ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ

Published : Dec 23, 2025, 10:36 AM IST
Bhaskar Rao IPS opinion

ಸಾರಾಂಶ

ಈಗಾಗಲೇ ಇರುವ ಕಾನೂನುಗಳ ಅಡಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಪರಾಧ ಸಾಬೀತಾಗಿ ಶಿಕ್ಷೆಯೂ ಆಗಿದೆ. ಹೀಗಿರುವಾಗ ಈ ಹೊಸ ಕಾನೂನಿನ ಅಗತ್ಯವೇನಿತ್ತು?

ಲೇಖಕರು: ಎಂ.ಭಾಸ್ಕರ್‌ ರಾವ್‌, ಮಾಜಿ ಐಪಿಎಸ್‌ ಅಧಿಕಾರಿ

ಬಲಪಂಥೀಯರನ್ನು ಟಾರ್ಗೆಟ್‌ ಮಾಡಿ ಹಾಗೂ ರಾಜಕೀಯ ಸೇಡು ತೀರಿಸಿಕೊಳ್ಳಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025’ ತಂದಿದೆ. ದ್ವೇಷ ಭಾಷಣ ಮೊದಲಾದ ಅಪರಾಧಗಳಿಗೆ ಕಡಿವಾಣ ಹಾಕಲು ಈಗಾಗಲೇ ನಮ್ಮಲ್ಲಿ ಸಾಕಷ್ಟು ಕಾನೂನುಗಳಿವೆ. ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಸೆಕ್ಷನ್‌ 153 ಎ, 295, 295ಎ ಹೀಗೆ ಹಲವು ಕಾನೂನುಗಳಿವೆ. ನಮ್ಮಲ್ಲಿ ಕಾನೂನುಗಳಿಗೆ ಕೊರತೆ ಇಲ್ಲ. ಸರ್ಕಾರ ಈ ಹೊಸ ಕಾನೂನು ತಂದಿದ್ದಕ್ಕೆ ಅರ್ಥವಿಲ್ಲ. ಸ್ಪಷ್ಟ ಉದ್ದೇಶ ತಿಳಿಸಿಲ್ಲ.

ಈ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಕೆಲಸ ಮಾಡು ಎಂದು ಜೋರಾಗಿ ಹೇಳಿದರೂ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜಾತಿ ನಿಂದನೆ ತಡೆ ಕಾಯ್ದೆ ಮಾದರಿಯಲ್ಲಿ ಇದು ದುರ್ಬಳಕೆಯಾಗುವ ಸಾಧ್ಯತೆಯಿದೆ. ಯಾರಾದರೂ ಬಂದು ದೂರು ನೀಡಬಹುದು. ಇದನ್ನು ಸಾಬೀತುಪಡಿಸುವುದು ಹೇಗೆ? ದೂರು ನೀಡಿದ ಬಳಿಕ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ‘ಬಿ’ ರಿಪೋರ್ಟ್‌ ಸಲ್ಲಿಸುತ್ತಾರೆ. ಸುಖಾಸುಮ್ಮನೆ ಸಮಯ ವ್ಯಯವಾಗುತ್ತದೆ. ನನ್ನ ಪ್ರಕಾರ ಈ ಸರ್ಕಾರ ಎದುರಾಳಿಗಳನ್ನು ಬ್ಲಾಕ್‌ ಮೇಲ್‌ ಮಾಡಲು, ರಾಜಕೀಯ ಸೇಡು ತೀರಿಸಿಕೊಳ್ಳಲು ಈ ಕಾನೂನು ತಂದಿದೆ ಅನಿಸುತ್ತಿದೆ.

ಈಗಾಗಲೇ ಇರುವ ಕಾನೂನುಗಳ ಅಡಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಪರಾಧ ಸಾಬೀತಾಗಿ ಶಿಕ್ಷೆಯೂ ಆಗಿದೆ. ಹೀಗಿರುವಾಗ ಈ ಹೊಸ ಕಾನೂನಿನ ಅಗತ್ಯವೇನಿತ್ತು? ಇದು ರಾಜಕೀಯ ಪ್ರೇರಿತ ಕಾನೂನು. ಇದನ್ನು ಅನುಷ್ಠಾನಕ್ಕೆ ತರುವುದು ಸವಾಲಿನ ಕೆಲಸ. ಪ್ರಕರಣ ದಾಖಲಾದರೂ ಸಾಬೀತುಪಡಿಸುವುದು ಕಠಿಣ. ಅಷ್ಟೇ ಅಲ್ಲದೆ, ಈ ಕಾನೂನಿನಲ್ಲಿ ಜಾಮೀನು ರಹಿತ ಬಂಧನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಮತ್ತಷ್ಟು ಅಪಾಯಕಾರಿ. ಆರೋಪ ಸಾಬೀತಾಗದಿದ್ದಲ್ಲಿ ಆರೋಪಿತ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ನಿರಾಪರಾಧಿಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತವೆ. ಈ ಸರ್ಕಾರ ಭಯ ಹುಟ್ಟಿಸಲು ಈ ಕಾನೂನು ತಂದಿರಬಹುದು.

ಈ ಕಾನೂನಿನಿಂದ ವ್ಯಕ್ತಿಯ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ. ಸಂವಿಧಾನವೇ ಕಲ್ಪಿಸಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಇದು ಎಡೆಮಾಡಿಕೊಡುತ್ತದೆ. ಈ ಹಿಂದೆ ಐಟಿ ಕಾಯ್ದೆಗೆ ತಿದ್ದುಪಡಿ ತಂದು 66 ಎ ಸೇರಿಸಲಾಗಿತ್ತು. ಇದು ಸೆಕ್ಷನ್‌ 19(1) (ಎ) ಅಡಿ ನೀಡಲಾಗಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಗೆ ಅವಕಾಶ ನೀಡಲಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಈ ಐಟಿ ಕಾಯ್ದೆ ಸೆಕ್ಷನ್‌ 66ಎ ರದ್ದುಗೊಳಿಸಿದ ನಿದರ್ಶನವಿದೆ. ದ್ವೇಷ ಭಾಷಣ ವಿರುದ್ಧ ಕಾನೂನು ತರುವ ಪ್ರಯತ್ನ ಕರ್ನಾಟಕದಲ್ಲೇ ಮೊದಲೇನಲ್ಲ. ಈ ಹಿಂದೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲೂ ಪ್ರಯತ್ನಗಳು ನಡೆದಿದ್ದವು. ಆದರೆ, ಆ ಕಾನೂನಿಗೆ ಸೋಲಾಯಿತು. ಎಲ್ಲೂ ಈ ಕಾನೂನು ಸಫಲವಾಗಲಿಲ್ಲ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುವ ಬದಲು ಈ ವಿವಾದಿತ ಕಾನೂನು ತಂದು ಜನರ ದಿಕ್ಕು ತಪ್ಪಿಸಲು ಮುಂದಾಗಿದೆ. ಅಭಿವೃದ್ಧಿಗೆ ಈ ಸರ್ಕಾರದ ಬಳಿ ಹಣವಿಲ್ಲ. ಜನ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಜನರ ಮನಸ್ಸು ಬೇರೆಡೆಗೆ ತಿರುಗಿಸಲು ಸರ್ಕಾರ ಮುಂದಾಗಿದೆ. ಅಭಿವೃದ್ಧಿ ಬಗ್ಗೆ ಸರ್ಕಾರವನ್ನು ಜನ ಪ್ರಶ್ನೆ ಮಾಡಿದರೂ ದ್ವೇಷ ಎನ್ನುವ ಅಪಾಯವಿದೆ. ದೇವಸ್ಥಾನಗಳ ದುಡ್ಡು ಮಸೀದಿಗಳಿಗೆ ಏಕೆ ಖರ್ಚು ಮಾಡುವಿರಿ ಎಂದರೂ ದ್ವೇಷವಾಗುತ್ತದೆ. ಮದರಸಾಗಳಲ್ಲಿ ಸೆಕ್ಯುಲರ್‌ ಶಿಕ್ಷಣ ಕೊಡಿ ಎಂದರೂ ದ್ವೇಷ ಭಾಷಣ ಎನ್ನಲಾಗುತ್ತದೆ. ಇದೇ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಭಾಷಣದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ನಾಲಾಯಕ್‌ ಎಂದಿದ್ದರು. ಇದನ್ನು ದ್ವೇಷ ಭಾಷಣ ಎನ್ನಬಹುದಾ? ದೌರ್ಜನ್ಯ ಮಾಡಲೆಂದೇ ಸರ್ಕಾರ ಈ ಕಾನೂನು ತಂದಿದೆ.

ರಾಜಕೀಯ ದ್ವೇಷದ ಕಾರಣಕ್ಕೆ ಪ್ರಕರಣ ದಾಖಲಾಗುತ್ತದೆ. ದೂರು ಕೊಡುವವನ ದೃಷ್ಟಿಯಲ್ಲಿ ಅದು ದ್ವೇಷ. ಆದರೆ, ಪೊಲೀಸರ ತನಿಖೆಯಲ್ಲಿ ದ್ವೇಷ ಕಂಡು ಬರುವುದಿಲ್ಲ. ಆಗ ಪೊಲೀಸರು ಬಿ ರಿಪೋರ್ಟ್‌ ಹಾಕಬೇಕು. ಇದಕ್ಕೆ ರಾಜಕಾರಣಿಗಳು ಅವಕಾಶ ನೀಡುವುದಿಲ್ಲ. ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶಿಸುವ ಹಾಗೂ ತನಿಖಾಧಿಕಾರಿ ಮೇಲೆ ಒತ್ತಡ ಹಾಕುವ ಸಾಧ್ಯತೆಯಿದೆ. ಅಂತೆಯೇ ನ್ಯಾಯಾಲಯಗಳ ಸಮಯವೂ ವ್ಯರ್ಥವಾಗಲಿದೆ. ಈಗಾಗಲೇ ನ್ಯಾಯಾಲಯಗಳಲ್ಲಿ ಸಾಕಷ್ಟು ಪ್ರಕರಣಗಳಿವೆ. ಅವುಗಳ ವಿಲೇವಾರಿಯೇ ವಿಳಂಬವಾಗುತ್ತಿದೆ. ಅವುಗಳ ಜೊತೆ ಇಂಥ ಪ್ರಕರಣಗಳು ಸೇರಿಕೊಂಡರೆ ನ್ಯಾಯಾಲಯದ ಸಮಯವೂ ವ್ಯಯವಾಗಲಿದೆ.

ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಕಾನೂನು ಕೊರತೆ ಇದೆಯಾ? ಇಲ್ಲ. ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಈ ಕಾನೂನಿನಿಂದ ಸಮಾಜದಲ್ಲಿ ದ್ವೇಷ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಪ್ರಕರಣಗಳು ಹೆಚ್ಚಳವಾದಷ್ಟು ಸಮಾಜದಲ್ಲಿ ದ್ವೇಷ ಹೆಚ್ಚಾಗಲು ಕಾರಣವಾಗುತ್ತದೆ. ರಾಜಕೀಯ ತಿರುವುಗಳಿಗೆ ಎಡೆ ಮಾಡಿಕೊಡುತ್ತದೆ. ಏರಿದ ದನಿಯಲ್ಲಿ ಮಾತನಾಡಿದರೂ ಅಪರಾಧವಾಗುತ್ತದೆ. ಕುಡಿದು ವ್ಯಕ್ತಿ ಯಾರನ್ನೋ ಅವಾಚ್ಯವಾಗಿ ನಿಂದಿಸಿದ ಎಂಬ ಕಾರಣಕ್ಕೆ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು.

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ

ತನಿಖೆಯಲ್ಲಿ ಇದನ್ನು ಸಾಬೀತುಪಡಿಸುವುದು ಹೇಗೆ? ಸಾರ್ವಜನಿಕವಾಗಿ ದ್ವೇಷ ಭಾಷಣ ಮಾಡಿದರೆ, ಸಾಬೀತುಪಡಿಸಬಹುದು. ಖಾಸಗಿಯಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾಗುವುದನ್ನು ಸಾಬೀತುಪಡಿಸುವುದು ಹೇಗೆ? ಇದಕ್ಕೆಲ್ಲ ಸಾಕ್ಷಿಗಳೇ ಇರುವುದಿಲ್ಲ. ಈ ಕಾನೂನು ಸದುಪಯೋಗಕ್ಕಿಂತ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ. ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಲಾಗುತ್ತದೆ. ಮೂಲಭೂತ ಹಕ್ಕು, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ. ಸರ್ಕಾರ ಈ ಕಾನೂನು ತಂದಿರುವುದಕ್ಕೆ ಸ್ಪಷ್ಟ ಉದ್ದೇಶವೇ ಇಲ್ಲ. ವಿಧೇಯಕದಲ್ಲೂ ಸ್ಪಷ್ಟತೆ ಇಲ್ಲ. ಕರ್ನಾಟಕದಲ್ಲಿ ಅಷ್ಟೊಂದು ದ್ವೇಷ ಇದೆಯಾ? ಇರುವ ಕಾನೂನುಗಳು ಸಾಕಾಗುತ್ತಿಲ್ಲವಾ?

ಒಂದು ವೇಳೆ ರಾಜ್ಯದಲ್ಲಿ ಅಷ್ಟೊಂದು ದ್ವೇಷವಿದ್ದರೆ ವಿಧೇಯಕದ ಪೀಠಿಕೆಯಲ್ಲೇ ಸರ್ಕಾರ ಹೇಳಬೇಕಿತ್ತು. ಇದ್ಯಾವುದನ್ನೂ ಮಾಡದೆ ಕೇವಲ ರಾಜಕೀಯ ಸೇಡು ಹಾಗೂ ಕೆಲವರನ್ನು ಟಾರ್ಗೆಟ್‌ ಮಾಡಿ ಈ ಕಾನೂನು ತಂದಿದೆ. ಇದರಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚಿದೆ. ನನ್ನ ಪ್ರಕಾರ ಈ ಕಾನೂನು ನಿಲ್ಲುವುದಿಲ್ಲ. ಸರ್ಕಾರ ಇಂತಹ ವಿವಾದಿತ ಕಾನೂನುಗಳನ್ನು ತರುವ ಬದಲು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ರಾಜ್ಯದ ಜನ ಹಲವು ಸಮಸ್ಯೆಗಳಿಗೆ ಸಿಲುಕಿ ನಲುಗುತ್ತಿದ್ದಾರೆ. ಅವರ ನೆರವಿಗೆ ಧಾವಿಸಬೇಕು. ಇರುವ ಕಾನೂನುಗಳನ್ನೇ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಈ ಕಾನೂನಿನಿಂದ ಸಮಾಜದಲ್ಲಿ ದ್ವೇಷ ಮತ್ತಷ್ಟು ಹೆಚ್ಚಳವಾಗುತ್ತದೆಯೇ ಹೊರತು ಎಂದಿಗೂ ಕಡಿಮೆ ಆಗುವುದಿಲ್ಲ.

PREV
Read more Articles on
click me!

Recommended Stories

ವಾಕ್‌ ಸ್ವಾತಂತ್ರ್ಯಕ್ಕೆ ದ್ವೇಷ ಭಾಷಣ ವಿಧೇಯಕ ವಿರುದ್ಧವಾಗಿಲ್ಲ: ವಿ.ಗೋಪಾಲ ಗೌಡ ಲೇಖನ
ಸದನದಲ್ಲಿ ಹೆಸರು ತಪ್ಪಾಗಿ ಹೇಳಿದರೆ ದಂಡ ಫಿಕ್ಸ್‌!