
ಮಾಸ್ಕೋ: ವಿಜ್ಞಾನಿಗಳು ಭವಿಷ್ಯದಲ್ಲಿ ವಯಸ್ಸಾಗುವಿಕೆಗೆ ಕಾರಣವಾಗುವ ಪ್ರತಿಯೊಂದು ಪ್ರಮುಖ ಜೈವಿಕ ಪ್ರಕ್ರಿಯೆಗಳನ್ನು ದೇಹದಿಂದ ಸಂಪೂರ್ಣವಾಗಿ ತಡೆಗಟ್ಟಲು ಯಶಸ್ವಿಯಾದರೆ, ಮಾನವನು ಎಷ್ಟು ವರ್ಷಗಳ ಕಾಲ ಜೀವಿಸಬಹುದು? ಈ ಅತ್ಯಂತ ಸೈದ್ಧಾಂತಿಕ ಹಾಗೂ ಕುತೂಹಲಕಾರಿ ಪ್ರಶ್ನೆಗೆ ರಷ್ಯಾದ ಸ್ಕೋಲ್ಕೋವೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಗಣಿತದ ಮಾದರಿಯೊಂದರ ಮೂಲಕ ಉತ್ತರ ಕಂಡುಕೊಂಡಿದ್ದಾರೆ.
ಅಧ್ಯಯನದ ಪ್ರಕಾರ, ವಯಸ್ಸಾಗುವಿಕೆಯ ಎಲ್ಲಾ ಇತರ ಅಂಶಗಳನ್ನು ತೆಗೆದುಹಾಕಿದರೂ ಸಹ, ಜೀವಿತಾವಧಿಯಲ್ಲಿ ಜೀವಕೋಶಗಳಲ್ಲಿ ಸಂಗ್ರಹವಾಗುವ 'ದೈಹಿಕ ರೂಪಾಂತರಗಳು' ಮಾನವನ ಆಯುಷ್ಯದ ಮೇಲೆ ನಿರ್ಧಿಷ್ಟವಾದ ಸಮಯ ವಿಧಿಸುತ್ತವೆ. ಈ ಸನ್ನಿವೇಶದಲ್ಲೂ ಸರಾಸರಿ ಮಾನವ ಜೀವಿತಾವಧಿಯು 146 ರಿಂದ 194 ವರ್ಷಗಳಿಗೆ ಸೀಮಿತವಾಗಿರುತ್ತದೆ!
ದೈಹಿಕ ರೂಪಾಂತರಗಳು ಎಂದರೆ ಗರ್ಭಧಾರಣೆಯ ನಂತರ ಮಾನವ ದೇಹದ ಜೀವಕೋಶಗಳಲ್ಲಿ ಸಂಭವಿಸುವ ಡಿಎನ್‌ಎ (DNA) ಬದಲಾವಣೆಗಳು. ಇದು ವಂಶಪಾರಂಪರ್ಯವಲ್ಲ.
ಜೀವಕೋಶ ವಿಭಜನೆಯ ವೇಳೆ ಸಂಭವಿಸುವ ಸಣ್ಣ ದೋಷಗಳು ಅಥವಾ ಸರಿಪಡಿಸಲಾಗದ ಜೀನೋಮ್ ಹಾನಿಯಿಂದಾಗಿ ದೇಹದ ಜೀವಕೋಶಗಳು ಜೀವಿತಾವಧಿಯಲ್ಲಿ ಈ ದೋಷಗಳನ್ನು ಪಡೆದುಕೊಳ್ಳುತ್ತವೆ. ಇದರ ಪರಿಣಾಮ ವಯಸ್ಸಾದಂತೆ ಈ ರೂಪಾಂತರಗಳು ಹೆಚ್ಚಿ, ಜೀನೋಮ್ ಅಸ್ಥಿರತೆ ಹಾಗೂ ವೃದ್ಧಾಪ್ಯದ ಕಾಯಿಲೆಗಳಿಗೆ ಕಾರಣವಾಗುತ್ತವೆ.
ವಯಸ್ಸಾಗುವಿಕೆಯು ಜೀನೋಮಿಕ್ ಅಸ್ಥಿರತೆ, ಸೆಲ್ಯುಲಾರ್ ವೃದ್ಧಾಪ್ಯ, ಮೈಟೊಕಾಂಡ್ರಿಯಾದ ಕುಸಿತ ಹೀಗೆ ಹಲವು ಜೈವಿಕ ಬದಲಾವಣೆಗಳ ಸಂಕೀರ್ಣ ಸರಣಿಯಾಗಿದೆ. ಸಂಶೋಧಕರು ಈ ಎಲ್ಲಾ ಬಾಹ್ಯ ವಯಸ್ಸಾಗುವಿಕೆಯ ಅಂಶಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಗಣಿತದ ಮಾದರಿಯನ್ನು ರೂಪಿಸಿದರು.
ಅವರು ಮಾನವ ದೇಹವನ್ನು ವಿವಿಧ ಅಂಗಗಳ ವ್ಯವಸ್ಥೆಯಾಗಿ ಪರಿಗಣಿಸಿ, ಕೋಶ ವಿಭಜನೆಯ ದರ ಹಾಗೂ ಅಂಗಗಳ ವೈಫಲ್ಯದ ಸಾಮರ್ಥ್ಯವನ್ನು ವಿಶ್ಲೇಷಿಸಿದರು. ಈ ಮಾದರಿಯಲ್ಲಿ ಹಿನ್ನೆಲೆ ಮರಣದ ದರವನ್ನು 30 ವರ್ಷದ ಯುವಕರ ಮಟ್ಟಕ್ಕೆ ಸ್ಥಿರಗೊಳಿಸಲಾಗಿತ್ತು.
ಅಧ್ಯಯನದಲ್ಲಿ ತಿಳಿದುಬಂದ ಅತ್ಯಂತ ಪ್ರಮುಖ ವಿಚಾರವೆಂದರೆ, ದೇಹದ ಎಲ್ಲಾ ಅಂಗಗಳು ಒಂದೇ ದರದಲ್ಲಿ ವಯಸ್ಸಾಗುವುದಿಲ್ಲ. ಮೆದುಳಿನ ನರಕೋಶಗಳು (Neurons) ಮತ್ತು ಹೃದಯದ ಸ್ನಾಯು ಕೋಶಗಳು (Cardiac Myocytes) ಒಮ್ಮೆ ಹಾನಿಗೊಳಗಾದರೆ ವಿಭಜನೆಯಾಗಿ ಹೊಸ ಕೋಶಗಳನ್ನು ಉತ್ಪಾದಿಸುವುದಿಲ್ಲ. ಈ ಜೀವಕೋಶಗಳಲ್ಲಿ ಡಿಎನ್‌ಎ ರೂಪಾಂತರಗಳು ಸಂಗ್ರಹಗೊಂಡಾಗ, ಅವನ್ನು ಬದಲಾಯಿಸಲು ಸಾಧ್ಯವಾಗದೆ ಅಂಗಾಂಗ ವೈಫಲ್ಯ ಸಂಭವಿಸುತ್ತದೆ. ನರಕೋಶಗಳ ರೂಪಾಂತರ-ಚಾಲಿತ ಕ್ಷೀಣತೆಯು ಸರಾಸರಿ 194 ವರ್ಷಗಳ ಆಯುಷ್ಯದ ಮಿತಿಯನ್ನು ನಿರ್ಧರಿಸುತ್ತದೆ. ಹೃದಯದ ಸ್ನಾಯು ಕೋಶಗಳಿಗೆ ಈ ಸರಾಸರಿ ಸುಮಾರು 208 ವರ್ಷಗಳಾಗಿದೆ.
ಪುನರುತ್ಪಾದಕ ಅಂಗಗಳು (ಉದಾ: ಯಕೃತ್ತು): ಯಕೃತ್ತಿನಂತಹ (Liver) ನಿಯಮಿತವಾಗಿ ಕೋಶ ವಿಭಜನೆಗೊಳ್ಳುವ ಅಂಗಗಳು ಹಾನಿಗೊಳಗಾದ ಜೀವಕೋಶಗಳನ್ನು ನಿರಂತರವಾಗಿ ಬದಲಾಯಿಸಬಲ್ಲವು. ಹಾಗಾಗಿ, ಇವು ಗಣಿತೀಯವಾಗಿ ಸಾವಿರಾರು ವರ್ಷಗಳವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಪ್ರದರ್ಶಿಸುತ್ತವೆ.
ದೇಹದ ಸಮಗ್ರ ಅಂಗಾಂಗಗಳ ಪರಸ್ಪರ ಸಂಬಂಧವನ್ನು ಗಣಿತ ಮಾದರಿಯಲ್ಲಿ ಜೋಡಿಸಿದಾಗ, ವಿಜ್ಞಾನಿಗಳಿಗೆ ಸಿಕ್ಕ ಸರಾಸರಿ ಜೀವಿತಾವಧಿಯ ವ್ಯಾಪ್ತಿ 146 ರಿಂದ 194 ವರ್ಷಗಳು. ನೆನಪಿರಲಿ, ಇದು ಇಂದಿನ ವೈದ್ಯಕೀಯ ತಂತ್ರಜ್ಞಾನದಿಂದ ಸಾಧಿಸಬಹುದಾದ ಭವಿಷ್ಯವಾಣಿಯಲ್ಲ. ಬದಲಾಗಿ, ವಯಸ್ಸಾಗುವಿಕೆಯ ಪ್ರತಿಯೊಂದು ಪ್ರಕ್ರಿಯೆಯನ್ನು ವಿಜ್ಞಾನವು ತಡೆದರೂ ಸಹ 'ಡಿಎನ್‌ಎ ಹಾನಿ'ಯೊಂದೇ ಮಾನವನಿಗೆ ವಿಧಿಸುವ ಪರಮಾವಧಿ ಸೈದ್ಧಾಂತಿಕ ಮಿತಿಯಾಗಿದೆ.
ಪ್ರಸ್ತುತ ವಿಶ್ವದಲ್ಲೇ ಅಧಿಕೃತವಾಗಿ ದೃಢೀಕರಿಸಲ್ಪಟ್ಟ ಅತ್ಯಂತ ದೀರ್ಘಾಯುಷಿ ಮಾನವರೆಂದರೆ ಫ್ರೆಂಚ್ ಮಹಿಳೆ ಜೀನ್ ಕ್ಯಾಲ್ಮೆಂಟ್ (Jeanne Calment). ಅವರು 1997 ರಲ್ಲಿ ತಮ್ಮ 122 ವರ್ಷ 164 ದಿನಗಳ ವಯಸ್ಸಿನಲ್ಲಿ ನಿಧನರಾದರು.
ಇಂದಿಗೂ 122 ವರ್ಷಗಳೇ ಮಾನವಕುಲದ ಅಧಿಕೃತ ದಾಖಲೆಯಾಗಿ ಉಳಿದಿದೆ. ಪ್ರಸ್ತುತ ಸಂಶೋಧನೆಯು, ಮಾನವ ದೇಹವನ್ನು ವಯಸ್ಸಾಗಿಸುವ ಎಲ್ಲಾ ಜೀವ ವಿಜ್ಞಾನದ ತೊಡಕುಗಳನ್ನು ಭವಿಷ್ಯದಲ್ಲಿ ನಿವಾರಿಸಿದರೂ ಸಹ, ಜೀವಕೋಶಗಳ ಡಿಎನ್‌ಎ ಸ್ವರೂಪವು ನಮ್ಮ ಆಯುಷ್ಯವನ್ನು ಗರಿಷ್ಠ 146 ರಿಂದ 194 ವರ್ಷಗಳ ವ್ಯಾಪ್ತಿಯಲ್ಲೇ ನಿಯಂತ್ರಣದಲ್ಲಿಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.