
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ (ISRO) ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಅನುಭವಿ ವಿಜ್ಞಾನಿಗಳು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದರೆ, ಇನ್ನೊಂದೆಡೆ ಒಂಬತ್ತು ನೌಕರರ ಸಂಘಟನೆಗಳು ಸಂಸ್ಥೆಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರಿಗೆ ಜಂಟಿ ಪತ್ರ ಬರೆದಿವೆ. ಈ ಬೆಳವಣಿಗೆಗಳು ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಂಸಾರಿಕ ಹಾಗೂ ಕಾರ್ಯತಂತ್ರದ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.
ಕಳೆದ ಒಂದು ವರ್ಷದಲ್ಲಿ ಗಗನಯಾನ್ ಮತ್ತು ಚಂದ್ರಯಾನದಂತಹ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ೧೦೦ಕ್ಕೂ ಹೆಚ್ಚು ಮುಂಚೂಣಿ ವಿಜ್ಞಾನಿಗಳು ಇಸ್ರೋ ತೊರೆದು ಖಾಸಗಿ ರಂಗದತ್ತ ಮುಖ ಮಾಡಿದ್ದಾರೆ. ಆಕರ್ಷಕ ವೇತನ package, ಮೂಲಸೌಕರ್ಯ ಹಾಗೂ ಖಾಸಗಿ ಸ್ಪೇಸ್-ಟೆಕ್ ಸಂಸ್ಥೆಗಳಲ್ಲಿ ಸಿಗುತ್ತಿರುವ ಮುಕ್ತ ಅವಕಾಶಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ದಶಕಗಳ ಅನುಭವ ಹೊಂದಿರುವ ಸಿಬ್ಬಂದಿ ಒಮ್ಮೆಗೆ ನಿರ್ಗಮಿಸುತ್ತಿರುವುದರಿಂದ ಯೋಜನಾ ಪ್ರಗತಿಗೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಇಲಾಖೆಯು ತನ್ನ ಉದ್ಯೋಗಿಗಳಿಗೆ ವಿಆರ್‌ಎಸ್ (VRS) ಹಾಗೂ ಅಟ್ರಿಷನ್ (Attrition) ಸೇವಾ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅತ್ಯಂತ ಬಿಗಿಗೊಳಿಸಿದೆ.
ಇಸ್ರೋದಲ್ಲಿ ಪ್ರಸ್ತುತ ಆಡಳಿತಾತ್ಮಕ ಮತ್ತು ತಾಂತ್ರಿಕ ಮಟ್ಟದಲ್ಲಿ ತೀವ್ರ ಸಿಬ್ಬಂದಿ ಅಭಾವ ಕಂಡುಬರುತ್ತಿದೆ. ವರದಿಗಳ ಪ್ರಕಾರ, ಸಂಸ್ಥೆಯಲ್ಲಿ ಮಂಜೂರಾದ ಒಟ್ಟು ೨೦,೨೬೯ ಹುದ್ದೆಗಳ ಪೈಕಿ ಬರೋಬ್ಬರಿ ೫,೬೩೨ ಹುದ್ದೆಗಳು ಖಾಲಿ ಉಳಿದಿವೆ. ಈ ಕೊರತೆಯ ನಡುವೆಯೇ ಪ್ರಮುಖ ಯೋಜನೆಗಳ ಒತ್ತಡ ಸಿಬ್ಬಂದಿಯ ಮೇಲಿದ್ದು, ಹೊಸ ನೇಮಕಾತಿ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದರ ಬೆನ್ನಲ್ಲೇ ಒಂಬತ್ತು ನೌಕರ ಸಂಘಗಳು ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, "ಖಾಸಗಿ ಕಂಪನಿಗಳೇ ರಾಕೆಟ್ ಮತ್ತು ಉಪಗ್ರಹಗಳನ್ನು ತಯಾರಿಸಿ ಉಡಾವಣೆ ಮಾಡಲು ಪ್ರಾರಂಭಿಸಿದರೆ ಇಸ್ರೋದ ಮೂಲ ಪಾತ್ರವೇನು? ಸಂಸ್ಥೆಯು ಕೇವಲ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವಾಗಿ ಸೀಮಿತಗೊಳ್ಳಲಿದೆಯೇ?" ಎಂದು ನೇರ ಪ್ರಶ್ನೆಗಳನ್ನು ಎತ್ತಿವೆ.
‘ಭಾರತೀಯ ಬಾಹ್ಯಾಕಾಶ ನೀತಿ ೨೦೨೩’ ಜಾರಿಗೆ ಬಂದ ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಬಾಗಿಲು ತೆರೆಯಲಾಗಿದೆ. ಸ್ಕೈರೂಟ್ ಏರೋಸ್ಪೇಸ್ ಮತ್ತು ಅಗ್ನಿಕುಲ್ ಕಾಸ್ಮೋಸ್ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದರೆ, 'ಪಿಕ್ಸೆಲ್'ನಂತಹ ಸಂಸ್ಥೆಗಳು ಹೈಪರ್‌ಸ್ಪೆಕ್ಟ್ರಲ್ ಉಪಗ್ರಹ ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿವೆ. ಜಾಗತಿಕವಾಗಿ ಅಮೆರಿಕದ ನಾಸಾದಂತೆ ಭಾರತದಲ್ಲೂ ಖಾಸಗಿ ಸಂಸ್ಥೆಗಳ ಪಾತ್ರ ಹೆಚ್ಚುತ್ತಿದೆಯಾದರೂ, ಇಸ್ರೋ ಉದ್ಯೋಗಿಗಳಲ್ಲಿ ಇದು ಸ್ವಂತ ಅಸ್ತಿತ್ವದ ಬಗೆಗಿನ ಭೀತಿಯನ್ನು ಹುಟ್ಟುಹಾಕಿದೆ.
ಈ ಕಳವಳಗಳಿಗೆ ಸ್ಪಷ್ಟನೆ ನೀಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, "ಇಸ್ರೋ ಸರ್ಕಾರಿ ಸಂಸ್ಥೆಯಾಗಿಯೇ ಉಳಿಯಲಿದ್ದು, ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶವಿಲ್ಲ. ಖಾಸಗಿ ವಲಯದ ಪಾಲುದಾರಿಕೆಯು ಭಾರತೀಯ ಬಾಹ್ಯಾಕಾಶ ಆರ್ಥಿಕತೆಯನ್ನು ಹಿಗ್ಗಿಸುವ ಸಹಯೋಗದ ಮಾದರಿಯಾಗಿದೆ" ಎಂದು ಪುನರುಚ್ಚರಿಸಿದ್ದಾರೆ. ಅದೇ ರೀತಿ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಮಾಜಿ ನಿರ್ದೇಶಕ ಬಿ.ಎನ್. ಸುರೇಶ್ ಅವರು, "ಖಾಸಗಿ ಸಂಸ್ಥೆಗಳು ನಿಯಮಿತ ಉಡಾವಣೆ ಮತ್ತು ವಾಣಿಜ್ಯ ಉಪಗ್ರಹಗಳನ್ನು ನಿರ್ವಹಿಸಿದರೆ, ಇಸ್ರೋ ಹೆಚ್ಚು ಸಂಕೀರ್ಣವಾದ ಸುಧಾರಿತ ಆಳವಾದ ಬಾಹ್ಯಾಕಾಶ ಸಂಶೋಧನೆ (Deep Space Exploration), ಉಪಗ್ರಹ ಆಧಾರಿತ ರಾಷ್ಟ್ರೀಯ ಅನ್ವಯಿಕೆಗಳು ಹಾಗೂ ನೂತನ ತಂತ್ರಜ್ಞಾನದ ಆವಿಷ್ಕಾರಗಳ ಮೇಲೆ ತನ್ನ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ" ಎಂದು ವಿಶ್ಲೇಷಿಸಿದ್ದಾರೆ. ವಿಜ್ಞಾನಿಗಳ ಪಲಾಯನ ತಡೆಯುವುದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಖಾಸಗಿ ರಂಗದೊಂದಿಗೆ ಸಮತೋಲನ ಕಾಯ್ದುಕೊಳ್ಳುವುದು ಈಗ ಇಸ್ರೋ ಎದುರಿಗಿರುವ ಪ್ರಮುಖ ಸವಾಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.