ಬಹುಶ್ರುತ ವಿದ್ವಾಂಸ ಎನ್ ಸಿ ದೇಸಾಯಿ: ಜನ್ಮ ಶತಮಾನೋತ್ಸವ ಚಿತ್ರಕಲಾ ಪ್ರದರ್ಶನ

Published : Nov 02, 2025, 10:51 AM IST
NC Desai

ಸಾರಾಂಶ

ಎಲ್ಲ ಸೇರಿ ಜಪಾನ್ ಪ್ರವಾಸಕ್ಕೆ ಹೋಗಿ ಬಂದರು. ಅವರು ಆ ಪ್ರವಾಸದಲ್ಲಿ ಇದ್ದಾಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಆದೇನಪ್ಪ ಅಂದರೆ ಅವರು ಯಿಕೋಮ ಪ್ರಾಂತದ ಹೊಜಾನ ಜಿ- ಬುದ್ಧ ಮಂದಿರಕ್ಕೆ ಹೋಗಿದ್ದರು.

- ವೀಣಾ ಬಹದ್ದೂರ ದೇಸಾಯಿ

ಮೊನ್ನೆಯಷ್ಟೇ ನನ್ನ ಓರಗೆಯ ಕೆಲ ಗೆಳತಿಯರು ಮತ್ತು ಅವರ ಕುಟುಂಬದವರು ಎಲ್ಲ ಸೇರಿ ಜಪಾನ್ ಪ್ರವಾಸಕ್ಕೆ ಹೋಗಿ ಬಂದರು. ಅವರು ಆ ಪ್ರವಾಸದಲ್ಲಿ ಇದ್ದಾಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಆದೇನಪ್ಪ ಅಂದರೆ ಅವರು ಯಿಕೋಮ ಪ್ರಾಂತದ ಹೊಜಾನ ಜಿ- ಬುದ್ಧ ಮಂದಿರದ ಕ್ಕೆ ಹೋಗಿದ್ದರು. ಅಲ್ಲಿ ಇರುವ ಅನೇಕ ದೇವಸ್ಥಾನಗಳಲ್ಲಿ ಅವರ ಗಮನ ಸೆಳೆದದ್ದು ಕಾಂಗಿಟನ ದೇವರ ಶಿಲ್ಪ. ಭಾರತದ ಗಣಪತಿ ವಿಗ್ರಹ ಗಳನ್ನು ಹೋಲುವ, ಪರಸ್ಪರ ಆಲಿಂಗನ ಮಾಡುವ ಎರಡು ವಿಗ್ರಹಗಳು ಅಲ್ಲಿ ಇವೆ. ಇದನ್ನು ನೋಡಿದ ನಮ್ಮ ಸ್ನೇಹಿತರಲ್ಲಿ ಹಾಗೂ ಅಲ್ಲಿನ ಇತರ ಪ್ರವಾಸಿ ಗಳಲ್ಲಿ ವಾಗ್ವಾದ ಶುರು ಆಯಿತು.

`ಇದು ಭಾರತೀಯ ಮೂಲದ ಗಣೇಶ'', ಅಂತ ಕೆಲವರು, `ಇಲ್ಲ, ಇದು ಇಲ್ಲಿಯ ಜಾನಪದ ಬೌದ್ಧ ಮೂರ್ತಿ'', ಅಂತ ಇನ್ನು ಕೆಲವರು. ಕೊನೆಗೆ ಇವರ ತಂಡದ ಹಿರಿಯರು `ಇದು ಭಾರತೀಯ ಮೂಲದ್ದೇ ಇರಬೇಕು, ಯಾಕೆ ಅಂದರೆ ನಾನು ಇದರ ಪೇಂಟಿಂಗ್ ಅನ್ನು ಮುಂಬೈಯಲ್ಲಿ 1980 ರ ಸುಮಾರಿಗೆ ನೋಡಿದ್ದೇನೆ'', ಅಂತ ಅಂದ್ರು. ಅಲ್ಲಿನ ಪ್ರವಾಸಿಗಳಿಗೆ ನಂಬಿಕೆ ಬರಲಿಲ್ಲ, ಆದರೂ ಯಾಕೆ ಜಗಳ ಅಂತ ಸುಮ್ಮನೇ ಆದರು. ಆದರೆ ಆ ಹಿರಿಯರು ಹೇಳಿದ್ದು ನಿಜ. ಮುಂಬೈನ ಚಿತ್ರಕಲಾ ಪ್ರದರ್ಶನದಲ್ಲಿ ಇರಿಸಲಾಗಿದ್ದ ಆ ಚಿತ್ರ ಕಾಂಗಿಟನ ದೇವರ ಶಿಲ್ಪದ ಮರು ಸೃಷ್ಟಿ. ಅದನ್ನು ಚಿತ್ರಿಸಿದವರು ಎನ್ ಸಿ ದೇಸಾಯಿ ಎಂದೇ ಹೆಸರಾದ ನಾನಾಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ. ಈ ಕಾಂಗಿಟನ ಚಿತ್ರ ಶ್ರೀ ದೇಸಾಯಿ ಅವರ ವಿಶ್ವವ್ಯಾಪಿ ಗಣೇಶ ಮಾಲಿಕೆ ಯ ಸುಮಾರು 50 ಚಿತ್ರಪಟ ಗಳಲ್ಲಿ ಒಂದು.

ಅವರು ಮುಂಬೈ ನಲ್ಲಿ ನೆಲೆಸಿದ್ದ ಒಬ್ಬ ಬಹುಶ್ರುತ ವಿದ್ವಾಂಸ ರು. ಅವರು ಬಹುಭಾಷಾ ತಜ್ಞ, ವರ್ಣಚಿತ್ರಕಾರ, ವಿನ್ಯಾಸಕ, ಬರಹಗಾರ, ಕಲಾ ವಿಮರ್ಶಕ, ಛಾಯಾಗ್ರಾಹಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಐವತ್ತು- ಅರವತ್ತರ ದಶಕ ದಲ್ಲಿಯೇ ಜಾಹೀರಾತು ಮತ್ತು ಸಂವಹನ ಕ್ಷೇತ್ರ ದಲ್ಲಿ ಹೆಸರು ಗಳಿಸಿದ್ದರು. ಅವರು ನನ್ನ ಮಾವನವರ ಸೋದರ ಸಂಬಂಧಿ. ಅವರು 1924 ರಲ್ಲಿ ಜನಿಸಿದರು ಮತ್ತು 2003 ರಲ್ಲಿ ನಿಧನರಾದರು. ಅವರ ಜನ್ಮ ಶತಮಾನೋತ್ಸವ ವರ್ಷ ಆಚರಣೆ ಸಂಬಂಧ, ಅಗಡಿ ಬಹದ್ದೂರ ದೇಸಾಯಿ ಕುಟುಂಬದ ಸದಸ್ಯರು ಮತ್ತು ವಿಜಯ ಮಹಾಂತೇಶ್ ಕಲಾ ಶಾಲೆ, ನವೆಂಬರ್ 1 ರಿಂದ 4 ರವರೆಗೆ ಹುಬ್ಬಳ್ಳಿಯಲ್ಲಿ ಅವರ ವರ್ಣಚಿತ್ರಗಳ ಪ್ರದರ್ಶನವನ್ನು ಆಯೋಜಿಸುವವರಿದ್ದೇವೆ.

ಮೂರು ಸಾವಿರ ಮಠದ ಶ್ರೀ ಗುರುಶಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಎಚ್‌ಡಿಎಂಸಿ ಕಚೇರಿ ಬಳಿಯ ವಿಜಯ ಮಹಾಂತೇಶ್ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇದು ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಆಜೀವ ಫೆಲೋಷಿಪ್ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಎನ್ ಸಿ ದೇಸಾಯಿ ಅವರು ತಮ್ಮ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಮತ್ತು ವಿಶ್ವವ್ಯಾಪಿ ಗಣೇಶ ಸರಣಿಗೆ ಹೆಸರುವಾಸಿಯಾಗಿದ್ದರು. ಅವರು 1970 ಮತ್ತು 80 ರ ದಶಕಗಳಲ್ಲಿ ಪ್ರಪಂಚದಾದ್ಯಂತ ವಿವಿಧ ಗಣಪತಿ ವಿಗ್ರಹಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳ ವರ್ಣಚಿತ್ರಗಳನ್ನು ರಚಿಸಲು ವಿವಿಧ ದೇಶಗಳಿಗೆ ಪ್ರವಾಸ ಮಾಡಿದ್ದರು . ಅವರು ಪ್ರೀಮಿಯರ್ ಆಟೋ ಲಿಮಿಟೆಡ್‌ನ ವಿನ್ಯಾಸ ಮತ್ತು ಸಂವಹನ ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಎನ್ ಸಿ ದೇಸಾಯಿ ಅವರು ಕಲಾ ಗುರು ಜಿ.ಎಸ್. ದಂಡಾವತಿಮಠ ಅವರ ವಿದ್ಯಾರ್ಥಿಯಾಗಿದ್ದರು. ಮುಂಬೈನ ಸರ್ ಸರ್ ಜಮ್ಸೆಟ್ಜೀ ಜೀಜೀಭಾಯ್ ಕಲಾ ಶಾಲೆಯ ಪದವೀಧರರಾಗಿದ್ದರು. ಅವರ ಸ್ವಾಮಿ ವಿವೇಕಾನಂದ ಮತ್ತು ವಿಶ್ವವ್ಯಾಪಿ ಗಣೇಶನ ಚಿತ್ರಗಳ ಸರಣಿಯ ಚಿತ್ರಗಳು ಪ್ರಪಂಚದಾದ್ಯಂತ ಪ್ರದರ್ಶನ ಕಂಡಿವೆ ಹಾಗೂ ಅನೇಕ ಕಲಾ ರಸಿಕರ ಮನೆಗಳಲ್ಲಿ ಇವೆ. ಎನ್ ಸಿ ದೇಸಾಯಿ ಅವರು ಕಲೆ ಮತ್ತು ಸಂಸ್ಕೃತಿಕ ಸಂಶೋಧನೆ ವಿಶೇಷ ವಾಗಿತ್ತು. ಅವರು ನಾವೆಲ್ಲ ಮರೆತುಹೋಗಿದ್ದ ಮಧ್ಯಕಾಲೀನ ಯುಗದ ಕಲಾವಿದ ಸೋಲಾಪುರ್ ಶುಭರಾಯ ಅವರನ್ನು ತಮ್ಮ ಸಂಶೋಧನಾ ಲೇಖನ ಗಳ ಮುಲ್ಕ ಬೆಳಕಿಗೆ ತಂದರು. ತಲಸಾರಿಯ ವರ್ಲಿ, ಸಾವಂತವಾಡಿಯ ಚಿತಾರಿ ಮತ್ತು ಒಡಿಶಾದ ಪಟ್ಟಾ ದಂತ ಬುಡಕಟ್ಟು ಸಮುದಾಯಗಳ ಕಲೆಯನ್ನು ಮುಖ್ಯ ವಾಹಿನಿ ಕಲಾ ಜಗತ್ತಿಗೆ ಪರಿಚಯಿಸಿದರು.

ಮುಂಬೈನಲ್ಲಿ ಇದ್ದುಕೊಂಡೇ ಅವರು 1970 ರಿಂದ 90 ರ ದಶಕದವರೆಗೆ ಕನ್ನಡ ಪತ್ರಿಕೋದ್ಯಮಕ್ಕೆ ನಿಯಮಿತವಾಗಿ ಕೊಡುಗೆ ನೀಡಿದರು. ನಿಯತಕಾಲಿಕೆಗಳ ಮುಖಪುಟಗಳನ್ನು ವಿನ್ಯಾಸಗೊಳಿಸಿದರು, ಕಲಾ ವಿಮರ್ಶೆಯ ಕುರಿತು ಲೇಖನಗಳನ್ನು ಬರೆದರು ಮತ್ತು ಯುವ ಕಲಾವಿದರು ಮತ್ತು ಸಂಗೀತ ಗಾರರನ್ನು ಪರಿಚಯಿಸಿದರು. ಅವರ ಛಾಯಾಚಿತ್ರಗಳು ಮರಾಠಿ ಮತ್ತು ಹೆಚ್ಚಿನ ದಕ್ಷಿಣ ಭಾರತೀಯ ಭಾಷೆಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡವು. ಅವರು ಕನ್ನಡ ನಿಯತಕಾಲಿಕೆಗಳು ಮತ್ತು ಕಸ್ತೂರಿ, ತುಷಾರ, ತರಂಗ, ಸುಧಾ, ಮಯೂರ, ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ಮತ್ತು ಸದ್ಬೋಧ ಚಂದ್ರಿಕೆ ಮತ್ತು ವಿವೇಕ ಸಂಪದದಂತಹ ಆಧ್ಯಾತ್ಮಿಕ ನಿಯತಕಾಲಿಕೆಗಳಿಗೆ ಕೊಡುಗೆ ನೀಡಿದ್ದಾರೆ. ಮಲಯಾಳಿ ಪತ್ರಿಕೆ ಮಾತೃಭೂಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು.

ಕೃತಿಗಳ ಡಿಜಿಟಲೀಕರಣ

ಬೆಂಗಳೂರು ಮೂಲದ ಡಿಜಿಟಲ್ ಆರ್ಕೈವಿಸ್ಟ್ ಸಂಘಟನೆಯಾದ ಸರ್ವೆಂಟ್ಸ್ ಆಫ್ ನಾಲೆಡ್ಜ್‌ ನ ಸಹ-ಸಂಸ್ಥಾಪಕ ರೂ, ನಮ್ಮ ಅನುಗಾಲದ ಸ್ನೇಹಿತರೂ ಆದ ಓಂಶಿವಪ್ರಕಾಶ್ ಅವರು ಎನ್ ಸಿ ದೇಸಾಯಿ ಅವರ ಲೇಖನಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಂತೆ ಸುಮಾರು 10,000 ಪುಟಗಳ ಕೃತಿಗಳನ್ನು ಡಿಜಿಟಲೀಕರಣಗೊಳಿಸಿದ್ದಾರೆ ಮತ್ತು ಅವುಗಳನ್ನು archive.org ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹುಬ್ಬಳ್ಳಿಯ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯ ಸಮಯದಲ್ಲಿ ಇದಕ್ಕೆ ಸಂಬಂಧ ಪಟ್ಟ QR ಕೋಡ್ ಬಿಡುಗಡೆಯಾಗಲಿದೆ. ತಮ್ಮ ಜೀವನದ ಕೊನೆಯ ಕೆಲವು ದಶಕಗಳಲ್ಲಿ, ಎನ್ ಸಿ ದೇಸಾಯಿ ಅವರು ಹುಬ್ಬಳ್ಳಿಯಲ್ಲಿ ಕಲಾ ಸ್ಟುಡಿಯೋವನ್ನು ನಡೆಸುತ್ತಿದ್ದರು. 1924 ರಲ್ಲಿ ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿ ಜನಿಸಿದ ಅವರು 2003 ರಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು. ದಯವಿಟ್ಟು ಎಲ್ಲರೂ ಚಿತ್ರಕಲಾ ಪ್ರದರ್ಶನಕ್ಕೆ ಬನ್ನಿ. ನಿಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನೂ ಕರೆ ತನ್ನಿ.

ಅವರ ಮೂಲ ಚಿತ್ರಗಳು, ಫೋಟೋಗಳು, ಹಾಗೂ ಲೇಖನ ಗಳನ್ನು ಶ್ರೀ ದೇಸಾಯಿ ಅವರ ಸೊಸೆ ಭಾರತಿ ದೇಸಾಯಿ ಅವರು ಅವರ ಹುಬ್ಬಳ್ಳಿ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಆಸಕ್ತರು ಅವರನ್ನು ಸಂಪರ್ಕಿಸಬಹುದು (+91 94481 25668).

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?