ಹೊಳೆಬಾಗಿಲು ಗೇಟ್‌ ಸಮಸ್ಯೆ: ಶಾಸಕರಿಗೆ ಒತ್ತಾಯ

By Kannadaprabha NewsFirst Published Oct 20, 2019, 11:29 AM IST
Highlights

ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು ಗೇಟ್‌ ಸೇವೆಯ ವಿಚಾರದಲ್ಲಿ  ಶಾಸಕರ ಮಧ್ಯಪ್ರವೇಶಕ್ಕೆ ಜನರು ಆಗ್ರಹಿಸಿದ್ದಾರೆ. 

ಸಾಗರ [ಅ.20]:  ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು ಗೇಟ್‌ ಸೇವೆಯನ್ನು ಈಗಿರುವ ರೀತಿಯಲ್ಲಿ ಸರ್ಕಾರಿ ಅಧಿಕೃತ ಆದೇಶ ಇಲ್ಲದೆ ಮುಂದುವರಿಸಲು ಸಾಧ್ಯವಿಲ್ಲದ ಕಾರಣ ಶಾಸಕರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ತುಮರಿ ಗ್ರಾಪಂ ಕಳೆದ 12 ವರ್ಷಗಳಿಂದ ಕೇವಲ ಮೌಖಿಕ ಆದೇಶದ ಮೇಲೆ ಹೊಳೆಬಾಗಿಲು ಗೇಟ್‌ ನಿರ್ವಹಣೆ ಮಾಡುತ್ತಾ ಬಂದಿದೆ. ಅಧಿಕೃತ ಆದೇಶ ನೀಡಿ ಎಂದು ನಾಲ್ಕು ವರ್ಷದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದರೂ ಉಪಯೋಗವಾಗಿಲ್ಲ. ಈ ಕಾರಣ ಗೇಟ್‌ ಇನ್ನೂ ದೀರ್ಘಕಾಲ ನಡೆಸಲು ಪಂಚಾಯತ್‌ನಿಂದ ಸಾಧ್ಯವಾಗುತ್ತಿಲ್ಲ. ಆಡಳಿತಾತ್ಮಕ ನ್ಯೂನ್ಯತೆ ಸರಿಪಡಿಸಲು ಶಾಸಕರು ಮುಂದಾಗಬೇಕು ಎಂದು ಕೋರಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತುಮರಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗೇಟ್‌ ನಿರ್ವಹಣೆಯನ್ನು ಅ.15ಕ್ಕೆ ಸ್ಥಗಿತಗೊಳಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ದ್ವೀಪದ ಜನರ ಹಿತದೃಷ್ಟಿಯಿಂದ 30 ದಿನ ಹೆಚ್ಚುವರಿ ಸೇವೆ ಮುಂದುವರಿಸಲಾಗಿದೆ. ಅಷ್ಟರೊಳಗೆ ಶಾಸಕರು ಕಾನೂನಾತ್ಮಕ ಆದೇಶ ಕೊಡಿಸಿದರೆ ಮಾತ್ರ ಗೇಟ್‌ ನಿರ್ವಹಣೆ ಸಾಧ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಶಾಸಕರು ದ್ವೀಪದ ಎಲ್ಲಾ ಗ್ರಾಮ ಪಂಚಾಯಿತಿಗಳ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಭೆ ಕರೆದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

click me!