ಪ್ರಧಾನಿ ಮೋದಿಜೀ ಅವರಲ್ಲಿ ರಾಜನ 3 ಮುಖ್ಯ ಗುಣ: ಆರ್.ಅಶೋಕ್ ಲೇಖನ

Published : Sep 17, 2025, 07:12 AM IST
 R Ashok

ಸಾರಾಂಶ

ನನ್ನ ರಾಜಕೀಯ ಬದುಕಿನಲ್ಲಿ ವಾಜಪೇಯಿ, ಅಡ್ವಾಣಿ ಸೇರಿದಂತೆ ಕೆಲವೇ ಕೆಲವು ಉನ್ನತ ನಾಯಕರಿಗೆ ಈ ಮಾತು ಅನ್ವಯವಾಗುತ್ತದೆ. ಅದೇ ರೀತಿ ಈಗಿನ ಜನಪ್ರಿಯ ನಾಯಕರಾದ ಪ್ರಧಾನಿ ಮೋದಿಜೀಯವರಿಗೆ ಈ ಮಾತು ಹೆಚ್ಚು ಸೂಕ್ತವಾಗುತ್ತದೆ.

-ಆರ್.ಅಶೋಕ್, ವಿರೋಧ ಪಕ್ಷದ ನಾಯಕರು

‘ರಾಜನು ಶಕ್ತಿವಂತನಾಗಿರಬೇಕು, ಆಗ ಮಾತ್ರ ರಾಷ್ಟ್ರವು ಪ್ರಗತಿ ಹೊಂದುತ್ತದೆ. ರಾಜನ ಶಕ್ತಿಯ 3 ಮುಖ್ಯ ಮೂಲಗಳಿವೆ- ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ.’ ಹೀಗೆಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ರಾಜನೀತಿಜ್ಞ ಚಾಣಕ್ಯ ಹೇಳಿದ್ದಾನೆ. ಈಗಿನ ಕಾಲದ ರಾಜಕಾರಣಕ್ಕೆ ಇದನ್ನು ಅನ್ವಯ ಮಾಡುವುದು ಬಹಳ ಕಷ್ಟ. ನನ್ನ ರಾಜಕೀಯ ಬದುಕಿನಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಕೆಲವೇ ಕೆಲವು ಉನ್ನತ ನಾಯಕರಿಗೆ ಈ ಮಾತು ಅನ್ವಯವಾಗುತ್ತದೆ. ಅದೇ ರೀತಿ ಈಗಿನ ಜನಪ್ರಿಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮಾತು ಹೆಚ್ಚು ಸೂಕ್ತವಾಗುತ್ತದೆ. ಕಳೆದ ಹನ್ನೊಂದು ವರ್ಷಗಳಿಂದ ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ 75ನೇ ವರ್ಷ.

ಅವರು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಮೀಸಲಾಗಿಟ್ಟಿರುವುದು ದೇಶಕ್ಕೆ ಹಾಗೂ ದೇಶದ ಜನರಿಗೆ. ಅನಗತ್ಯವಾದ ನಿಂದನೆ, ಟೀಕೆಗಳ ಹೊರತಾಗಿಯೂ ನಸುನಗುತ್ತಾ ದೇಶದ ಆಡಳಿತಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ಕೆಲಸ ಮಾಡುವುದೇ ಅವರ ಮಾನಸಿಕ ಶಕ್ತಿಗೆ ಸಾಕ್ಷಿ. ಯೋಗದ ಮೂಲಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಂಡಿರುವುದು ಅವರ ದೈಹಿಕ ಶಕ್ತಿಗೆ ಸಾಕ್ಷಿ. ಹಾಗೆಯೇ ಹಿಂದೂ ಧಾರ್ಮಿಕ ಸ್ಥಳಗಳನ್ನು ಹಾಗೂ ಪರಂಪರೆಯನ್ನು ಕಾಪಾಡುವ ಜೊತೆಗೆ, ಎಲ್ಲ ಧರ್ಮೀಯರ ಏಳಿಗೆಗೆ ಶ್ರಮಿಸುತ್ತಿರುವುದು ಅವರ ಆಧ್ಯಾತ್ಮಿಕ ಶಕ್ತಿಗೆ ಸಾಕ್ಷಿ. ವ್ಯಕ್ತಿಗೆ ವಯಸ್ಸಾದಂತೆ ಚುರುಕು ಕಡಿಮೆಯಾಗುತ್ತದೆ ಎಂಬ ಮಾತು ಪ್ರಧಾನಿ ಮೋದಿಯವರಿಗೆ ಮಾತ್ರ ಅನ್ವಯವಾಗುವುದಿಲ್ಲ. ಏಕೆಂದರೆ ದಿನಕ್ಕೆ ಅತಿ ಹೆಚ್ಚು ಗಂಟೆಗಳ ಕಾಲ ದುಡಿಯುವ ಅವರ ಉತ್ಸಾಹ ಎಂದಿಗೂ ಕುಗ್ಗಿಲ್ಲ. ಅವರ ವಿಚಾರದಲ್ಲಿ 75 ಎಂಬುದು ಕೇವಲ ಸಂಖ್ಯೆಗಳಷ್ಟೇ!

ಜನರ ಆಡಳಿತ: ಪ್ರಜಾಪ್ರಭುತ್ವದಲ್ಲಿ ಏಕಪಕ್ಷೀಯ ಆಡಳಿತಕ್ಕೆ ಬೆಲೆ ಇಲ್ಲ. ನಮ್ಮ ರಾಜ್ಯದ ಆಡಳಿತವೇ ಇದಕ್ಕೆ ಉತ್ತಮ ನಿದರ್ಶನ. ಶಾಸಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಅಭಿವೃದ್ಧಿ ಇಲ್ಲದೆ, ಅನುದಾನವಿಲ್ಲದೆ ಈ ಸರ್ಕಾರ ಬಳಲುತ್ತಿದೆ. ಸ್ವ ಪಕ್ಷದ ಶಾಸಕರೇ ಮುಖ್ಯಮಂತ್ರಿಯವರ ಆಡಳಿತದ ವಿರುದ್ಧ ಮಾತನಾಡುತ್ತಾರೆ. ಆದರೆ ಪ್ರಧಾನಿ ಮೋದಿಯವರದ್ದು ಸಂಪೂರ್ಣ ಪ್ರಜಾಪ್ರಭುತ್ವದ ಆಡಳಿತ. ಇದು ಜನರೊಂದಿಗೆ ನಡೆಸುವ ಆಡಳಿತ.

2020ರಲ್ಲಿ ಬಂದೆರಗಿದ ಕೋವಿಡ್‌ನಿಂದಾಗಿ ಇಡೀ ಜಗತ್ತು ತತ್ತರಗೊಂಡಿತ್ತು. ದೇಶದ ಜನರು ತಮ್ಮವರನ್ನು ಕಳೆದುಕೊಂಡು ಆತಂಕದಲ್ಲಿದ್ದರು. ಅಂತಹ ಸಮಯದಲ್ಲೂ ಎದೆಗುಂದದ ಪ್ರಧಾನಿ ಮೋದಿ ಆರೋಗ್ಯ ಕ್ಷೇತ್ರವನ್ನು ಹುರಿದುಂಬಿಸಿದರು. ನೇರವಾಗಿ ಜನರ ಮುಂದೆ ಬಂದು ಮಾತನಾಡಿ ಧೈರ್ಯ ತುಂಬಿದರು. ವೈದ್ಯರಿಗೆ ಹಾಗೂ ಕೋವಿಡ್‌ ಸೇನಾನಿಗಳಿಗೆ ಚಪ್ಪಾಳೆಯ ಶ್ಲಾಘನೆ ನೀಡಿದರು. ಇದರ ಪರಿಣಾಮ ಬೇರೆ ದೇಶಗಳಿಗಿಂತ ಮೊದಲೇ ಭಾರತ ಚೇತರಿಸಿಕೊಂಡಿತು. ಈ ಚೇತರಿಕೆ ಯಾವ ಮಟ್ಟಕ್ಕೆ ಹೋಯಿತು ಎಂದರೆ, ಸುಮಾರು 160 ದೇಶಗಳಿಗೆ ಭಾರತ ಕೋವಿಡ್‌ ಲಸಿಕೆಯನ್ನು ಪೂರೈಸಿತು. ಅಭಿವೃದ್ಧಿ ಹೊಂದಿದ ದೇಶಗಳೇ ಕೋವಿಡ್‌ನಿಂದ ಎಡವಿದ್ದಾಗ, ಭಾರತ ಆಗಲೇ ಗುಣಮುಖವಾಗಿ ಆರ್ಥಿಕತೆ ವೇಗವಾಗಿ ಬೆಳೆಯಿತು. ಇದು ಪ್ರಧಾನಿ ಮೋದಿಯವರ ನಾಯಕತ್ವದ ಶಕ್ತಿ.

ಅವರ ಯೋಜನೆಗಳು ಕೂಡ ಜನರನ್ನು ಕ್ರಿಯಾಶೀಲವಾಗಿಸಿದೆ. ಸ್ವಚ್ಛ ಭಾರತ ಯೋಜನೆ ಹಿಂದೆಯೂ ಬೇರೆ ಹೆಸರಿನಲ್ಲಿತ್ತು. ಆದರೆ ಆ ತರಹದ ಒಂದು ಯೋಜನೆ ಇದೆ ಎಂದೇ ಜನರಿಗೆ ಗೊತ್ತಿರಲಿಲ್ಲ. ಯಾವಾಗ ಪ್ರಧಾನಿ ನರೇಂದ್ರ ಮೋದಿ ಸ್ವತಃ ಪೊರಕೆಯನ್ನು ತೆಗೆದುಕೊಂಡು ಗುಡಿಸಿದರೋ, ಆಗ ಸ್ವಚ್ಛತೆಯ ಮಹತ್ವದ ಬಗ್ಗೆ ಸಮಾಜದಲ್ಲಿ ದೊಡ್ಡ ಸಂದೇಶ ಹರಡಿತು. ಇಂದಿಗೂ ಐಟಿ ಕಂಪನಿಗಳು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿವೆ. ಇಂತಹ ಜಾಗೃತಿ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಬಲ ನೀಡಿದೆ.

ಯುವಜನ ಕೇಂದ್ರೀಕೃತ: ಭಾರತದ ಬಹುದೊಡ್ಡ ಶಕ್ತಿ ಎಂದರೆ, ಅದು ಯುವಜನರು. ಈ ಮಾತನ್ನು ಸ್ವಾಮಿ ವಿವೇಕಾನಂದರು ಪದೇ ಪದೇ ಹೇಳಿದ್ದರು. ಅದನ್ನು ಮೊದಲೇ ಅರಿತಿದ್ದ ಪ್ರಧಾನಿ ಮೋದಿ, ಯುವಜನರ ಅಭಿವೃದ್ಧಿಗೆ ತಕ್ಕಂತಹ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಅವರು ತಂದ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಕಾಲದ ಸ್ಪರ್ಧೆಗೆ ತಕ್ಕಂತಹ ಶಿಕ್ಷಣವನ್ನು ನೀಡುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಈ ನೀತಿಯನ್ನು ಜಾರಿ ಮಾಡದೆ, ಶಿಕ್ಷಣ ವ್ಯವಸ್ಥೆ ಗತಕಾಲಕ್ಕೆ ಹೋಗುತ್ತಿದೆ.

ಡಿಜಿಟಲ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳು ಯುವಜನರಿಗೆ ಬದುಕುವ ದಾರಿಯನ್ನು ಕಲ್ಪಿಸಿದೆ. ದೇಶದಲ್ಲೀಗ 1.59 ಲಕ್ಷಕ್ಕೂ ಅಧಿಕ ನವೋದ್ಯಮಗಳಿದ್ದು, 16.67 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 73,151 ನವೋದ್ಯಮಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಇದ್ದಾರೆ. ಡಿಜಿಟಲ್ ಇಂಡಿಯಾದಿಂದ ಸರ್ಕಾರಿ ವ್ಯವಸ್ಥೆ ಡಿಜಿಟಲ್ ಆಗಿ ಪಾರದರ್ಶಕತೆ ಹೆಚ್ಚಿದೆ. ಉದಾಹರಣೆಗೆ, ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಿಂದಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಹಣದ ಸೋರಿಕೆ ಕಡಿಮೆಯಾಗಿ, ₹3.48 ಲಕ್ಷ ಕೋಟಿ ಉಳಿತಾಯವಾಗಿದೆ. ಕುಗ್ರಾಮಗಳಲ್ಲಿ ಇಂಟರ್ನೆಟ್‌ನಿಂದ ಆರಂಭವಾಗಿ, ಡಿಜಿಟಲ್ ಪಾವತಿವರೆಗೂ ಡಿಜಿಟಲ್ ವ್ಯವಸ್ಥೆ ಬೆಳೆದಿದೆ. ಇದು ದೇಶದ ಯುವಜನರಲ್ಲಿ ಹೊಸ ಆಶಾಕಿರಣವನ್ನು ಬಿತ್ತಿದೆ.

ತಳಮಟ್ಟದ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ ತೀರಾ ತಳಮಟ್ಟದ ಜನರ ಬಗ್ಗೆ ಚಿಂತನೆ ಮಾಡುತ್ತಾರೆ. ಗ್ರಾಮೀಣ ಮಹಿಳೆಯರು ಬಹಳ ದೂರ ನಡೆದು ನೀರನ್ನು ಹೊತ್ತು ತರುತ್ತಿದ್ದರು. ಅಂತಹ ಕುಟುಂಬಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಗೆ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹಳ್ಳಿಗಳಲ್ಲಿ 19.36 ಕೋಟಿ ಮನೆಗಳಿದ್ದು, 15.70 ಕೋಟಿ ಮನೆಗಳಿಗೆ ಕೊಳಾಯಿ ಸಂಪರ್ಕ ದೊರೆತಿದೆ. ಇದು, ಮಹಾತ್ಮ ಗಾಂಧೀಜಿಯವರು ಕಂಡ ಸ್ವಾವಲಂಬಿ ಗ್ರಾಮೀಣ ಬದುಕಿನ ಮಹತ್ವದ ಹೆಜ್ಜೆ. ಪಿಎಂ ಆವಾಸ್ ಯೋಜನೆಯಡಿ 1.20 ಕೋಟಿ ಮನೆಗಳು ಮಂಜೂರಾಗಿದ್ದು, ಆ ಪೈಕಿ 94.03 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಬಡವರ ಸೂರಿನ ಕನಸನ್ನು ಈ ಮೂಲಕ ನನಸು ಮಾಡಲಾಗಿದೆ. ಇದೇ ರೀತಿ ಆಯುಷ್ಮಾನ್ ಭಾರತ್, ಜನಧನ, ಪಿಎಂ ವಿಶ್ವಕರ್ಮ, ಮುದ್ರಾ ಸಾಲ ಯೋಜನೆ, ಮಾತೃ ವಂದನಾ, ಡಿಜಿಟಲ್ ಇಂಡಿಯಾ ಮೊದಲಾದ ಯೋಜನೆಗಳು ಜನಜೀವನವನ್ನು ಸುದೃಢವಾಗಿಸಿವೆ.

ವಿಕಸಿತ ಭಾರತದ ನಡೆ

ಇತ್ತೀಚೆಗೆ ಜಿಎಸ್ಟಿ ಸುಧಾರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತಕ್ಕೆ ಇನ್ನಷ್ಟು ವೇಗ ನೀಡಿದ್ದಾರೆ. ಇದು ಕರ್ನಾಟಕಕ್ಕೆ ಹೆಚ್ಚು ಲಾಭ ತಂದಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ಜನರ ಮೇಲೆ ತೆರಿಗೆಗಳ ಹೊರೆ ಹಾಕಿರುವ ಸಮಯದಲ್ಲೇ, ಕೇಂದ್ರ ಸರ್ಕಾರ ಜಿಎಸ್ಟಿ ಸುಧಾರಣೆ ಮಾಡಿ ಆ ಹೊರೆಯನ್ನು ಇಳಿಸಿದೆ. ಅಗತ್ಯ ವಸ್ತುಗಳು ಅತಿ ಕಡಿಮೆ ಬೆಲೆಗೆ ದೊರೆಯುತ್ತಿದೆ. ಆರೋಗ್ಯ ವಿಮೆ ಹಾಗೂ ಜೀವ ವಿಮೆ ಮೇಲಿದ್ದ ಜಿಎಸ್ಟಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಆದರೂ ರಾಜ್ಯ ಸರ್ಕಾರ ‘ತೆರಿಗೆ ತಾರತಮ್ಯ’ ಎಂಬ ಹಳೆ ಹಾಡನ್ನು ಮತ್ತೆ ಮತ್ತೆ ಹಾಡುತ್ತಿದೆ.

ಸುಧಾರಿತ ಜಿಎಸ್ಟಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದ ರಾಜ್ಯ ಸರ್ಕಾರ, ಇವಿಎಂ ಸರಿ ಇಲ್ಲ ಎಂಬ ಹಳಸಿದ ನಾಣ್ಯವನ್ನು ಚಲಾಯಿಸಿ ಮತ ಪೆಟ್ಟಿಗೆಗಳನ್ನು ತರುವ ಪ್ರಯತ್ನ ಮಾಡಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದರೆ, ಇತ್ತ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಯ ಪಟ್ಟಿಯಲ್ಲಿ ರಾಜ್ಯವನ್ನು ಹಿಂದಕ್ಕೆ ಬಿಡದೆ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಹೆಜ್ಜೆಯನ್ನು ಇರಿಸಿದ್ದಾರೆ. ವಿಕಸಿತ ಭಾರತದ ಗುರಿಯಲ್ಲಿ ಕರ್ನಾಟಕವನ್ನು ಹೊರಗಿಡುವ ಪ್ರಯತ್ನ ಎಂದೂ ಯಶಸ್ವಿಯಾಗದು.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?