ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿಕೋಟ!

By Kannadaprabha News  |  First Published Jun 23, 2023, 11:49 AM IST

ಇಸ್ರೋ ಭಾರತದ ಹೆಮ್ಮೆ. ಇಸ್ರೋ ಏನಾದರೂ ಹೊಸ ಉಪಗ್ರಹ ಉಡಾವಣೆ ಮಾಡುತ್ತೆ ಅಂದ್ರೆ ಭಾರತೀಯರೇ ಉಸಿರು ಬಿಗಿ ಹಿಡಿದು ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತಾರೆ. ಅಂಥ ಅಪೂರ್ವ ಕ್ಷಣದಲ್ಲಿ ಶ್ರೀ ಸಾಮಾನ್ಯನೂ ಸಾಕ್ಷಿಯಾಗಬಹುದಾ?


- ರವಿಶಂಕರ್ ಭಟ್

ಶ್ರೀಹರಿಕೋಟ. ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗೃಹ. ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೈಗೊಳ್ಳುವ ಯೋಜನೆಗಳ ಚಿಮ್ಮು ಹಲಗೆ ಇದು. ಉಪಗ್ರಹ ಉಡಾವಣೆ ಇರಬಹುದು, ಚಂದ್ರಯಾನ ಅಥವಾ ಮಂಗಳಯಾನ ನೌಕೆಗಳ ಉಡಾವಣೆ ಇರಬಹುದು... ಅವುಗಳನ್ನು ಹೊತ್ತ ರಾಕೆಟ್ ಗಳು ಜಿಗಿಯುವುದು ಇಲ್ಲಿಂದಲೇ. ಭೂಮಿಯ ಧ್ರುವಗಳನ್ನು ಸುತ್ತುವ ಉಪಗ್ರಹಗಳನ್ನು ಉಡಾಯಿಸುವ ಪಿಎಎಸ್‌ಎಲ್‌ವಿ (Polar Satellite Launching Vehicle) ಹಾಗೂ ಭೂಮಿಯ ಅಕ್ಷಾಂಶದಲ್ಲಿ ಸ್ಥಾಪಿತವಾಗುವ ಉಪಗ್ರಹಗಳನ್ನು ಉಡಾವಣೆ ಮಾಡುವ ಜಿಎಸ್‌ಎಲ್‌ವಿ (Geosynchronous Satellite Launch Vehicle) ಇಲ್ಲಿಂದ ಪ್ರಮುಖವಾಗಿ ಹಾರಿಬಿಡಲಾಗುವ ರಾಕೆಟ್‌ಗಳು. ಇದಲ್ಲದೆ, ಸಣ್ಣ ಉಪಗ್ರಹಗಳನ್ನು ಉಡಾಯಿಸುವ ತುಸು ಅಗ್ಗದ ಎಸ್‌ಎಸ್‌ಎಲ್‌ವಿ (Small Satellite Launch Vehicle) ರಾಕೆಟ್‌ಗೂ ಇಲ್ಲಿಂದ ಹಾರುವ ಭಾಗ್ಯ ಇತ್ತೀಚೆಗೆ ಲಭ್ಯವಾಗಿದೆ. 44 ವರ್ಷ, 88 ಉಡಾವಣೆ, 78 ಯಶಸ್ಸು, 10 ವೈಫಲ್ಯ... ಇದು ಶ್ರೀಹರಿಕೋಟದ ಸಾಧನೆಯ ಪಟ್ಟಿ. ಕಳೆದ ಮೇ 29ರಂದು ನಾವಿಕ್ ಹೆಸರಿನ ದಿಕ್ಸೂಚಿ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ ರಾಕೆಟ್‌ ಉಡಾವಣೆ ಶ್ರೀಹರಿಕೋಟದ ಇತ್ತೀಚಿನ ಯಶಸ್ಸು. ಚಂದ್ರನ ಅಂಗಳದಲ್ಲಿ ರೋವರ್ ವಾಹನ ಇಳಿಸುವ, ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಹಾರಿಬಿಡುವುದು ಶ್ರೀಹರಿಕೋಟ ಕೇಂದ್ರದ ಮುಂದಿರುವ ತಕ್ಷಣದ ಸವಾಲು. ಜುಲೈ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ ಈ ಅಗ್ನಿಪರೀಕ್ಷೆ.

Tap to resize

Latest Videos

undefined

ಉಪಗ್ರಹವಾಹಕ, ಬಾಹ್ಯಾಕಾಶ ನೌಕೆ ಉಡಾವಣೆಯಂತಹ ವಿಷಯಾಸಕ್ತರ ಪಾಲಿಗೆ ದೇಗುಲವೇ ಆಗಿರುವ ಶ್ರೀಹರಿಕೋಟಕ್ಕೆ ಭೇಟಿ ನೀಡುವ ಸೌಭಾಗ್ಯ ಇತ್ತೀಚೆಗೆ ನನ್ನದಾಗಿತ್ತು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಕಣ್ಗಾವಲಿನಲ್ಲಿರುವ ಈ ಬೃಹತ್ ಪ್ರದೇಶಕ್ಕೆ ಬೇಕುಬೇಕಾದವರಿಗೆ ಭೇಟಿ ಸಾಧ್ಯವಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಅದು ಸಾಧುವೂ ಅಲ್ಲ. ಸಂಬಂಧಿತ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಧ್ಯಯನಕಾರರಿಗಷ್ಟೇ ಇಲ್ಲಿಗೆ ಪ್ರವೇಶ. ಬೆಂಗಳೂರಿನ ಇಸ್ರೋ ಸಾರ್ವಜನಿಕ ಸಂಪರ್ಕ ವಿಭಾಗದ ಮಿತ್ರರೊಬ್ಬರು ಹಾಗೂ ಶ್ರೀಹರಿಕೋಟ ಕೇಂದ್ರದ ಅಧಿಕಾರಿಗಳ ಸಹಕಾರ ಮತ್ತು ನೆರವಿನಿಂದ ಇಲ್ಲಿಗೆ ಭೇಟಿ ನೀಡಿ ತಿಳಿದುಕೊಳ್ಳುವ ಸೌಭಾಗ್ಯ ನನ್ನದಾಯಿತು. ಇಂತಿಪ್ಪ ಶ್ರೀಹರಿಕೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಕೊಂಡ ಕೆಲ ಮಾಹಿತಿ ಇಂತಿದೆ.

ಇನ್ಮುಂದೆ ಭಾರತದ್ದೇ ಜಿಪಿಎಸ್‌: ಇಸ್ರೋದಿಂದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡಾವಣೆ

- ಶ್ರೀಹರಿಕೋಟ ರೇಂಜ್ ಇದರ ಪೂರ್ಣ ಹೆಸರು. ಇಸ್ರೋ ಇಟ್ಟ ಪುಟ್ಟ ಹೆಸರು ಶಾರ್ (SHAR - Sri HArikota Range)
- ಭಾರತದ ಪೂರ್ವ ಕರಾವಳಿಯ ಸಮುದ್ರದ ತಟದಲ್ಲಿ ಬರೋಬ್ಬರಿ 175 ಚದರ ಕಿಲೋಮೀಟರು ವಿಸ್ತೀರ್ಣವಿರುವ ದ್ವೀಪಸ್ವರೂಪಿ ಪ್ರದೇಶ "ಶಾರ್" 
- ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಪಳವೇರ್‌ಕಾಡು ಅಲಿಯಾಸ್ ಪುಲಿಕಾಟ್ ಸರೋವರ, ಉತ್ತರದಲ್ಲಿ ಭೂಮಿ, ದಕ್ಷಿಣದಲ್ಲಿ ಸರೋವರ-ಸಮುದ್ರ ನೀರಿನಿಂದ ಆವೃತವಾದ ಭಾಗ 
- ಸುಮಾರು 2000 ಕಾಯಂ, 3000 ಹಂಗಾಮಿ ನೌಕರರಿಗೆ ಆಶ್ರಯತಾಣ. ಸಂಪೂರ್ಣವಾಗಿ ಸರ್ಕಾರಿ ಸಂರಕ್ಷಿತ ಸುಭದ್ರ ಪ್ರದೇಶ. ಸದ್ಯಕ್ಕೆ ಇಸ್ರೋ ಹೊಂದಿರುವ ಏಕೈಕ ಉಪಗ್ರಹ ಉಡಾವಣಾ ಕೇಂದ್ರ 
- ದೇಶದ ಖ್ಯಾತ ಗಣಿತಶಾಸ್ತ್ರಜ್ಞ ಹಾಗೂ ವೈಮಾಂತರಿಕ್ಷ ವಿಜ್ಞಾನಿ, ಪ್ರಾಯೋಗಿಕ ಇಂಧನ ಸಂಶೋಧನೆಯ ಪಿತಾಮಹ ಎಂದೇ ಬಣ್ಣಿಸಲಾಗುವ ಡಾ|ಸತೀಶ್ ಧವನ್ ಹೆಸರು ಇದರದು 
- ಇಲ್ಲಿ ಎರಡು ಪ್ರಮುಖ ಉಡಾವಣಾ ವೇದಿಕೆಗಳಿವೆ. ಮೊದಲನೆಯದು PSLV (Polar Satellite Launch Vehicle) ಉಪಗ್ರಹವಾಹಕಗಳನ್ನು ಹಾರಿಬಿಡುವ First Launch Pad. ಇನ್ನೊಂದು Second Launch Pad. ಇಲ್ಲಿಂದ PSLV ಹಾಗೂ ದೈತ್ಯ GSLV (Geosynchronous Satellite Launch Vehicle) ಎರಡೂ ಮಾದರಿಯ ರಾಕೆಟ್‌ಗಳನ್ನು ಹಾರಿಬಿಡಲಾಗುತ್ತದೆ 
- ಮೊದಲ ಉಡಾವಣಾ ವೇದಿಕೆ ಖಾಲಿ ಇತ್ತು. "ಶಾರ್" ತಂಡದ ನೆರವಿನಿಂದ ಅದರ ಇಡೀ ಪರಿಚಯವಾಯಿತು. 63 ಮೀ. ಎತ್ತರಕ್ಕೆ ಲಿಫ್ಟ್‌ನಲ್ಲಿ ಹೋಗಿ ದರ್ಶಿಸಿದ್ದೂ ಆಯಿತು. ಸುತ್ತ ಕಾಡು. ಅನತಿ ದೂರದಲ್ಲಿ ಬಂಗಾಳಕೊಲ್ಲಿ 
- ಎರಡನೇ ಉಡಾವಣಾ ವೇದಿಕೆಯಲ್ಲಿ ನಾವಿಕ್ ಹೆಸರಿನ ದಿಕ್ಸೂಚಿ ಉಪಗ್ರಹವನ್ನು ಹೊತ್ತ ದೈತ್ಯ ಜಿಎಸ್ಎಲ್‌ವಿ ರಾಕೆಟ್ ಹಾರಲು ಸಜ್ಜಾಗಿ ನಿಂತಿತ್ತು. ವಿವಿಧ ಪರೀಕ್ಷೆಗಳಿಗೆ ಒಳಪಡುತ್ತಿತ್ತು 
- ಇದರ ಜೊತೆಗೆ, ಉಪಗ್ರಹ ಜೋಡಣೆ ಕೇಂದ್ರ (Launch Vehicle Integration unit), ಮುಖ್ಯ ನಿರ್ವಹಣಾ ಕೇಂದ್ರ (Master Control Room) ಮುಂತಾದ ಕಡೆ ವಿವರಣೆ ಸಹಿತ ಭೇಟಿಯಾಯಿತು 
- ದೇಶದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿ ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಬಹುಕಾಲದ ಬಯಕೆ ಈಡೇರಿತು. ಇನ್ನೊಮ್ಮೆ ಭೇಟಿ‌ ನೀಡಿ ರಾಕೆಟ್ ಉಡಾವಣೆಯನ್ನು ಹತ್ತಿರದಿಂದ ವೀಕ್ಷಿಸಬೇಕೆಂಬ ಸಂಕಲ್ಪ ದೃಢವಾಯಿತು

ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ರಾಕೆಟ್ ಹಾರುವುದನ್ನು ನೀವು ಕಣ್ಣಾರೆ ನೋಡಿ
ಉಪಗ್ರಹವಾಹಕ ಉಡಾವಣೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ, ಅದಕ್ಕೆ ನೇರವಾಗಿ ಹೋಗುವಂತಿಲ್ಲ. ಮೊದಲೇ ನೋಂದಣಿ ಮಾಡಿಕೊಂಡಿರಬೇಕು. ಹಾಗೆ ನೋಂದಣಿ ಮಾಡಿಕೊಳ್ಳಲು ಇಚ್ಛೆ ಇರುವುವರು ಯಾವುದೇ ರಾಕೆಟ್‌ ಉಡಾವಣೆಗೆ ನಾಲ್ಕೈದು ದಿನ ಮುನ್ನ ಈ ಕೊಂಡಿಯಲ್ಲಿ ಪ್ರಯತ್ನಿಸಿ.  (https://lvg.shar.gov.in/VSCREGISTRATION/index.jsp)

click me!