Zero Shadow Day Karnataka: ಈ ದಿನದಂದು ನಿಮ್ಮ ಜಿಲ್ಲೆಯಲ್ಲಿ ನೆರಳೇ ಕಾಣಿಸಲ್ಲ: ಏನಿದರ ಮರ್ಮ?

By Suvarna News  |  First Published Apr 24, 2022, 11:48 AM IST

ಶೂನ್ಯ ನೆರಳಿನ ದಿನದಂದು ಸೂರ್ಯ ನಮ್ಮ ನಡು ನೆತ್ತಿಯ ಮೇಲೆ ಬರುವುದರಿಂದ ನೆರಳು ರೂಪುಗೊಳ್ಳುವುದಿಲ್ಲ.


ಬೆಂಗಳೂರು (ಏ. 24): ಬೆಳಗ್ಗೆ ಮತ್ತು ಸಂಜೆಗೆ ಹೋಲಿಸಿದರೆ ಮಧ್ಯಾಹ್ನ ನಮ್ಮ ನೆರಳು ಪುಟ್ಟದಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ನಮ್ಮ ನಡು ನೆತ್ತಿಯ ಮೇಲೆ ಬರಲಿರುವ ಸೂರ್ಯ ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ. ಇದರಿಂದ ಎಷ್ಟೇ ಪ್ರಖರ ಬಿಸಿಲಿದ್ದರೂ ನಮ್ಮ ನೆರಳೇ ಮೂಡದಿರುವ ಪ್ರಕೃತಿಯ ವಿಸ್ಮಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜರುಗಲಿದೆ. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಘಟಿಸುವ ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನ (Zero Shadow Day) ಎಂದು ಕರೆಯಲಾಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನಮ್ಮ ನಡು ನೆತ್ತಿಯ ಮೇಲೆ ಬರುವುದರಿಂದ ನೆರಳು ರೂಪುಗೊಳ್ಳುವುದಿಲ್ಲ.

ವೈಜ್ಞಾನಿಕವಾಗಿ ಹೇಳುವುದಾದರೆ ಅನ್ಯ ದಿನಗಳಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೆ ಇದ್ದಂತೆ ಭಾಸವಾಗುತ್ತಿದ್ದರೂ ವಾಸ್ತವದಲ್ಲಿ ತುಸು ಅತ್ತಿತ್ತ ಇರುತ್ತಾನೆ. ಆದರೆ ಶೂನ್ಯ ನೆರಳಿನ ದಿನದಂದು ಸೂರ್ಯ ಖಗೋಳ ಶಾಸ್ತ್ರದ ಪ್ರಕಾರ ಝೆನಿತ್‌ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಮೇಲಿರುತ್ತಾನೆ. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೇಲೆ ಹಾದು ಹೋಗುವಾಗ ಆ ನಿರ್ದಿಷ್ಟಸ್ಥಳದಲ್ಲಿ ನೆರಳು ಮರೆಯಾಗುತ್ತದೆ. ಸೂರ್ಯ ಉಳಿದ ದಿನಗಳಲ್ಲಿ ಈ ಝೆನಿತ್‌ನ ತುಸು ಎಡ ಅಥವಾ ಬಲದಲ್ಲಿ ಇರುವುದರಿಂದ ನೆರಳು ಮೂಡುತ್ತಿರುತ್ತದೆ.

Tap to resize

Latest Videos

undefined

ನೋಡುವುದು ಹೇಗೆ?: ಶೂನ್ಯ ನೆರಳಿನ ಅನುಭವ ಪಡೆಯಲು ಯಾವುದೇ ವೈಜ್ಞಾನಿಕ ಉಪಕರಣದ ಅಗತ್ಯವಿಲ್ಲ. ನಿಮ್ಮ ಮನೆಯ ಅಂಗಳ, ಟೆರೇಸ್‌, ರಸ್ತೆ ಹೀಗೆ ಯಾವುದೇ ಬಯಲು ಪ್ರದೇಶದಲ್ಲಿ ನಿಂತು ನಿಮ್ಮನ್ನು ನೀವೇ ಪ್ರಯೋಗಕ್ಕೆ ಒಳಪಡಿಸಿ ನೆರಳು ಮರೆಯಾಗುವುದನ್ನು ನೋಡಬಹುದು. ಹಾಗೆಯೇ ಲಂಬವಾಗಿ ಒಂದು ಕೊಳವೆಯನ್ನೋ, ಕಂಬವನ್ನೋ ನಿಲ್ಲಿಸಿ ನಿಧಾನವಾಗಿ ಅದರ ನೆರಳು ಕಡಿಮೆ ಆಗುತ್ತ ಬಂದು ಕೊನೆಗೆ ನೆರಳು ಮಾಯವಾಗುವುದನ್ನು ಗಮನಿಸಬಹು

ಕರ್ನಾಟಕದಲ್ಲಿ ಶೂನ್ಯ ನೆರಳಿನ ದಿನದ ದಿನಾಂಕಗಳು ಹೀಗಿವೆ:

  • 22 ಏಪ್ರಿಲ್: ಮೈಸೂರು, ಮಡಿಕೇರಿ
  • 23 ಏಪ್ರಿಲ್: ಮಂಡ್ಯ, ಪುತ್ತೂರು
  • 24 ಏಪ್ರಿಲ್: ಮಂಗಳೂರು (ಡಿ.ಕೆ.), ಹಾಸನ, ಬೆಂಗಳೂರು
  • 25 ಏಪ್ರಿಲ್: ಉಡುಪಿ,  ಚಿಕ್ಕಮಗಳೂರು , ತುಮಕೂರು, ಚಿಕ್ಕಬಳ್ಳಾಪುರ
  • 26 ಏಪ್ರಿಲ್: ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರ್
  • 27 ಏಪ್ರಿಲ್: ಭಟ್ಕಳ , ಶಿವಮೊಗ್ಗ, ಚನ್ನಗಿರಿ
  • 28 ಏಪ್ರಿಲ್: ಹೊನ್ನಾವರ, ಕುಮ್ಟ , ಶಿಕಾರಿಪುರ, ಚಿತ್ರದುರ್ಗ
  • 29 ಏಪ್ರಿಲ್: ಗೋಕರ್ಣ, ಶಿರಸಿ , ರಾಣೆಬೆನ್ನೂರು , ದಾವಣಗೆರೆ
  • 30 ಏಪ್ರಿಲ್: ಕಾರವಾರ , ಹಾವೇರಿ
  • 01 ಮೇ: ಹುಬ್ಬಳ್ಳಿ , ಹೊಸಪೇಟೆ , ಬಳ್ಳಾರಿ
  • 02 ಮೇ: ಧಾರವಾಡ, ಗದಗ
  • 03 ಮೇ: ಬೆಳಗಾವಿ, ಸಿಂಧನೂರ್
  • 04 ಮೇ: ಗೋಕಾಕ್, ಬಾಗಲಕೋಟೆ , ರಾಯಚೂರು
  • 06 ಮೇ: ಯಾದಗಿರಿ
  • 07 ಮೇ: ವಿಜಯಪುರ
  • 09 ಮೇ: ಕಲ್ಬುರ್ಗಿ
  • 10ಮೇ: ಹುಮ್ನಾಬಾದ್
  • 11 ಮೇ: ಬೀದರ್

ವರ್ಷಕ್ಕೆರಡು ಬಾರಿ ಶೂನ್ಯ ನೆರಳಿನ ದಿನ: ಶೂನ್ಯ ನೆರಳು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ಏಪ್ರಿಲ್‌ ಮತ್ತು ಆಗಸ್ಟ್‌ನಲ್ಲಿ ಘಟಿಸುತ್ತದೆ. ಆದರೆ ಆಗಸ್ಟ್‌ನಲ್ಲಿ ಮಳೆಗಾಲ ಇರುವುದರಿಂದ ಮೋಡ ಕವಿದ ವಾತಾವರಣದಿಂದಾಗಿ ಶೂನ್ಯ ನೆರಳಿನ ಅನುಭವ ಪಡೆಯುವುದು ಕಷ್ಟ. ಆದರೆ ಏಪ್ರಿಲ್‌ ತಿಂಗಳಿನಲ್ಲಿ ಸೂರ್ಯ ಪ್ರಖರ ಆಗಿರುವುದರಿಂದ ನೆರಳು ಮರೆಯಾಗುವ ಅನುಭವನ್ನು ಪಡೆಯಬಹುದು.

ಇದನ್ನೂ ಓದಿ: ಮಂಗಳನ ಅಂಗಳದಿಂದ ಸೂರ್ಯೋದಯ ಹೇಗೆ ಕಾಣುತ್ತೆ ಗೊತ್ತಾ? ನಾಸಾ ಸೆರೆಹಿಡಿದ ಈ ಚಿತ್ರ ನೋಡಿ

ಭೂಮಿಯ ಚಲನೆಯಿಂದ ಶೂನ್ಯ ನೆರಳು: ಭೂಮಿ 23.5 ಡಿಗ್ರಿ ವಾಲಿ ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುತ್ತದೆ. ಇದನ್ನು ಭೂಮಿಯ ಯಾವುದಾದರೂ ಒಂದು ಜಾಗದಿಂದ ನಿಂತು ಗಮನಿಸಿದರೆ ಭೂಮಿ ಸಮಭಾಜಕ ವೃತ್ತದಿಂದ ಒಮ್ಮೆ ಉತ್ತರಕ್ಕೂ ಇನ್ನೊಮ್ಮೆ ದಕ್ಷಿಣಕ್ಕೂ ಚಲಿಸಿದಂತೆ ಭಾಸವಾಗುತ್ತದೆ. ಈ ಸಂದರ್ಭದಲ್ಲಿನ ಅತ್ಯಂತ ಉತ್ತರ (ಜೂನ್‌ 21) ಮತ್ತು ಅತ್ಯಂತ ದಕ್ಷಿಣ (ಡಿಸೆಂಬರ್‌ 21) ಬಿಂದುಗಳನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಎರಡು ಸಂಕ್ರಾಂತಿಗಳ ಮಧ್ಯದ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಸೂರ್ಯ ಝೆನಿತ್‌ ತಲುಪುತ್ತಾನೆ. ಆಗ ಶೂನ್ಯ ನೆರಳಿನ ದಿನ ಸೃಷ್ಟಿಆಗುತ್ತದೆ.

click me!