ಗಗನನೌಕೆ ಭೂಮಿಗೆ ಪ್ರವೇಶಿಸುವುದು ಹೇಗೆ? ಕೊನೆಯ ಆ 8-10 ನಿಮಿಷಗಳೇ ನಿರ್ಣಾಯಕ!

Kannadaprabha News   | Kannada Prabha
Published : Apr 11, 2026, 12:23 PM IST
Artemis II Astronauts Splash Down Safely After Historic 10-Day Moon Mission | NASA

ಸಾರಾಂಶ

ಚಂದ್ರನಿಂದ ಭೂಮಿಗೆ ಮರಳುವ ಗಗನಯಾನಿಗಳ ಪಯಣದ ಕೊನೆಯ 8-10 ನಿಮಿಷಗಳು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಗಂಟೆಗೆ 38,000 ಕಿ.ಮೀ. ವೇಗದಲ್ಲಿ ವಾತಾವರಣ ಪ್ರವೇಶಿಸುವಾಗ ಎದುರಾಗುವ ಅಗ್ನಿಪರೀಕ್ಷೆ ಏನು? ಓರಿಯನ್ ನೌಕೆ 2760°C ಉಷ್ಣತೆಯನ್ನು ಹೇಗೆ ತಡೆಯುತ್ತದೆ? ಮುಂದೆ ಓದಿ

ಕೊಟ್ರೇಶ್ ಜಿ.ಎಂ.

ಆರ್ಟಿಮಿಸ್ ಹಾರಿದ್ದು, ಭೂಕಕ್ಷೆಯಿಂದ ಎತ್ತರ ಕೇರಿದ್ದು, ಚಂದಿರನನ್ನೂ ದಾಟಿ ಸಾಗಿದ್ದು, 10 ದಿನಗಳ ಕಾಲ ಸುಮಾರು 6 ಲಕ್ಷ ಕಿ.ಮೀ. ಗಳಷ್ಟು ದೂರ ನಿರ್ವಾತ ಪ್ರದೇಶದಲ್ಲಿ ಸುತ್ತಿ ಬಂದಿದ್ದು.. ಇದಾವುದೂ ಮುಖ್ಯವಾಗುವುದೇ ಇಲ್ಲ ಗಗನಯಾನಿಗಳು ಮರಳಿ ಭೂಮಿಗೆ ಇಳಿಯುವ ಕೊನೆಯ ಆ 8-10 ನಿಮಿಷಗಳ ನಿರ್ಣಾಯಕ ಸಮಯದ ಮುಂದೆ! ಅಪಾಯಕಾರಿ ವಿಕಿರಣಗಳೇ ತುಂಬಿರುವ ಚಂದಿರನ ಆಗಸಕಿಂತಲೂ ನಮ್ಮ ಭೂಮಿಯ ವಾತಾವರಣವೇ ಹೆಚ್ಚು ಜೀವಬೆದರಿಕೆಯನ್ನೊಡ್ಡಿ ಮರಳಿ ಬರುವವರನ್ನು ಕಾಯುತ್ತಿರುತ್ತದೆ! ಹಾಗಾಗಿ ಅವರನ್ನು ಕಳಿಸಿದ್ದಕ್ಕಿಂತ ವಾಪಸ್ ಧರೆಗೆ ಕರೆಸಿಕೊಳ್ಳುವುದೇ ಭಾರೀ ಅಪಾಯಕಾರಿ ಕೆಲಸ!

ಇದು ಅಪಾಯಕಾರಿ ಏಕೆ?

ಓರಿಯನ್ ನೌಕೆ ಭೂಮಿಗೆ 130 ಕಿ.ಮೀ. ಆಸುಪಾಸಿನಷ್ಟು ಸಮೀಪ ಬರುವ ವೇಳೆ ಗಂಟೆಗೆ 38367 ಕಿ.ಮೀ ವೇಗವನ್ನು ತಲುಪಿರುತ್ತದೆ. ಅಂದರೆ 3 ನಿಮಿಷದೊಳಗೆ ಬೆಂಗಳೂರಿನಿಂದ ದಿಲ್ಲಿಯನ್ನು ತಲುಪಿಬಿಡಬಹುದಾದಷ್ಟು ವೇಗ ಇದು!

ಈ ವೇಗದೊಂದಿಗೆ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಉಂಟಾಗುವ ಘರ್ಷಣೆಯಿಂದ ಕಲ್ಲೂ ಕರಗುವಂಥ ಶಾಖ ಉತ್ಪತ್ತಿ ಆಗುತ್ತದೆ. ಈ ವೇಳೆ 2760 ಡಿಗ್ರಿ ವರೆಗೆ ಉಷ್ಣತೆ ಹೆಚ್ಚಿ ಓರಿಯನ್ ನೌಕೆ ಬೆಂಕಿಯುಂಡೆಯಂತೆ ಆಗುತ್ತದೆ. ಇಂತಹ ನೌಕೆಯು ತುಸು ಕಾಲ ಭೂಮಿಯೊಂದಿಗೆ ಸಂಪರ್ಕವನ್ನೇ ಕಡಿದುಕೊಂಡಿರುತ್ತದೆ! ಅದು ಉಸಿರು ನಿಲ್ಲಿಸಿ, ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂಥ ಕಾಲ. ನೌಕೆ ತಯಾರಿಯಲ್ಲಿ ಚಿಕ್ಕ ಲೋಪವಾಗಿದ್ದರೂ ಅದು ಸ್ಪೋಟಗೊಂಡು ಯಾತ್ರಿಗಳು ಭಸ್ಮವಾಗುತ್ತಾರೆ. ಕಲ್ಪನಾ ಚಾವ್ಹಾ ದುರಂತ ಅಂತ್ಯವೂ ಇಂಥ ಸಂದರ್ಭದಲ್ಲೇ ಆಗಿದ್ದು.

ಇದಕ್ಕೆಲ್ಲ ಪರಿಹಾರವೇನು?

ಇಷ್ಟು ಉಷ್ಣಾಂಶ ತಡೆದುಕೊಳ್ಳುವುದಕ್ಕಾಗಿ ಟೈಟಾನಿಯಂ ಅನ್ನು ನೌಕೆಯ ಹೊರಭಾಗಕ್ಕೆ ಬಳಸಿರುತ್ತಾರೆ. ಅಲ್ಲದೇ ಇದರ ಮೇಲೆ ಸುಮಾರು 3 ಸಾವಿರ ಡಿಗ್ರಿ ಸೆ. ಶಾಖ ತಡೆವ ಶಕ್ತಿಯ 'ಆವ್ಕೋಟ್' ಎಂಬ ವಸ್ತುವಿನಿಂದ ಮಾಡಿದ 186 ಬಿಲ್ಲೆಗಳನ್ನು ಇಟ್ಟಿಗೆಗಳಂತೆ ಹೊದಿಸಿರುತ್ತಾರೆ. ಈ ಹೊದಿಕೆ ಒಂದೂವರೆ ಇಂಚಿನಷ್ಟು ದಪ್ಪವಾಗಿರುತ್ತದೆ.

ಇಳಿಯುವ ಕೋನ:ಓರಿಯನ್ ನೌಕೆಯನ್ನು ಸಮಾನಾಂತರ ಹಾಗೂ ಲಂಬದ ನಡುವಿನ ಕೋನದಲ್ಲಿ ಇಳಿಸಲಾಗುತ್ತದೆ. ಮೊದಲ ಹಂತವಾಗಿ 7 ಅಡಿ ವ್ಯಾಸದ 3 ಚಿಕ್ಕ ಪ್ಯಾರಾಶೂಟ್ ಗಳನ್ನು ಹಾರಿಸಲಾಗುವುದು. 26500 ಅಡಿಗಳಷ್ಟು ಹತ್ತಿರ ಬಂದಾಗ ಸಮತೋಲನವನ್ನು ಕಾಪಾಡಲು 23 ಅಡಿ ವ್ಯಾಸದ 2 ಪ್ಯಾರಾಶೂಟ್‌ಗಳನ್ನು ಹಾರಿಸಲಾಗುತ್ತದೆ. 9500 ಅಡಿಗಳಷ್ಟು ಕೆಳಕ್ಕೆ ಬಂದಾಗ ಮುಖ್ಯ ಪ್ಯಾರಾಶೂಟ್‌ಗಳು ಬಿಚ್ಚಿಕೊಳ್ಳಲಾರಂಭಿಸುತ್ತವೆ. ಮೊದಲು 11 ಅಡಿ ವ್ಯಾಸದ 3 'ಪೈಲಟ್ ಚೂಟ್'ಗಳು ಹಾರುತ್ತವೆ. ಇವು ಕೊನೆಯ 3 ಪ್ರಮುಖ ಪ್ಯಾರಾಶೂಟ್‌ಗಳನ್ನು ಎಳೆಯುತ್ತವೆ. 116 ಅಡಿಯಷ್ಟು ವ್ಯಾಸವುಳ್ಳ ಇವು ನೌಕೆಯ ವೇಗವನ್ನು ಗಂಟೆಗೆ 32 ಕಿ.ಮೀ.ಗೆ ತಗ್ಗಿಸುತ್ತವೆ. ಆಗ ಪ್ಯಾರಾಶೂಟ್‌ನಿಂದ 265 ಅಡಿ ಕೆಳಗೆ ತೂಗುವ ನೌಕೆ ಪೆಸಿಫಿಕ್‌ ಅನ್ನು ಸ್ಪರ್ಶಿಸುತ್ತದೆ. ತುಸುಕಾಲ ನೌಕೆ ತಣಿಯಲು ಬಿಟ್ಟು, ಬಳಿಕ ರಕ್ಷಣಾ ಸಿಬ್ಬಂದಿ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಮರಳಿಬಂದ ಸಾಹಸಿಗಳನ್ನು ಸುರಕ್ಷಿತವಾಗಿ ನೆಲಕ್ಕೆ ಕರೆತರುತ್ತಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಪ್ಲೂಟೋಗೆ ಮತ್ತೆ 'ಗ್ರಹ' ಪಟ್ಟ ನೀಡಿ: ನಾಸಾಗೆ 10 ವರ್ಷದ ಬಾಲಕಿಯ ಭಾವುಕ ಪತ್ರ; ಸಖತ್‌ ರಿಪ್ಲೈ ಕೊಟ್ಟ ಬಾಹ್ಯಾಕಾಶ ಸಂಸ್ಥೆ!
ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ: ಭೂಮಿಗೆ ಮರಳಿದ ಆರ್ಟೆಮಿಸ್ 2 ಗಗನಯಾತ್ರಿಗಳು; ನಾಸಾದ ಚಂದ್ರಯಾನ ದಿಗ್ವಿಜಯ!