
ಬಾಲ್ಯದಲ್ಲಿ ನನಗೆ ಹಲವು ವಸ್ತುಗಳನ್ನು ಕೊಡಿಸುವಂತೆ ಹಠ ಮಾಡುತ್ತಿದ್ದ ನೆನಪಿದೆ. ಆದರೆ ಬ್ಯಾಟ್ಗಾಗಿ ಅಷ್ಟೊಂದು ಹಠ ಮಾಡಿದ್ದೆ ಎಂಬುದು ನೆನಪಿಲ್ಲ. ಏಕೆಂದರೆ, ಸ್ವಂತ ಬ್ಯಾಟ್ ಹೊಂದುವ ಕನಸೇ ನನಗೆ ಅಂದು ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು. ಆಗ ನನಗೆ ಕೇವಲ ಐದು ವರ್ಷ. ನನ್ನ ಅಕ್ಕ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದಳು. ಆಕೆ ಮರಳುವಾಗ ಸೇಬು, ವಾಲ್ನಟ್ಗಳಂತಹ ವಸ್ತುಗಳನ್ನು ತರುತ್ತಾಳೆ ಎಂದು ನಿರೀಕ್ಷಿಸಿದ್ದೆ. ಆದರೆ ಆಕೆಯ ಮನೆಯಲ್ಲಿ ಒಂದು ಕ್ರಿಕೆಟ್ ಬ್ಯಾಟ್ ಕಂಡಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂಥದ್ದೊಂದು ಅದ್ಭುತ ವಸ್ತು ನನಗೂ ಸಿಗಬಹುದು ಎಂಬುದನ್ನು ಊಹಿಸಿರಲಿಲ್ಲ. ಅಂದಿನಿಂದ ಆ ಬ್ಯಾಟ್ ಮತ್ತು ನನ್ನ ನಡುವೆ ವಿಶೇಷ ನಂಟು ಆರಂಭವಾಯಿತು. ನಾನು ಎಲ್ಲಿಗೆ ಹೋದರೂ ಆ ಬ್ಯಾಟ್ ನನ್ನೊಂದಿಗಿರುತ್ತಿತ್ತು.
ಬ್ಯಾಟಿಂಗ್ ಕೌಶಲ್ಯ ಗೊತ್ತಾಗಿದ್ದು ಟೆನಿಸ್ ರಾಕೆಟ್ನಿಂದ!
ನನಗೆ ಕ್ರೀಡೆಗಳೆಂದರೆ ಬಹಳ ಆಸಕ್ತಿ. ಬ್ಯಾಡ್ಮಿಂಟನ್, ಹಾಕಿ, ಟೆನಿಸ್, ಟೇಬಲ್ ಟೆನಿಸ್ ಹೀಗೆ ಎಲ್ಲವನ್ನೂ ಆಡುತ್ತಿದ್ದೆ. ಬಾಂದ್ರಾದ ಸಾಹಿತ್ಯ ಸಹವಾಸ್ ವಸತಿ ಸಮುಚ್ಚಯದಲ್ಲಿ ನಾವು 4ನೇ ಮಹಡಿಯಲ್ಲಿದ್ದೆವು. ಅಣ್ಣಂದಿರೊಂದಿಗೆ ಟೆರೇಸ್ಗೆ ಹೋಗಿ ಒಂದು ಕೈಯಲ್ಲಿ ಟೆನಿಸ್ ರ್ಯಾಕೆಟ್, ಮತ್ತೊಂದು ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಟೆನಿಸ್ ಆಡುತ್ತಿದ್ದೆವು. ನಮ್ಮ ಬಳಿ ಟೆನಿಸ್ ಚೆಂಡುಗಳು ಸೀಮಿತ ಸಂಖ್ಯೆಯಲ್ಲಿದ್ದ ಕಾರಣ, ಅವು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಆಡಬೇಕಿತ್ತು. ಚೆಂಡು ಕೆಳಗೆ ಬಿದ್ದರೆ ಅದನ್ನು ತರಲು ಮತ್ತೆ ಕೆಳಗಿಳಿದು ಬರಬೇಕಿತ್ತು. ಹೀಗೆ ಆಡುತ್ತಿದ್ದಾಗ ಟೆನಿಸ್ ರ್ಯಾಕೆಟ್ಗಿಂತ ಕ್ರಿಕೆಟ್ ಬ್ಯಾಟ್ ಹಿಡಿದು ಆಡುವಾಗ ನನ್ನ ಸಾಮರ್ಥ್ಯ ಹೆಚ್ಚಿದೆ ಎಂಬುದು ಅರಿವಾಯಿತು. ನನ್ನ ಬ್ಯಾಟಿಂಗ್ ಕೌಶಲವನ್ನು ಬಹಳ ಬೇಗ ಗುರುತಿಸಲು ಇದರಿಂದ ಸಾಧ್ಯವಾಯಿತು.
ಶೋರೂಮ್ನಲ್ಲಿ ಆಯ್ಕೆ ಮಾಡಿಕೊಂಡ ಮೊದಲ ಬ್ಯಾಟ್
ನಾನು ಕೋಚ್ ರಮಾಕಾಂತ್ ಅಚ್ರೇಕರ್ ಅವರ ಬಳಿ ಹೋದೆ. ಅಲ್ಲಿಂದ ಅವರು ನನ್ನನ್ನು ನೇರವಾಗಿ ಬ್ಯಾಟ್ ಶೋರೂಮ್ಗೆ ಕರೆದೊಯ್ದರು. ಕ್ರಿಕೆಟ್ನಲ್ಲಿ ದೊಡ್ಡ ಕನಸು ಕಾಣಲು ಆರಂಭಿಸಿದ ಬಳಿಕವೇ ನನಗೆ ಮೊದಲ ಸೀಸನ್ ಬಾಲ್ ಬ್ಯಾಟ್ ಸಿಕ್ಕಿದ್ದು. ಅದಕ್ಕೂ ಮೊದಲು ಕ್ರಿಕೆಟ್ ಕೇವಲ ಮನರಂಜನೆಯಾಗಿತ್ತು. 6ನೇ ಕ್ಲಾಸ್ ಬಳಿಕ ನಾನು ಶಾರದಾಶ್ರಮ ವಿದ್ಯಾಮಂದಿರ ಶಾಲೆಗೆ ಸೇರಿದಾಗ ಕ್ರಿಕೆಟ್ ಬಗ್ಗೆ ಹೆಚ್ಚು ಗಂಭೀರನಾದೆ. ನನ್ನ ಆಸಕ್ತಿಯನ್ನು ಗಮನಿಸಿದ ಅಣ್ಣ ಅಜಿತ್ ಅಪ್ಪನ ಬಳಿ ಮಾತನಾಡಿ, ಸೀರಿಯಸ್ಸಾಗಿ ಕ್ರಿಕೆಟ್ ಆಡಬೇಕಾದರೆ ಸ್ವಂತ ಕಿಟ್ ಇರಬೇಕು ಎಂದು ತಿಳಿಸಿದರು. ಅಲ್ಲಿಯವರೆಗೆ ಬ್ಯಾಟ್, ಪ್ಯಾಡ್ ಸೇರಿದಂತೆ ಎಲ್ಲವನ್ನೂ ಕ್ಲಬ್ನಿಂದ ಪಡೆದು ಆಡುತ್ತಿದ್ದೆ.
ಶೋರೂಮ್ಗೆ ಹೋದಾಗ ಅಚ್ರೇಕರ್ ಸರ್ ಒಂದು ಬ್ಯಾಟ್ ತೋರಿಸಿದರು. ಅದನ್ನು ನೋಡಿದ ತಕ್ಷಣ, ‘ನನಗೆ ಇದೇ ಬ್ಯಾಟ್ ಬೇಕು’ ಎಂದು ಹೇಳಿಬಿಟ್ಟೆ. ಬೇರಾವುದನ್ನೂ ನೋಡುವ ಮನಸ್ಸಿರಲಿಲ್ಲ. ಆದರೆ ಅವರು, ‘ಇದು ನಿನಗೆ ತುಂಬಾ ದೊಡ್ಡದು, ಭಾರವೂ ಇದೆ’ ಎಂದರು. ನಿಜಕ್ಕೂ ಅದು ಪೂರ್ಣ ಗಾತ್ರದ ಬ್ಯಾಟ್ ಆಗಿತ್ತು. 11-12 ವರ್ಷದ ಹುಡುಗನಿಗೆ ಅದನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ.
ಆದರೆ, ಶಾಲಾ ಪಂದ್ಯಗಳಲ್ಲಿ ಆ ಬ್ಯಾಟ್ ಬಳಸಿ ರನ್ ಗಳಿಸಲು ಆರಂಭಿಸಿದ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ರಣಜಿ ಆಟಗಾರರು ಅಭ್ಯಾಸ ನಡೆಸುವಾಗಲೂ ಕೆಲವರು ಆ ಬ್ಯಾಟ್ ಮೇಲೆ ಕಣ್ಣಿಟ್ಟಿದ್ದರು. ಈ ವಿಚಾರ ತಿಳಿದ ಬಳಿಕ ನಾನು ಬಹಳ ಎಚ್ಚರಿಕೆಯಿಂದಿರುತ್ತಿದ್ದೆ. ಏಕೆಂದರೆ ಬ್ಯಾಟ್ಗಳು ಹೇಗೆ ಮಾಯವಾಗುತ್ತವೆ ಎಂಬುದೇ ತಿಳಿಯುವುದಿಲ್ಲ! ಯಾರ ಕೈಗೂ ಆ ಬ್ಯಾಟ್ ಸಿಗದಂತೆ ನೋಡಿಕೊಳ್ಳುತ್ತಿದ್ದೆ. ಬ್ಯಾಟ್ ಭಾರವಾಗಿದ್ದರೂ ನನ್ನ ಬ್ಯಾಟ್ ಸ್ವಿಂಗ್ ಮತ್ತು ಮನಸ್ಥಿತಿಗೆ ಅದು ಹೊಂದಿಕೊಂಡಿದ್ದರಿಂದ ರನ್ ಗಳಿಸಲು ಸಾಧ್ಯವಾಗುತ್ತಿತ್ತು.
1996ರ ವಿಶ್ವಕಪ್ನಲ್ಲಿ ಸ್ಟಿಕ್ಕರ್ ಇಲ್ಲದ ಬ್ಯಾಟ್!
ನಮ್ಮ ಕುಟುಂಬದವರೆಲ್ಲಾ ಸೇರಿ ಒಂದು ನಿರ್ಧಾರ ಮಾಡಿದ್ದೆವು. ನಾನು ಎಂದಿಗೂ ಮದ್ಯ ಅಥವಾ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಬಾರದು ಎಂಬುದು ಅಪ್ಪ ಸೇರಿದಂತೆ ಕುಟುಂಬದ ಎಲ್ಲರ ನಿಲುವಾಗಿತ್ತು. ಆ ಸಂದರ್ಭದಲ್ಲಿ ಮದ್ಯ ಮತ್ತು ತಂಬಾಕು ಕಂಪನಿಗಳು ಬ್ಯಾಟ್ಗಳ ಮೇಲೆ ತಮ್ಮ ಜಾಹೀರಾತಿನ ಸ್ಟಿಕ್ಕರ್ಗಳನ್ನು ಹಾಕುತ್ತಿದ್ದವು. ಹೀಗಾಗಿ ಇಂತಹ ಕಂಪನಿಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ಬ್ಯಾಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೆ ಸ್ಟಿಕ್ಕರ್ ಇಲ್ಲದ ಬ್ಯಾಟ್ನಲ್ಲೇ ಆಡಲು ನಿರ್ಧರಿಸಿದೆ. ಹೀಗೆ ಸುಮಾರು ಎರಡು ವರ್ಷಗಳ ಕಾಲ ಯಾವುದೇ ಸ್ಟಿಕ್ಕರ್ ಇಲ್ಲದ ಬ್ಯಾಟ್ನಲ್ಲೇ ಆಡಿದ್ದೆ.
1996ರ ವಿಶ್ವಕಪ್ನ ಮೊದಲ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದೆ. ಸ್ಟಿಕ್ಕರ್ ಇಲ್ಲದ ಬ್ಯಾಟ್ನಲ್ಲಿ ಆಡುತ್ತಿದ್ದುದು ನನಗೂ ಖುಷಿ ನೀಡಿತ್ತು. ಆ ದಿನಗಳಲ್ಲಿ ಡ್ರೆಸ್ಸಿಂಗ್ ರೂಮ್ಗೆ ಯಾರಾದರೂ ಸುಲಭವಾಗಿ ಪ್ರವೇಶಿಸಬಹುದಿತ್ತು. ಈಗಿನಂತೆ ಕಟ್ಟುನಿಟ್ಟಿನ ನಿಯಮಗಳಿರಲಿಲ್ಲ. ವಾಂಖೆಡೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ ನಾವು 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆವು. ಆಗ ವಿದೇಶಿ ಕ್ರೀಡಾ ಬ್ರ್ಯಾಂಡ್ನ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಡ್ರೆಸ್ಸಿಂಗ್ ರೂಮ್ಗೆ ಬಂದರು. ಈ ಹಿಂದೆ ನಮ್ಮ ನಡುವೆ ಮಾತುಕತೆ ನಡೆದಿತ್ತು. ಅವರು, ‘ನಿಮ್ಮ ಎಲ್ಲಾ ಷರತ್ತುಗಳಿಗೆ ಒಪ್ಪಿಗೆ ಇದೆ. ಈಗಲೇ ಈ ಸ್ಟಿಕ್ಕರ್ ಅನ್ನು ಬ್ಯಾಟ್ಗೆ ಹಾಕಿಕೊಂಡು ಮೈದಾನಕ್ಕೆ ಇಳಿಯಿರಿ’ ಎಂದರು.
ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ‘ಈಗ ನಾನು ಸ್ವಲ್ಪ ಮೂಢನಂಬಿಕೆಗೆ ಒಳಗಾಗಿದ್ದೇನೆ. ಸ್ಟಿಕ್ಕರ್ ಇಲ್ಲದ ಬ್ಯಾಟ್ನಲ್ಲಿ ಚೆನ್ನಾಗಿ ರನ್ ಗಳಿಸುತ್ತಿದ್ದೇನೆ. ವಿಶ್ವಕಪ್ ಮುಗಿಯುವವರೆಗೆ ಇದೇ ಬ್ಯಾಟ್ನಲ್ಲಿ ಆಡುತ್ತೇನೆ. ಆಮೇಲೆ ಒಪ್ಪಂದದ ಬಗ್ಗೆ ಮಾತನಾಡೋಣ’ ಎಂದು ಹೇಳಿದೆ. ಅದು ಮದ್ಯ ಅಥವಾ ತಂಬಾಕು ಕಂಪನಿಯಲ್ಲ, ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಬ್ರ್ಯಾಂಡ್ ಆಗಿತ್ತು. ಆದರೂ ವಿಶ್ವಕಪ್ ಸಂದರ್ಭದಲ್ಲಿ ಬ್ಯಾಟ್ ಬದಲಾಯಿಸುವುದು ಬೇಡವೆನಿಸಿತ್ತು. ಒಂದು ಬ್ಯಾಟ್ನಲ್ಲಿ ರನ್ ಬರುತ್ತಿರುವಾಗ ಅದನ್ನು ಬದಲಾಯಿಸಬಾರದು ಎಂಬ ಭಾವನೆ ಮನಸ್ಸಿನಲ್ಲಿ ಮೂಡಿತ್ತು. ವಿಶ್ವಕಪ್ನತ್ತ ಗಮನ ಕೇಂದ್ರೀಕರಿಸುವುದು ಮುಖ್ಯವಾಗಿತ್ತು. ಇದು ನನ್ನೊಬ್ಬನ ನಿರ್ಧಾರವಾಗಿರಲಿಲ್ಲ. ಅಪ್ಪ, ಅಣ್ಣ ಸೇರಿದಂತೆ ಇಡೀ ಕುಟುಂಬ ಒಮ್ಮತದಿಂದ ತೆಗೆದುಕೊಂಡ ನಿರ್ಧಾರವಾಗಿತ್ತು.
ಸುನಿಲ್ ಜೋಶಿಗಾಗಿ ಬಂದಿದ್ದ ಬ್ಯಾಟ್ ನನ್ನ ಕೈಸೇರಿತು!
2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ಆಡುತ್ತಿದ್ದೆವು ಎಂದು ನೆನಪು. ಆಗ ಬ್ಯಾಟ್ ತಯಾರಕ ಸುಮಿತ್ ಕೊಹ್ಲಿ ನನ್ನ ಕೊಠಡಿಗೆ ಬಂದು ಕೆಲವು ಬ್ಯಾಟ್ಗಳನ್ನು ತೋರಿಸಿದರು. ಒಂದು ಬ್ಯಾಟ್ ತೋರಿಸಿ, ‘ಇದು ತುಂಬಾ ಚೆನ್ನಾಗಿದೆ’ ಎಂದರು. ಆಗ ಕೊಠಡಿಯ ಮೂಲೆಯಲ್ಲಿದ್ದ ಮತ್ತೊಂದು ಬ್ಯಾಟ್ ನನ್ನ ಗಮನ ಸೆಳೆಯಿತು. ‘ಆ ಬ್ಯಾಟ್ ಯಾರದ್ದು?’ ಎಂದು ಕೇಳಿದೆ. ಅದಕ್ಕೆ ಅವರು, ‘ಅದು ನಿಮಗಾಗಿ ತಂದಿದ್ದಲ್ಲ, ಸುನಿಲ್ ಜೋಶಿಗಾಗಿ ತಂದಿರುವುದು’ ಎಂದರು.
ಬ್ಯಾಟ್ಸ್ಮನ್ಗಳು ಸಾಮಾನ್ಯವಾಗಿ ಅತ್ಯುತ್ತಮ ಬ್ಯಾಟ್ ಅನ್ನು ತಮ್ಮ ಕಿಟ್ ಬ್ಯಾಗ್ನಲ್ಲೇ ಇಟ್ಟುಕೊಳ್ಳಲು ಬಯಸುತ್ತಾರೆ. ನಾನು ತಕ್ಷಣ, ‘ಸುನಿಲ್ ಜೋಶಿ ಬಗ್ಗೆ ಬಿಡಿ, ಆ ಬ್ಯಾಟ್ ನನಗೆ ಕೊಡಿ. ಅವರಿಗೆ ಎರಡು ಹೆಚ್ಚುವರಿ ಬ್ಯಾಟ್ಗಳನ್ನು ಕೊಡುತ್ತೇನೆ’ ಎಂದು ನಗುತ್ತಾ ಹೇಳಿದೆ. ಬ್ಯಾಟ್ನ ಕೆಳಭಾಗವನ್ನು ಕತ್ತರಿಸಿ ಚಿಕ್ಕದು ಮಾಡುವಂತೆ ತಿಳಿಸಿದೆ. ಅದಕ್ಕೆ ಸುಮಿತ್, ‘ಹಾಗೆ ಮಾಡಿದರೆ ಬ್ಯಾಟ್ನ ಸೆಂಟರ್ ಪಾಯಿಂಟ್ ಬದಲಾಗುತ್ತದೆ’ ಎಂದರು. ಅದಕ್ಕೆ ನಾನು, ‘ಅದನ್ನು ನಾನು ನೋಡಿಕೊಳ್ಳುತ್ತೇನೆ. ನೀವು ಚಿಂತಿಸಬೇಡಿ. ಸಾಧ್ಯವಾದಷ್ಟು ಬೇಗ ಕತ್ತರಿಸಿ ಕಳುಹಿಸಿ’ ಎಂದೆ.
ಮುಂದಿನ ಪಂದ್ಯ ಹೈದರಾಬಾದ್ನಲ್ಲಿ ನಡೆಯಬೇಕಿತ್ತು. ಪಂದ್ಯಕ್ಕೆ ಎರಡು ದಿನಗಳ ಅಂತರವಿತ್ತು. ಅವರು ಬ್ಯಾಟ್ ಕತ್ತರಿಸಿ ಕೊರಿಯರ್ ಮಾಡುವುದಾಗಿ ಹೇಳಿದರು. ಹೈದರಾಬಾದ್ಗೆ ತಲುಪಿದ ತಕ್ಷಣ ಅವರಿಗೆ ಕರೆ ಮಾಡಿ, ‘ಬ್ಯಾಟ್ ಎಲ್ಲಿದೆ? ಕಳುಹಿಸಿದ್ದೀರಾ?’ ಎಂದು ವಿಚಾರಿಸಿದೆ. ಅವರು ಕಳುಹಿಸಿರುವುದಾಗಿ ತಿಳಿಸಿದರೂ ಬ್ಯಾಟ್ ಇನ್ನೂ ತಲುಪಿರಲಿಲ್ಲ. ಪಂದ್ಯಕ್ಕಾಗಿ ನಾವು ಕ್ರೀಡಾಂಗಣಕ್ಕೆ ತೆರಳಲು ಬಸ್ ಸಿದ್ಧವಾಗಿತ್ತು. ಅಷ್ಟರಲ್ಲಿ ಕೊರಿಯರ್ ಸಿಬ್ಬಂದಿಯೊಬ್ಬರು ಓಡುತ್ತಾ ಬಂದು ಬ್ಯಾಟ್ ತಲುಪಿರುವುದಾಗಿ ತಿಳಿಸಿದರು. ಇಡೀ ಹೋಟೆಲ್ಗೆ ಈ ಬ್ಯಾಟ್ ವಿಚಾರ ತಿಳಿದಿತ್ತು. ನನಗೂ ಆ ಬ್ಯಾಟ್ ಬೇಕೇ ಬೇಕಿತ್ತು. ತಕ್ಷಣ ಅದನ್ನು ತರಿಸಿಕೊಂಡೆ. ಆ ಬ್ಯಾಟ್ನಿಂದ ಒಂದೇ ಒಂದು ಚೆಂಡನ್ನೂ ಅಭ್ಯಾಸ ಮಾಡಿರಲಿಲ್ಲ. ಆದರೂ ನೇರವಾಗಿ ಪಂದ್ಯದಲ್ಲಿ ಅದನ್ನೇ ಬಳಸಿದೆ. ಹೊಸ ಬ್ಯಾಟ್ನಲ್ಲೇ 175 ರನ್ ಗಳಿಸಿದೆ. ಅದು ನನ್ನ ಅತ್ಯಂತ ಅಚ್ಚುಮೆಚ್ಚಿನ ಬ್ಯಾಟ್ಗಳಲ್ಲಿ ಒಂದಾಯಿತು.
ಬ್ಯಾಟ್ ಎಸೆದು ಆಕ್ರೋಶ ವ್ಯಕ್ತಪಡಿಸುವುದು ನನಗೆ ಇಷ್ಟವಿಲ್ಲ
ಚಿಕ್ಕವನಿದ್ದಾಗ ಅಪ್ಪ ನನಗೊಂದು ಮಾತು ಹೇಳಿದ್ದರು. ‘ನಿನ್ನ ವಸ್ತುಗಳನ್ನು ಜೋಪಾನವಾಗಿ ನೋಡಿಕೋ. ಅದರಲ್ಲಿ ನಿನ್ನ ಪ್ರತಿಭೆಯೂ ಸೇರಿದೆ. ಅದು ದೇವರು ಕೊಟ್ಟ ಕೊಡುಗೆ. ಅದನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು’ ಎಂದಿದ್ದರು. ಅದು ನನ್ನ ಬದುಕಿನ ಭಾಗವಾಗಿದೆ. ಹೀಗಾಗಿಯೇ ನನ್ನ ವಸ್ತುಗಳನ್ನು ಗೌರವಿಸುವುದು ನನಗೆ ಸಹಜ ಗುಣವಾಗಿದೆ. ಆಟಗಾರರು ಕೋಪದಲ್ಲಿ ತಮ್ಮ ಬ್ಯಾಟ್ಗಳನ್ನು ಎಸೆಯುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ನಿಮ್ಮನ್ನು ಈ ಹಂತಕ್ಕೆ ತಲುಪಿಸಿದ ವಸ್ತುವನ್ನೇ ಹೇಗೆ ಅಗೌರವಿಸುತ್ತೀರಿ? ಬ್ಯಾಟ್ ಎಸೆದರೆ ಏನು ಸಾಧಿಸಿದಂತಾಗುತ್ತದೆ? ಇಂದು ನಾನು ನಿಮ್ಮ ಮುಂದೆ ಕುಳಿತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ಕೈಯಲ್ಲಿದ್ದ ಬ್ಯಾಟ್ ಕೂಡ ಒಂದು ಕಾರಣ. ಬ್ಯಾಟ್ ಅನ್ನು ಗೌರವಿಸುವುದು ದೊಡ್ಡ ಸಾಧನೆಯೇನಲ್ಲ. ಪ್ರತಿಯೊಬ್ಬರೂ ತಮ್ಮ ಕ್ರೀಡಾ ಉಪಕರಣಗಳನ್ನು ಗೌರವಿಸಬೇಕು.
ಇಷ್ಟದ ಬ್ಯಾಟ್ ಕೈತಪ್ಪಿದ ನೋವು!
2011ರ ವಿಶ್ವಕಪ್ನಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವಾಡಿದ್ದೆವು. ಆ ಪಂದ್ಯದಲ್ಲಿ ನಾನು ದೊಡ್ಡ ಸ್ಕೋರ್ ಮಾಡಿದ್ದೆ. ನನ್ನ ಇನಿಂಗ್ಸ್ ಆರಂಭಿಸಿದಾಗ ಕೈಯಲ್ಲಿದ್ದ ಬ್ಯಾಟ್ ನನ್ನ ಅತ್ಯಂತ ಅಚ್ಚುಮೆಚ್ಚಿನ ಬ್ಯಾಟ್ಗಳಲ್ಲಿ ಒಂದಾಗಿತ್ತು. ಆ ಬ್ಯಾಟ್ ಹಿಡಿದಾಗ ನನ್ನನ್ನು ಯಾರಿಂದಲೂ ಔಟ್ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಮೂಡುತ್ತಿತ್ತು. ಪ್ರತಿಯೊಬ್ಬ ಬ್ಯಾಟ್ಸ್ಮನ್ಗೂ ಇಂತಹ ಅನುಭವ ನೀಡುವ ಒಂದು ಬ್ಯಾಟ್ ಇದ್ದೇ ಇರುತ್ತದೆ.
ಇಂಗ್ಲೆಂಡ್ನ ಬೌಲರ್ ಒಬ್ಬರು ಪೆವಿಲಿಯನ್ ಕಡೆಯಿಂದ ಶಾರ್ಟ್ ಆಫ್ ಲೆಂಥ್ ಎಸೆತ ಹಾಕಿದರು. ನಾನು ಅದನ್ನು ಕಟ್ ಮಾಡಲು ಮುಂದಾದೆ. ಚೆಂಡನ್ನು ಬ್ಯಾಟ್ನ ಮಧ್ಯಭಾಗಕ್ಕೆ ತಗುಲಿಸಿ ಬಲವಾಗಿ ಹೊಡೆದಿದ್ದೆ. ಆದರೆ ಆ ಹೊಡೆತದ ಬಳಿಕ ಬ್ಯಾಟ್ನ ಬಲವೇ ಕುಂದಿತು. ನನಗೆ ಅದು ತುಂಬಾ ನೋವಿನ ಕ್ಷಣವಾಗಿತ್ತು. ನನ್ನಲ್ಲಿ ಅಜೇಯ ಭಾವನೆ ಮೂಡಿಸುತ್ತಿದ್ದ ಅಚ್ಚುಮೆಚ್ಚಿನ ಬ್ಯಾಟ್ ಅನ್ನು ಬದಲಿಸಬೇಕಾಗಿ ಬಂದಿತ್ತು.
ಯುವ ಆಟಗಾರರು ಬ್ಯಾಟ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಯುವ ಆಟಗಾರರು ಬ್ಯಾಟ್ ಆಯ್ಕೆ ಮಾಡುವಾಗ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದದ್ದು ಅದರ ಹಿಡಿತ ಮತ್ತು ಅನುಭವ. ಬ್ಯಾಟ್ ಕೈಗೆ ಹಿಡಿದಾಗ ಅದು ನಿಮ್ಮ ಆಟಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಅರಿಯಬೇಕು. ನಾನು ಶೋರೂಮ್ಗೆ ಹೋದಾಗ ನನಗೆ ಇಷ್ಟವಾದ ಬ್ಯಾಟ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ಈಗಿನ ದಿನಗಳಲ್ಲಿ ಮಕ್ಕಳಿಗೆ ಅತ್ಯುತ್ತಮ ಬ್ಯಾಟ್ ಕೊಡಿಸಬೇಕು ಎಂಬ ಆತುರದಲ್ಲಿ ಪೋಷಕರೇ ತಪ್ಪು ಬ್ಯಾಟ್ ಆಯ್ಕೆ ಮಾಡುತ್ತಾರೆ. ಉದಾಹರಣೆಗೆ, ಹತ್ತು ವರ್ಷದ ಬಾಲಕ ಬ್ಯಾಟ್ ಖರೀದಿಸುವಾಗ ಅದನ್ನು ಹಿಡಿದು ಕಟ್ ಮತ್ತು ಪುಲ್ ಶಾಟ್ಗಳನ್ನು ಆಡಿ ನೋಡಬೇಕು. ವೇಗದ ಬೌಲರ್ ಎಸೆತಗಳನ್ನು ಎದುರಿಸುವಾಗ ಬ್ಯಾಟ್ನ ಸ್ವಿಂಗ್ ಸರಿಯಾಗಿದೆಯೇ, ಚೆಂಡಿನೊಂದಿಗೆ ಸರಿಯಾದ ಟೈಮಿಂಗ್ ಸಾಧಿಸಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು.
ವಿಶೇಷವಾಗಿ ಕಟ್ ಮತ್ತು ಪುಲ್ ಶಾಟ್ಗಳನ್ನು ಆಡುವಾಗ ಬ್ಯಾಟ್ ಹೇಗೆ ವರ್ತಿಸುತ್ತದೆ ಎಂಬುದು ಮುಖ್ಯ. ಸ್ವೀಪ್ ಶಾಟ್ ಸಾಮಾನ್ಯವಾಗಿ ಸ್ಪಿನ್ನರ್ಗಳ ವಿರುದ್ಧ ಆಡುವುದರಿಂದ ಅದನ್ನು ಹೊಂದಿಸಿಕೊಳ್ಳಬಹುದು. ಆದರೆ ವೇಗದ ಬೌಲರ್ಗಳ ವಿರುದ್ಧ ಸ್ಕ್ವೇರ್ ಆಫ್ ದಿ ವಿಕೆಟ್ ಕಟ್ ಶಾಟ್ ಆಡುವಾಗ ಸರಿಯಾದ ಟೈಮಿಂಗ್ ಸಿಗುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಬ್ಯಾಟ್ ನಿಮ್ಮ ಆಟದ ಶೈಲಿಗೆ ಹೊಂದಿಕೆಯಾಗದಿದ್ದರೆ ಎಷ್ಟೇ ಪ್ರಯತ್ನಿಸಿದರೂ ಸರಿಯಾದ ಟೈಮಿಂಗ್ ಸಾಧಿಸಲು ಸಾಧ್ಯವಾಗುವುದಿಲ್ಲ. ನನಗೆ ಬ್ಯಾಟ್ ಎನ್ನುವುದು ಕೇವಲ ಆಟದ ಉಪಕರಣವಲ್ಲ. ಅದು ನನ್ನ ದೇಹದ ವಿಸ್ತರಣೆಯಿದ್ದಂತೆ. ನನ್ನ ಕ್ರಿಕೆಟ್ ಬದುಕಿನ ಪ್ರತಿಯೊಂದು ಹಂತದಲ್ಲೂ ಅದು ನನ್ನೊಂದಿಗೆ ಬೆಳೆದಿದೆ. ಅದನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಕಾಪಾಡಿಕೊಳ್ಳುವುದು ನನ್ನ ಪಾಲಿಗೆ ಸಹಜವಾದ ಸಂಗತಿ.