* ಈ ವರ್ಷದ ಮೊದಲ ಚಂದ್ರಗ್ರಹಣ ಹಾಗೂ ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ವಿದ್ಯಮಾನ
* ವಿಶ್ವದೆಲ್ಲೆಡೆ ಖಗೋಳ ಕೌತುಕ ಕಣ್ತುಂಬಿಕೊಂಡ ಜನ
* ಈಶಾನ್ಯ ರಾಜ್ಯಗಳ ಕೆಲವು ಕಡೆಗಳಲ್ಲಿ ಗ್ರಹಣ ಗೋಚರ
ನವದೆಹಲಿ(ಮೇ.27): ಈ ವರ್ಷದ ಮೊದಲ ಚಂದ್ರಗ್ರಹಣ ಹಾಗೂ ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ವಿದ್ಯಮಾನವನ್ನು ವಿಶ್ವದೆಲ್ಲೆಡೆಯ ಜನರು ಕಣ್ತುಂಬಿಕೊಂಡರು. ಭಾರತದಲ್ಲಿ ಮಧ್ಯಾಹ್ನ 2.17 ನಿಮಿಷಕ್ಕೆ ಆರಂಭವಾದ ಗ್ರಹಣ ಸಂಜೆ 7.19ಕ್ಕೆ ಕೊನೆಗೊಂಡಿತು.
ಈಶಾನ್ಯ ರಾಜ್ಯಗಳ ಕೆಲವು ಕಡೆಗಳಲ್ಲಿ ಗ್ರಹಣ ಗೋಚರಿಸಿತು. ಬುದ್ಧ ಪೂರ್ಣಿಮೆಯಂದೇ ಸೂಪರ್ ಮೂನ್ ವಿದ್ಯಮಾನ ಸಂಭವಿಸಿರುವುದು ವಿಶೇಷ. ಆದರೆ, ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ಕಡೆ ಈ ವಿದ್ಯಮಾನ ಗೋಚರಿಸಲಿಲ್ಲ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್ ಸಾಗರ, ಆಸ್ಪ್ರೇಲಿಯಾ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಈ ಅಪರೂಪದ ವಿದ್ಯಮಾನ ಕಂಡುಬಂದಿತು.
ಚಂದ್ರ ಭೂಮಿಯ ಸಮೀಪದಿಂದ ಹಾದು ಹೋಗುವ ಕಾರಣಕ್ಕೆ ಚಂದ್ರ ಎಂದಿಗಿಂತಲೂ ದೊಡ್ಡದಾಗಿ ಗೋಚರಿಸಲಿದ್ದು, ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ, ಕೆಂಪು ಬಣ್ಣ ಗೋಚರವಾದರೆ ಅದನ್ನು ಬ್ಲಡ್ ರೆಡ್ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ತೀರಾ ಅಪರೂಪಕ್ಕೊಮ್ಮೆ ಇಂತಹ ವಿದ್ಯಮಾನಗಳು ಬಾನಂಗಳದಲ್ಲಿ ಸಂಭವಿಸುತ್ತವೆ. ಕಳೆದ ವರ್ಷವೂ ಬುದ್ಧಪೂರ್ಣಿಮೆಯಂದು ಸೂಪರ್ ಮೂನ್ ವಿದ್ಯಮಾನ ಸಂಭವಿಸಿತ್ತು.