
ಬೆಂಗಳೂರು ‘ಟೆಕ್ ಹಬ್’ ಅಷ್ಟೇ ಅಲ್ಲ, ‘ಸಾಂಸ್ಕೃತಿಕ ಹಬ್’ ಕೂಡ ಹೌದು । ಈ ಹಬ್ಬ ಇದನ್ನು ಸಾರಿ ಹೇಳುತ್ತೆ: ರವಿಚಂದರ್
ವಿ.ರವಿಚಂದರ್, ಮುಖ್ಯ ಸಂಚಾಲಕ, ಅನ್‌ಬಾಕ್ಸಿಂಗ್ ಫೌಂಡೇಶನ್
- ಸಂಪತ್ ತರೀಕೆರೆ
ದೇಶ-ವಿದೇಶಗಳ ಎಲ್ಲ ಭಾಷೆ, ಸಂಸ್ಕೃತಿ ಜನರಿಗೆ ಆಶ್ರಯ ನೀಡಿರುವ ಕನ್ನಡನಾಡಿನ ಹೆಮ್ಮೆಯ ನಗರಿ ಬೆಂಗಳೂರಿನ ಕಲೆ, ಸಂಸ್ಕೃತಿ ಶ್ರೀಮಂತಿಕೆ ಪರಿಚಯಿಸುವ ಬೆಂಗಳೂರು ಹಬ್ಬದ ಮೂರನೇ ಆವೃತ್ತಿ ಜ.16ರಿಂದ 25ರವರೆಗೆ ನಗರದ 15 ಕಡೆ ನಡೆಯಲಿದೆ. ನಾಟಕ, ನೃತ್ಯ, ಸಂಗೀತದೊಂದಿಗೆ ಆಟ-ಪಾಠ-ಊಟವೂ ಇರಲಿದ್ದು. ಬಗೆಬಗೆಯ ಸಾಂಪ್ರದಾಯಿಕ ಖಾದ್ಯಗಳು, ಕಲೆಗಳು ಪ್ರದರ್ಶನಗೊಳ್ಳಲಿವೆ. ವರ್ಷದಿಂದ ವರ್ಷಕ್ಕೆ ಜನಮನ ಸೆಳೆಯುತ್ತಿರುವ ಈ ಹಬ್ಬದ ಆಯೋಜನೆ ಉದ್ದೇಶ, ಕಲೆ, ಸಂಸ್ಕೃತಿ, ಬೆಂಗಳೂರಿನ ಅಭಿವೃದ್ಧಿ, ಮೂಲಸೌಕರ್ಯ ಸೇರಿ ಜಿಬಿಎಯ ಪ್ರಾಮುಖ್ಯತೆ ಇತ್ಯಾದಿ ವಿಚಾರಗಳ ಕುರಿತು ನಗರ ಯೋಜನಾ ತಜ್ಞರೂ ಆಗಿರುವ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್‌ನ ಮುಖ್ಯ ಸಂಚಾಲಕ ವಿ.ರವಿಚಂದರ್ ಅವರು ಇದೀಗ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
*
ಬೆಂಗಳೂರು ಕೇವಲ ‘ಟೆಕ್ ಹಬ್’ ಅಲ್ಲ, ಇದೊಂದು ‘ಸಾಂಸ್ಕೃತಿಕ ಹಬ್’ ಎಂಬುದನ್ನು ಜಗತ್ತಿಗೆ ಸಾರಿ ಹೇಳುವುದೇ ಬೆಂಗಳೂರು ಹಬ್ಬದ ಉದ್ದೇಶ. ಬೆಂಗಳೂರನ್ನು ಸಿಲಿಕಾನ್ ಸಿಟಿ, ಸ್ಟಾರ್ಟ್‌ಅಪ್ ಹಬ್, ಟೆಕ್ ಹಬ್ ಎಂಬಿತ್ಯಾದಿಯಾಗಿ ಗುರುತಿಸಲಾಗುತ್ತಿದೆ. ಅಂತೆಯೇ ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆ ವಿಶ್ವಕ್ಕೆ ಪರಿಚಯಿಸಲು ಬೆಂಗಳೂರು ಹಬ್ಬ ಆಯೋಜಿಸುತ್ತಿದ್ದೇವೆ. ಅದಕ್ಕಾಗಿಯೇ ಹಬ್ಬ(habba) ಎನ್ನುವ ಪದವನ್ನು ಹಬ್ಬ (hubba) ಎಂದು ಬಳಸಿದ್ದೇವೆ.
ಬೆಂಗಳೂರಿನ ಸಂಸ್ಕೃತಿ ಮತ್ತು ವಿಕಸನವನ್ನು ನಗರದಲ್ಲಿ ನೆಲೆಸಿರುವ ಪರ ಭಾಷಿಕರಿಗೆ ಮತ್ತು ನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಹಬ್ಬ ಆಯೋಜಿಸುತ್ತಿದ್ದೇವೆ. ಬೆಂಗಳೂರಿನ ಸಂಸ್ಕೃತಿಯನ್ನು ಶೇ.100ರಷ್ಟು ಜನ ನೋಡಿರಲು ಸಾಧ್ಯವಿಲ್ಲ. ಕೇವಲ ಶೇ.20ರಷ್ಟು ಮಂದಿ ಮಾತ್ರ ವೀಕ್ಷಿಸಿರಬಹುದು. ಸ್ಥಳೀಯರೊಂದಿಗೆ ಹೊರ ರಾಜ್ಯ, ಹೊರ ದೇಶದವರಿಗೂ ಇಲ್ಲಿನ ಅನನ್ಯ ಸಂಸ್ಕೃತಿ ಮತ್ತು ನಾವೀನ್ಯತೆ ನೋಡಲು ಅವಕಾಶ ಕಲ್ಪಿಸಲಾಗಿದೆ.
* ಬೆಂಗಳೂರು ಹಬ್ಬದ ಮೂರನೇ ಆವೃತ್ತಿಯ ವಿಶೇಷತೆ ಏನು?
ಕಳೆದ ಬಾರಿ ಈ ಹಬ್ಬದಲ್ಲಿ 7 ವಿವಿಧ ಪ್ರಕಾರಗಳನ್ನು ಮಾತ್ರ ಅಳವಡಿಸಿಕೊಂಡಿದ್ದೆವು. ಈ ಬಾರಿ ನೃತ್ಯ, ಸಂಗೀತ, ಸಿನಿಮಾ, ನಾಟಕ, ಸಂವಾದ, ವಿಜುವಲ್ ಆರ್ಟ್ ಸೇರಿ 12 ಪ್ರಕಾರಗಳನ್ನು (ಸಬ್ ಫೆಸ್ಟಿವಲ್) ಆಯೋಜಿಸುತ್ತಿದ್ದೇವೆ. ಜ.16ರಿಂದ 25ರವರೆಗೂ ನಡೆಯುವ ಈ ಹಬ್ಬದಲ್ಲಿ ವಿವಿಧ ಕಲೆ, ಸಂಸ್ಕೃತಿಯ ಸಂಗಮ ವೀಕ್ಷಿಸಬಹುದು. ಸುಮಾರು 35ರಿಮದ 40 ವಿಶೇಷ ಕಾರ್ಯಕ್ರಮಗಳು ಇರಲಿವೆ.
*ಜನರ ಆಕರ್ಷಣೆಗೆ ಏನೇನು ಇದೆ?
ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಮಕ್ಕಳ ಹಬ್ಬ ಮಾಡುತ್ತಿದೆ. ಸುಮಾರು 14 ಸರ್ಕಾರಿ ಶಾಲೆ ಮಕ್ಕಳನ್ನು ಕರೆ ತರಲು ಯೋಜಿಸಲಾಗಿದೆ. ಅವರಿಗೆ ವಿವಿಧ ಚಟುವಟಿಕೆಗಳನ್ನು ನೀಡಲಾಗುತ್ತದೆ. ಮುಖ್ಯವಾಗಿ ಜ.17 ಮತ್ತು 18ರಂದು ಆಟ-ಊಟ-ಇತಿಹಾಸ ಎನ್ನುವ ವಿಭಿನ್ನ ಕಾರ್ಯಕ್ರಮ ನಡೆಯಲಿದೆ. ಆಟದಲ್ಲಿ ಸಾಂಪ್ರದಾಯಿಕ ಆಟಗಳು ಇರಲಿದ್ದು. ಮಕ್ಕಳೊಂದಿಗೆ ಹಿರಿಯರು ಕೂಡ ಪಗಡೆ, ಚೌಕಾಬಾರ, ಹುಲಿಕುರಿ, ಸಾಲು ಆಟ, ಕುಂಟೆಬಿಲ್ಲೆ, ಐದು ಕಲ್ಲು ಆಟ ಆಡಬಹುದು. ಊಟದಲ್ಲಿ ನಮ್ಮ ಫಿಲ್ಟರ್ ಕಾಫಿ, ಶಿವಶಕ್ತಿ ಚಾಟ್ಸ್, ಮುಳಬಾಗಿಲಿನ ಲಕ್ಷ್ಮಿ ಟಿಫನ್, ಮಿಸ್ಟರ್ ಗಿರ್‌ಮಿಟ್, ಕಾಮತ್ ಜೋಳದ ರೊಟ್ಟಿ ಇತ್ಯಾದಿ ಖಾದ್ಯಗಳನ್ನು ಕೂಡ ಸವಿಯಬಹುದು. ನಮ್ಮ ಸಂಸ್ಕೃತಿ, ಇತಿಹಾಸಕ್ಕೆ ಸಂಬಂಧಿಸಿ ಉಪನ್ಯಾಸ, ಸಂವಾದಗಳು ಇರಲಿವೆ.
* ಈ ಹಬ್ಬ ಆಚರಿಸಬೇಕೆಂಬ ಐಡಿಯಾ ಬಂದಿದ್ದಾದರೂ ಹೇಗೆ?
2023ರಲ್ಲಿ ಅನ್‌ಬಾಕ್ಸಿಂಗ್ ಬೆಂಗಳೂರು ಎನ್ನುವ ಪುಸ್ತಕವನ್ನು ಮಾಲಿನಿ ಘೋಯಲ್, ಪ್ರಶಾಂತ್ ಪ್ರಕಾಶ್ ಹೊರತಂದಿದ್ದರು. ಅದರಲ್ಲಿ ಪ್ರಮುಖ ನಗರಕ್ಕೊಂದು ಹಬ್ಬ ಇರಬೇಕು ಎಂದು ಉಲ್ಲೇಖಿಸಿದ್ದರು. ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್ ನಗರದಲ್ಲಿ ವಿಶ್ವದ ಅತ್ಯಂತ ದೊಡ್ಡ ಕಲೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಹಬ್ಬ ನಡೆಯುತ್ತದೆ. ಬ್ರ್ಯಾಂಡ್ ಬೆಂಗಳೂರು ನಮ್ಮ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಹುದೊಡ್ಡ ಕನಸು. ಗ್ರೇಟ್ ಸಿಟಿ ಬೆಂಗಳೂರಿಗೊಂದು ಹಬ್ಬ ಬೇಕೆಂದು ಅನ್‌ಬಾಕ್ಸ್ ಬೆಂಗಳೂರು ಹಬ್ಬ ಆಚರಿಸುವ ಯೋಜನೆ ರೂಪಿಸಿತ್ತು. ಕಳೆದ ಎರಡು ವರ್ಷದಿಂದ ನಾನು ಇದನ್ನು ಮುನ್ನಡೆಸುತ್ತಿದ್ದೇನೆ.
* ಇದೊಂದು ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವೇ ?
ಖಂಡಿತಾ ಅಲ್ಲ. ಆದರೆ, ಸರ್ಕಾರದ ಸಹಕಾರವಿಲ್ಲದೆ ಕಾರ್ಯಕ್ರಮ ಆಯೋಜಿಸಿ ಯಶಸ್ಸು ಪಡೆಯಲು ಸಾಧ್ಯವಿಲ್ಲ. ವಿಧಾನಸೌಧದ ಮುಂಭಾಗದ ಜ.16ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಸ್ವಾತಂತ್ರ್ಯ ಉದ್ಯಾನದಲ್ಲೂ ವಿವಿಧ ಕಾರ್ಯಕ್ರಮ ನಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಇದೊಂದು ಖಾಸಗಿ ಪ್ರಾಯೋಜಕತ್ವದ ಹಬ್ಬ.
*ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೆಲ್ಲಿ ನಡೆಯಲಿವೆ?
ಈ ಬಾರಿ ರವೀಂದ್ರ ಕಲಾಕ್ಷೇತ್ರ, ಬಿಐಸಿ, ಫ್ರೀಡಂ ಪಾರ್ಕ್, ಪಂಚವಟಿ, ಎನ್‌ಜಿಎಂಎ, ಇಂಡಿಯನ್ ಹೆರಿಟೇಜ್ ಅಕಾಡೆಮಿ, ರಂಗೋಲಿ ಮೆಟ್ರೋ ಆರ್ಟ್ ಕೇಂದ್ರ, ಐಐಡಬ್ಲ್ಯೂಸಿ, ಎಡಿಎ ರಂಗಮಂದಿರ ಸೇರಿ 15 ಕಡೆ ಕಾರ್ಯಕ್ರಮಗಳು ನಡೆಯಲಿವೆ. 6 ಕಡೆ ರಸ್ತೆ ಹಬ್ಬ ಮತ್ತು 27 ಕಡೆಗಳಲ್ಲಿ ಹೆರಿಟೇಜ್ ವಾಕ್ಸ್ ಇರಲಿದೆ.
* ಬೆಂಗಳೂರು ಹಬ್ಬದಲ್ಲಿ ಕನ್ನಡಕ್ಕೆ ನೀಡಿರುವ ಪ್ರಾಮುಖ್ಯತೆ ಎಷ್ಟು?
ಕನ್ನಡಿಗರು, ನಾನ್ ಕನ್ನಡಿಗರು ಎಲ್ಲರೂ ಒಗ್ಗೂಡಬೇಕೆನ್ನುವ ಮಹದಾಸೆ ನಮ್ಮದು. ಇಲ್ಲಿ ಅಸ್ಸಾಮಿ, ಬೆಂಗಾಲಿ, ರಾಜಸ್ಥಾನಿ ಸೇರಿ ಅಂತರಾಜ್ಯ ಕಲಾವಿದರು ಭಾಗವಹಿಸಲಿದ್ದಾರೆ. ಕನ್ನಡಕ್ಕೂ ಆದ್ಯತೆ ಕೊಟ್ಟಿದ್ದೇವೆ. ಸುಮಾರು 800ಕ್ಕೂ ಹೆಚ್ಚು ಕಲಾವಿದರು ಈ ಹಬ್ಬಕ್ಕೆ ಬರಲಿದ್ದಾರೆ. 42 ಮಂದಿ ಹೊರದೇಶದ ಕಲಾವಿದರೂ ಆಗಮಿಸಲಿದ್ದಾರೆ. ಸ್ಥಳೀಯ ಕಲಾವಿದರು ಕೂಡ ಇರಲಿದ್ದು, ನೀನಾಸಂನಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.
* ಒಟ್ಟಾರೆ ಕಾರ್ಯಕ್ರಮ ಆಯೋಜನೆಗೆ ಮಾಡುತ್ತಿರುವ ವೆಚ್ಚ ಎಷ್ಟು? ಫಂಡಿಂಗ್ ಮಾಡುತ್ತಿರುವರು ಯಾರು?
ಈ ಮೊದಲೇ ಹೇಳುತ್ತಿರುವಂತೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜೆಎಸ್‌ಡಬ್ಲ್ಯು, ಮಣಿಪಾಲ್ ಫೌಂಡೇಷನ್, ಪ್ರೆಸ್ಟೀಜ್‌ಎಸ್ಟೇಟ್, ಬಯೋಕಾನ್ ಗ್ರೂಪ್ಸ್ ಫೆಸ್ಟಿವಲ್ ಸ್ಪಾನ್ಸರ್ಸ್ ಆಗಿದ್ದಾರೆ. ಇನ್ನು ಈವೆಂಟ್‌ಗಳನ್ನು ಬಜ್ಪನ್ ಮನೋ, ಆರ್ಟ್ ಇಂಡಿಯಾ, ಸಿಂಗಲ್ ಐಯ್ಯರ್ ಫ್ಯಾಮಿಲಿ ಫೌಂಡೇಷನ್ ಸೇರಿ ವಿವಿಧ ಖಾಸಗಿ ಕಂಪನಿಗಳು ನೀಡುತ್ತಿವೆ. ಕಾರ್ಯಕ್ರಮಕ್ಕೆ ಒಟ್ಟು 12 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.
* ಬಿಬಿಎಂಪಿಯ ಯುಗಾಂತ್ಯವಾಗಿದೆ. ಐದು ನಗರ ಪಾಲಿಕೆಗಳಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯವೇ?
ಖಂಡಿತ ಸಾಧ್ಯ. ಬಿಬಿಎಂಪಿಗೂ ಕೆಂಗೇರಿ-ಮಹದೇವಪುರಕ್ಕೂ ಸಾಕಷ್ಟು ದೂರ ಇದೆ. ಅಲ್ಲಿರುವ ಸಮಸ್ಯೆಗಳು ಬಿಬಿಎಂಪಿಗೆ ತಲುಪುವುದಾದರೂ ಹೇಗೆ? ಬಿಬಿಎಂಪಿ ಒಡೆದು ವಿಕೇಂದ್ರೀಕರಣ ಮಾಡಿ ಐದು ನಗರ ಪಾಲಿಕೆಗಳನ್ನು ಮಾಡಿರುವುದು ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಪ್ರತ್ಯೇಕ ಆಯುಕ್ತರು, ಮೇಯರ್, ಉಪ ಮೇಯರ್ ಇರುತ್ತಾರೆ. ಜನರ ನಡುವೆ ಜನಪ್ರತಿನಿಧಿಗಳು ಇರುತ್ತಾರೆ. ಅವರ ನಡುವೆ ನಿಕಟ ಸಂಬಂಧ ಏರ್ಪಡುತ್ತದೆ. ಆಗ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಇತ್ಯರ್ಥಗೊಳಿಸಲು ಸಾಧ್ಯ.
* ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆಯಿಂದ ಬೆಂಗಳೂರಿಗೆ ಏನು ಪ್ರಯೋಜನ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವದಿಂದ ಬೆಂಗಳೂರು ಮಹಾನಗರದ ಯೋಜನೆ, ಅಭಿವೃದ್ಧಿ ಮತ್ತು ಆಡಳಿತ ಸುಗಮ ಆಗಲಿದೆ. ಇದು ಏಕೀಕೃತ ನಗರ ಯೋಜನೆ, ಮೂಲಸೌಕರ್ಯಗಳ ಸಮನ್ವಯ, ಅನುಮೋದನೆ ಪ್ರಕ್ರಿಯೆಗಳ ಸರಳೀಕರಣ ಮತ್ತು ವಿಕೇಂದ್ರೀಕೃತ ಆಡಳಿತವನ್ನು ತರಲು ಸಾಧ್ಯವಾಗಲಿದೆ. ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಐದು ನಗರ ಪಾಲಿಕೆಗಳು, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬೆಸ್ಕಾಂ, ಬಿಎಂಟಿಸಿ ಸೇರಿ ಪ್ರಮುಖ ಏಜೆನ್ಸಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳು ಬರಲಿವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮತ್ತು ಸಮನ್ವಯತೆಗೆ ಇದು ಸಹಕಾರಿ.
* ಜಿಬಿಎ ಮೊದಲು ಮಾಡಬೇಕಾದ ಕಾರ್ಯವೇನು?
ಜಿಬಿಎಗೆ ಡೈನಾಮಿಕ್ ಮಾಸ್ಟರ್ ಪ್ಲಾನ್ ಅಗತ್ಯವಿದೆ. ಸದ್ಯ ನಮ್ಮಲ್ಲಿರುವುದು 2015ರ ಹಳೆಯ ಮಾಸ್ಟರ್ ಪ್ಲಾನ್. ಐದು ಕಾರ್ಪೊರೇಷನಗಳು ಒಟ್ಟು ಸೆರಿಸಿ ಏಕೀಕೃತ ಮಾಸ್ಟರ್ ಪ್ಲಾನ್ ಮಾಡಬೇಕು. ನಗರದ ವಿವಿಧ ಸಂಸ್ಥೆಗಳ ಯೋಜನೆಗಳನ್ನು ಸಂಯೋಜಿಸಿ, ನಗರದ ಒಟ್ಟಾರೆ ಯೋಜನೆಗೆ ಒಂದು ಮಾಸ್ಟರ್ ಪ್ಲಾನ್ ರೂಪಿಸಿ ಕಾರ್ಯಾರಂಭ ಮಾಡಬೇಕು. ಭೌಗೋಳಿಕ ಮಾಹಿತಿ ವ್ಯವಸ್ಥೆ ಬಳಸಿಕೊಂಡು ನಿಖರವಾದ ಮತ್ತು ನವೀಕರಿಸಬಹುದಾದ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಅಗತ್ಯ ಇದೆ. ಮೆಟ್ರೋ, ಸಬ್‌ಅರ್ಬನ್ ರೈಲ್ವೆ, ಮುಖ್ಯರಸ್ತೆಗಳು, ಮೇಲ್ಸೇತುವೆ, ಸಂಚಾರ ದಟ್ಟಣೆ, ಘನತ್ಯಾಜ್ಯ ವಿಲೇವಾರಿ ಎಲ್ಲವನ್ನೂ ನಿರ್ವಹಿಸುವಂತೆ ಮಾಸ್ಟರ್ ಪ್ಲಾನ್ ಮಾಡಬೇಕು. ಮುಖ್ಯವಾಗಿ ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ನಿವಾರಿಸಲು ಯೋಜಿಸಬೇಕು.
* ಜೂ.30ಕ್ಕೂ ಮೊದಲು ಪಾಲಿಕೆಗಳ ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಸರಿಯಿದೆಯೇ?
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲೇಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸರಿಯಾಗಿದೆ. ಜನಪ್ರತಿನಿಧಿಗಳನ್ನು ಜನರೇ ಚುನಾಯಿಸಿ ಕಳುಹಿಸಿರುತ್ತಾರೆ. ವಾರ್ಡ್ ಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ, ನೇರವಾಗಿ ಜನಪ್ರತಿನಿಧಿಗಳನ್ನು ಕೇಳಿ ಬಗೆಹರಿಸಿಕೊಳ್ಳಬಹುದು. ಚುನಾಯಿತರಾದವರು ಕೂಡ ಸ್ಥಳೀಯ ಸಮಸ್ಯೆಗಳಿಗೆ ಬೇಗ ಸ್ಪಂದಿಸುತ್ತಾರೆ. ಮೇಯರ್, ಉಪಮೇಯರ್ ಸೇರಿ ಇತರ ಸದಸ್ಯರು ಇಲ್ಲದಿದ್ದರೆ ಅಧಿಕಾರಿಗಳು ಯಾರ ಮಾತು ಕೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ.