ಚಂದ್ರನ ಮೇಲೆ ನಾಳೆ ರಾಕೆಟ್‌ ಕ್ರ್ಯಾಶ್‌; 90 ಅಡಿ ಅಗಲ, 16 ಅಡಿ ಆಳ ಕುಳಿ ಸೃಷ್ಟಿ ಸಂಭವ

Published : Aug 04, 2026, 09:07 AM IST
SpaceX rocket crashes on the moon

ಸಾರಾಂಶ

ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್‌ಎಕ್ಸ್‌ ಫಾಲ್ಕನ್‌-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅದರ ಮೇಲೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಘಟನೆಯು ಉದ್ದೇಶಪೂರ್ವಕವಲ್ಲದಿದ್ದರೂ, ಚಂದ್ರನ ಮೇಲೆ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಅದರ ಮೇಲ್ಮೈ ಧೂಳು ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಒಂದು ಉಪಯುಕ್ತ ಅವಕಾಶವಾಗಿದೆ.

ವಾಷಿಂಗ್ಟನ್‌: ಸುಮಾರು 1 ವರ್ಷ ಬಾಹ್ಯಾಕಾಶದಲ್ಲಿ ಅಲೆದಾಡಿದ್ದ ಸ್ಪೇಸ್‌ಎಕ್ಸ್‌ ರಾಕೆಟ್‌ನ ಭಾಗವೊಂದು ಚಂದ್ರನ ಮೇಲೆ ಬುಧವಾರ ಅಪ್ಪಳಿಸುವ ಸಂಭವವಿದೆ. ಇದು ಉದ್ದೇಶಪೂರ್ವಕ ಪ್ರಕ್ರಿಯೆಯಲ್ಲ. ಇದರಿಂದ ಭೂಮಿಗಾಗಲಿ, ಚಂದ್ರನ ಮೇಲಿನ ಕಾರ್ಯಾಚರಣೆಗಳಿಗಾಗಲೀ ಹಾನಿ ಆಗುವುದಿಲ್ಲವಾದ್ದರಿಂದ ವಿಜ್ಞಾನ ಲೋಕ ಈ ಬೆಳವಣಿಗೆ ಬಗ್ಗೆ ಆತಂಕ ಪಡುವ ಬದಲು ಅದನ್ನು ಅಧ್ಯಯನಕ್ಕೆ ಬಳಸಿಕೊಳ್ಳುವ ನಿರೀಕ್ಷೆ ಇದೆ.

ಫಾಲ್ಕನ್‌-9 ಪಯಣ

2025ರ ಜ.15ರಂದು ಫೈರ್‌ಫ್ಲೈ ಏರೋಸ್ಪೇಸ್‌ನ ''ಬ್ಲೂ ಘೋಸ್ಟ್'' ಲ್ಯಾಂಡರ್ ಮತ್ತು ಜಪಾನ್‌ನ ಐಸ್ಪೇಸ್ ಹಕುಟೊ-ಆರ್ ಲ್ಯಾಂಡರ್‌ ಅನ್ನು ಹೊತ್ತು ಚಂದ್ರನಂಗಳಕ್ಕೆ ಹೋಗಿದ್ದ ಫಾಲ್ಕನ್‌-9 ರಾಕೆಟ್‌, ಎರಡೂ ಬಾಹ್ಯಾಕಾಶ ನೌಕೆಗಳನ್ನು ಅವುಗಳ ಗಮ್ಯಕ್ಕೆ ತಲುಪಿಸಿತ್ತು. ಪರಿಣಾಮ ಪೇಲೋಡ್‌ ಹೊತ್ತೊಯ್ದಿದ್ದ ಭಾಗದ ಕೆಲಸ ಮುಗಿದಿತ್ತು. ಭೂಮಿಗೆ ಮರಳಲು ಅಥವಾ ಸೂರ್ಯನ ಸುತ್ತಲಿರುವ ಕಕ್ಷೆಯತ್ತ ಹೋಗಲು ಬೇಕಾದಷ್ಟು ಇಂಧನ ಅದರಲ್ಲಿ ಇರದ ಕಾರಣ ಭೂಮಿ, ಚಂದ್ರ, ಸೂರ್ಯನ ಗುರುತ್ವಾಕರ್ಷಣೆಯ ನಡುವೆ ಸಿಲುಕಿ ಬಾಹ್ಯಾಕಾಶದಲ್ಲಿ ಅಲೆಯುತ್ತಿತ್ತು. ಇದೀಗ ಅದನ್ನು ಚಂದ್ರನ ಗುರುತ್ವಾಕರ್ಷಣಾ ಶಕ್ತಿ ತನ್ನೆಡೆಗೆ ಬಲವಾಗಿ ಸೆಳೆಯುತ್ತಿದ್ದು, ಬುಧವಾರ ಅಪ್ಪಳಿಸುವ ನಿರೀಕ್ಷೆ ಇದೆ.

ಅಪ್ಪಳಿಸುವಿಕೆ

ಗಂಟೆಗೆ 8,700 ಕಿ.ಮೀ.(ಭೂಮಿಯಲ್ಲಿ ಶಬ್ದದ ಗತಿಗಿಂತ 7 ಪಟ್ಟು ಹೆಚ್ಚು) ವೇಗದಲ್ಲಿ ಚಲಿಸುವ ರಾಕೆಟ್‌, ಚಂದ್ರನಲ್ಲಿರುವ ಐನ್‌ಸ್ಟೈನ್ ಕುಳಿಯ ಬಳಿ ಅಪ್ಪಳಿಸುವ ನಿರೀಕ್ಷೆ ಇದೆ. ಪರಿಣಾಮ, 90 ಅಡಿ ಅಗಲ ಹಾಗೂ 16 ಅಡಿ ಆಳದ ಕುಳಿ ಸೃಷ್ಟಿಯಾಗುವ ಅಂದಾಜಿದೆ. ಚಂದ್ರನ ಮೈಗೆ ಇದು ಅಪ್ಪಳಿಸುವ ವೇಳೆ ಆ ಪ್ರದೇಶದಲ್ಲಿ ಬೆಳಕಿರುವ ಕಾರಣ, ವಿಜ್ಞಾನಿಗಳಿಗೆ ಈ ಪ್ರಕ್ರಿಯೆಯನ್ನು ವೀಕ್ಷಿಸುವುದು ಸುಲಭವಾಗಲಿದೆ.

ಉಪಯೋಗವೇನು?

ನೈಸರ್ಗಿಕವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯು ವಿಜ್ಞಾನಿಗಳ ಪಾಲಿಗೆ ಮಹತ್ವದ್ದಾಗಿದೆ. ರಾಕೆಟ್‌ನ ಗಾತ್ರ, ತೂಕ, ವೇಗ, ಅದು ಅಪ್ಪಳಿಸಲಿರುವ ಸಮಯ ಇತ್ಯಾದಿಗಳು ವಿದಿತ. ಹೀಗಿರುವಾಗ, ಚಂದ್ರನಂಗಳದಲ್ಲಿ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ, ವಸ್ತುವೊಂದು ಅಪ್ಪಳಿಸಿದಾಗ ಚಂದ್ರನ ಮೇಲಿನ ಧೂಳು ಹೇಗೆ ವರ್ತಿಸುತ್ತದೆ ಅಥವಾ ಎಷ್ಟು ಎತ್ತರಕ್ಕೆ ಚಿಮ್ಮುತ್ತದೆ, ಅದರ ಪರಿಣಾಮವೇನಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಇದು ಸಹಕಾರಿಯಾಗಲಿದೆ.

ಮೊದಲ ಬಾರಿ ಅಲ್ಲ:

ಚಂದ್ರನ ಮೇಲೆ ರಾಕೆಟ್‌ ಅಪ್ಪಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಪೋಲೋ ಮಿಷನ್‌ ಭಾಗವಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರಕಂಪನವನ್ನು ಅಧ್ಯಯನ ಮಾಡಲು ರಾಕೆಟ್‌ನ ಭಾಗವೊಂದು ಉದ್ದೇಶಪೂರ್ವಕವಾಗಿ ಅಪ್ಪಳಿಸುವಂತೆ ಮಾಡಿತ್ತು. 2009ರಲ್ಲಿ, ನೀರಿನ ಮಂಜುಗಡ್ಡೆಯನ್ನು ಹುಡುಕುವ ಉದ್ದೇಶದಿಂದಲೂ ಇಂಥ ಪ್ರಕ್ರಿಯೆ ನಡೆಸಲಾಗಿತ್ತು. 2022ರಲ್ಲಿ, ರಾಕೆಟ್‌ನ ಭಾಗವೊಂದು ಚಂದ್ರನಿಗೆ ಅಪ್ಪಳಿಸಿತ್ತು. ಚಂದ್ರನ ಮೇಲ್ಮೈಯಿಂದ ಧೂಳು ಮತ್ತು ಅವಶೇಷಗಳನ್ನು ಮೇಲಕ್ಕೆಬ್ಬಿಸುವ ಉದ್ದೇಶದಿಂದ 2008ರಲ್ಲಿ ''ಚಂದ್ರಯಾನ-1'' ಆರ್ಬಿಟರ್‌ ಸಹಾಯದಿಂದ 32 ಕೆ.ಜಿ.ಯ ಕ್ಯೂಬ್‌ ಒಂದನ್ನು ಅಪ್ಪಳಿಸಲಾಗಿತ್ತು. 2019ರಲ್ಲಿ ಉಡಾವಣೆಯಾಗಿದ್ದ ವಿಕ್ರಂ ಲ್ಯಾಂಡರ್‌, ತಾಂತ್ರಿಕ ದೋಷದಿಂದ ಕ್ರ್ಯಾಶ್‌ ಆಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಬಾನಂಗಳದಲ್ಲಿ ಅಪರೂಪದ ಅತಿಥಿಯ ಆಗಮನ! 1873ರಲ್ಲಿ ಪತ್ತೆಯಾಗಿದ್ದ ಧೂಮಕೇತು ಭೂಮಿಗೆ ಅತ್ಯಂತ ಸಮೀಪ!

ಅಪಾಯವಿಲ್ಲವೇ?

ರಾಕೆಟ್‌ ಅಪ್ಪಳಿಸುವಿಕೆಯಿಂದ ಸದ್ಯ ಯಾವುದೇ ಯೋಜನೆಗಳಿಗೆ ಹಾನಿಯಿಲ್ಲ. ಆದರೆ ಭೂಮಿಯಿಂದ ಕಳಿಸಲ್ಪಟ್ಟ ರಾಕೆಟ್‌ನ ಭಾಗಗಳು ಹೀಗೆ ಚಂದ್ರನ ಮೇಲೆ ಸ್ಥಾಪಿತವಾದರೆ, ಬಾಹ್ಯಾಕಾಶದಲ್ಲಿನ ತ್ಯಾಜ್ಯದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮುಂದಿನ ಯೋಜನೆಗಳಿಗೆ ಅಡಚಣೆಯಾಗುವ ಅಪಾಯ ಇದ್ದೇಇದೆ.

ಇದನ್ನೂ ಓದಿ: ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!
ಚಿಟ್ಟೆಗಳಿಗೆ ಕಂಬಳಿಹುಳು ಆಗಿದ್ದಾಗಿನ ಜೀವನದ ನೆನಪಿರುತ್ತದೆಯೇ? 10 ವರ್ಷದ ಬಾಲಕನಿಂದ ಅಚ್ಚರಿ ಸಂಶೋಧನೆ!