New Planet: ಬಾಹ್ಯಾಕಾಶದಲ್ಲಿ ಮತ್ತೊಂದು ಭೂಮಿನಾ? ವಿಜ್ಞಾನಿಗಳಿಂದ ಹೊಸ ಗ್ರಹ ಪತ್ತೆ, 146 ಜ್ಯೋತಿರ್ವರ್ಷ ದೂರದಲ್ಲಿದೆ!

Published : Feb 04, 2026, 01:37 PM IST
Scientists Discover Potentially Habitable Super Earth HD 137010 b

ಸಾರಾಂಶ

ಸೂರ್ಯನಂತೆಯೇ ಇರುವ ನಕ್ಷತ್ರವನ್ನು ಸುತ್ತುತ್ತಿರುವ ಭೂಮಿಗಿಂತ 6% ದೊಡ್ಡದಾದ ಹೊಸ ಗ್ರಹವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. HD 137010 b ಎಂದು ಹೆಸರಿಸಲಾದ ಈ ಗ್ರಹ, ವಾಸಯೋಗ್ಯವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕ್ವೀನ್ಸ್‌ಲ್ಯಾಂಡ್: ಭೂಮಿಯನ್ನು ಹೋಲುವ ಮತ್ತು ಬಹುಶಃ ಜೀವ ಸಂಕುಲಕ್ಕೆ ಯೋಗ್ಯವಾಗಿರಬಹುದಾದ ಹೊಸ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಖಗೋಳಶಾಸ್ತ್ರಜ್ಞರು ಈ ಗ್ರಹಕ್ಕೆ HD 137010 b ಎಂದು ಹೆಸರಿಟ್ಟಿದ್ದು, ಇದು ಭೂಮಿಯಿಂದ ಸುಮಾರು 146 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಈ ಗ್ರಹವು ಭೂಮಿಗಿಂತ ಸುಮಾರು 6% ದೊಡ್ಡದಾಗಿದ್ದು, ನಮ್ಮ ಸೂರ್ಯನಂತೆಯೇ ಇರುವ ನಕ್ಷತ್ರವನ್ನು ಸುತ್ತುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ ಮತ್ತು ಡೆನ್ಮಾರ್ಕ್‌ನ ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡ ಈ ಮಹತ್ವದ ಸಂಶೋಧನೆ ಮಾಡಿದೆ. ನಾಸಾದ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್‌ನ K2 ಮಿಷನ್ 2017ರಲ್ಲಿ ಸಂಗ್ರಹಿಸಿದ್ದ ಡೇಟಾವನ್ನು ವಿಶ್ಲೇಷಿಸಿ ಈ ಗ್ರಹದ ಅಸ್ತಿತ್ವವನ್ನು ಖಚಿತಪಡಿಸಲಾಗಿದೆ. ಈ ಗ್ರಹದ ಕುರಿತಾದ ಅಧ್ಯಯನ ವರದಿಯು ಇತ್ತೀಚೆಗೆ 'ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್' ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

HD 137010 b ಒಂದು 'ಸೂಪರ್ ಸ್ನೋಬಾಲ್' ಆಗಿರಬಹುದೇ?

HD 137010 b ಗ್ರಹವು ನಮ್ಮ ಸೂರ್ಯನನ್ನೇ ಹೋಲುವ ನಕ್ಷತ್ರದ ಸುತ್ತ ಸುತ್ತುತ್ತಿದೆ. ಈ ಗ್ರಹವು ಭೂಮಿಗಿಂತ 6% ದೊಡ್ಡದಾಗಿದೆ. ಆದರೆ, HD 137010 b ಗ್ರಹದ ಒಂದು ವರ್ಷ ಕೇವಲ 355 ದಿನಗಳು ಮಾತ್ರ ಎಂದು ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ಸದರ್ನ್ ಕ್ವೀನ್ಸ್‌ಲ್ಯಾಂಡ್‌ನ ಸಂಶೋಧಕಿ ಡಾ. ಚೆಲ್ಸಿ ಹುವಾಂಗ್ ಹೇಳುತ್ತಾರೆ. ಅಂದರೆ, ಭೂಮಿಯ ಒಂದು ವರ್ಷಕ್ಕಿಂತ ಕೇವಲ 10 ದಿನ ಕಡಿಮೆ. ಇದರ ಕೇಂದ್ರ ನಕ್ಷತ್ರವು ನಮ್ಮ ಸೂರ್ಯನಂತೆಯೇ ಇದ್ದರೂ, ಅದರ ತಾಪಮಾನ ಸುಮಾರು 1,000 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇದೆ. ಇದರಿಂದಾಗಿ, ಈ ಗ್ರಹವು ಪಡೆಯುವ ಶಕ್ತಿಯ ಪ್ರಮಾಣ ಭೂಮಿಗಿಂತ ಮೂರನೇ ಒಂದರಷ್ಟು ಕಡಿಮೆ ಇದೆ. ಇದರ ಪರಿಣಾಮವಾಗಿ, HD 137010 b ಗ್ರಹದ ಮೇಲ್ಮೈ ತಾಪಮಾನ ಮೈನಸ್ 68 ರಿಂದ ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಆದರೂ, ಈ ಗ್ರಹದ ಬಗ್ಗೆ ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದು ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಖಭೌತಶಾಸ್ತ್ರಜ್ಞೆ ಡಾ. ಸಾರಾ ವೆಬ್ ಸ್ಪಷ್ಟಪಡಿಸಿದ್ದಾರೆ. ಇದು ಭೂಮಿಯಂತಹ ಗ್ರಹವಾಗಿರಬಹುದಾದರೂ, ಸಂಪೂರ್ಣವಾಗಿ ಮಂಜುಗಡ್ಡೆಯಿಂದ ಆವೃತವಾದ 'ಸೂಪರ್ ಸ್ನೋಬಾಲ್' ಗ್ರಹವಾಗಿರುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ.

HD 137010 b ಗ್ರಹವನ್ನು ಪತ್ತೆ ಮಾಡಿದ್ದು ಹೇಗೆ?

ದೊಡ್ಡ ದೊಡ್ಡ ವೀಕ್ಷಣಾಲಯಗಳ ಬದಲು, 'ಪ್ಲಾನೆಟ್ ಹಂಟರ್ಸ್' ಎಂಬ ಸಿಟಿಜನ್ ಸೈನ್ಸ್ ಯೋಜನೆಯ ಮೂಲಕ HD 137010 b ಗ್ರಹದ ಬಗ್ಗೆ ಮೊದಲ ಸುಳಿವು ಸಿಕ್ಕಿತ್ತು. ಡಾ. ಅಲೆಕ್ಸಾಂಡರ್ ವೆನ್ನರ್ ಸೇರಿದಂತೆ ಸಾಮಾನ್ಯ ನಾಗರಿಕರೇ ಆದ ವಿಜ್ಞಾನಿಗಳ ತಂಡ ಇದರ ಮೊದಲ ಲಕ್ಷಣಗಳನ್ನು ಪತ್ತೆ ಮಾಡಿತ್ತು. 'ಪ್ಲಾನೆಟ್ ಹಂಟರ್ಸ್' ಪ್ರಾಜೆಕ್ಟ್ ಮೂಲಕ ಡಾ. ಅಲೆಕ್ಸಾಂಡರ್ ವೆನ್ನರ್ ಈ ಗ್ರಹದ ಅಸ್ಪಷ್ಟ ಸಿಗ್ನಲ್ ಅನ್ನು ಗುರುತಿಸಿದ್ದರು. ವಿಶೇಷವೆಂದರೆ, ಆಗ ಅವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರು. ನಂತರ ಇದೇ ವಿಷಯದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿ, ಈ ಐತಿಹಾಸಿಕ ಸಂಶೋಧನಾ ಪ್ರಬಂಧದ ಮುಖ್ಯ ಲೇಖಕರಾದರು. "ವಿದ್ಯಾರ್ಥಿಯಾಗಿದ್ದಾಗ ಶುರುಮಾಡಿದ ಈ ಪ್ರಯತ್ನ, ನಂತರ ಒಂದು ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಕಾರಣವಾಗಿದ್ದು ನಿಜಕ್ಕೂ ಅದ್ಭುತ" ಎಂದು ಡಾ. ಅಲೆಕ್ಸಾಂಡರ್ ವೆನ್ನರ್ ಹೇಳುತ್ತಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತೆ, ಉಪಕಾರ ಮಾಡಿದೋರಿಗೆ ಗಿಫ್ಟ್ ನೀಡುತ್ತೆ ಈ ಪಕ್ಷಿ
ಒಣಭೂಮಿಯಲ್ಲ ಮಂಗಳ, ಒಂದು ಕಾಲದ ಮಳೆನಾಡು; ಸಾಕ್ಷಿ ಕಂಡುಹಿಡಿದ ನಾಸಾ Perseverance ರೋವರ್‌!