
ವಾಷಿಂಗ್ಟನ್ (ಮೇ.9): ದಶಕಗಳಿಂದಲೂ ಕುತೂಹಲ ಮೂಡಿಸಿರುವ 'ಹಾರುವ ತಟ್ಟೆ' (UFO) ಅಥವಾ ಅನ್-ಐಡೆಂಟಿಫೈಡ್ ಅನಾಮಲಸ್ ಫೆನಾಮೆನಾ (UAP) ಕುರಿತಾದ ವರ್ಗೀಕೃತ ರಹಸ್ಯ ದಾಖಲೆಗಳ ಬೃಹತ್ ಸಂಗ್ರಹವನ್ನು ಅಮೆರಿಕದ ರಕ್ಷಣಾ ಇಲಾಖೆ 'ಪೆಂಟಗನ್' ಶುಕ್ರವಾರ ಬಿಡುಗಡೆ ಮಾಡಿದೆ. ಗಗನಯಾತ್ರಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಗುಪ್ತಚರ ಅಧಿಕಾರಿಗಳು ನೀಡಿದ್ದ ದಶಕಗಳ ವರದಿಗಳು ಈಗ ಸಾರ್ವಜನಿಕವಾಗಿ ಲಭ್ಯವಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಬಿಡುಗಡೆಯಾದ ಈ ಆರ್ಕೈವ್‌ನಲ್ಲಿ 1940 ರಿಂದ 2026ರ ವರೆಗಿನ ಸುಮಾರು 160ಕ್ಕೂ ಹೆಚ್ಚು ಮಿಲಿಟರಿ ವೀಡಿಯೋಗಳು, ಇನ್‌ಫ್ರಾರೆಡ್ ಚಿತ್ರಗಳು, ಎಫ್‌ಬಿಐ ಮೆಮೊಗಳು ಮತ್ತು ನಾಸಾ ಪ್ರತಿಲಿಪಿಗಳು ಸೇರಿವೆ.
ಅಪೊಲೊ ಚಂದ್ರಯಾನದ ಸಮಯದಲ್ಲಿ ಗಗನಯಾತ್ರಿಗಳು ಕಂಡ ಅಚ್ಚರಿಯ ದೃಶ್ಯಗಳು ಈ ವರದಿಯಲ್ಲಿವೆ. ಅಪೊಲೊ 11ರ ಯಾನದ ವೇಳೆ 1969ರಲ್ಲಿ ಚಂದ್ರನ ಸಮೀಪ "ಅತ್ಯಂತ ಪ್ರಕಾಶಮಾನವಾದ ಬೆಳಕಿನ ಮೂಲ"ವನ್ನು ಕಂಡಿದ್ದಾಗಿ ಬಜ್ ಆಲ್ಡ್ರಿನ್ ತಿಳಿಸಿದ್ದರು. ಅಪೊಲೊ 12ರ ಗಗನಯಾತ್ರಿ ಅಲಾನ್ ಬೀನ್ ಅವರು ಬಾಹ್ಯಾಕಾಶದಲ್ಲಿ ಮಿಂಚಿನಂತಹ ಬೆಳಕು ಮತ್ತು ಕಣಗಳು ತೇಲುತ್ತಿರುವುದನ್ನು ವರದಿ ಮಾಡಿದ್ದರು. ಅಪೊಲೊ 17ರ ಯಾತ್ರಿಗಳು ಚಂದ್ರನ ಮೇಲ್ಮೈ ಮೇಲೆ ತ್ರಿಕೋನ ಆಕಾರದಲ್ಲಿ ಮೂರು ವಿವರಿಸಲಾಗದ ಬೆಳಕುಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಪೆಂಟಗನ್ ವಿಶ್ಲೇಷಕರಲ್ಲಿ ಯಾವುದೇ ಒಮ್ಮತದ ಅಭಿಪ್ರಾಯ ಈವರೆಗೂ ಮೂಡಿಬಂದಿಲ್ಲ.
ಕೆಲವು ಹಳೆಯ ಎಫ್‌ಬಿಐ ದಾಖಲೆಗಳಲ್ಲಿ ಪ್ರತ್ಯಕ್ಷದರ್ಶಿಗಳು ನೀಡಿದ ಆಘಾತಕಾರಿ ವಿವರಗಳಿವೆ. ಹಾರುವ ತಟ್ಟೆಗಳ ಸಮೀಪ ಸುಮಾರು ನಾಲ್ಕು ಅಡಿ ಎತ್ತರದ ವಿಚಿತ್ರ ಆಕೃತಿಗಳನ್ನು (ಹ್ಯೂಮನಾಯ್ಡ್‌ಗಳು) ಕಂಡಿದ್ದಾಗಿ ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಇವುಗಳನ್ನು ಪೆಂಟಗನ್ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಲೋಹದಂತಿರುವ ಮೊಟ್ಟೆ ಆಕಾರದ, ಸಿಗಾರ್ ಮಾದರಿಯ ಮತ್ತು ಎಂಟು ಪಾಯಿಂಟ್‌ಗಳ ನಕ್ಷತ್ರಾಕಾರದ ವಸ್ತುಗಳು ಅತಿ ವೇಗದಲ್ಲಿ ಚಲಿಸುತ್ತಿರುವುದು ವರದಿಯಾಗಿದೆ.
ಮಿಲಿಟರಿ ಸೆನ್ಸರ್‌ಗಳು ಪತ್ತೆಹಚ್ಚಿದ ಒಂದು ವರದಿಯ ಪ್ರಕಾರ, ಸಮುದ್ರ ಮಟ್ಟದಲ್ಲಿ ಗಂಟೆಗೆ 80 ಮೈಲಿ ವೇಗದಲ್ಲಿ ಚಲಿಸುತ್ತಿದ್ದ ವಸ್ತುವೊಂದು ಏಕಾಏಕಿ 90-ಡಿಗ್ರಿ ತಿರುವು ಪಡೆದುಕೊಂಡು ಇನ್‌ಫ್ರಾರೆಡ್ ಕ್ಯಾಮೆರಾಗಳಿಗೂ ಕಾಣದಂತೆ ಅದೃಶ್ಯವಾಗಿತ್ತು. ಇರಾಕ್, ಸಿರಿಯಾ ಮತ್ತು ಯುಎಇ ಮೇಲ್ಭಾಗದಲ್ಲೂ ಇಂತಹ ವಿಚಿತ್ರ ವಸ್ತುಗಳ ಹಾರಾಟ ದಾಖಲಾಗಿತ್ತು.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಪೆಂಟಗನ್ ಈಗ ಸಾರ್ವಜನಿಕರಿಗಾಗಿ ಹೊಸ ಪೋರ್ಟಲ್ ಆರಂಭಿಸಿದ್ದು, ಹಂತ-ಹಂತವಾಗಿ ಹೆಚ್ಚಿನ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಟಿಮ್ ಬರ್ಚೆಟ್ ಮತ್ತು ಅನ್ನಾ ಪಾಲಿನಾ ಲೂನಾ ಅವರಂತಹ ಸಂಸದರು ಇದನ್ನು "ಮೊದಲ ಹೆಜ್ಜೆ" ಎಂದು ಸ್ವಾಗತಿಸಿದ್ದಾರೆ. ಇದರ ನಡುವೆಯೂ ಪೆಂಟಗನ್ ಒಂದು ಎಚ್ಚರಿಕೆಯನ್ನೂ ನೀಡಿದೆ. ಈ ಎಲ್ಲಾ ದೃಶ್ಯಗಳು ಏಲಿಯನ್‌ಗಳೇ ಆಗಿರಬೇಕಿಲ್ಲ; ಅವು ಹವಾಮಾನ ಬದಲಾವಣೆ, ಡ್ರೋನ್, ಬಲೂನ್ ಅಥವಾ ಸೆನ್ಸರ್ ದೋಷಗಳೂ ಆಗಿರಬಹುದು. ಸದ್ಯಕ್ಕೆ ಪರಕೀಯ ಜೀವಿಗಳ ಅಸ್ತಿತ್ವಕ್ಕೆ ಯಾವುದೇ ಕಾಂಕ್ರೀಟ್ ಪುರಾವೆಗಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.