ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!

Published : Aug 03, 2026, 07:06 PM IST
KMF Milk Price Hike

ಸಾರಾಂಶ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಂಗಳೂರು (ಆ.3): ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ವಿಲೇವಾರಿಯಾಗಿ ಪರಿಸರಕ್ಕೆ ಮಾರಕವಾಗುತ್ತಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು (ಮೈಕ್ರೋ ಪ್ಲಾಸ್ಟಿಕ್ ಕವರ್‌ಗಳು) ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಬೆಂಗಳೂರಿನ ಪ್ರತಿಷ್ಠಿತ 'ಭಾರತೀಯ ವಿಜ್ಞಾನ ಸಂಸ್ಥೆ'ಯ (IISc) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ಈ ತಂತ್ರಜ್ಞಾನದ ವಿಶೇಷತೆಯೆಂದರೆ, ಇದರಿಂದ ತಯಾರಾಗುವ ಪ್ಲಾಸ್ಟಿಕ್ ಅನ್ನು ಗುಣಮಟ್ಟ ಹಾಗೂ ಗಟ್ಟಿತನ ಕುಂದದಂತೆ ಹಲವು ಬಾರಿ ಮರುಬಳಕೆ (Recycle) ಮಾಡಬಹುದಾಗಿದೆ.

ದೇಶದಲ್ಲಿ ಪ್ರತಿದಿನ 12 ಕೋಟಿ ಹಾಲಿನ ಪ್ಲಾಸ್ಟಿಕ್ ಚೀಲಗಳ ತ್ಯಾಜ್ಯ!

'ಚಿಂತನ್ ಎನ್ವಿರಾನ್‌ಮೆಂಟಲ್ ರಿಸರ್ಚ್ ಆಂಡ್ ಆಕ್ಷನ್ ಗ್ರೂಪ್' ಸಂಸ್ಥೆಯ 2025ರ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಅಂದಾಜು 10 ರಿಂದ 12 ಕೋಟಿ ಹಾಲಿನ ಪ್ಲಾಸ್ಟಿಕ್ ಚೀಲಗಳು ತ್ಯಾಜ್ಯವಾಗಿ ಹೊರಬರುತ್ತಿವೆ. ಅಂದರೆ ವರ್ಷಕ್ಕೆ ಬರೋಬ್ಬರಿ 3,650 ರಿಂದ 4,380 ಕೋಟಿಯಷ್ಟು ಚೀಲಗಳು ಕಸದ ಬುಟ್ಟಿ ಸೇರುತ್ತಿವೆ.

ಹಾಲಿನ ಪ್ಯಾಕೆಟ್‌ಗಳನ್ನು ಸಾಮಾನ್ಯವಾಗಿ 'ಪಾಲಿಎಥಿಲಿನ್' (PE) ನಿಂದ ತಯಾರಿಸಲಾಗುತ್ತದೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿದ್ದರೂ, ಇವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಇವು ಬಹುತೇಕ ಕಸದ ರಾಶಿ, ಜಲಮೂಲಗಳು ಅಥವಾ ಎಲ್ಲೆಂದರಲ್ಲಿ ಬಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದವು. ಜತೆಗೆ, ಸಾಂಪ್ರದಾಯಿಕ ವಿಧಾನದಲ್ಲಿ ಇವುಗಳನ್ನು ಮರುಬಳಕೆ ಮಾಡಿದಾಗ ಪ್ರತಿ ಬಾರಿಯೂ ಪ್ಲಾಸ್ಟಿಕ್‌ನ ಗಟ್ಟಿತನ ಹಾಗೂ ಗುಣಮಟ್ಟ ಕಡಿಮೆಯಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಐಐಎಸ್‌ಸಿಯ ಹೊಸ ತಂತ್ರಜ್ಞಾನ ಪರಿಹಾರ ನೀಡಿದೆ.

ಹೇಗೆ ಕೆಲಸ ಮಾಡಲಿದೆ ಈ ತಂತ್ರಜ್ಞಾನ?

ಐಐಎಸ್‌ಸಿಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸೂರ್ಯಸಾರಥಿ ಬೋಸ್ ಅವರ ನೇತೃತ್ವದಲ್ಲಿ, ಸಂಶೋಧಕರಾದ ಭಾಸ್ಕರ್ ಬೋಹ್ರಾ ಮತ್ತು ದೇಬಾಶ್ರಿತಾ ಕುಂಡು ಅವರನ್ನೊಳಗೊಂಡ ತಂಡ ಈ ಸಂಶೋಧನೆ ನಡೆಸಿದೆ. ಶಾಂಪೂ ಹಾಗೂ ಎಣ್ಣೆ ಬಾಟಲಿಗಳಲ್ಲಿ ಬಳಸಲಾಗುವ 'ಪಾಲಿಪ್ರೊಪಿಲೀನ್' ಪ್ಲಾಸ್ಟಿಕ್‌ನಿಂದ ವಿಶೇಷವಾಗಿ ರೂಪಿಸಲಾದ 'ಪಾಲಿಪ್ರೊಪಿಲೀನ್ ವಿಟ್ರಿಮರ್' (Polypropylene Vitrimer) ನೊಂದಿಗೆ ಹಾಲಿನ ಪ್ಲಾಸ್ಟಿಕ್ ಚೀಲಗಳನ್ನು ವಿಜ್ಞಾನಿಗಳು ಮಿಶ್ರಣ ಮಾಡಿದ್ದಾರೆ.

ಸಾಧಾರಣವಾಗಿ ಒಂದಕ್ಕೊಂದು ಬೆರೆಯದ ಎರಡು ವಿಭಿನ್ನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಒಂದಾಗಿಸಲು ಈ 'ವಿಟ್ರಿಮರ್' ಬೈಂಡರ್ ಮತ್ತು ಬಲವರ್ಧಕವಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣದಿಂದ ತಯಾರಾದ ಪ್ಲಾಸ್ಟಿಕ್‌ನ ವಿಸ್ತರಣಾ ಸಾಮರ್ಥ್ಯ (Tensile Strength) ಸಾಂಪ್ರದಾಯಿಕ ಮರುಬಳಕೆಯ ಪ್ಲಾಸ್ಟಿಕ್‌ಗಿಂತ ದುಪ್ಪಟ್ಟಾಗಿದೆ. ಸತತ 3 ಬಾರಿ ಮರುಬಳಕೆ ಮಾಡಿದ ಮೇಲೆಯೂ ಇದು ತನ್ನ ಯಾಂತ್ರಿಕ ಗುಣಮಟ್ಟ ಹಾಗೂ ಗಟ್ಟಿತನವನ್ನು ಉಳಿಸಿಕೊಂಡಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಕಾಂಕ್ರೀಟ್‌ಗೆ ಪರ್ಯಾಯವಾಗಿ ಬಳಕೆಯಾಗಲಿದೆ ಪ್ಲಾಸ್ಟಿಕ್!

ಈ ಕುರಿತು ಮಾತನಾಡಿದ ಪ್ರೊಫೆಸರ್ ಸೂರ್ಯಸಾರಥಿ ಬೋಸ್, ಈ ತಂತ್ರಜ್ಞಾನಕ್ಕೆ ಪ್ಲಾಸ್ಟಿಕ್ ಮೂಲ ಯಾವುದು ಎಂಬುದು ಮುಖ್ಯವಾಗುವುದಿಲ್ಲ. ಯಾವುದೇ ಬ್ರ್ಯಾಂಡ್‌ನ ಹಾಲಿನ ಪ್ಲಾಸ್ಟಿಕ್ ಚೀಲಗಳನ್ನಾದರೂ ಇದಕ್ಕೆ ಬಳಸಬಹುದು. ಈ ರೀತಿ ತಯಾರಾದ ಅಂತಿಮ ವಸ್ತುವಿನಿಂದ 3D ಪ್ರಿಂಟಿಂಗ್ ಮೂಲಕ ಯಾವುದೇ ವಸ್ತುವನ್ನು ವಿನ್ಯಾಸಗೊಳಿಸಬಹುದು. ಪ್ರಸ್ತುತ ಕಾಂಕ್ರೀಟ್‌ನಿಂದ ತಯಾರಿಸಲಾಗುತ್ತಿರುವ ವಸ್ತುಗಳನ್ನು ಸಹ ಈ ಪ್ಲಾಸ್ಟಿಕ್‌ನಿಂದ ತಯಾರಿಸಲು ಸಾಧ್ಯವಿದೆ ಎಂದಿದ್ದಾರೆ. ಈ ಹೊಸ ಮಾದರಿಯ ಇಂಜಿನಿಯರಿಂಗ್ ಪ್ಲಾಸ್ಟಿಕ್ ಬಳಸಿ ರಸ್ತೆ ಡಿವೈಡರ್‌ಗಳು, ಬಸ್ ತಂಗುದಾಣಗಳು (Bus Shelters) ಮತ್ತು ಲಾಜಿಸ್ಟಿಕ್ಸ್ ಕಂಟೇನರ್‌ಗಳನ್ನು ತಯಾರಿಸಬಹುದಾಗಿದೆ.

ತ್ಯಾಜ್ಯ ವಿಂಗಡಣೆಗೆ ಮನವಿ: ಮರುಬಳಕೆ ಮಾಡುವ ಪ್ಲಾಸ್ಟಿಕ್‌ನ ಗುಣಮಟ್ಟ ಹೆಚ್ಚಾಗಬೇಕಾದರೆ, ಸಾರ್ವಜನಿಕರು ಹಾಗೂ ಆಡಳಿತ ಮಂಡಳಿಗಳು ಹಸಿ ಕಸ ಮತ್ತು ಬಯೋಮೆಡಿಕಲ್ (ವೈದ್ಯಕೀಯ) ತ್ಯಾಜ್ಯದಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವುದು ಅತ್ಯಗತ್ಯ ಎಂದು ಪ್ರೊ. ಬೋಸ್ ಪ್ರತಿಪಾದಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಚಿಟ್ಟೆಗಳಿಗೆ ಕಂಬಳಿಹುಳು ಆಗಿದ್ದಾಗಿನ ಜೀವನದ ನೆನಪಿರುತ್ತದೆಯೇ? 10 ವರ್ಷದ ಬಾಲಕನಿಂದ ಅಚ್ಚರಿ ಸಂಶೋಧನೆ!
ಅಳಿವಿನ ಅಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು: ವಿಷದ ರಕ್ಷಣೆ ಕಳೆದುಕೊಳ್ಳುತ್ತಿರುವ ಉಭಯಚರಗಳ ಆತಂಕಕಾರಿ ಕಥೆ!