India in Low Orbit Space: ಇಂದು ಭಾರತ ಜಗತ್ತಿನ ಎರಡನೇ ಅತಿದೊಡ್ಡ ಉಪಗ್ರಹ ಸಂವಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ನವದೆಹಲಿ (ನ. 10): ಕಳೆದ ತಿಂಗಳು ನಡೆದ ಭಾರತದ ಪ್ರಥಮ ವಾಣಿಜ್ಯಿಕ ಉಡಾವಣೆಯಲ್ಲಿ ಭಾರತ ಸರ್ಕಾರದ ರಾಕೆಟ್ ಯುಕೆ ಮೂಲದ ವನ್‌ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ಈ ನೂತನ ಉಡಾವಣೆಯ ಬಳಿಕ, ಭಾರತ ಇಲ್ಲಿಯ ತನಕ 381 ವಿದೇಶೀ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್) ಜೋಡಿಸಿದೆ. ವನ್‌ವೆಬ್ ಭಾರತದ ಭಾರ್ತಿ ಗ್ಲೋಬಲ್ ಮತ್ತು ಯುಕೆ ಸರ್ಕಾರದ ಜಂಟಿ ಉದ್ಯಮವಾಗಿದ್ದು, ಇದು ಸಂವಹನ ಸೇವೆಗಳನ್ನು ಒದಗಿಸಲು ಅಂದಾಜು 650 ಉಪಗ್ರಹಗಳನ್ನು ಉಡಾವಣೆಗೊಳಿಸಲು ಉದ್ದೇಶಿಸಿದೆ. ಮುಂದಿನ ಹಂತದಲ್ಲಿ ಇನ್ನೂ 36 ಉಪಗ್ರಹಗಳನ್ನು ಜನವರಿಯ ವೇಳೆಗೆ ಉಡಾವಣೆಗೊಳಿಸಲು ಉದ್ದೇಶಿಸಿದೆ.
undefined
ಇಂದು ಭಾರತ ಜಗತ್ತಿನ ಎರಡನೇ ಅತಿದೊಡ್ಡ ಉಪಗ್ರಹ ಸಂವಹನ (ಸ್ಯಾಟಲೈಟ್ ಕಮ್ಯುನಿಕೇಷನ್ - ಸ್ಯಾಟ್‌ಕಾಮ್) ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಮತ್ತು ಸಂವಹನ ತಂತ್ರಜ್ಞಾನಗಳು ಅಪಾರವಾಗಿ ಹೆಚ್ಚಳ ಕಂಡಿವೆ. ಅಭಿವೃದ್ಧಿಯ ದೃಷ್ಟಿಯಿಂದ ಹೇಳುವುದಾದರೆ, ಭಾರತದ ಬಾಹ್ಯಾಕಾಶ ಉದ್ಯಮ ಮುಂದಿನ ತಂತ್ರಜ್ಞಾನ ಆಧಾರಿತ ಆರ್ಥಿಕ ಕ್ರಾಂತಿಗೆ ಕಾರಣವಾಗಬಲ್ಲದು.
2040ರ ವೇಳೆಗೆ ಜಾಗತಿಕ ಬಾಹ್ಯಾಕಾಶ ಉದ್ಯಮ 1 ಟ್ರಿಲಿಯನ್ ಡಾಲರ್ ಮೌಲ್ಯವನ್ನು ಮೀರಿ ಬೆಳೆಯುವ ಸಾಧ್ಯತೆಗಳಿವೆ. ಆದರೆ ಉದ್ದೇಶಕ್ಕಾಗಿ ಹಲವು ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಜೋಡಿಸಿ, ಅವುಗಳ ಪುಂಜವನ್ನು ರೂಪಿಸಲು ಸಮರ್ಥ ರಾಕೆಟ್‌ಗಳ ಕೊರತೆಯಿದೆ. ಉಕ್ರೇನ್ ಬಿಕ್ಕಟ್ಟಿನ ಪರಿಣಾಮವಾಗಿ ಹಲವು ಜಾಗತಿಕ ಸ್ಯಾಟ್‌ಕಾಮ್‌ಗಳು ಇಂದು ರಷ್ಯಾದ ರಾಕೆಟ್‌ಗಳನ್ನು ತಮ್ಮ ಯೋಜನೆಗಳಿಗೆ ಪರಿಗಣಿಸುತ್ತಿಲ್ಲ. ಇನ್ನು ಯುರೋಪಿನ ಅರಿಯಾನ್‌ಸ್ಪೇಸ್ ಹಾಗೂ ಅಮೆರಿಕಾದ ನಾಸಾ ಸಂಸ್ಥೆಗಳ ಯೋಜನೆಗಳು ವಿಳಂಬವಾಗುತ್ತಿವೆ ಮತ್ತು ಅವುಗಳ ಬೆಲೆಯೂ ವಿಪರೀತ ಹೆಚ್ಚಾಗುತ್ತಿದೆ. ಇನ್ನು ಚೀನಾದ ರಾಕೆಟ್‌ಗಳ ವಾಣಿಜ್ಯಿಕ ಸಾಮರ್ಥ್ಯವನ್ನು ಪಾಶ್ಚಾತ್ಯ ಜಗತ್ತು ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಸ್ಪೇಸ್‌ಶಿಪ್ ಇಳಿಸಲು ಇಸ್ರೋ ಸಿದ್ಧತೆ!
ಇಂತಹಾ ಪರಿಸ್ಥಿತಿ ಭಾರತಕ್ಕೆ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಡುತ್ತಿದೆ. ಇಂದು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತ ಕೇವಲ 2-3% ಮಾತ್ರ ಪಾಲು ಹೊಂದಿದೆ. ಆದರೆ ಭಾರತ ಕಡಿಮೆ ಮೊತ್ತದಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವ ಸಾಮರ್ಥ್ಯ ಗಳಿಸಿಕೊಂಡಿದೆ. ಇದರ ಪರಿಣಾಮವಾಗಿ ಭಾರತಕ್ಕೆ ಉಪಗ್ರಹ ನಿರ್ಮಾಣ, ಬಾಹ್ಯಾಕಾಶ ಉಡಾವಣಾ ಸೇವೆಗಳಿಂದ ಅಂತಾರಾಷ್ಟ್ರೀಯ ಗ್ರಾಹಕರ ಮೂಲಕ ಉತ್ತಮ ಲಾಭ ಸಿಗುತ್ತಿದೆ.
ಬಾಹ್ಯಾಕಾಶ ಅಭಿವೃದ್ಧಿಗೆ ಸಹಕಾರಿ: ಬಾಹ್ಯಾಕಾಶ ಮತ್ತು ಉಪಗ್ರಹ ಆಧಾರಿತ ಸಂವಹನಗಳು ಅಭಿವೃದ್ಧಿಗೆ ಅತ್ಯಂತ ಪೂರಕವಾಗಿವೆ. ಇವುಗಳ ಪರಿಣಾಮಕಾರಿ ಅನುಷ್ಠಾನದಿಂದ ಗ್ರಾಮಗಳಿಗೆ ಸಂವಹನ ವ್ಯವಸ್ಥೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಆರೋಗ್ಯ ಸೇವೆ ಮತ್ತು ಟೆಲಿ ಮೆಡಿಸಿನ್, ಉಗ್ರಾಣ ವ್ಯವಸ್ಥೆ, ಸಾರ್ವಜನಿಕ ಪೂರೈಕೆ ವ್ಯವಸ್ಥೆಗಳನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ಭಾರತದ ಆರ್ಥಿಕತೆಯನ್ನು ಆಧುನೀಕರಿಸಿ, ಅಭಿವೃದ್ಧಿ ಪಡಿಸಬಹುದು. ಲೋ ಆರ್ಬಿಟ್ ಬಾಹ್ಯಾಕಾಶ ಉದ್ಯಮವು ತನ್ನ ವೇಗವಾದ ನಿಯೋಜನೆ, ವಿಶ್ವಾಸಾರ್ಹತೆಗಳ ಮೂಲಕ ಹಳ್ಳಿಗಾಡಿನ ಪ್ರದೇಶಗಳಿಗೂ ಕ್ಷಿಪ್ರವಾದ ಅಂತರ್ಜಾಲ ಸೇವೆಯನ್ನು ಒದಗಿಸುತ್ತದೆ.
2022ರ ಗ್ಲೋಬಲ್ ಇನೋವೇಶನ್ ಇಂಡೆಕ್ಸ್ ಆವೃತ್ತಿ (ಜಿಐಐ) ಭಾರತವನ್ನು ಇದೇ ಮೊದಲ ಬಾರಿಗೆ ಭಾರತವನ್ನು ತನ್ನ ಮೊದಲ 40 ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರಿಸಿದೆ. ಪಟ್ಟಿಯಲ್ಲಿ ಭಾರತದ ಸತತ ಮೇಲುಗೈಗೆ ಪ್ರಮುಖ ಕಾರಣವೆಂದರೆ ಅದರ ಬಾಹ್ಯಾಕಾಶ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರಗಳಲ್ಲಾದ ಅಭಿವೃದ್ಧಿ.
2022ರ ಕೇಂದ್ರ ಬಜೆಟ್ ಬಾಹ್ಯಾಕಾಶ ಆರ್ಥಿಕತೆಯನ್ನು ಒಂದು ಪ್ರಮುಖ ಅವಕಾಶವನ್ನಾಗಿ ಗುರುತಿಸಿದೆ. ಇದು ಸತತವಾಗಿ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಬಲ್ಲದು ಎಂದೂ ಅಂದಾಜಿಸಲಾಗಿದೆ. 1969ರಿಂದ 2021ರ ತನಕ ಭಾರತದ ಬಾಹ್ಯಾಕಾಶ ಬಜೆಟ್‌ನ 40% ಬಂಡವಾಳದ ಪಾಲಾಗಿದೆ. ಈಗಾಗಲೇ ಬಾಹ್ಯಾಕಾಶ ಮತ್ತು ಸಂವಹನ ತಂತ್ರಜ್ಞಾನ ಎಲ್ಲಾ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೂ ಈ ಕ್ಷೇತ್ರದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಾದರೂ ಬಾಹ್ಯಾಕಾಶ ಕ್ಷೇತ್ರದ ಅಪಾಯದ ಕಾರಣದಿಂದ ಖಾಸಗಿ ಹೂಡಿಕೆ ಅತ್ಯಂತ ಕಡಿಮೆಯಾಗಿದೆ. ಖಾಸಗಿ ಸಂಸ್ಥೆಗಳು ಸಾರ್ವಜನಿಕ ಮತ್ತು ಮಿಲಿಟರಿ ಉದ್ದೇಶದ ಸರ್ಕಾರಿ ಬಾಹ್ಯಾಕಾಶ ಯೋಜನೆಗಳಿಗೆ ಕೇವಲ ಪೂರೈಕೆದಾರರಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ವಲಯದ ಚಟುವಟಿಕೆಗಳನ್ನು ಕೆಲವು ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ಎರಡು ರಾಷ್ಟ್ರೀಯ ನೀತಿಗಳು ನಿಯಂತ್ರಿಸುತ್ತವೆ. ಅವುಗಳೆಂದರೆ ಸ್ಯಾಟಲೈಟ್ ಕಮ್ಯುನಿಕೇಷನ್ ಪಾಲಿಸಿ (ಸ್ಯಾಟ್‌ಕಾಮ್) ಹಾಗೂ ರಿಮೋಟ್ ಸೆನ್ಸಿಂಗ್ ಡೇಟಾ ಪಾಲಿಸಿ.
ಇದನ್ನೂ ಓದಿ: ಮರುಬಳಸಬಳಸುವ ಲಾಂಚ್ ವೆಹಿಕಲ್ ರನ್‌ವೇ ಲ್ಯಾಂಡಿಂಗ್‌ಗೆ ಇಸ್ರೋ ಸಜ್ಜು
ಕೇಂದ್ರೀಕೃತವಾದ ನಿಯಂತ್ರಣದ ಪರಿಣಾಮವಾಗಿ ಕನಿಷ್ಠ ಪ್ರಮಾಣದ ಪ್ರಯೋಜನಗಳಷ್ಟೇ ಲಭ್ಯವಾಗುತ್ತವೆ ಎಂದು ಅರ್ಥ ಮಾಡಿಕೊಂಡ ಭಾರತ ಸರ್ಕಾರ 2020ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಸುಧಾರಣೆಗಳನ್ನು ಜಾರಿಗೆ ತಂದಿತು. ಇದು ಹೆಚ್ಚಿನ ಪ್ರಮಾಣದಲ್ಲಿ ವಿಕೇಂದ್ರೀಕರಣ ಮತ್ತು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ.
ಇಂಡಿಯನ್ ಸ್ಪೇಸ್ ಅಸೋಸಿಯೇಷನ್ (ಐಎಸ್‌ಪಿಎ) 2021ರಲ್ಲಿ ಸ್ಥಾಪನೆಗೊಂಡಿತು. ಇದು ಮಹತ್ವದ ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಖಾಸಗಿ ಬಂಡವಾಳ ಹೂಡಿಕೆಗಳನ್ನು ಭಾರತಕ್ಕೆ ತರುವ ಮಹತ್ವದ ಉದ್ದೇಶಗಳನ್ನು ಹೊಂದಿದೆ. ಸರ್ಕಾರಿ ಮತ್ತು ಖಾಸಗಿ ವಲಯದ ಮಧ್ಯ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿರುವುದು ಒಂದು ಸರಿಯಾದ ಹೆಜ್ಜೆಯಾಗಿದ್ದು, ಇದು ಜಾಗತಿಕವಾಗಿ ದೊಡ್ಡ ಪ್ರಮಾಣದ, ಕಡಿಮೆ ಖರ್ಚಿನ ಬಾಹ್ಯಾಕಾಶ ಯೋಜನೆಗಳ ಜಾರಿಗೆ ನೆರವಾಗಲಿದೆ.