ಮನುಷ್ಯನಿಗೆ ಮನುಷ್ಯನ ಸಾಮೀಪ್ಯ ಬೇಕಾಗಿದೆ: ನಗರಗಳಲ್ಲಿ ಶುರುವಾಗಿದೆ ವಿಚಿತ್ರ ಟ್ರೆಂಡ್!

Published : Nov 15, 2026, 03:47 PM IST
Friendship Recession

ಸಾರಾಂಶ

ಸಾವಿರಾರು ಫೋನ್ ನಂಬರ್‌ಗಳು, ನೂರಾರು ಸೋಷಿಯಲ್ ಮೀಡಿಯಾ ಸ್ನೇಹಿತರು ಇದ್ದರೂ ನಿಜವಾದ ಆತ್ಮೀಯತೆಯ ಕೊರತೆ ಏಕೆ? ಆಧುನಿಕ ನಗರ ಜೀವನದಲ್ಲಿ ಹೆಚ್ಚುತ್ತಿರುವ ಸಂಸ್ಕೃತಿಯ ಕುರಿತು ವಿಶೇಷ ಲೇಖನ.

- ರಾಜ್

ಮೊನ್ನೆ ರಾತ್ರಿ ಸುಮಾರು ಹನ್ನೊಂದು ಗಂಟೆ. ದಿನವಿಡೀ ಕೆಲಸ ಮಾಡಿ ದಣಿದಿದ್ದ ಮನಸ್ಸಿಗೆ ಏನೋ ಒಂಥರಾ ಖಾಲಿತನ ಕಾಡುತ್ತಿತ್ತು. ಸುಮ್ಮನೆ ಮೊಬೈಲ್ ಎತ್ತಿಕೊಂಡು ಕಾಂಟ್ಯಾಕ್ಟ್ ಲಿಸ್ಟ್ ಸ್ಕ್ರಾಲ್ ಮಾಡುತ್ತಾ ಕೂತಿದ್ದೆ. ನೋಡಿದರೆ ಬರೋಬ್ಬರಿ ಒಂದೂವರೆ ಸಾವಿರಕ್ಕೂ ಹೆಚ್ಚು ನಂಬರ್‌ಗಳಿವೆ. ವಾಟ್ಸಾಪ್‌ನಲ್ಲಿ ಹತ್ತಾರು ಗ್ರೂಪ್‌ಗಳು, ಇನ್‌ಸ್ಟಾಗ್ರಾಮ್‌ನಲ್ಲಿ ನೂರಾರು ಪರಿಚಯಸ್ಥರು.

ಆದರೂ, ‘ಏನೋ ಬೇಜಾರಾಗ್ತಿದೆ ಮಾರಾಯ, ಬಾ ಒಂದು ಕಪ್ ಕಾಫಿ ಕುಡಿಯೋಣ’ ಎಂದು ಯಾವುದೇ ಮುಜುಗರವಿಲ್ಲದೆ, ಪೂರ್ವನಿಯೋಜಿತ ಅಪಾಯಿಂಟ್‌ಮೆಂಟ್ ಇಲ್ಲದೆ ಫೋನ್ ಮಾಡಲು ಒಂದು ಹೆಸರು ಹುಡುಕುತ್ತಿದ್ದೆ. ವಿಪರ್ಯಾಸ ನೋಡಿ, ಬೆರಳುಗಳು ಸ್ಕ್ರೀನ್ ಮೇಲೆ ಓಡಾಡುತ್ತಲೇ ಇದ್ದವು, ಆದರೆ ಮನಸ್ಸು ಮಾತ್ರ ಯಾವೊಂದು ಹೆಸರಿನ ಮೇಲೂ ನಿಲ್ಲಲಿಲ್ಲ. ಆ ರಾತ್ರಿ ನನ್ನೊಳಗೆ ಒಂದು ಪ್ರಶ್ನೆ ಬಹಳ ಕಾಡಿತು. ಬಹುಶಃ ಈ ಸಮಸ್ಯೆ ನನ್ನದೊಬ್ಬನದಷ್ಟೇ ಆಗಿರಲಿಲ್ಲ. ನಾವೆಲ್ಲರೂ ಒಂಥರಾ ಕಣ್ಣಿಗೆ ಕಾಣದ ಫ್ರೆಂಡ್‌ಶಿಪ್ ರಿಸೆಷನ್ ಸುಳಿಗೆ ಸಿಲುಕಿದ್ದೇವೆ, ಹೌದೇ?

ಒಮ್ಮೆ ಹತ್ತು-ಹದಿನೈದು ವರ್ಷಗಳ ಹಿಂದಕ್ಕೆ ಹೋಗಿ ನೋಡಿ. ಆಗ ಗೆಳೆತನಕ್ಕೆ ಯಾವುದೇ ವೇಳಾಪಟ್ಟಿ ಇರಲಿಲ್ಲ. ಸಂಜೆಯಾದರೆ ಸಾಕು, ಯಾವುದೋ ಒಂದು ಪುಟ್ಟ ಟೀ ಅಂಗಡಿಯ ಮುಂದೆ, ಪಾರ್ಕ್‌ನ ಕಟ್ಟೆಯ ಮೇಲೆ ನಮ್ಮದೇ ಆದ ಒಂದು ಲೋಕ ಸೃಷ್ಟಿಯಾಗುತ್ತಿತ್ತು. ಅಲ್ಲಿ ಬದುಕಿನ ದೊಡ್ಡ ದೊಡ್ಡ ಸಿದ್ಧಾಂತಗಳಿಗಿಂತ ಹೆಚ್ಚಾಗಿ, ಯಾವುದೋ ಹಳೆಯ ಸಿನಿಮಾದ ಹಾಡು, ಸುಮ್ಮನೆ ಕಾಲೆಳೆಯುವ ಮಾತು, ಮತ್ತೆಂದೋ ಕಂಡ ಕನಸುಗಳ ಹಂಚಿಕೆಯಿರುತ್ತಿತ್ತು. ನಾನು ಬರ್ತಿದ್ದೀನಿ ಎಂದು ಹೇಳಲೂ ಒಂದು ಮೆಸೇಜ್ ಬೇಕಿರಲಿಲ್ಲ. ಆದರೆ ಇಂದು?

ನಮ್ಮ ನಗರಗಳ ಟ್ರಾಫಿಕ್, ಆಧುನಿಕತೆ ತಂದ ಏಕಾಂತ, ವಾರಾಂತ್ಯದ ಜವಾಬ್ದಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೊಳಗೇ ಬೆಳೆದುನಿಂತ ಅಹಂ ಹಾಗೂ ಅತಿಯಾದ ಪ್ರೈವಸಿಯ ವ್ಯಾಮೋಹ ಇವೆಲ್ಲವೂ ಸೇರಿ ನಮ್ಮ ಸುತ್ತಲೂ ಒಂದು ಗೋಡೆಯನ್ನು ಕಟ್ಟಿಬಿಟ್ಟಿವೆ. ಈಗ ಹಳೆಯ ಗೆಳೆಯರನ್ನು ಭೇಟಿಯಾಗುವುದೆಂದರೆ ಅದೊಂದು ದೊಡ್ಡ ಪ್ರಾಜೆಕ್ಟ್ ಆದಂತಾಗಿದೆ. ‘ಈ ವಾರ ಆಗಲ್ಲ ಮಚ್ಚಾ, ನೆಕ್ಸ್ಟ್ ವೀಕೆಂಡ್ ನೋಡೋಣ’ ಎನ್ನುವ ಮಾತು ತಿಂಗಳುಗಳಾಗಿ, ವರ್ಷಗಳಾಗಿ ಕರಗಿಹೋಗುತ್ತಿದೆ. ವಾಟ್ಸಾಪ್ ಸ್ಟೇಟಸ್‌ಗಳಿಗೆ ಒಂದು ಹಾರ್ಟ್ ಎಮೋಜಿ ಕಳಿಸುವುದಕ್ಕಷ್ಟೇ ನಮ್ಮ ಆತ್ಮೀಯತೆ ಸೀಮಿತವಾಗಿಬಿಟ್ಟಿದೆ.

ಮನೋವಿಜ್ಞಾನಿಗಳು ಹೇಳುವ ಒಂದು ಮಾತು ನಿಜಕ್ಕೂ ಕಾಡುತ್ತದೆ. ಮನುಷ್ಯನಿಗೆ 30ರ ವಯಸ್ಸು ದಾಟಿದ ಮೇಲೆ ಹೊಸ ಸ್ನೇಹಿತರನ್ನು ಸಂಪಾದಿಸುವುದು ಅತ್ಯಂತ ಕಷ್ಟವಂತೆ. ಶಾಲೆ, ಕಾಲೇಜುಗಳಲ್ಲಿ ಸಿಗುತ್ತಿದ್ದ ಸಹಜ ಸಾಮೀಪ್ಯ ಆಫೀಸ್‌ಗಳಲ್ಲಿ ಸಿಗುವುದಿಲ್ಲ. ಅಲ್ಲಿರುವುದು ವೃತ್ತಿಪರ ಸ್ಪರ್ಧೆ ಮತ್ತು ವ್ಯವಹಾರಿಕ ಮಾತುಕತೆ ಮಾತ್ರ. ಹೀಗಾಗಿ, ಇಂದಿನ ತಲೆಮಾರು ಹೊರಗಿನಿಂದ ನೋಡಲು ಎಷ್ಟೇ ಯಶಸ್ವಿಯಾಗಿ, ಸಂತೋಷವಾಗಿ ಕಂಡರೂ, ಒಳಗೊಳಗೇ ತೀವ್ರವಾದ ಏಕಾಂಗಿತನವನ್ನು ಅನುಭವಿಸುತ್ತಿದೆ. ಮನುಷ್ಯನ ಈ ಅಸಹಾಯಕತೆಯನ್ನೇ ಈಗ ಮಾರುಕಟ್ಟೆ ಬಂಡವಾಳ ಮಾಡಿಕೊಂಡಿದೆ. ಇದರ ಪರಿಣಾಮವೇ ಇಂದು ನಗರಗಳಲ್ಲಿ ಸದ್ದಿಲ್ಲದೆ ಬೆಳೆಯುತ್ತಿದೆ ರೆಂಟ್ ಎ ಫ್ರೆಂಡ್ ಅಥವಾ ಪ್ಲೆಟೋನಿಕ್ ಕಂಪ್ಯಾನಿಯನ್‌ಶಿಪ್ ಸಂಸ್ಕೃತಿ.

ಕೇಳಲು ವಿಚಿತ್ರವೆನಿಸಿದರೂ ಇದು ನಮ್ಮ ನಡುವೆಯೇ ನಡೆಯುತ್ತಿರುವ ವಾಸ್ತವ. ಬೆಂಗಳೂರು, ಮುಂಬೈನಂತಹ ನಗರಗಳಲ್ಲಿ ಇಂದು ಹಲವು ಆ್ಯಪ್‌ಗಳು ಹುಟ್ಟಿಕೊಂಡಿವೆ. ನಿಮಗೆ ಒಬ್ಬರೇ ಸಿನಿಮಾ ನೋಡಲು ಬೇಜಾರಾಗುತ್ತಿದೆಯೇ? ಆಸ್ಪತ್ರೆಗೆ ಹೋಗಲು ಜೊತೆಗೆ ಯಾರೂ ಇಲ್ಲವೇ? ಅಥವಾ ಸುಮ್ಮನೆ ಒಂದು ಕೆಫೆಯಲ್ಲಿ ಕೂತು ಮನಸ್ಸಿನ ಭಾರ ಇಳಿಸಿಕೊಳ್ಳಲು ಒಬ್ಬ ಕೇಳುಗ ಬೇಕೇ? ಗಂಟೆಗೆ ಇಂತಿಷ್ಟು ಹಣ ಪಾವತಿಸಿದರೆ, ವೃತ್ತಿಪರ ಸ್ನೇಹಿತರು ನಿಮ್ಮ ಜೊತೆ ಬರುತ್ತಾರೆ. ಯಾವುದೇ ಜಡ್ಜ್‌ಮೆಂಟ್ ಇಲ್ಲದೆ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ, ನಿಮ್ಮೊಂದಿಗೆ ಊಟ ಮಾಡುತ್ತಾರೆ, ನಗುತ್ತಾರೆ.

ಇನ್ನೊಂದೆಡೆ, ಟೈಮ್-ಲೆಫ್ಟ್ ನಂತಹ ಹೊಸ ಟ್ರೆಂಡ್‌ಗಳು ಯುವಕರನ್ನು ಸೆಳೆಯುತ್ತಿವೆ. ಪ್ರತಿ ಬುಧವಾರ ರಾತ್ರಿ, ಒಬ್ಬರಿಗೊಬ್ಬರು ಪರಿಚಯವೇ ಇಲ್ಲದ ಆರು ಜನ ಅಪರಿಚಿತರು ಒಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ, ಮಾತನಾಡುತ್ತಾರೆ. ಜೊತೆಗೆ, ಕಬ್ಬನ್ ಪಾರ್ಕ್‌ನಲ್ಲಿ ಮೌನವಾಗಿ ಕೂತು ಪುಸ್ತಕ ಓದುವ ಕ್ಲಬ್‌ಗಳು, ವಾರಾಂತ್ಯದ ಬೋರ್ಡ್ ಗೇಮ್ ಕೆಫೆಗಳು ತುಂಬಿ ತುಳುಕುತ್ತಿವೆ. ಇವೆಲ್ಲವೂ ಹೇಳುತ್ತಿರುವುದು ಒಂದೇ ಸತ್ಯವನ್ನು-ಮನುಷ್ಯನಿಗೆ ಮನುಷ್ಯನ ಸಾಮೀಪ್ಯ ಬೇಕಾಗಿದೆ.

ಆತ್ಮೀಯತೆ ಇರಲು ಸಾಧ್ಯವೇ?

ಒಂದು ಕಡೆ ಯೋಚಿಸಿದರೆ, ಅಪರಿಚಿತರೊಂದಿಗೆ ಬೆರೆಯುವ ಈ ಹೊಸ ದಾರಿಗಳು ಒಳ್ಳೆಯದೇ ಎನಿಸುತ್ತದೆ. ಖಿನ್ನತೆಯ ಸುಳಿಯಿಂದ ಪಾರಾಗಲು ಯಾರಾದರೊಬ್ಬರು ಜೊತೆಗಿರುವುದು ಮುಖ್ಯ. ಆದರೆ, ಇನ್ನೊಂದು ಕಡೆ ಮನಸ್ಸಿಗೆ ಸಣ್ಣದೊಂದು ವಿಷಾದವೂ ಆವರಿಸುತ್ತದೆ. ನಾವು ಯಾವುದನ್ನು ಸಂಬಂಧ ಮತ್ತು ಸ್ನೇಹ ಎಂದು ಪೂಜ್ಯಭಾವನೆಯಿಂದ ಕಾಣುತ್ತಿದ್ದೆವೋ, ಇಂದು ಅದನ್ನು ಒಂದು ಸೇವೆಯಾಗಿ ಖರೀದಿಸುವ ಹಂತಕ್ಕೆ ಬಂದು ನಿಂತಿದ್ದೇವೆಯೇ? ಹಣ ಕೊಟ್ಟು ಕೊಂಡುಕೊಳ್ಳುವ ಸಮಯದಲ್ಲಿ, ಆ ವೃತ್ತಿಪರ ನಗುವಿನಲ್ಲಿ, ಕಣ್ಣೀರು ಒರೆಸುವ ಆ ತೋಳಿನಲ್ಲಿ ನಿಜವಾದ ಆತ್ಮೀಯತೆ ಇರಲು ಸಾಧ್ಯವೇ? ಅದು ಕೇವಲ ತಾತ್ಕಾಲಿಕ ನೋವು ನಿವಾರಕವಷ್ಟೇ ಅಲ್ಲವೇ?

ಎಐ ನಮ್ಮೆಲ್ಲಾ ಕೆಲಸಗಳನ್ನು ಸುಲಭಗೊಳಿಸುತ್ತಿರುವ ಈ ಹೊತ್ತಿನಲ್ಲಿ, ಭಾವನೆಗಳಿಗೂ ನಾವು ಕೃತಕ ಪರ್ಯಾಯಗಳನ್ನು ಹುಡುಕುತ್ತಿದ್ದೇವೆ. ಆದರೆ, ಎಷ್ಟೇ ಆ್ಯಪ್‌ಗಳು ಬಂದರೂ, ಎಷ್ಟೇ ಅಪರಿಚಿತರೊಂದಿಗೆ ಡಿನ್ನರ್ ಮಾಡಿದರೂ, ‘ನಾನು ಜೊತೆಗಿದ್ದೇನೆ, ಚಿಂತೆ ಮಾಡಬೇಡ’ ಎಂದು ಹೆಗಲ ಮೇಲೆ ಕೈಹಾಕುವ ಒಬ್ಬ ಹಳೆಯ ಗೆಳೆಯನ ಸ್ಪರ್ಶಕ್ಕೆ ಯಾವುದೂ ಸಾಟಿಯಾಗಲಾರದು.

ಈ ಸಾಲುಗಳನ್ನು ಓದಿ ಮುಗಿಸಿದ ಮೇಲೆ, ಒಮ್ಮೆ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ ತೆರೆಯಿರಿ. ಕಳೆದ ಆರು ತಿಂಗಳಿನಿಂದ ನೀವು ಮಾತನಾಡದ, ಆದರೆ ನಿಮ್ಮ ಮನಸ್ಸಿಗೆ ಅತ್ಯಂತ ಹತ್ತಿರವಿರುವ ಆ ಒಬ್ಬ ಗೆಳೆಯ ಅಥವಾ ಗೆಳತಿಗೆ ಒಂದು ಕರೆ ಮಾಡಿ. ಮೆಸೇಜ್ ಅಲ್ಲ, ಕೇವಲ ಒಂದು ಫೋನ್ ಕಾಲ್. ಬಹುಶಃ ಆ ಕಡೆಯಿಂದಲೂ ನಿಮ್ಮ ಕರೆಗಾಗಿಯೇ ಕಾಯುತ್ತಿರುವ ಒಂದು ಜೀವವಿರಬಹುದು. ಈ ಫ್ರೆಂಡ್‌ಶಿಪ್ ರಿಸೆಷನ್‌ನಿಂದ ಹೊರಬರಲು ಬೇಕಿರುವುದು ಹೊಸ ಆ್ಯಪ್‌ಗಳಲ್ಲ, ನಮ್ಮೊಳಗಿನ ಮೌನವನ್ನು ಮುರಿಯುವ ಒಂದು ಸಣ್ಣ ಪ್ರಯತ್ನ.

PREV
Read more Articles on
click me!

Recommended Stories

ಮಾಸ್ತಿ ಅನಂತ ಕುಪ್ಪಳ್ಳಿ ಕಾರಂತ ಗಿರೀಶ ಕಂಬಾರ ದತ್ತಾತ್ರೇಯ ಗೋಕಾಕ: AI ಬಂದ ಮೇಲೆ ಲೇಖಕರ ಕೆಲಸವೇನು?
ಕೇವಲ 7 ವರ್ಷ, ಮೂರು ತಿಂಗಳು, ಆರು ಕಥೆಗಳು; ಈ ಪುಟ್ಟ ಬಾಲಕಿಯ ಸಾಧನೆ ಏನು ಗೊತ್ತಾ?