
ವಂಡರ್ ಡೈರಿ
ಪ್ರತಿಯೊಬ್ಬರಿಗೂ ತಮ್ಮ ಹೆಸರೇ ಐಡೆಂಟಿಟಿ. ಅದಕ್ಕಾಗಿ ಏನು ಬೇಕಾದರೂ ಮಾಡ್ತಾರೆ. ಅದು ಸಾಮಾನ್ಯ ವ್ಯಕ್ತಿಯೇ ಆಗಿರಬಹುದು ಅಥವಾ ಉನ್ನತ ಸ್ಥಾನದಲ್ಲಿರುವವರೇ ಆಗಿರಬಹುದು. ಹೆಸರು ವ್ಯತ್ಯಾಸವಾದರೆ ಯಾರೂ ಸಹಿಸಲ್ಲ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ ಹೆಸರಿನ ವಿಚಾರವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಆ ಚರ್ಚೆ ಅಂತ್ಯದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಸದನದಲ್ಲಿ ಯಾರಾದರೂ ಇನ್ನೊಬ್ಬರ ಹೆಸರು ಸರಿಯಾಗಿ ಸಂಬೋಧಿಸದಿದ್ದರೆ ದಂಡ ಹಾಕುವ ಎಚ್ಚರಿಕೆಯನ್ನೂ ಕೊಡುವಂತಾಯಿತು.
ಆಗಿದ್ದೇನೆಂದರೆ, ಪ್ರಶ್ನೋತ್ತರ ಕಲಾಪ ವೇಳೆ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ತಮ್ಮ ಕ್ಷೇತ್ರದ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಲು ಮುಂದಾದ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮಯ್ಯ ಅವರನ್ನು ತಿಮ್ಮಯ್ಯ ಎಂದು ಸಂಬೋಧಿಸಿದರು.
ಅದಕ್ಕೆ ನಗುತ್ತಲೇ ಆಕ್ಷೇಪಿಸಿದ ತಮ್ಮಯ್ಯ, ಸಭಾಧ್ಯಕ್ಷರೇ ನೀವು ತಿಮ್ಮಯ್ಯ, ತಿಮ್ಮಯ್ಯ ಅಂತ ಹೇಳಿ ಹೇಳಿ ಎಲ್ಲರೂ ಹಾಗೆ ಕರೀತಿದ್ದಾರೆ ಅಂದರು.
ಆಗ ಪ್ರಿಯಾಂಕ್ ಖರ್ಗೆ, ಅವರದ್ದು ಬಿಡಿ ಸಭಾಧ್ಯಕ್ಷರೇ, ನನ್ನ ಹೆಸರನ್ನೂ ನೀವು ಪ್ರಿಯಾಂಕಾ ಬದಲು ಪ್ರಿಯಾಂಕ್ ಅಂತನೇ ಕರೀರಿ. ಇಲ್ಲದಿದ್ದರೆ ಎಲ್ಲ ನನ್ನ Gender ಚೇಂಜ್ ಮಾಡ್ತಾರೆ ಅಂದ್ರು... ಆಗ ಇಡೀ ಸದನ ಕೆಲ ಹೊತ್ತು ನಗೆಗಡಲಲ್ಲಿ ತೇಲಿತು.
ಕೊನೆಗೆ ಸ್ಪೀಕರ್ ಯು.ಟಿ. ಖಾದರ್, ಇನ್ನು ಮುಂದೆ ತಿಮ್ಮಯ್ಯ ಅಂತ ಯಾರಾದರೂ ಕರೆದರೆ ಅವರಿಗೆ ದಂಡ ಹಾಕ್ತೀವಿ ಎಂದು ಎಚ್ಚರಿಕೆ ಕೊಟ್ಟರು.
---
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಸುದ್ದಿಗೋಷ್ಠಿ ಅಂದ್ರೇನೆ ವಿಶೇಷ. ಸುದ್ದಿಗೋಷ್ಠಿ ಸುದ್ದಿಗೋಷ್ಠಿಯಾಗಿಯೇ ಇರುವುದಿಲ್ಲ. ಅದೊಂದು ರೀತಿಯಲ್ಲಿ ಸಂವಾದ, ಚರ್ಚೆ, ವಿಧಾನಸಭೆ ಕಲಾಪ ನೆನಪಿಸುತ್ತದೆ. ಗಂಟೆಗಟ್ಟಲೇ ನಡೆಯುತ್ತದೆ.
ಮೊನ್ನೆ ಹೀಗೇ ಆಯಿತು, ಅಂಜನಾದ್ರಿಯಲ್ಲಿ ನಡೆಯುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮದಲ್ಲಿ ತಮ್ಮ ಉಸ್ತುವಾರಿಯಲ್ಲಿರುವ ಜಿಲ್ಲಾ ಅಥ್ಲೆಟಿಕ್ಸ್ ಸಹಯೋಗ ಮತ್ತು ಸೇವೆ ಕುರಿತು ವಿವರಣೆ ನೀಡಲು ತಮ್ಮ ಕಚೇರಿಯಲ್ಲಿಯೇ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ಪ್ರಾರಂಭವಾಗಿ ಗಂಟೆ ಮುಗಿದರೂ ಅವರ ಮಾತು ಮುಗಿಯಲಿಲ್ಲ ಮತ್ತು ಪತ್ರಕರ್ತರ ಪ್ರಶ್ನೆಗಳೂ ಕೊನೆಗೊಳ್ಳಲಿಲ್ಲ. ಒಂದು ರೀತಿಯಲ್ಲಿ ವಾಗ್ಯುದ್ಧವೇ ನಡೆಯುತ್ತಿತ್ತು.
ಇದೆಲ್ಲವನ್ನು ಸುದ್ದಿಗಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಟಿವಿ ಕ್ಯಾಮೆರಾಮೆನ್ ಅತ್ತಿತ್ತ ಹೋಗಿ ಆಗೊಮ್ಮೆ, ಈಗೊಮ್ಮೆ ಸಾಕುಬಿಡಿ ಎಂದೆಲ್ಲ ಹೇಳುತ್ತಿದ್ದರು. ಆದರೆ, ಪತ್ರಕರ್ತರ ಪ್ರಶ್ನೆಗಳು ಮುಗಿಯಲಿಲ್ಲ ಮತ್ತು ಸಂಸದರು ಉತ್ತರ ಕೊಡುವುದನ್ನೂ ನಿಲ್ಲಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ಕ್ಯಾಮರಾಮೆನ್ ಓರ್ವರು ಸರ್, ಸಾಕ್ ಬಿಟ್ಟು ಬಿಡಿ, ನಮ್ಮ ರೆಕಾರ್ಡಿಂಗ್ ಕಾರ್ಡ್ ತುಂಬಿ ಹೋಯಿತು ಎನ್ನುತ್ತಿದ್ದಂತೆ ಸಂಸದರು, ಪತ್ರಕರ್ತರು ಬಿದ್ದು ಬಿದ್ದು ನಕ್ಕರು.
---
ನಿಮಗೆ ಪ್ರತ್ಯೇಕವಾಗಿ ಬೇಕಿರೋದು ಯಾವುದು ಉ.ಕ. ನೋ ಕ.ಕ.ನೋ?
ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ಕಲಬುರಗಿಯಲ್ಲಿ ಇತ್ತೀಚೆಗೆ ಸ್ವಾರಸ್ಯಕರ ಸುದ್ದಿಗೋಷ್ಠಿ ನಡೆಯಿತು. ವಿಷಯ ಏನೆಂದರೆ, ಉತ್ತರ ಕರ್ನಾಟಕ (ಉ.ಕ.) ಪ್ರತ್ಯೇಕ ಹೋರಾಟ ಸಮಿತಿ ಹಾಗೂ ಕಲ್ಯಾಣ ಕರ್ನಾಟಕ(ಕ.ಕ.) ಪ್ರತ್ಯೇಕ ರಾಜ್ಯ ಹೋರಾಟ ಸಮಿತಿವರು ಇಬ್ರೂ ಒಂದೇ ವೇದಿಕೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.
ಗೋಷ್ಠಿಯಲ್ಲಿ ಪ್ರತ್ಯೇಕ ರಾಜ್ಯಪಟ್ಟ ಕೊಡೋದಾದ್ರೆ ಯಾರಿಗೆ, ಯಾವ ಭಾಗಕ್ಕೆ, ಯಾಕೆ ಕೊಡಬೇಕು ಎಂದೆಲ್ಲ ಚರ್ಚೆಗಳಾದಿದ್ದು, ಉತ್ತರ ಕನ್ನಡ ಪ್ರತ್ಯೇಕ ರಾಜ್ಯ ಹೋರಾಟಗಾರ ಗೂಳಶೆಟ್ಟಿ ತಮ್ಮ ಬೇಡಿಕೆಗೆ 15-20 ಜನನಾಯಕರ ಲಿಖಿತ ಬೆಂಬಲವಿದೆ. ಅನೇಕರು ಮೌಖಿಕವಾಗಿ ಬಂಬಲಿಸಿದ್ದಾರೆಂದು ಹೇಳ್ತಾ ಉತ್ತರ ಕರ್ನಾಟಕವೇ ಪ್ರತ್ಯೇಕ ರಾಜ್ಯಕ್ಕೆ ಸೂಕ್ತವೆಂದರು.
ಇದನ್ನು ಒಪ್ಪುತ್ತೀರಾ ಎಂದು ದಶಕದಿಂದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾ ಬಂದಿರೋ ಮಹಾದೇವಪ್ಪ ಗೌಡ ಪಾಟೀಲರನ್ನು ಪ್ರಶ್ನಿಸಿದಾಗ ಅವ್ರು ಸಿಡಿದೆದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಿಂತ ಹಿಂದುಳಿದ ಕಲ್ಯಾಣ ನಾಡನ್ನೇ ಪ್ರತ್ಯೇಕ ರಾಜ್ಯವಾಗಿಸುವ ಜರೂರತ್ತಿದೆ ಎಂದು ಗುಡುಗಿದರು.
ನಂತರ ಗೋಷ್ಠಿಯಲ್ಲಿ ಒಂದೇ ಸಮನೆ ಗುಡುಗು-ಸಿಡಿಲಿನ ಸದ್ದೇ ಸದ್ದು. ಕಡೆಗೆ ಮೊದ್ಲು ನಿಮ್ಮ ಬೇಡಿಕೆ, ಷರತ್ತುಗಳ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಬನ್ನಿ, ನಂತ್ರ ಅದನ್ನು ಮಾಧ್ಯಮದವರ ಮುಂದೆ ಹೇಳಿವ್ರಂತೆ ಅಂತ ಈ ಉ.ಕ. ಮತ್ತು ಕ.ಕ. ಹೋರಾಟಗಾರರಿಗೆ ಸುದ್ದಿಗಾರರೇ ಕಿವಿ ಮಾತು ಹೇಳಬೇಕಾಯ್ತು.
- ಗಿರೀಶ್‌ಗರಗ
- ಸೋಮರಡ್ಡಿ ಅಳವಂಡಿ
- ಶೇಷಮೂರ್ತಿ ಅವಧಾನಿ