ಅರೋಗೆಂಟ್‌ ರೂಡ್ ಎಂದು ಇಂಟರ್‌ನೆಟ್ ಬೈಯುತ್ತಿರುವ ಹುಡುಗನ ಕತೆ: ಹೆತ್ತವರಿಗೆ ಕಿವಿಮಾತೇನು?

Published : Oct 19, 2025, 09:12 AM IST
amitabh bachchan

ಸಾರಾಂಶ

ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಹತ್ತು ವರ್ಷದ ಬಾಲಕನೊಬ್ಬನ ಸಂದರ್ಶನ ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ಬಾಲಕನು ತರಾತುರಿಯಲ್ಲಿ ಉತ್ತರಿಸುವುದು, ಸ್ಪರ್ಧೆಯ ನಿಯಮ ಪಾಲಿಸುವ ತಾಳ್ಮೆ ಇಲ್ಲದಿರುವುದು ಎದ್ದು ಕಾಣುತ್ತದೆ.

ಡಾ. ವಿರೂಪಾಕ್ಷ ದೇವರಮನೆ

ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಹತ್ತು ವರ್ಷದ ಬಾಲಕನೊಬ್ಬನ ಸಂದರ್ಶನ ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ಬಾಲಕನು ತರಾತುರಿಯಲ್ಲಿ ಉತ್ತರಿಸುವುದು, ಸ್ಪರ್ಧೆಯ ನಿಯಮ ಪಾಲಿಸುವ ತಾಳ್ಮೆ ಇಲ್ಲದಿರುವುದು ಎದ್ದು ಕಾಣುತ್ತದೆ. ನೋಡುಗರಿಗೆ ಬಾಲಕ, ಹಿರಿಯರಾದ ಅಮಿತಾಭ್ ಬಚ್ಚನ್‌ಗೆ ಗೌರವ ಕೊಡುತ್ತಿಲ್ಲ ಎಂದು ಸಿಟ್ಟು ಬರುತ್ತದೆ. ಕೊನೆಗೆ ಬಾಲಕ ತಪ್ಪು ಉತ್ತರ ಹೇಳಿದಾಗ, ಸೋಲಿನತ್ತ ಸಾಗಿದಾಗ ನೋಡುಗರು ಚಪ್ಪಾಳೆ ತಟ್ಟುತ್ತಾರೆ. ಅಹಂಕಾರಕ್ಕೆ ತಕ್ಕ ಪಾಠವಾಯಿತು ಎಂದು ಭಾವಿಸುತ್ತಾರೆ. ಈ ಇಡೀ ಸನ್ನಿವೇಶವನ್ನು ಬಿಗ್ ಬಿ ನಿಭಾಯಿಸಿದ ರೀತಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತದೆ.

ಈ ಒಂದೇ ಘಟನೆಯ ಆಧಾರದಲ್ಲಿ ಮಗುವಿನ ಸಮಸ್ಯೆಯೇನು? ಆ ಮಗುವಿನ ವರ್ತನೆ ಸರಿಯೋ ತಪ್ಪೋ, ಮಗು ಬೆಳೆದು ಏನಾಗಿತ್ತದೆ, ಮಗುವಿನ ಪಾಲನೆ-ಪೋಷಣೆ ಸರಿಯಿದೆಯೇ ಇಲ್ಲವೇ ಎನ್ನುವುದು ಖಂಡಿತ ಚರ್ಚಿಸುವುದು ಸೂಕ್ತವಲ್ಲ. ಈ ರೀತಿ ದ್ವಂದ್ವ ಪ್ರತಿಕ್ರಿಯೆ ಉಂಟುಮಾಡುವ ವಿಷಯಗಳುಳ್ಳ ಸಂದರ್ಶನಗಳನ್ನು, ಭಾಷಣಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತದೆ ಎನಿಸುತ್ತದೆ. ಆ ಸಂದರ್ಶನದ ತುಣುಕುಗಳಿಗೆ ಬುದ ಋಣಾತ್ಮಕ ಪ್ರತಿಕ್ರಿಯೆಗಳು ಆ ಮಕ್ಕಳ ಮನಸ್ಸಿಗೆ ಯಾವ ರೀತಿಯ ತೊಂದರೆಯುಂಟುಮಾಡಬಹುದು ಎಂದು ಓದುಗರ ಯೋಚನೆಗೆ ಬಿಡುತ್ತೇನೆ. ಹಾಗೆ ನೋಡಿದರೆ ಕ್ಷಣಮಾತ್ರವೂ ಯೋಚಿಸದೇ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುವ ನೆಟ್ಟಿಗರಿಗೆ ಹೆಚ್ಚು ಕಡಿಮೆ ಇಂತಹುದೇ ಸಮಸ್ಯೆ ಅಥವಾ ಇದಕ್ಕಿಂತ ಗಂಭೀರವಾದ ಸಮಸ್ಯೆ ಇರುವುದು ಕಂಡುಬರುತ್ತದೆ.

ಬಾಲಕನ ತಾಳ್ಮೆಯಿರದ ಪ್ರವೃತ್ತಿ, ಹೆಚ್ಚು ಯೋಚಿಸದೆ ಉತ್ತರಿಸುವ ರೀತಿ, ತನ್ನ ಸಮಯ ಬರುವವರೆಗೆ ಕಾಯಲು ಸಾಧ್ಯವಾಗದ ಸ್ಥಿತಿ , ನಿಯಮಗಳನ್ನು ಪಾಲಿಸುವ ಕಷ್ಟ ಪಡುವುದನ್ನು ಕಂಡಾಗ ಮಕ್ಕಳಲ್ಲಿ ಕಂಡುಬರುವ ಅತೀ ಚಟುವಟಿಕೆ ಕುರಿತು ಚರ್ಚಿಸಬಹುದು. ತಾರೇ ಜಮೀನ್ ಪರ್ ಸಿನಿಮಾ ಬಂದನಂತರ ಶಿಕ್ಷಕರಲ್ಲಿ, ಪೋಷಕರಲ್ಲಿ ‘ನಿರ್ದಿಷ್ಟ ಕಲಿಕಾ ತೊಂದರೆ’ ಸಮಸ್ಯೆ ಕುರಿತಾಗಿ ಜಾಗೃತಿ ಮೂಡಿದ ಹಾಗೆ ಈ ಸಂದರ್ಶನದ ಮೂಲಕ ಮಕ್ಕಳಲ್ಲಿನ ಅತೀ ಚಟುವಟಿಕೆ ಕುರಿತು ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿದರೆ ಅದೇ ಉತ್ತಮ ಬೆಳವಣಿಗೆಯಾದೀತು.

ಸಮಸ್ಯೆ ಇರುವುದು ಮಕ್ಕಳಲ್ಲಿ ಅಲ್ಲ!
ಎಂಥಾ ಹುಡುಗ ನೋಡಿ, ಹೇಗೆ ಬೆಳೆಸಿದ್ದಾರೆ ನೋಡಿ, ಈ ವಯಸ್ಸಿಗೇ ಹೀಗಾದರೆ ಮುಂದೆ?- ಇಶಿತಾ ಭಟ್ಟ್ ಎಂಬ ಹತ್ತು ವರುಷದ ಹುಡುಗನನ್ನು ಮುಂದಿಟ್ಟುಕೊಂಡು ಇಡೀ ಜಗತ್ತೇ ಅವನ ವ್ಯಕ್ತಿತ್ವವನ್ನು ಅಳೆಯಲು ಆರಂಭಿಸಿದೆ. ಅಮಿತಾಭ್ ಜತೆ ಹಾಗೆ ಮಾತಾಡಬಾರದಿತ್ತು ಮತ್ತು ಅಮಿತಾಭ್ ಎಷ್ಟು ಘನತೆಯಿಂದ ನಿಭಾಯಿಸಿದರು ಅನ್ನುವುದರ ನಡುವಿನ ವ್ಯತ್ಯಾಸವೇ ಎಲ್ಲಾ ಮಾತಿನ ಹಿಂದಿರುವ ಸೂತ್ರ. ಇದ್ದಕ್ಕಿದ್ದಂತೆ ಎಲ್ಲ ಹಿರಿಯರ, ಹೆತ್ತವರ ಪಾಲಿಗೆ ಇಶಿತ್ ಮಾದರಿ ಹುಡುಗನಾದ. ನಮ್ಮ ಮಕ್ಕಳು ಹೀಗಿಲ್ಲ ಅಂತ ಹೋಲಿಸಿ ನೋಡುವುದಕ್ಕೆ ಮತ್ತು ಮಕ್ಕಳು ಹಾಗಿರಬಾರದು ಅಂತ ಆದೇಶ ಕೊಡಿಸುವುದಕ್ಕೆ ಕಾರಣನಾದ. ಮಕ್ಕಳ ಬಾಲ್ಯವನ್ನು ಶಿಕ್ಷಣ ಕಿತ್ತುಕೊಂಡಿದೆ, ಹೆತ್ತವರು ಅವನನ್ನು ಮಗುವಿನಂತೆ ನೋಡದೇ ದೊಡ್ಡವನಂತೆ ನಡೆಸಿಕೊಂಡಿದ್ದಾರೆ ಅಂತೆಲ್ಲ ಮಾತುಗಳು ಬಂದಿವೆ.

ಇಶಿತ್ ವರ್ತನೆಯಲ್ಲಿ ಪರಿಣತರು ಸಿಕ್ಸ್ ಪಾಕೆಟ್ ಸಿಂಡ್ರೋಮ್ ಅಂತ ಕರೆಯುತ್ತಾರೆ. ಅದು ಆಲ್ಫಾ ಜನಾಂಗದ ಸಮಸ್ಯೆ. ಯಾವ ಮಕ್ಕಳಿಗೆ ತಾವು ಕೇಳಿದ್ದೆಲ್ಲವೂ ಸಿಗುತ್ತದೆಯೋ ಕೇಳದೆಯೇ ಎಲ್ಲವೂ ಸಿಗುತ್ತದೆಯೋ ಅವರು ಇಶಿತ್ ಥರ ಆಗುತ್ತಾರೆ ಅನ್ನೋದು ತಜ್ಞರ ಮತ. ಅವರು ಹೇಳುವ ಸಿಕ್ಸ್ ಪಾಕೆಟ್‌ಗಳೆಂದರೆ ಊಟ, ಆಟಿಕೆ, ಗಮನ, ಮೆಚ್ಚುಗೆ, ಗ್ಯಾಜೆಟ್ಸ್‌ ಮತ್ತು ಅಕ್ಕರೆ. ಇವೆಲ್ಲವೂ ಎಷ್ಟು ಬೇಕೋ ಅಷ್ಟಲ್ಲದೇ, ಬೇಕು ಬೇಕಾದಷ್ಟು ಹರಿದು ಬರುತ್ತಿದ್ದರೆ ಮಕ್ಕಳು ಹೀಗೆ ದಾರಿ ತಪ್ಪುತ್ತಾರೆ. ಆ ಮಗು ತಾನೇ ದೊರೆ ಅಂತ ಭಾವಿಸತೊಡಗುತ್ತದೆ. ಚಕ್ರವರ್ತಿಯೆಂದು ತಿಳಿದುಬಿಡುತ್ತದೆ. ಎಲ್ಲವನ್ನೂ ತಾನು ಆಳಬಲ್ಲೆ ಅಂದುಕೊಳ್ಳುತ್ತದೆ.

ದುಡಿಯುವ ಹೆತ್ತವರು ಇರುವ ಭಾರತದಲ್ಲಿ ಇದು ಸಾಮಾನ್ಯ ಟ್ರೆಂಡ್. ಮಕ್ಕಳ ಜತೆ ಸಮಯ ಕಳೆಯಲಿಕ್ಕಾಗದ ಅವರು ಅದರ ಬದಲು ಮಗುವಿಗೆ ಕೇಳಿದ್ದೆಲ್ಲ ಕೊಡಿಸಿ ತಮ್ಮ ಪಾಪಪ್ರಜ್ಞೆಯನ್ನು ತುಂಬಿಕೊಳ್ಳಲು ಯತ್ನಿಸುತ್ತಾರೆ. ಅದರಿಂದಾಗಿ ಹೀಗಾಗುತ್ತದೆ. ಮಕ್ಕಳು ಸಣ್ಣಪುಟ್ಟದ್ದಕ್ಕೆಲ್ಲ ಹೆತ್ತವರನ್ನೇ ಅವಲಂಬಿಸುತ್ತವೆ. ರಾಜಿಯಾಗುವುದಿಲ್ಲ, ಇದ್ದುದರಲ್ಲಿ ತೃಪ್ತಿ ಪಡುವುದಿಲ್ಲ, ತಾನು ಅಂದುಕೊಂಡದ್ದು ಆಗದೇ ಹೋದಾಗ ಗಲಾಟೆ ಮಾಡುತ್ತವೆ. ಎಲ್ಲರ ಮೆಚ್ಚುಗೆ ಮತ್ತು ಗಮನಕ್ಕಾಗಿ ಕಾತರಿಸುತ್ತವೆ. ಈ ಜಗತ್ತಿನ ಎಲ್ಲವೂ ತನ್ನದೇ ಅಂದುಕೊಳ್ಳುತ್ತವೆ. ಅದು ಸಿಗದೇ ಹೋದಾಗ ರೇಗಾಟ ಶುರುವಾಗುತ್ತದೆ. ಈ ಕುರಿತು ಮಕ್ಕಳಿಗೆ ಏನು ಕೊಡಬೇಕು ಮತ್ತು ಏನು ಮಾಡಬೇಕು ಅನ್ನುವುದು ಮೇಲಿನ ಬರಹದಲ್ಲಿದೆ. ಸ್ವತಃ ಮನೋವೈದ್ಯರಾದ ವಿರೂಪಾಕ್ಷ ದೇವರಮನೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಬರೆದಿದ್ದಾರೆ.

ಅತೀ ಚಟುವಟಿಕೆ
- ಗಮನದ ಕೊರತೆ/ ಏಕಾಗ್ರತೆಯ ಕೊರತೆ - ಸಣ್ಣ ಪುಟ್ಟ ಶಬ್ದ ಬಂದಕಡೆ ಗಮನ ಹರಿಸುವುದು.

- ಸದಾ ಕೈಕಾಲುಗಳನ್ನು ಆಡಿಸುತ್ತಿರುವುದು, ಒಂದು ಸ್ಥಳದಲ್ಲಿ ಕುಳಿತುಕೊಳ್ಳಲು ಕಷ್ಟ ಪಡುವುದು, ನಿರಂತರ ಅಂಗಾಂಗ ಚಲನೆ.

- ದುಡುಕು ಸ್ವಭಾವ - ಹಠಾತ್ ಪ್ರತಿಕ್ರಿಯೆ ನೀಡುವುದು.

ಮಕ್ಕಳು ಒಂದು ಸ್ಥಳದಲ್ಲಿ ಕೂತಲ್ಲಿ ಕೂರಲಾಗದೇ ಚಡಪಡಿಸುತ್ತಾರೆ. ಒಂದು ವೇಳೆ ಗದರಿಸಿ ಕಡೆ ಕುಳಿತುಕೊಳ್ಳಲು ಹೇಳಿದರೆ, ಕುಳಿತಲ್ಲೇ ಕೈಕಾಲು ಆಡಿಸುವುದು, ಆಚೀಚೆ ನೋಡುವುದು,ಕೈಯಲ್ಲಿದ್ದ ವಸ್ತುಗಳನ್ನು ಬೀಳಿಸುವುದು ಮಾಡಬಹುದು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುತ್ತಿರುತ್ತಾರೆ. ಹಾಗಾಗಿ ಶಿಕ್ಷಕರಿಂದ ಪದೇ ಪದೇ ಗುರುತಿಸಲ್ಪಡುತ್ತಾರೆ. ಅವರ ಅತೀ ಚಟುವಟಿಕೆಯಿಂದಾಗಿ ಶಿಕ್ಷೆಗೊಳಗಾಗಬಹುದು.

ಗಮನದ ಕೊರತೆ
ಎಲ್ಲಕ್ಕೂ ಸ್ಪಂದಿಸುವುದರಿಂದ ತರಗತಿಯ ಪಾಠ ಅಥವಾ ಓದಿನ ಕಡೆ ಗಮನ ವಹಿಸಲು ಕಷ್ಟಪಡಬಹುದು. ಶಿಕ್ಷಕರು ಹೇಳುತ್ತಿರುವ ವಿಷಯಗಳ ಕಡೆ ಗಮನಹರಿಸದ ಕಾರಣ ತರಗತಿಯಲ್ಲಿದ್ದು ಕೇಳಿಸಿಕೊಳ್ಳದಿರಬಹುದು. ಗಮನದ ಕೊರತೆಯಿಂದ ಪರೀಕ್ಷೆಯಲ್ಲಿ ಹಲವಾರು ತಪ್ಪುಗಳಾಗಿ ಅಂಕಗಳನ್ನು ಕಳೆದುಕೊಳ್ಳಬಹುದು. ಶಿಕ್ಷಕರು/ ತಾಯಿ ಪಕ್ಕದಲ್ಲಿ ನಿಂತರೆ ಮಾತ್ರ ಸರಿಯುತ್ತರ ಹೇಳಬಹುದು. ತಮ್ಮ ವಸ್ತುಗಳನ್ನು ಪದೇ ಪದೇ ಕಳೆದುಕೊಳ್ಳಬಹುದು.

ದುಡುಕು ಸ್ವಭಾವ
ಹಠಾತ್ ಪ್ರತಿಕ್ರಿಯೆ ನೀಡುವುದರಿಂದ ತಪ್ಪು ಉತ್ತರಗಳನ್ನು ಬರೆಯಬಹುದು, ಜಗಳ ಆಡಬಹುದು. ಹಠಾತ್ ದೈಹಿಕ ಪ್ರತಿಕ್ರಿಯೆ ನೀಡಬಹುದು. ತನ್ನ ನಡೆಯ ಪರಿಣಾಮಗಳನ್ನು ಊಹಿಸಲಾಗದಿರಬಹುದು.

ಈ ಲಕ್ಷಣಗಳಿರುವ ಮಕ್ಕಳು ಸಾಮಾನ್ಯ ಬುದ್ಧಿಮತ್ತೆ ಹೊಂದಿರುವುದು ತಮ್ಮಪ್ರತಿಕ್ರಿಯೆಗಳ ಮೇಲೆ ಯಾವುದೇ ಸ್ವಯಂ ನಿಯಂತ್ರಣ ಸಾಧಿಸಲು ಕಷ್ಟಪಡುತ್ತಾರೆ.

ಗಮನ ಹೆಚ್ಚಿಸುವ ಕ್ರಮಗಳು
- ದೈನಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಸುವುದು.

- ಅಗತ್ಯದ ವಸ್ತುಗಳನ್ನು ಆಯಾ ಸ್ಥಳದಲ್ಲೇ ಇಡುವಂತೆ ಸೂಚಿಸುವುದು.

- ಸ್ಪಷ್ಟ ಸೂಚನೆಗಳು, ನಿರ್ದೇಶನಗಳನ್ನು ನೀಡುವುದು.

- ಮನೆಕೆಲಸಗಳನ್ನು ಮಾಡಿ ಮುಗಿಸಲು ಸಮಯವನ್ನು ನಿಗದಿಪಡಿಸುವುದು.

- ಕೆಲಸಗಳನ್ನು ಬಿಡಿಬಿಡಿಯಾಗಿ ಹಂಚುವುದು.

- ದೊಡ್ಡ ಕಾರ್ಯಗಳನ್ನು ಸಣ್ಣದಾಗಿ ಮಾಡಿ ಒಂದೊಂದಾಗಿ ಮಾಡಲು ಹೇಳುವುದು.

- ಕಡಿಮೆ ಶಬ್ದಗಳ ಬಳಕೆ, ಕಡಿಮೆ ನಿರ್ದೇಶನಗಳು.

- ಆಸಕ್ತಿಯಿರುವ/ಆಸಕ್ತಿಯಿರದ ವಿಷಯಗಳನ್ನು ಒಂದೊಂದಾಗಿ ಮಾಡಿಸುವುದು.

ಕೇಳಿಸಿಕೊಳ್ಳುವ ತಾಳ್ಮೆ ಹೆಚ್ಚಿಸುವುದು
- ಸರಳ ಪಾತ್ರಗಳಲ್ಲಿ ನಿರ್ದೇಶನ ನೀಡುವುದು.

- ಒಂದು ಸಲಕ್ಕೆ ಒಂದೇ ನಿರ್ದೇಶನ.

- ಮಗುವಿಗೆ ಆ ನಿರ್ದೇಶನವನ್ನು ಪುನರಾವರ್ತಿಸಲು ಹೇಳುವುದು.

- ಪ್ರಶಾಂತವಾದ, ಹೆಚ್ಚಿನ ಶಬ್ದಗಳಿರದ ಸ್ಥಳದಲ್ಲಿ ಕೂರಿಸುವುದು.

ಚಿಕಿತ್ಸೆ
- ದೈನಂದಿನ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿದರೆ ’ಸ್ಟಾರ್’ ನೀಡುವುದು, ಪ್ರಶಂಸಿಸುವುದು.

- ಧನಾತ್ಮಕ ವರ್ತನೆಗಳನ್ನು ಗುರುತಿಸಿ ಪ್ರಶಂಸಿಸುವುದು.

- ಉತ್ತಮ ವರ್ತನೆಗಳನ್ನು ಮಾಡಿ ತೋರಿಸಿ ಮಾದರಿಯಗುವುದು.

- ಅನುಬಿತ ವರ್ತನೆಗಳನ್ನು ಅಲಕ್ಷಿಸಿ ಉತ್ತಮ ವರ್ತನೆಗಳನ್ನು ಗುರುತಿಸುವುದು.

- ಅಪೇಕ್ಷಿತ ವರ್ತನೆಗಳನ್ನು ಪ್ರದರ್ಶಿಸಲು ಪ್ರೇರಣೆ ನೀಡುವುದು.

- ಸಾಮಾಜಿಕ ಸಂವಹನ ಕೌಶಲ್ಯಗಳನ್ನು ಕಲಿಸುವುದು.

ಏಕಾಗ್ರತೆ ಹೆಚ್ಚಿಸುವ ಚಟುವಟಿಕೆಗಳು

- ಮೇಲಿನ ಚಿಕಿತ್ಸೆಗಳ ನಿರೀಕ್ಷಿತ ಫಲವನ್ನುನೀಡದಿದ್ದಾಗ, ಮಗುವಿನ ವರ್ತನೆ, ಮನೆ, ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಹಿನ್ನತೆ ಅನುಭವಿಸುತ್ತಿದ್ದಾರೆಪೋಷಕರೊಡನೆ ಚರ್ಚಿಸಿ ಮಾತ್ರೆಗಳನ್ನು ನೀಡಬಹುದು.

- ಅತೀ ಚಟುವಟಿಕೆಯು ಒಂದು ಮೆದುಳಿನ ಬೆಳವಣಿಗೆಯ ಸ್ಥಿತಿಯಾಗಿದೆ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?