ಸಿದ್ದರಾಮಯ್ಯನವರೇ, ನೀವು ಸುಪ್ರೀಂಗೆ ಹೋಗಬೇಕಿತ್ತು.. ಬಸವರಾಜ ಪಾಟೀಲ್‌ ಲೇಖನ

Published : Sep 19, 2025, 11:33 AM IST
 CM Siddaramaiah

ಸಾರಾಂಶ

1991ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ತಾವು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನನ್ನ ಎದುರು ಸೋತಿದ್ದರಲ್ಲಿ ಮೋಸ ಆಗಿದೆಯೆಂದು ಹೇಳಿದ ವಿಷಯ ಪತ್ರಿಕೆಗಳಲ್ಲಿ ಬಂದಿದೆ. ಒಬ್ಬ ಮುಖ್ಯಮಂತ್ರಿಯಾಗಿ ತಾವು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದರೆ ನಿಮ್ಮ ಅಭಿಮಾನದ ಬಳಗ ಮೆಚ್ಚಬಹುದು.

ಬಸವರಾಜ ಪಾಟೀಲ್‌ ಅನ್ವರಿ, ಕೇಂದ್ರದ ಮಾಜಿ ಸಚಿವ

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, 29-08-2025ರಂದು ಸಮಾರಂಭವೊಂದರಲ್ಲಿ ತಾವು ಬಹಳ ಹೆಮ್ಮೆಯಿಂದ, 1991ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ತಾವು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನನ್ನ ಎದುರು ಸೋತಿದ್ದರಲ್ಲಿ ಮೋಸ ಆಗಿದೆಯೆಂದು ಹೇಳಿದ ವಿಷಯ ಪತ್ರಿಕೆಗಳಲ್ಲಿ ಬಂದಿದೆ. ಒಬ್ಬ ಮುಖ್ಯಮಂತ್ರಿಯಾಗಿ ತಾವು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದರೆ ನಿಮ್ಮ ಅಭಿಮಾನದ ಬಳಗ ಮೆಚ್ಚಬಹುದು. ಆದರೆ ಅದು ಒಬ್ಬ ರಾಜಕೀಯ ಮುತ್ಸದ್ದಿಯ ಹೇಳಿಕೆ ಅಲ್ಲ, ಸತ್ಯವನ್ನು ಎಂದಿಗೂ ಮರೆ ಮಾಚಲು ಆಗುವುದಿಲ್ಲ.

ಅಂದಿನ ಚುನಾವಣೆ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಅಂದು ತಾವು ಮತ್ತು ತಮ್ಮ ಜೊತೆಗೆ ಬಂದ ಮೈಸೂರಿನ ಕಾರ್ಯಕರ್ತರು ಮರು ಎಣಿಕೆ ಬೇಕೇ ಬೇಕು ಎಂದು ಕೂಗುತ್ತಿದ್ದಾಗ ಅಲ್ಲಿಗೆ ನಾನು ಬಂದಿದ್ದೆ. ಈಗಾಗಲೇ ಎಣಿಕೆ, ಮರು ಎಣಿಕೆ ಮುಕ್ತಾಯಗೊಂಡು ಕಾಂಗ್ರೆಸ್‌ ಅಭ್ಯರ್ಥಿಯಾದ ನಾನು ಗೆದ್ದಿದ್ದೇನೆ ಎಂದು ಘೋಷಿಸಿದ ಮೇಲೂ ಮರು ಎಣಿಕೆ ಮಾಡುವುದಕ್ಕೆ ಅವಕಾಶ ಇಲ್ಲ ಎಂಬುದು ನ್ಯಾಯವಾದಿಗಳಾದ ತಮಗೆ ತಿಳಿದ ವಿಷಯವೆಂದು ಹೇಳಿದ್ದೆ. ನೀವು ಒಪ್ಪುವುದಾದರೆ ನಾನು ಮರು ಚುನಾವಣೆಗೆ ಸಿದ್ಧನೆಂದು ತಿಳಿಸಿದ್ದೆ. ಅದಾದ ಮೇಲೆ ತಾವು ಪ್ರತಿಭಟನೆ ನಿಲ್ಲಿಸಿದ್ದನ್ನು ಮತ್ತೆ ನೆನಪಿಸಬೇಕಾಗುತ್ತದೆ.

ಕಾಂಗ್ರೆಸ್ಸಿಗೇಕೆ ಅವಹೇಳನ ಮಾಡ್ತೀರಿ?: ತಾವು ಈ ಚುನಾವಣೆ ಬಗ್ಗೆ ಕೋರ್ಟ್ ಮೆಟ್ಟಿಲು ಏರಿದ್ದಿರಿ. ಕೋರ್ಟ್‌ ಫಲಿತಾಂಶ ಏಕೆ ಮೀರುತ್ತಿದ್ದೀರಿ? ಅಂದು ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಚುನಾವಣೆ ಮೋಸದ ವಿಷಯ ಅಂದು ಅರಿವಿಗೆ ಬರಲಿಲ್ಲವೇ? ಈಗ ಜಂಭ ಕೊಚ್ಚಿಕೊಂಡು ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಮುಖಕ್ಕೆ ಮಸಿ ಬಳಿಯುವುದು ಎಷ್ಟು ಸರಿ? ಇದಲ್ಲದೆ ಅಂದಿನ ಕಾಂಗ್ರೆಸ್‌ ಪಕ್ಷಕ್ಕೆ ತಾವು ಅವಹೇಳನ ಮಾಡುವುದು ಸರಿಯೇ? ಈಗ ತಾವು ಅದೇ ಪಕ್ಷದಲ್ಲಿ ಇದ್ದು ಮೋಸ ಮಾಡಿದ ಪಕ್ಷದಿಂದ ಅಧಿಕಾರ ಅನುಭವಿಸುತ್ತಿರುವುದು ಎಷ್ಟು ಸರಿ?

ಅಷ್ಟಕ್ಕೂ ನನಗೆ ಮೋಸ ಮಾಡುವುದಕ್ಕೆ ಅವಕಾಶ ಎಲ್ಲಿತ್ತು? 4 ಕ್ಷೇತ್ರಗಳ ಪೈಕಿ ಮೂರರಲ್ಲಿ ಕುರುಬ ಜನಾಂಗದ ಕಾಂಗ್ರೆಸ್‌ ಶಾಸಕರೇ ಇದ್ದರು. ಮತ್ತೊಂದರಲ್ಲಿ ಬೇರೆ ಪಕ್ಷದ ಕುರುಬ ಸಮುದಾಯದವರೇ ಶಾಸಕರಾಗಿದ್ದರು. ನಾಲ್ಕೂ ಕ್ಷೇತ್ರಗಳಿಗೆ ಕಾಂಗ್ರೆಸ್ಸಿನ ಹಿರಿಯರಾದ ಎಚ್‌.ಜಿ. ರಾಮುಲು ಅವರ ಹಿರಿತನ ಇತ್ತು. ರಾಮುಲು ಅವರ ಮನೆಯೇ ಜನತಾ ಪಕ್ಷದ ಕಚೇರಿಯಾಗಿತ್ತು. ಹೀಗಿದ್ದಾಗ, ನಾನು ಯಾರಿಗೆ ಮೋಸ ಮಾಡಬೇಕಾಗುತ್ತದೆ? ಅಂದು ಕಾಂಗ್ರೆಸ್‌ ಮುಖ್ಯಮಂತ್ರಿಗಳೇ ಇದ್ದರು. ಚುನಾವಣೆ ಖರ್ಚಿಗೆ ನನಗೆ ಕೊಡಬೇಕಾಗಿದ್ದ ಹಣವನ್ನು ಕಾಂಗ್ರೆಸ್ ವಿರೋಧಿಗಳ ಕೈಗೆ ನೀಡಿದ್ದು, ಅದರ ಲಾಭ ನಿಮಗೆ ಆಗಿದೆ. ಅಂದು ತಾವು ಲಿಂಗಾಯಿತರು ಮತ್ತು ಕುರುಬರ ಮಧ್ಯೆ ಗೋಡೆಯನ್ನು ಕಟ್ಟಿ ಬಂದದ್ದು ಈಗ ಇತಿಹಾಸ.

ಸೋಲನ್ನು ಒಪ್ಪಿಕೊಳ್ಳಿ, ಜಂಭ ಬೇಡ: ನಮ್ಮ ಚುನಾವಣೆಯ ಫಲಿತಾಂಶದ ಅಂಕಿ- ಸಂಖ್ಯೆಗಳನ್ನು ಹೇಳಿ ಗೇಲಿ ಮಾಡುತ್ತಿದ್ದೀರಿ. ಆದರೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಎರಡೂ ಕಡೆ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಅಂತರದಿಂದ ಸೋಲುಂಡು, ಬಾದಾಮಿ ಕ್ಷೇತ್ರದಲ್ಲಿ ಎಷ್ಟು ಅಂತರದಲ್ಲಿ ಗೆದ್ದಿದ್ದೀರಿ? ಚುನಾವಣೆಯಲ್ಲಿ ಅಂತರ ಏನೇ ಇರಲಿ. ಗೆಲುವು ಗೆಲುವೇ, ಸೋಲು ಸೋಲೇ. ಮೇಲ್ಮಟ್ಟದ ವ್ಯಕ್ತಿಗಳಾಗಿ ಸೋಲನ್ನು ಒಪ್ಪಿಕೊಳ್ಳದೆ ಮೋಸದಿಂದ ಸೋಲಾಗಿತ್ತೆಂದು ಜಂಭ ಕೊಚ್ಚಿಕೊಳ್ಳುವುದು ತಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದಲ್ಲ.

ಸೋಲು- ಗೆಲುವು ವ್ಯಕ್ತಿ ಅಳೆವ ಮಾಪನವಲ್ಲ: ಬಾದಾಮಿಯಲ್ಲಿ ತಾವು ಒಳ ಒಪ್ಪಂದದಿಂದ ಜಯ ಗಳಿಸಿದ್ದು ಅಲ್ಲಿನ ಜನರಿಗೆ ತಿಳಿದ ವಿಷಯ. ತಾವು ರಾಜಕೀಯವಾಗಿ ಕೆಟ್ಟ ಮನೋಭಾವದಿಂದ ಇರುವುದು ಸರಿಯಲ್ಲ. ದೊಡ್ಡವರಾದ ಮೇಲೆ ದೊಡ್ಡ ಮನಸ್ಸನ್ನು ಮೈಗೂಡಿಸಿಕೊಳ್ಳಬೇಕು. ನಿಮ್ಮ ಅಧಿಕಾರ ಶಾಶ್ವತ ಅಲ್ಲ, ತಿಳಿದುಕೊಳ್ಳಿ ಎಂದು ಹೇಳುವಷ್ಟು ದೊಡ್ಡವನೂ ನಾನಲ್ಲ. ನೀವು ಬಯಸಿದರೆ ಚುನಾವಣಾ ಫಲಿತಾಂಶ ಬಗ್ಗೆ ದಾಖಲಾತಿಯೊಂದಿಗೆ ಜನರ ಮುಂದೆ ಇಡಿ, ಅದಕ್ಕೆ ನಾನೂ ಸಿದ್ಧ. ತಾವು ಕೆಲವೊಂದು ಸಲ ರಾಜೀವ್ ಗಾಂಧಿಯವರು ಮರಣ ಹೊಂದಿದ ಕಾರಣ ಅನುಕಂಪದಿಂದ ಸೋಲಾಯಿತೆಂದು ಹೇಳಿಕೊಳ್ಳುತ್ತೀರಿ. ಅದೇ ರೀತಿ, ಒಂದು ವೇಳೆ ರಾಜೀವ್ ಗಾಂಧಿಯವರು ಬದುಕಿದ್ದರೆ ನನ್ನ ಗೆಲುವಿನ ಬಳಿಕ ನಾನೆಲ್ಲಿ ಇರುತ್ತಿದ್ದೆ ಎಂದು ಹೇಳಿದರೆ ನಿಮ್ಮ ಮನಸಿಗೆ ನೋವಾಗುತ್ತದೆ.

ಖರ್ಗೆ ಬಳಿ ಕೇಳಿ ತಿಳಿದುಕೊಳ್ಳಿ

ದಿವಂಗತ ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ಮೂವರು ಕೊಪ್ಪಳ ಕ್ಷೇತ್ರದ ಚುನಾವಣಾ ವೀಕ್ಷಕರಾಗಿದ್ದರು. ಚುನಾವಣೆಯಲ್ಲಿ ನಡೆದ ಪಕ್ಷವಿರೋಧಿ ಚಟುವಟಿಕೆ ಬಗ್ಗೆ ಅವರು ವರದಿ ಕೊಟ್ಟಿರುವುದು ಪಕ್ಷದ ಕಚೇರಿಯಲ್ಲಿ ಇರಬಹುದು. ಅದೂ ಅಲ್ಲದೆ ಅಂದು ಹಿರಿಯರಾಗಿದ್ದು, ಇಂದು ಕೇಂದ್ರದಲ್ಲಿ ಪಕ್ಷದ ನಾಯಕತ್ವ ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬೇಕಾದರೂ ತಿಳಿದುಕೊಳ್ಳಿ. ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಪಕ್ಷದ ಪರವಾಗಿ ಉಚ್ಚ ನ್ಯಾಯಾಲಯ ಆದೇಶ ನೀಡಿದ ಮೇಲೆ ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೆ ಕೋರ್ಟ್‌ ಆದೇಶ ಒಪ್ಪಿ, ಇಂದು ಫಲಿತಾಂಶ ಮೋಸದಿಂದ ಕೂಡಿದೆಯೆಂದು ಹೇಳುವುದು ನೀವು ನ್ಯಾಯಾಲಯಕ್ಕೆ ನಿಂದನೆ ಮಾಡಿದಂತೆ ಆಗುವುದಿಲ್ಲವೆ? ಮುಂದೆ ಎಲ್ಲಿಯಾದರೂ 29-08-2025ರ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುವಿರೆಂದು ನಂಬಿದ್ದೇನೆ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?