ಮೆಗ್ಗಾನ್ ಆಸ್ಪತ್ರೆಗೆ ಕೊನೆಗೂ ಬಂತು ಸ್ಕ್ಯಾನಿಂಗ್ ಯಂತ್ರ| ಜಿಲ್ಲೆಯ ಬಹುದಿನಗಳ ಬೇಡಿಕೆ ಈಡೇರಿಸಿದ ಸರ್ಕಾರ| ಹೊಸ ಸ್ಕ್ಯಾನಿಂಗ್ ಯಂತ್ರ ಉದ್ಘಾಟಿಸಿದ ಸಚಿವ ಈಶ್ವರಪ್ಪ| ಎಂಆರ್‌ಐ ಸ್ಕ್ಯಾನ್ ಇಲ್ಲದೆ ರೋಗಿಗಳು ಪರದಾಡುವಂತಾಗಿತ್ತು| ಎಂಆರ್‌ಐ ಸ್ಕ್ಯಾನ್ ಮಾಡಿಸಲು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿತ್ತು| ಇದನ್ನು ಮನಗಂಡ ಸರ್ಕಾರ ಮೆಗ್ಗಾನ್ ಆಸ್ಪತ್ರೆಗೆ ಉಪಕರಣ ಒದಗಿಸಿದೆ|
ಶಿವಮೊಗ್ಗ(ಅ.17): ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಯಂತ್ರ ಬೇಕೆಂಬ ಮಲೆನಾಡು ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಆಸ್ಪತ್ರೆ ಆವರಣದಲ್ಲಿ ಗುರುವಾರ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಯಂತ್ರವನ್ನು ಉದ್ಘಾಟಿಸಿ, ರೋಗಿಗಳ ಸೇವೆಗೆ ಮೀಸಲಿಡುವಂತೆ ಸೂಚನೆ ನೀಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಬಹುದಿನಗಳಿಂದ ಎಂಆರ್‌ಐ ಸ್ಕ್ಯಾನ್ ಇಲ್ಲದೆ ರೋಗಿಗಳು ಪರದಾಡುವಂತಾಗಿತ್ತು. ಎಂಆರ್‌ಐ ಸ್ಕ್ಯಾನ್ ಮಾಡಿಸಲು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿತ್ತು. ಇದನ್ನು ಮನಗಂಡ ಸರ್ಕಾರ ಮೆಗ್ಗಾನ್ ಆಸ್ಪತ್ರೆಗೆ ಉಪಕರಣ ಒದಗಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಘುನಂದನ್, ಜಿಲ್ಲಾ ಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್, ಆಲ್ಟ್ರಾಸೌಂಡ್ ಸ್ಕ್ಯಾನ್‌ನ್ ಮತ್ತು ವೈರಲ್ ರಿಸರ್ಚ್ ಲ್ಯಾಬ್ ಸೇವೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜನತೆಗೆ ದೊರಕಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೂ ಅಲ್ಟ್ರಾಸೌಂಡ್ ಮಾತ್ರ ಇದ್ದು ಉಳಿದ ಸೌಲಭ್ಯ ಇರಲಿಲ್ಲ. ಇದೀಗ ಆ ತೊಂದರೆ ತಪ್ಪಿದಂತಾಗಿದೆ. ಆಸ್ಪತ್ರೆ ವತಿಯಿಂದಲೇ ರೋಗಿಗಳಿಗೆ ಸೌಲಭ್ಯ ದೊರೆಯಲಿದೆ ಎಂದರು.
ಆಯುಷ್ಮಾನ್ ಆರೋಗ್ಯ ಯೋಜನೆ ಜಾರಿಗೆ ಬಂದ ನಂತರ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಆದರೆ ಮೆಗ್ಗಾನ್‌ನಲ್ಲಿ ಮೇಲ್ಕಂಡ ಉಪಕರಣ ಇಲ್ಲದೇ ತುಂಬಾ ತೊಂದರೆಯಾಗುತ್ತಿತ್ತು. ಅಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡವುದಕ್ಕೂ ವಿಳಂಬ ಆಗುತ್ತಿತ್ತು. ಇದೀಗ ತೊಂದರೆ ನಿವಾರಣೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಮಾತ್ರ ಇದರ ಪ್ರಯೋಜನ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕ ಕೆ. ಬಿ. ಅಶೋಕ್ ನಾಯ್ಕ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಸೇರಿದಂತೆ ಹಲವರಿದ್ದರು.