೇಳಿದರು.
ಈ ಬಗ್ಗೆ ಪತ್ರಕರ್ತರು ಆ ಉದ್ಯಮಿಯನ್ನು ಮಾತನಾಡಿಸಿ, ಮನೆಯಲ್ಲಿ ಎಷ್ಟು ಚಿನ್ನಾಭರಣ ಇದೆ ಎಂದು ಗೊತ್ತಿರಲಿಲ್ಲವೇ? ಎಂದಾಗ, ನಾನು ಬ್ಯುಸಿನೆಸ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಪತ್ನಿ ಜತೆ ಶಾಂಪಿಗ್ ಹೋಗಲೂ ಪುರುಸೊತ್ತಿಲ್ಲ. ಕಳ್ಳತನವಾಗಿರುವುದು 100-200 ಗ್ರಾಂ. ಅಂದುಕೊಂಡರೆ ಪೊಲೀಸರು 1 ಕೋಟಿ ಬೆಲೆಯ ಚಿನ್ನ, ಬೆಳ್ಳಿ ಪತ್ತೆ ಮಾಡಿಕೊಟ್ರು ಎಂದು ಹೇಳಿದಾಗ ಅಚ್ಚರಿಪಡುವ ಸರದಿ ಪತ್ರಕರ್ತರದ್ದಾಗಿತ್ತು.
-ಶಶಿಕಾಂತ ಮೆಂಡೆಗಾರ
-ವಸಂತಕುಮಾರ್ ಕತಗಾಲ
-ಅಂಶಿ ಪ್ರಸನ್ನಕುಮಾರ್
-ಗಿರೀಶ್ ಮಾದೇನಹಳ್ಳಿ