
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಎನ್ನುವುದು ವಿವಿಧ ದೇಶಗಳನ್ನು ಒಳಗೊಂಡಿರುವ ಒಂದು ಜಂಟಿ ಪ್ರಯತ್ನವಾಗಿದೆ. ಬಾಹ್ಯಾಕಾಶದಲ್ಲಿ ಮಾನವರು ನಿರ್ಮಿಸಿರುವ ಅತ್ಯಂತ ದೊಡ್ಡ ವಸ್ತು ಎಂಬ ಹೆಗ್ಗಳಿಕೆಗೆ ಈ ಬಾಹ್ಯಾಕಾಶ ನಿಲ್ದಾಣ ಪಾತ್ರವಾಗಿದೆ.
ಐಎಸ್ಎಸ್ ನಿರ್ಮಾಣ ಮತ್ತು ಮಾಲೀಕತ್ವ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಮುಖ್ಯ ರಚನೆಯನ್ನು 1998ರಿಂದ 2011ರ ನಡುವೆ ನಿರ್ಮಿಸಲಾಯಿತು. ಆದರೆ, ಬಾಹ್ಯಾಕಾಶ ನಿಲ್ದಾಣ ನೂತನ ಯೋಜನೆಗಳು ಮತ್ತು ಪ್ರಯೋಗಗಳ ಮೂಲಕ ಇಂದಿಗೂ ವಿಕಾಸ ಹೊಂದುತ್ತಲೇ ಸಾಗುತ್ತಿದೆ. ನವೆಂಬರ್ 2, 2002ರ ಬಳಿಕ, ಗಗನಯಾತ್ರಿಗಳು ನಿರಂತರವಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಲೇ ಬಂದಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮಾಲೀಕತ್ವ ಯಾವುದೇ ಒಂದು ದೇಶದ ಬಳಿ ಇಲ್ಲ. ಬದಲಿಗೆ, ಅದನ್ನು ಒಂದು ಸಹಕಾರಿ ಕಾರ್ಯಕ್ರಮದಡಿ ನಿರ್ವಹಿಸಲಾಗುತ್ತದೆ. ವಿವಿಧ ದೇಶಗಳು ಬಾಹ್ಯಾಕಾಶ ನಿಲ್ದಾಣಕ್ಕೆ ತಂತ್ರಜ್ಞಾನ, ಹೂಡಿಕೆ ಮತ್ತು ಪ್ರಾವೀಣ್ಯತೆಯಲ್ಲಿ ಕೊಡುಗೆ ನೀಡುತ್ತಿದ್ದು, ಅದರಿಂದ ಲಭಿಸುವ ಪ್ರಯೋಜನಗಳನ್ನು ಹಂಚಿಕೊಳ್ಳುತ್ತಿವೆ.
ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ
ಐಎಸ್ಎಸ್‌ಗೆ ಕೊಡುಗೆ ನೀಡುವ ಪ್ರಮುಖ ರಾಷ್ಟ್ರಗಳು
* ನಾಸಾ (ಅಮೆರಿಕಾ) - ಮಾಡ್ಯುಲ್‌ಗಳು, ತಂತ್ರಜ್ಞಾನವನ್ನು ಒದಗಿಸಿ, ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.
* ರಾಸ್‌ಕಾಸ್ಮೋಸ್ (ರಷ್ಯಾ) - ಇದು ರಾಕೆಟ್‌ಗಳು, ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ಜೀವ ಬೆಂಬಲ ಉಪಕರಣಗಳನ್ನು ಒದಗಿಸುತ್ತದೆ.
* ಇಸಿಎ, ಸಿಎಸ್ಎ ಮತ್ತು ಜಾಕ್ಸಾ - ಪ್ರಯೋಗಾಲಯ ಮಾಡ್ಯುಲ್‌ಗಳು, ರೋಬಾಟಿಕ್ ಸಿಸ್ಟಮ್‌ಗಳು, ಮತ್ತು ಸಂಶೋಧನೆಗಳನ್ನು ಒದಗಿಸುತ್ತವೆ. ಈ ರೀತಿ ವಿವಿಧ ದೇಶಗಳು ತಂಡವಾಗಿ ಕಾರ್ಯ ನಿರ್ವಹಿಸುವುದರಿಂದ, ವೈಜ್ಞಾನಿಕ ಅನ್ವೇಷಣೆಗಳು ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ಧಿಸಲು ಸಾಧ್ಯವಾಗುತ್ತದೆ.
ಹೂಡಿಕೆ ಮತ್ತು ಗಗನಯಾತ್ರಿಗಳ ಭಾಗವಹಿಸುವಿಕೆ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳಿಗೆ ನಾಸಾ ಪ್ರತಿ ವರ್ಷವೂ 3 ಬಿಲಿಯನ್ ಡಾಲರ್ (8,500 ಕೋಟಿ ರೂಪಾಯಿ) ಮೊತ್ತವನ್ನು ಹೂಡಿಕೆ ಮಾಡುತ್ತದೆ. ಇದು ಐಎಸ್ಎಸ್‌ನ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಮೂರನೇ ಒಂದು ಭಾಗವಾಗಿದೆ. ಮೇ 2024ರ ವೇಳೆಗೆ, ಐಎಸ್ಎಸ್ 22 ದೇಶಗಳ 283 ಜನರಿಗೆ ವಾಸ್ತವ್ಯ ಕಲ್ಪಿಸಿದೆ. ಅವರಲ್ಲಿ ಗಗನಯಾತ್ರಿಗಳು ಮತ್ತು ಖಾಸಗಿ ಭಾಗೀದಾರರು ಸೇರಿದ್ದಾರೆ. ಇಲ್ಲಿಯ ತನಕ ಭಾರತದ ಪೌರತ್ವ ಹೊಂದಿರುವ ಯಾವುದೇ ಗಗನಯಾತ್ರಿ ಬಾಹ್ಯಾಕಾಶಕ್ಕೆ ತೆರಳಿಲ್ಲವಾದರೂ, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ನಾಸಾದ ಗಗನಯಾತ್ರಿಯಾಗಿದ್ದಾರೆ.
ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್ ಯೋಜನೆಯಲ್ಲಿ ಮೇ 4, 2025ರಲ್ಲಿ ಐಎಸ್ಎಸ್‌ಗೆ ತೆರಳಲಿದ್ದು, ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿದ ಮೊದಲ ಭಾರತೀಯ ವ್ಯಕ್ತಿ ಎನಿಸಲಿದ್ದಾರೆ. ಅಮೆರಿಕಾ (163 ಗಗನಯಾತ್ರಿಗಳು) ಮತ್ತು ರಷ್ಯಾ (57 ಕಾಸ್ಮೋನಾಟ್‌ಗಳು) ಐಎಸ್ಎಸ್‌ನಲ್ಲಿ ಅತ್ಯಧಿಕ ಪಾಲ್ಗೊಳ್ಳುವಿಕೆಯನ್ನು ಹೊಂದಿವೆ. ಗಗನಯಾತ್ರಿಗಳಿಗೆ ನೀಡುವ ಸಮಯಾವಕಾಶ ಆಯಾ ದೇಶ ಹೂಡಿಕೆ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳಲ್ಲಿ ನೀಡುವ ಕೊಡುಗೆಗಳನ್ನು ಅವಲಂಬಿಸಿದೆ. ಉದಾಹರಣೆಗೆ, ಇಎಸ್ಎ ಬಾಹ್ಯಾಕಾಶ ನಿಲ್ದಾಣದ ಬಳಕೆಯಲ್ಲಿ 8.3% ಪಾಲು ಹೊಂದಿದೆ. ಅಂದರೆ, ಪ್ರತಿ ವಾರಕ್ಕೆ ಇಎಸ್ಎ 13 ಗಂಟೆಗಳ ಕ್ರ್ಯೂ ಅವಧಿಯನ್ನು ಪಡೆಯುತ್ತದೆ.
ಐಎಸ್ಎಸ್ ಸಹಯೋಗಗಳು ಮತ್ತು ಖಾಸಗಿ ಯೋಜನೆಗಳು: ಐಎಸ್ಎಸ್ ಎನ್ನುವುದು 15 ದೇಶಗಳ ಜಂಟಿ ಸಹಯೋಗದ ಯೋಜನೆಯಾಗಿದೆ. ನಾಸಾ (ಅಮೆರಿಕಾ), ರಾಸ್‌ಕಾಸ್ಮೋಸ್ (ರಷ್ಯಾ), ಇಎಸ್ಎ (ಯುರೋಪ್), ಜಾಕ್ಸಾ (ಜಪಾನ್), ಮತ್ತು ಸಿಎಸ್ಎ (ಕೆನಡಾ) ಗಳು ಐಎಸ್ಎಸ್‌ಗೆ ಪ್ರಮುಖ ಕೊಡುಗೆ ನೀಡುತ್ತವೆ. ಆಕ್ಸಿಯಮ್ ಸ್ಪೇಸ್‌ನಂತಹ ಸಂಸ್ಥೆಗಳ ಮೂಲಕ, ಖಾಸಗಿ ಗಗನಯಾತ್ರಿಗಳೂ ಸಹ ಐಎಸ್ಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಡಿಯಲ್ಲಿ ಯುಎಇಯಂತಹ ರಾಷ್ಟ್ರಗಳು ಆಗಾಗ ತಮ್ಮ ಗಗನಯಾತ್ರಿಗಳನ್ನು ಕಳುಹಿಸಿಕೊಡುತ್ತವೆ.
ಐಎಸ್ಎಸ್ 2030ರ ತನಕ ಕಾರ್ಯ ನಿರ್ವಹಿಸಲು ಅನುಮತಿಯನ್ನು ಹೊಂದಿದೆ. ಆದರೆ, ರಷ್ಯಾ 2024ರ ಬಳಿಕ ಐಎಸ್ಎಸ್‌ನಿಂದ ಹೊರಬಂದು, 2028ರ ವೇಳೆಗೆ ತನ್ನದೇ ಆದ ರಷ್ಯನ್ ಆರ್ಬಿಟಲ್ ಸ್ಪೇಸ್ ಸ್ಟೇಷನ್ ನಿರ್ಮಿಸುವ ಗುರಿಯನ್ನು ಹೊಂದಿದೆ. 2030ರ ಬಳಿಕ ಐಎಸ್ಎಸ್‌ಗೆ ಏನಾಗಲಿದೆ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ. ಒಂದೋ ಐಎಸ್ಎಸ್ ಅನ್ನು ಕಕ್ಷೆಯಿಂದ ಕೆಳಗಿಳಿಸಬಹುದು. ಅಥವಾ, ಭವಿಷ್ಯದ ವಾಣಿಜ್ಯಿಕ ಬಾಹ್ಯಾಕಾಶ ನಿಲ್ದಾಣದ ರೀತಿಯಲ್ಲಿ ಅದನ್ನು ಮರು ರೂಪಿಸಬಹುದು.
ಐಎಸ್ಎಸ್ ಗಾತ್ರ ಮತ್ತು ವಿನ್ಯಾಸ
ಗಾತ್ರ: ತುದಿಯಿಂದ ತುದಿಗೆ 356 ಅಡಿ (109 ಮೀಟರ್)
ತೂಕ: ಭೇಟಿ ನೀಡುವ ಬಾಹ್ಯಾಕಾಶ ನೌಕೆಗಳ ಹೊರತಾಗಿ, 925,335 ಪೌಂಡ್‌ಗಳು (4,19,725 ಕೆಜಿ)
ಸೌರ ಫಲಕಗಳು: ಒಂದು ಎಕರೆಯಷ್ಟು ವ್ಯಾಪ್ತಿಯನ್ನು ಹೊಂದಿವೆ
ವಾಸ ಯೋಗ್ಯ ವ್ಯಾಪ್ತಿ: 13,696 ಘನ ಅಡಿಗಳು ಸಿಬ್ಬಂದಿಗಳಿಗೆ ಪೂರಕವಾಗಿವೆ.
ವ್ಯವಸ್ಥೆಗಳು: 7 ಮಲಗುವ ಸ್ಥಳಗಳು, 2 ಸ್ನಾನದ ಕೊಠಡಿಗಳು, ಒಂದು ಜಿಮ್ ಮತ್ತು ಭೂಮಿಯ 360 ಡಿಗ್ರಿ ನೋಟವನ್ನು ಒದಗಿಸುವ ಒಂದು ಗುಮ್ಮಟವನ್ನು ಹೊಂದಿದೆ.
ಐಎಸ್ಎಸ್ ಕಕ್ಷೆ ಮತ್ತು ನೋಟ
ಎತ್ತರ: ಭೂಮಿಯಿಂದ 250 ಮೈಲಿ ಎತ್ತರದಲ್ಲಿ (402 ಕಿಲೋಮೀಟರ್)
ಕಕ್ಷೀಯ ವೇಗ: ಪ್ರತಿ ಗಂಟೆಗೆ 17,500 ಮೈಲಿ (ಪ್ರತಿ ಗಂಟೆಗೆ 28,000 ಕಿಲೋಮೀಟರ್). ಐಎಸ್ಎಸ್ ಭೂಮಿಯ ಸುತ್ತಲೂ ಪ್ರತಿ 90 ನಿಮಿಷಗಳಿಗೆ ಒಂದು ಪರಿಭ್ರಮಣೆಯನ್ನು ಪೂರ್ಣಗೊಳಿಸುತ್ತದೆ.
ಪ್ರತಿ ದಿನವೂ ಕ್ರಮಿಸುವ ಅಂತರ: ಭೂಮಿಯಿಂದ ಚಂದ್ರನಲ್ಲಿಗೆ ತೆರಳಿ, ಅಲ್ಲಿಂದ ಮರಳಿ ಭೂಮಿಗೆ ತಲುಪುವಷ್ಟು ಅಂತರ!
ವೀಕ್ಷಣಾ ಸಾಧ್ಯತೆ: ಮುಸ್ಸಂಜೆ ಅಥವಾ ಮುಂಜಾನೆಯ ಸಮಯದಲ್ಲಿ ಐಎಸ್ಎಸ್ ಪ್ರಕಾಶಮಾನವಾಗಿ ಸಂಚರಿಸುವ ಚುಕ್ಕಿಯಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಇದು ಶುಕ್ರ ಗ್ರಹದಷ್ಟು ಪ್ರಕಾಶಮಾನವಾಗಿ ಕಾಣುತ್ತದೆ.
ಗಗನಯಾತ್ರಿಗಳು ಹೇಗೆ ಐಎಸ್ಎಸ್‌ಗೆ ತೆರಳುತ್ತಾರೆ?: ಗಗನಯಾತ್ರಿಗಳು ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಅಥವಾ ರಷ್ಯಾದ ಸೊಯುಜ಼್ ಬಾಹ್ಯಾಕಾಶ ನೌಕೆಯನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಾರೆ. 2011ಕ್ಕೂ ಮುನ್ನ, ನಾಸಾದ ಸ್ಪೇಸ್ ಶಟಲ್ ಯೋಜನೆ ಗಗನಯಾತ್ರಿಗಳ ಪ್ರಾಥಮಿಕ ಸಾಗಾಣಿಕಾ ವ್ಯವಸ್ಥೆಯಾಗಿತ್ತು. ಅದು ಕೊನೆಗೊಂಡ ಬಳಿಕ, 2020ರಲ್ಲಿ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕಾರ್ಯಾಚರಣೆ ಆರಂಭಿಸುವ ತನಕ ರಷ್ಯಾದ ಸೊಯುಜ್ ಬಾಹ್ಯಾಕಾಶ ನೌಕೆ ಏಕೈಕ ಆಯ್ಕೆಯಾಗಿತ್ತು. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಅಭಿವೃದ್ಧಿ ಹೊಂದುತ್ತಿರುವ ಇನ್ನೊಂದು ಬಾಹ್ಯಾಕಾಶ ನೌಕೆಯಾಗಿದ್ದು, ಇದರ ಅಭಿವೃದ್ಧಿ ಬಹಳಷ್ಟು ವಿಳಂಬವನ್ನು ಎದುರಿಸಿದೆ. ಸುನಿತಾ ವಿಲಿಯಮ್ಸ್ ಅವರನ್ನು ಒಳಗೊಂಡ ಯೋಜನೆಯಲ್ಲೂ ಸ್ಟಾರ್‌ಲೈನರ್ ಹಿನ್ನಡೆ ಅನುಭವಿಸಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಏನು ಮಾಡುತ್ತಾರೆ?: ಗಗನಯಾತ್ರಿಗಳು ಅಂದಾಜು ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಮಯ ಕಳೆಯುತ್ತಾರೆ. ಅವರು ವೈಜ್ಞಾನಿಕ ಸಂಶೋಧನೆಗಳು, ನಿಲ್ದಾಣ ನಿರ್ವಹಣೆ ಮತ್ತು ಬಾಹ್ಯಾಕಾಶ ನಡಿಗೆಗಳನ್ನು (ಸ್ಪೇಸ್ ವಾಕ್) ನಡೆಸುತ್ತಾರೆ. ಅವರ ಪ್ರಮುಖ ಚಟುವಟಿಕೆಗಳೆಂದರೆ:
* ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ದೈಹಿಕ ಸಾಮರ್ಥ್ಯವನ್ನು ರಕ್ಷಿಸಿಕೊಳ್ಳಲು ಪ್ರತಿದಿನವೂ 2 ಗಂಟೆಗಳ ಕಾಲ ವ್ಯಾಯಾಮ ನಡೆಸುತ್ತಾರೆ.
* ಶೈಕ್ಷಣಿಕ ಮತ್ತು ಮಾಧ್ಯಮ ಔಟ್ ರೀಚ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
* ಅನುಭವಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ.
ಸಣ್ಣ ಅವಧಿಯ ಭೇಟಿಗಳಲ್ಲಿ, ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ನೌಕೆಯ ಒಳಗೂ ನಿದ್ರಿಸಬಹುದು. ಅಥವಾ, ಬಾಹ್ಯಾಕಾಶ ನಿಲ್ದಾಣದೊಳಗೆ ಬೇರೆ ಜಾಗವನ್ನು ಹೊಂದಬಹುದು. ಅವರು ತಾವು ತೇಲುವುದನ್ನು ತಡೆಯಲು ತಮ್ಮನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಐಎಸ್ಎಸ್ ನಿರ್ವಹಣೆ ಮತ್ತು ದುರಸ್ತಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆ ನಡೆಸುವುದು ಮತ್ತು ನಿಲ್ದಾಣದ ನಿರ್ವಹಣೆ ಗಗನಯಾತ್ರಿಗಳ ಜವಾಬ್ದಾರಿಯಾಗಿದೆ. ಕೆಲವೊಂದು ಬಾರಿ, ಬಾಹ್ಯಾಕಾಶ ನಿಲ್ದಾಣ ಅತಿಯಾಗಿ ಬಿಸಿಯಾಗದಂತೆ ತಡೆಯಲು ಅವಶ್ಯಕವಾದ ಅಮೋನಿಯಾ ಕೂಲಿಂಗ್ ವ್ಯವಸ್ಥೆಯ ದುರಸ್ತಿಯನ್ನೂ ಗಗನಯಾತ್ರಿಗಳು ನಡೆಸುತ್ತಾರೆ.
ಐಎಸ್ಎಸ್‌ನಲ್ಲಿ ರಷ್ಯಾದ ಪಾತ್ರ: ರಷ್ಯಾ ಐಎಸ್ಎಸ್‌ನಲ್ಲಿ ಪ್ರಮುಖ ಸಹಯೋಗಿಯಾಗಿದೆ. ಆದರೆ, ಫೆಬ್ರವರಿ 2022ರಲ್ಲಿ ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಸಂಬಂಧಗಳು ಬದಲಾಗುತ್ತಾ ಬಂದವು. ಬಹಳಷ್ಟು ಬಾಹ್ಯಾಕಾಶ ಸಹಭಾಗಿತ್ವಗಳು ಯುದ್ಧದ ಪರಿಣಾಮವಾಗಿ ಕೊನೆಗೊಂಡರೂ, ನಾಸಾ ಮತ್ತು ರಾಸ್‌ಕಾಸ್ಮೋಸ್ ಸಂಸ್ಥೆಗಳು ಐಎಸ್ಎಸ್ ಯೋಜನೆಯಲ್ಲಿ ಜೊತೆಯಾಗಿ ಕಾರ್ಯಾಚರಿಸುತ್ತಿವೆ. ಐಎಸ್ಎಸ್ ಒಂದು ಪರಸ್ಪರ ಅವಲಂಬಿತ ವ್ಯವಸ್ಥೆಯಾಗಿದ್ದು, ಅದನ್ನು ಅಮೆರಿಕಾ ಮತ್ತು ರಷ್ಯಾದ ಭಾಗ ಎಂದು ವಿಭಜಿಸಲು ಸಾಧ್ಯವಿಲ್ಲ. ಅಮೆರಿಕಾ ಐಎಸ್ಎಸ್‌ಗೆ ಶಕ್ತಿಯನ್ನು ಒದಗಿಸಿದರೆ, ರಷ್ಯಾ ಪ್ರೊಪಲ್ಷನ್ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಅಮೆರಿಕಾದ ಬಾಹ್ಯಾಕಾಶ ನೌಕೆ ಸ್ವತಂತ್ರವಾಗಿ ಕಕ್ಷೀಯ ಸರಿಹೊಂದುವಿಕೆಯನ್ನು ನಡೆಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ.
ಒಟ್ಟಾರೆಯಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಜಾಗತಿಕ ಸಹಕಾರ, ಆಧುನಿಕ ವಿಜ್ಞಾನ, ತಂತ್ರಜ್ಞಾನ, ಮತ್ತು ಬಾಹ್ಯಾಕಾಶ ಅನ್ವೇಷಣೆಯ ಸಂಕೇತವಾಗಿದೆ. ಒಂದು ವೇಳೆ ಭವಿಷ್ಯದಲ್ಲಿ ಐಎಸ್ಎಸ್ ಅನ್ನು ಕೆಳಗಿಳಿಸಿದರೆ, ಅಥವಾ ಮರುಬಳಕೆ ಮಾಡಿದರೆ, ಅಥವಾ ಅದರ ಬದಲು ಬೇರೆ ವಾಣಿಜ್ಯಿಕ ಬಾಹ್ಯಾಕಾಶ ನಿಲ್ದಾಣವನ್ನು ಅಳವಡಿಸಿದರೂ, ಅತ್ಯಂತ ಸುದೀರ್ಘ ಕಾಲ ಬಾಹ್ಯಾಕಾಶದಲ್ಲಿ ಮಾನವರಿಗೆ ನೆಲೆಯಾಗಿದ್ದ ಐಎಸ್ಎಸ್ ಮುಂದಿನ ತಲೆಮಾರುಗಳಿಗೂ ಸ್ಫೂರ್ತಿ ನೀಡಲಿದೆ.
ಏರೋ ಇಂಡಿಯಾ 2025: ಜಾಗತಿಕ ಅವಕಾಶಗಳ ರನ್‌ವೇ, ರೋಮಾಂಚಕ ವೈಮಾನಿಕ ಪ್ರದರ್ಶನ
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.