
ಮೈತ್ರಿ ಎಸ್.
ಹಿರಿಯ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಸುಪುತ್ರಿ ಭಾವನಾ ಬೆಳಗೆರೆ ಅವರು ರವಿ ಬೆಳಗೆರೆ ಕೆಲವು ಪುಟ ಬರೆದಿಟ್ಟಿದ್ದ ‘ಆಂಟಿ ನಿನ್ನೊಲುಮೆಯಿಂದಲೇʼ ಕತೆಯನ್ನು ಕಾದಂಬರಿಯಾಗಿಸಿದ್ದಾರೆ. ಈ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಜೊತೆಗೆ 31 ವರ್ಷ ಪೂರೈಸಿರುವ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಭಾವನಾ ಬೆಳಗೆರೆ ಅವರ ಜೊತೆ ಮಾತುಕತೆ.
* ಚೊಚ್ಚಲ ಕಾದಂಬರಿ ಬರವಣಿಗೆ ಹೇಗನ್ನಿಸಿತು?
ಬರವಣಿಗೆ ನನಗೆ ಹೊಸತಲ್ಲ. 4 ವರ್ಷ ʼಓ ಮನಸೇʼ ಮ್ಯಾಗಜೀನ್‌ನ ಸಂಪಾದಕಿಯಾಗಿದ್ದ ನನಗೆ ಭಾವನೆಗಳು, ಮಾನವ ಸಹಜ ಆಸ್ತಿಯ ವಿಷಯಗಳನ್ನು ಬರೆದ ಅನುಭವವಿತ್ತು. ಜತೆಗೆ ‘ಆಂಟಿ ನಿನ್ನೊಲುಮೆಯಿಂದಲೇʼ ಎಂಬುದು ಮನಃಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ಸೈಕಾಲಜಿ ವಿದ್ಯಾರ್ಥಿನಿಯಾದ ನನಗೆ ಸುಲಭವಾಯಿತು. ಕ್ರೈಂ ವರದಿಗಾರ್ತಿಯಾಗಿ ಗಳಿಸಿದ ಅನುಭವ ಉಪಯೋಗವಾಯ್ತು. ‘ರಾಧಾʼ ಧಾರವಾಹಿಯಲ್ಲಿ ರೂಢಿಸಿಕೊಂಡಿದ್ದ ಕತೆ ಬರೆಯುವ ಕಲೆ ಕೆಲಸಕ್ಕೆ ಬಂತು. ಅಪ್ಪನ ಗರಡಿಯಲ್ಲೂ ಪಳಗಿದ್ದುದರಿಂದ ಕಷ್ಟವಾಗಲಿಲ್ಲ.
* ‘ಆಂಟಿ..ʼ ಹುಟ್ಟಿಕೊಂಡದ್ದು ಹೇಗೆ?
ಈ ಕತೆಯ 2 ಅಂಕಣವನ್ನು ಅಪ್ಪ ಓ ಮನಸೇಗೆ ಬರೆದಿದ್ದರು. ಇದರ ಮೂಲ ಕತೆ ಅಮೆರಿಕಾದ ಲೇಖಕಿ ಡೊರೀನ್ ಒರಿಯನ್ ಅವರ ‘ಐ ನೋ ಯು ರಿಯಲೀ ಲವ್ ಮಿʼ ಎಂಬ ಮನಶಾಸ್ತ್ರಕ್ಕೆ ಸಂಬಂಧಿಸಿದ ಜರ್ನಲ್. ಅದೊಂದು ನಿಘಂಟಿನಂತಿತ್ತು. ಅದಕ್ಕೆ ಅಪ್ಪ ಭಾರತೀಯತೆಯನ್ನು ತುಂಬಿ ಬರೆದರು. ಅದನ್ನು ಮುಂದುವರೆಸಬೇಕು ಎಂಬ ಯೋಚನೆ ಬಂದಾಗ ಎದುರಾದ ಸವಾಲು, ‘ಮುಂದಿನ ಕತೆಯೇನು?ʼ ಏಕೆಂದರೆ, ಅಪ್ಪ ಯಾರೊಂದಿಗೂ ತಮ್ಮ ಕತೆ, ಯೋಚನೆಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಅವರು ಬರೆದದ್ದಷ್ಟೇ ನಮಗೆ ಓದಲು ಸಿಗುತ್ತಿತ್ತು. ಕೊನೆಗೆ ಅದರ ಮೂಲಕೃತಿಯನ್ನು ಓದಿಯೇ ನಾನು ಕತೆ ಹೆಣೆಯಲು ಕೂರಬೇಕಾಯಿತು.
* ಕತೆ ಮುಂದುವರೆಸುವ ಯೋಚನೆ ಬಂದದ್ದು ಹೇಗೆ? ಎದುರಾದ ಸವಾಲುಗಳೇನು?
ಈ ಕೆಲಸವನ್ನು ನಾನು ಮೊದಲೇ ಮಾಡಬೇಕಿತ್ತು. ಅಪ್ಪ ಅನೇಕ ಅಪೂರ್ಣ ಕಾದಂಬರಿಗಳನ್ನು ಬರೆದಿಟ್ಟಿದ್ದರು. ಅದಕ್ಕೆ ಕೊನೆಯ ಕೆಲ ಪುಟ ಸೇರಿಸಿ ನಾನು ಮುಗಿಸಿದ್ದೆ. ಆದರೆ ‘ಆಂಟಿ..ʼಯ ಕೇವಲ 12 ಪುಟಗಳನ್ನು ಬರೆದಿದ್ದರು. ಆದರೂ ಮನಃಶಾಸ್ತ್ರಕ್ಕೆ ಸಂಬಂಧಿಸಿದ್ದಾದ್ದರಿಂದ ಇದೇ ನನ್ನ ಮೊದಲ ಕಾದಂಬರಿಯಾಗಲಿ ಎಂದುಕೊಂಡೆ. ಕತೆಯನ್ನು ಮುಂದುವರೆಸಲು ನನಗೆ ಇನ್ನೊಂದಿಷ್ಟು ಪಾತ್ರಗಳ ಅವಶ್ಯಕತೆಯಿತ್ತು. ಅಪ್ಪ ಶುರುವಲ್ಲಿ ಸುಳಿವು ನೀಡಿದ್ದ ‘ಆʼ ವ್ಯಕ್ತಿಯನ್ನು ಸೃಷ್ಟಿಸಿದೆ. ಕಷ್ಟಗಳೇ ಸುತ್ತಿಕೊಂಡಿದ್ದ ಶರಣ್ಯಾಳ ರಕ್ಷೆಗೂ ಒಬ್ಬನನ್ನು ಹುಟ್ಟುಹಾಕಿದೆ. ಜತೆಗೆ, ಘೋರ ಅಪರಾಧಗಳ ದೃಶ್ಯಗಳಿರುವುದರಿಂದ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರಿಂದ ಸಾಕಷ್ಟು ಮಾಹಿತಿ ಪಡೆದೆ. ಇದೆಲ್ಲಾ ವ್ಯವಸ್ಥೆಗಳಾದಮೇಲೆ ಎದುರಾಗಿದ್ದು ಸಮಯದ ಸಮಸ್ಯೆ, ಪತ್ರಿಕೆ, ಮನೆ ಕೆಲಸದ ನಡುವೆ ಬಿಡುವೇ ಆಗುತ್ತಿರಲಿಲ್ಲ. 3 ತಿಂಗಳಲ್ಲಿ ಬರೀ 20 ಪುಟ ಬರೆದಿದ್ದೆ. ಹೀಗೇ ಆದರೆ ಕೆಲಸ ಸಾಗದು ಎಂಬ ಅರಿವಾಗಿ, ಹೊರಗಿನವರ್ಯಾರಿಗೂ ಹೇಳದೆ ಹಾಸನದ ಸಕಲೇಶಪುರಕ್ಕೆ ಹೋದೆ. 5 ದಿನದಲ್ಲಿ ಕಾದಂಬರಿ ಮುಗಿಸಿಬಿಟ್ಟೆ.
* ಕಾದಂಬರಿಯಲ್ಲಿರುವ ಆ ಕಾಯಿಲೆ ಬಗ್ಗೆ ಚೂರು..
‘ಎರಿಟೋಮೇನಿಯಾʼ ಎಂಬುದು ಒಂದು ಭಯಂಕರವಾದ ಮಾನಸಿಕ ಸಮಸ್ಯೆ. ಈ ರೋಗಕ್ಕೆ ಮದ್ದಿಲ್ಲ. ಎರಿಟೋಮೇನಿಯಾದಿಂದ ಬಳಲುತ್ತಿರುವವರು ಒಬ್ಬ ವ್ಯಕ್ತಿ ಅಥವಾ ವಸ್ತುವಿನತ್ತ ಅತಿಯಾಗಿ ಆಕರ್ಷಿತರಾಗಿರುತ್ತಾರೆ. ಆ ವ್ಯಕ್ತಿ ಬದುಕುತ್ತಿರುವುದೇ ನನಗಾಗಿ ಎಂಬ ಭ್ರಮೆಯಲ್ಲಿರುತ್ತಾರೆ. ಅವರನ್ನು ಪಡೆಯುವುದೇ ತಮ್ಮ ಮಹದೋದ್ದೇಶ ಎಂದುಕೊಂಡಿರುತ್ತಾರೆ ಹಾಗೂ ಅದನ್ನು ಸಾಧಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಿರುತ್ತಾರೆ. ಪರಿಹಾರವೆಂದರೆ ಸಾವು. ಒಂದೋ ರೋಗಿ ಸಾಯಬೇಕು, ಇಲ್ಲವೇ ಆತ/ಆಕೆ ಬಯಸುತ್ತಿರುವ ವ್ಯಕ್ತಿ ದೂರಾಗಬೇಕು ಅಥವಾ ಇಲ್ಲವಾಗಬೇಕು. ಆದರಿದು ಇಲ್ಲಿಗೇ ನಿಲ್ಲದು. ಆ ರೋಗಿಯ ಆಸಕ್ತಿ ಇನ್ನೊಬ್ಬರ ಕಡೆ ತಿರುಗಿಬಿಡುತ್ತದೆ ಹಾಗೂ ಅವರನ್ನು ಪಡೆಯುವ ಹಂಬಲ, ಯತ್ನ ಶುರುವಾಗುತ್ತದೆ. ‘ಆಂಟಿ..ʼಯಲ್ಲಿ ಶರಣ್ಯಾ ಮನೋವೈದ್ಯೆ. ಆಕೆಯ ಬಳಿ ಬರುವ ರೋಗಿ ಈ ಎರಿಟೋಮೇನಿಯಾದಿಂದ ಬಳಲುತ್ತಿರುತ್ತಾಳೆ. ಶರಣ್ಯಾಳನ್ನು ಪಡೆಯಲು ಅವಳು ಮಾಡುವ ಕಿತಾಪತಿ, ಕ್ರೌರ್ಯಗಳು ಸಾಧಾರಣದವುಗಳಲ್ಲ. ಇದಕ್ಕಾಗಿ, ಶರಣ್ಯಾಳಿಂದ ಆಕರ್ಷಿತನಾಗಿದ್ದ ಹುಡುಗನ ಕೈಗೂ ರಕ್ತದ ಕಲೆ ಅಂಟಿಸಿಬಿಡುತ್ತಾಳೆ. ಇಂತಹ ರೋಗಿಯನ್ನು ವೈದ್ಯೆ ಶರಣ್ಯಾ ಸರಿ ಮಾಡುತ್ತಾಳೆಯೇ? ಆಕೆಗೆ ಮುಕ್ತಿ ಸಿಗುತ್ತದೆಯೇ? ಸಿಕ್ಕರೆ ಹೇಗೆ? ಸುಖಾಂತ್ಯವಾಗುತ್ತದೆಯೇ? ಇಲ್ಲವೇ? ಎಂಬುದೇ ಕಥಾವಸ್ತು.
* ಆ ಮುಖಪುಟದ ಹಿಂದೊಂದು ಕತೆಯಿದೆಯಲ್ಲ..
ನನ್ನಪ್ಪ ಕತೆಗಾಗಲೇ ಹೆಸರಿಟ್ಟಾಗಿತ್ತು. ಶೀರ್ಷಿಕೆಗೆ ತಕ್ಕಂತೆ ಮುಖಪುಟ ಮಾಡುವುದು ನನ್ನ ಕೆಲಸವಾಗಿತ್ತು. ನನ್ನ ಪತಿಯ ಐಡಿಯಾದಂತೆ, ಶರಣ್ಯಾಳನ್ನು ಆಂಟಿಯಾಗಿಸಲು ಸಣ್ಣ ಹುಡುಗನನ್ನು ಚಿತ್ರಿಸಿದೆ. ಒಲುಮೆಯ ಸಂಕೇತವಾಗಿ ಆತನ ಕೈಗೆ ಗುಲಾಬಿಯಿಟ್ಟೆ. ಪಾತ್ರಗಳ ವ್ಯಕ್ತಿತ್ವವಷ್ಟೇ ಕಾಣಲಿ, ಮುಖ ಓದುಗರ ಕಲ್ಪನೆಯಲ್ಲಿ ಮೂಡಲಿ ಎಂಬ ಆಶಯದಿಂದ ಇಬ್ಬರ ಮುಖವೂ ಕಾಣದಂತೆ ಅತ್ತ ತಿರುಗಿಸಿಬಿಟ್ಟೆ.
* ಪುಸ್ತಕಕ್ಕೆ ಪ್ರತಿಕ್ರಿಯೆ ಹೇಗಿದೆ?
‘ಎಲ್ಲಾ ಪಾತ್ರಗಳು ಕಣ್ಮುಂದೆ ನಿಂತಂತೆ, ದೃಶ್ಯಗಳು ಎದುರಲ್ಲೇ ನಡೆದಂತೆ ಭಾಸವಾಗುತ್ತದೆ. ಇದು ಖಂಡಿತ ಸಿನಿಮಾ ಆಗುತ್ತದೆʼ ಎಂಬುದೇ ನನಗೆ ಸಿಕ್ಕ ಅತ್ಯುತ್ತಮ ಪ್ರಶಂಸೆ. ಮೊದಲನೇ ಕಾದಂಬರಿಯನ್ನೇ ಜನ ಇಷ್ಟು ಇಷ್ಟಪಟ್ಟು ಪ್ರೀತಿ ಕೊಡುತ್ತಿರುವುದು ಖುಷಿಯಿದೆ.
* ನಿಮ್ಮ 2ನೇ ಕಾದಂಬರಿಗೆ ಇನ್ನೆಷ್ಟು ಸಮಯ ಕಾಯಬೇಕು?
ಅಪ್ಪ ಮುಟ್ಟದೇ ಇರುವ ವಿಷಯಗಳನ್ನಿಟ್ಟುಕೊಂಡು ಕಾದಂಬರಿ ಬರೆಯುವ ಬಯಕೆಯಿದೆ. ಈಗಾಗಲೇ ಒಂದಿಷ್ಟು ಕತೆಗಳು ಮನಸ್ಸಿನಲ್ಲಿವೆ. ಪಾತ್ರ, ಸಂದರ್ಭ, ದೃಶ್ಯಗಳನ್ನು ಈಗಿನ ಜೆನ್-ಝಿ ಕಾಲಕ್ಕೆ ತಕ್ಕಂತೆ ಚಿತ್ರಿಸಿ ಇಟ್ಟಿದ್ದೇನೆ. ಅದನ್ನು ಬರೆಯಲು ಏಕಾಂತ ಬಯಸಿ ದಾಂಡೇಲಿಗೋ ಸಕಲೇಶಪುರಕ್ಕೋ ಹೋಗಬೇಕಷ್ಟೇ.
* ಹಾಯ್ ಬೆಂಗಳೂರು ಜವಾಬ್ದಾರಿ ಹೇಗಿದೆ?
ಪತ್ರಿಕೆಯ ಜವಾಬ್ದಾರಿ ನನಗೆ ಹೊರೆಯಾಗಿಲ್ಲ. ಕಾರಣ, ಕೊರೋನಾ ಕಾಲದಲ್ಲಿ ಅಪ್ಪ ಹಾಯ್ ಬೆಂಗಳೂರನ್ನು ನಿಲ್ಲಿಸಲು ಮುಂದಾಗಿದ್ದರು. ಆದರೆ ನಾನು ಅದಕ್ಕೆ ಒಪ್ಪಲೇ ಇಲ್ಲ. ಆಗ ಅವರು, ‘3 ತಿಂಗಳು ಪತ್ರಿಕೆ ನಡೆಸಿ ತೋರಿಸು. ಆಗದಿದ್ದರೆ ಮುಚ್ಚಿಬಿಡುವʼ ಅಂತ ಸವಾಲು ಹಾಕಿದ್ರು. ಅಪ್ಪನ ನೆರವಿಲ್ಲದೆ ನಾನದನ್ನು 7 ತಿಂಗಳು ನಡೆಸಿದೆ. ಇದನ್ನು ನೋಡಿದ ಅವರು, ಪತ್ರಿಕೆಯ ಜವಾಬ್ದಾರಿ ನನಗೇ ವಹಿಸಿ, ಕಾದಂಬರಿಗಳನ್ನು ಬರೆಯಲು ಕೂತರು.
* ರವಿ ಬೆಳಗೆರೆಯವರ ಜೀವನಚರಿತ್ರೆ ಬರುವುದಿದೆಯೇ?
ಅವರು ತಮ್ಮ ಆತ್ಮಚರಿತ್ರೆಯನ್ನು ಶೇ.40ರಷ್ಟು ಬರೆದಾಗಿದೆ. ನನ್ನ ಪುಣ್ಯವೆಂದರೆ, ಅವರು ಹೇಳಿದ್ದನ್ನು ಬರೆಯುವ ಕೆಲಸವನ್ನು ನನಗೆ ವಹಿಸಿದ್ದರು. ಅದಕ್ಕೂ ಮೊದಲು, ತಾವು ಒಡನಾಡಿದ 167 ಜನರ ಹೆಸರುಗಳ ಪಟ್ಟಿಯನ್ನು ನನಗೆ ಕೊಟ್ಟಿದ್ದರು. ಈಗ ಅದನ್ನೇ ಬಳಸಿಕೊಂಡು, ಅದರಲ್ಲಿರುವವರನ್ನು ಸಂಪರ್ಕಿಸಿ, ಅಪ್ಪನೊಟ್ಟಿಗೆ ಅವರ ಬಾಂಧವ್ಯ ಹೇಗಿತ್ತು ಎಂದು ಕೇಳುತ್ತೇನೆ ಅಥವಾ ಪಟ್ಟಿಯಲ್ಲಿರುವ ಬಹುತೇಕರು ಸಾಹಿತಿಗಳೇ ಆಗಿರುವುದರಿಂದ ಅವರಿಂದಲೇ ಆ ಬಗ್ಗೆ ಬರೆಸುತ್ತೇನೆ. ಒಟ್ಟಿನಲ್ಲಿ, ಆತ್ಮಚರಿತ್ರೆ ಆಗಬೇಕಿದ್ದುದನ್ನು ಜೀವನಚರಿತ್ರೆ ಮಾಡುತ್ತೇನೆ.
* ಹಾಯ್ ಬದಲಾಗಿದೆಯಾ?
ಇಲ್ಲ. ಹಾಗೇ ಇದೆ. ಅಪ್ಪ ಅಸುನೀಗಿದ ಬಳಿಕ 4 ವರ್ಷ ಖಿನ್ನತೆಗೆ ಒಳಗಾಗಿದ್ದ ಕಾರಣ ಪತ್ರಿಕೆಯನ್ನೇ ನಿಲ್ಲಿಸಿಬಿಟ್ಟಿದ್ದೆ. ಬಳಿಕ ಮತ್ತೆ ಶುರು ಮಾಡಿದಾಗ ಅದನ್ನು ಜನರಿಗೆ ತಲುಪಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಅಪ್ಪ ನಶಿಸಿಹೋಗಬಾರದು ಎಂಬ ಆಸೆಯಿಂದ ಮತ್ತೆ ಶುರು ಮಾಡಿದೆ. ಅಪ್ಪ ಇದ್ದಾಗ ಇದ್ದ ತಂಡವೇ ಈಗಲೂ ನನ್ನ ಬೆನ್ನೆಲುವಾಗಿ ನಿಂತಿದೆ. ಹಾಯ್‌ಗೆ ಮರುಜೀವ ಬರಲು ಅವರೆಲ್ಲರ ಪ್ರೇರಣೆಯೂ ಒಂದು ಕಾರಣ. ಈಗ ಆಗಿರುವ ಬದಲಾವಣೆಯೆಂದರೆ, ಅಪ್ಪನ ಬದಲು ಅಮ್ಮ ‘ನಾ ಕಂಡ ಬೆಳಗೆರೆʼ ರೀತಿಯಲ್ಲಿ ‘ಲಲಿತೆಯ ಖಾಸ್ ಬಾತ್ʼ ಬರೆಯುತ್ತಿದ್ದಾರೆ. ಬಾಟಂ ಐಟಂ ಅಪ್ಪ ಅಂದು ಬರೆದದ್ದೇ ಇಂದೂ ಹೋಗುತ್ತಿವೆ. ಸಾಫ್ಟ್ ಕಾರ್ನರ್‌ಗೆ ‘ಬಾನಿಗೆರೆʼ ಅಂತ ಮರುನಾಮಕರಣ ಮಾಡಿ ನಾನು ಬರೆಯುತ್ತಿದ್ದೇನೆ. ಜತೆಗೆ ಜನರಿಂದಲೂ ಲೇಖನಗಳನ್ನು ಸ್ವೀಕರಿಸಿ ಪ್ರಕಟಿಸುತ್ತಿದ್ದೇವೆ. ಅಪ್ಪನ ವರದಿಗಳ ಕೊರತೆಯಿದೆಯಷ್ಟೇ.
* 31 ವರ್ಷದ ಕಪ್ಪು ಸುಂದರಿಗೆ ಬಣ್ಣ ತುಂಬುವ ಯೋಚನೆ?
ಇಲ್ಲ. ಆ ತರುಣಿ ಹಾಗೆಯೇ ಇರುತ್ತಾಳೆ. ಬಣ್ಣಕ್ಕೆ ಓ ಮನಸೇ ಇದೆಯಲ್ಲ. ಅಪ್ಪ ಜಾಹೀರಾತುಗಳ ವಿರೋಧಿಯಾಗಿದ್ದರು. ಹಾಗಾಗಿ ಹಾಯ್ ಬೆಂಗಳೂರು ಜಾಹೀರಾತುರಹಿತವಾಗಿಯೇ ಇರಲಿದೆ. ಜತೆಗೆ, ಪಾಕ್ಷಿಕವಾಗಿದ್ದ ಓ ಮನಸೇ ಅನ್ನು ಮಾಸಪತ್ರಿಕೆ ಮಾಡುವ ಯೋಚನೆಯಿದೆ. ಅಪ್ಪನ 5ನೇ ಪುಣ್ಯಸ್ಮರಣೆಯಂದೇ ಆ ಕೆಲಸ ಆ ಕೆಲಸ ಆಗಲಿದೆ.
ಹೌದು. ಕೆಲಸಕ್ಕಾಗಿ ಅವರಷ್ಟು ಸಮಯ ಮೀಸಲಿಡಲು ಆಗುತ್ತಿಲ್ಲ ಎಂಬುದೊಂದು ಬಿಟ್ಟರೆ, ಉಳಿದೆಲ್ಲಾ ವಿಷಯಗಳಲ್ಲಿ ಅಪ್ಪನಂತೆಯೇ. ಕಚೇರಿಯಲೂ ಹೇಳುತ್ತಿರುತ್ತಾರೆ, ‘ನೀವು ತಲೆಯೆತ್ತದೆ ಬರೆಯಲು ಕುಳಿತುಬಿಟ್ಟರೆ ಬಾಸ್ ರೀತಿಯೇ ಕಾಣುತ್ತೀರಿ. ಬರವಣಿಗೆಯಲ್ಲೂ ಅಷೇ, ಒಂದೂ ತಪ್ಪಿಲ್ಲದೆ ನೀಟಾಗಿ ಇರುತ್ತದೆʼ ಅಂತ.