ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ 2 ಲಕ್ಷ ರು. ಹಣ ಕೊಡೋದು ಹೌದಾ?

By Kannadaprabha News  |  First Published Oct 16, 2019, 1:41 PM IST


ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ 2 ಲಕ್ಷ  ರು. ಹಣ ನೀಡಲಾಗುತ್ತಿದೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ. 


ಶಿವಮೊಗ್ಗ (ಅ.16): ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆ ಬೇಟಿ ಬಚಾವೋ-ಬೇಟಿ ಪಡಾವೋ ಅಡಿ 2.00 ಲಕ್ಷ ನಗದು ಉತ್ತೇಜನ ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿ ನಮೂನೆಯಲ್ಲಿ ಪಡೆದು ವಂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಜಾಗರೂಕರಾಗಿರುವಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಟಿ ಜಚಾವೋ ಬೇಟಿ ಪಡಾವೋ ಯೋಜನೆಯಡಿಯಲ್ಲಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮ ಇರುವುದಿಲ್ಲ. ಅನಧಿಕೃತ ಸಂಸ್ಥೆಗಳು, ವ್ಯಕ್ತಿಗಳು ಈ ಯೋಜನೆಯಡಿ ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರನ್ನು ಮೋಸ ಮಾಡುತ್ತಿವೆ. ಈ ರೀತಿಯ ವಂಚನೆಯನ್ನು ಮಾಡುವ ಅಥವಾ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂತಹ ವಂಚನೆಗಳು ಬೆಳಕಿಗೆ ಬಂದಾಗಲೆಲ್ಲಾ ಎಫ್‌ಐಆರ್‌ಗಳನ್ನು ಈಗಾಗಲೇ ನೋಂದಾಯಿಸಲಾಗಿದೆ. ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ, ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ್‌ಕಾರ್ಡ್‌, ಬ್ಯಾಂಕ್‌ ವಿವರಗಳು, ದೂರವಾಣಿ ಸಂಖ್ಯೆ, ಇ-ಮೇಲ್‌ ಐ.ಡಿ, ಇತರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು. 

ಇಂತಹ ವಂಚನೆಗಳನ್ನು ಮಾಡುವವರ ಬಗ್ಗೆ ವ್ಯಕ್ತಿಗಳ, ಸಂಸ್ಥೆಗಳ ಹೆಸರನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!