ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!

Published : Sep 05, 2026, 02:04 PM IST
Saturn

ಸಾರಾಂಶ

ಶನಿಯ ಉತ್ತರ ಧ್ರುವದಲ್ಲಿರುವ ಷಡ್ಭುಜಾಕೃತಿಯಂತೆ, ಇದೀಗ ದಕ್ಷಿಣ ಧ್ರುವದಲ್ಲಿ 10 ಬದಿಗಳ 'ದಶಭುಜಾಕೃತಿಯ' ಹೊಸ ವಾತಾವರಣದ ಮಾದರಿಯನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಹಬಲ್ ದೂರದರ್ಶಕದ ಚಿತ್ರಗಳಿಂದ ದೃಢಪಟ್ಟ ಈ ಆಕೃತಿಯು, ಅನಿಲ ಗ್ರಹಗಳಲ್ಲಿ ಇಂತಹ ನಿಯಮಿತ ರಚನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಬಗ್ಗೆ ಹೊಸ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ.

ಸೌರವ್ಯೂಹದ ಎರಡನೇ ಅತಿದೊಡ್ಡ ಗ್ರಹವಾದ ಶನಿಯ ಉತ್ತರ ಧ್ರುವದಲ್ಲಿ ಆರು ಬದಿಗಳ ಬೃಹತ್ 'ಷಡ್ಭುಜಾಕೃತಿಯ' (Hexagon) ವಾತಾವರಣದ ರಚನೆ ಇರುವುದು ವಿಜ್ಞಾನಿಗಳಿಗೆ ದಶಕಗಳಿಂದ ತಿಳಿದಿತ್ತು. ಆದರೆ ಈಗ, ಆ ಕೌತುಕಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಗ್ರಹದ ಸಂಪೂರ್ಣ ವಿರುದ್ಧ ಬದಿಯಲ್ಲಿ, ಅಂದರೆ ದಕ್ಷಿಣ ಧ್ರುವದಲ್ಲಿ, 10 ಬದಿಗಳನ್ನು ಹೊಂದಿರುವ ಬೃಹತ್ 'ದಶಭುಜಾಕೃತಿಯ' (Decagon) ಹೊಸ ನಿಗೂಢ ಮಾದರಿಯನ್ನು ಖಗೋಳಶಾಸ್ತ್ರಜ್ಞರು ಗುರುತಿಸಿದ್ದಾರೆ. ಶನಿಯ ದಕ್ಷಿಣ ಗೋಳಾರ್ಧದಲ್ಲಿ ಇಂತಹ ನಿಯಮಿತ ಬಹುಭುಜಾಕೃತಿಯ ಜೆಟ್ ಪ್ರವಾಹವನ್ನು ವೀಕ್ಷಿಸುತ್ತಿರುವುದು ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

ಉಂಗುರಗಳ ಗ್ರಹ ಶನಿ ಮತ್ತು ಅದರ ವೈಶಿಷ್ಟ್ಯಗಳು

ಸೂರ್ಯನಿಂದ ಆರನೇ ಗ್ರಹವಾದ ಶನಿಯು ಕಾಸ್ಮಿಕ್ ಧೂಳು, ಮಂಜುಗಡ್ಡೆ ಮತ್ತು ಬಂಡೆಗಳ ತುಣುಕುಗಳಿಂದ ಕೂಡಿದ ತನ್ನ ಸೌಂದರ್ಯಮಯ ಉಂಗುರಗಳಿಗೆ ಹೆಸರುವಾಸಿಯಾಗಿದೆ. 2004 ರಿಂದ 2017 ರವರೆಗೆ ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಶನಿಯ ವಾತಾವರಣ, ಉಂಗುರಗಳು ಹಾಗೂ ಅದರ ಚಂದ್ರಗಳ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಅಧ್ಯಯನ ಮಾಡಿತು. ಶನಿಯು ನೂರಾರು ಚಂದ್ರಗಳನ್ನು ಹೊಂದಿದ್ದು, ಗ್ರಹದ ಗಾತ್ರದ ಟೈಟಾನ್‌ನಿಂದ ಹಿಡಿದು ಆಲೂಗಡ್ಡೆಯಂತೆ ಕಾಣುವ ಸಣ್ಣ ಕ್ಷುದ್ರ ಗ್ರಹಗಳ ವೈವಿಧ್ಯಮಯ ಜಗತ್ತನ್ನೇ ಹೊಂದಿದೆ. ಇವುಗಳಲ್ಲಿ ಮಿಮಾಸ್ ಮತ್ತು ಎನ್ಸೆಲಾಡಸ್ ಕ್ಷುದ್ರ ಗ್ರಹ ನೀರನ್ನು ಹೊಂದಿರುವ ಸಾಧ್ಯತೆಯಿಂದಾಗಿ ವಾಸಯೋಗ್ಯ ಪ್ರಪಂಚಗಳಾಗಿ ಸುದ್ದಿಯಲ್ಲಿದ್ದವು.

ಹಬಲ್ ಕಣ್ಣಿಗೆ ಬಿದ್ದ ಹೊಸ ದಶಭುಜಾಕೃತಿ

ಸ್ಪೇನ್‌ನ ಬಾಸ್ಕ್ ಕಂಟ್ರಿ ವಿಶ್ವವಿದ್ಯಾಲಯದ ಸಂಶೋಧಕ ಅಗಸ್ಟಿನ್ ಸ್ಯಾಂಚೆಜ್-ಲವೆಗಾ ನೇತೃತ್ವದ ತಂಡ ನಡೆಸಿದ ಈ ಅಧ್ಯಯನವು 'ಸೈನ್ಸ್ ಅಡ್ವಾನ್ಸಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು 2023 ರಲ್ಲಿ ತೆಗೆದ ಚಿತ್ರಗಳಲ್ಲಿ ಈ ಮಾದರಿಯ ಮೊದಲ ಸುಳಿವು ಸಿಕ್ಕಿತ್ತು. ಶನಿಯ ಓರೆಯಾದ ಭ್ರಮಣದಿಂದಾಗಿ ದಕ್ಷಿಣ ಗೋಳಾರ್ಧವು ಭೂಮಿಗೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆರಂಭದಲ್ಲಿ ಕೆಲವು ಹವ್ಯಾಸಿ ಖಗೋಳಶಾಸ್ತ್ರಜ್ಞರು ಇದನ್ನು ಗಮನಿಸಿದರು, ನಂತರ ಹಬಲ್ ದತ್ತಾಂಶದ ಮೂಲಕ ಶೋಧ ನಡೆಸಿದಾಗ 2025 ರ ವೇಳೆಗೆ ಇದರ 10 ಶೃಂಗಗಳು ಅತ್ಯಂತ ಸ್ಪಷ್ಟವಾಗಿ ದೃಢಪಟ್ಟವು. ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಸಹ-ಲೇಖಕಿ ಆಮಿ ಸೈಮನ್ ಪ್ರಕಾರ, ದಕ್ಷಿಣ ಗೋಳಾರ್ಧದಲ್ಲಿ ಇಂತಹ ವಿದ್ಯಮಾನವನ್ನು ವಿಜ್ಞಾನಿಗಳು ಹಿಂದೆಂದೂ ಕಂಡಿರಲಿಲ್ಲ.

ದಶಭುಜದ ಗಾತ್ರ ಮತ್ತು ವಾತಾವರಣದ ಸ್ವರೂಪ

ಈ ದಶಭುಜಾಕೃತಿಯು ಶನಿಯ ದಟ್ಟ ವಾತಾವರಣದಲ್ಲಿ ಹರಿಯುವ ಶಕ್ತಿಶಾಲಿ ಜೆಟ್ ಸ್ಟ್ರೀಮ್‌ಗಳಲ್ಲಿ ರೂಪುಗೊಂಡಿರುವ ಒಂದು ವಾತಾವರಣದ ಅಲೆಯಾಗಿದೆ. ಇದರ ಪ್ರತಿ ಬದಿಯು ಸರಿಸುಮಾರು 16,800 ಕಿಲೋಮೀಟರ್ (10,000 ಮೈಲಿಗೂ ಹೆಚ್ಚು) ಉದ್ದವಿದ್ದು, ನಮ್ಮ ಇಡೀ ಭೂಮಿಯ ವ್ಯಾಸಕ್ಕಿಂತಲೂ ದೊಡ್ಡದಾಗಿದೆ. ಈ ಪ್ರದೇಶದಲ್ಲಿ ಜೆಟ್ ಸ್ಟ್ರೀಮ್ ಗಾಳಿಯ ವೇಗವು ಗಂಟೆಗೆ ಸುಮಾರು 260 ಮೈಲಿಗಳನ್ನು ತಲುಪುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಭೀಕರ ವರ್ಗ-5 ಚಂಡಮಾರುತಕ್ಕಿಂತಲೂ ವೇಗವಾಗಿದೆ. ಆದರೆ, ಅತ್ಯಂತ ವೇಗದ ಗಾಳಿ ಇದ್ದರೂ ಈ 10-ಬದಿಯ ಮಾದರಿಯು ಗಂಟೆಗೆ 6 ಮೈಲಿಗಿಂತ ಕಡಿಮೆ ವೇಗದಲ್ಲಿ ಅತ್ಯಂತ ನಿಧಾನವಾಗಿ ಬದಲಾಗುತ್ತದೆ. ಶನಿಗೆ ಭೂಮಿಯಂತೆ ಘನ ಮೇಲ್ಮೈ ಇಲ್ಲದಿರುವುದರಿಂದ, ಇದು ಯಾವುದೇ ಕಲ್ಲು ಅಥವಾ ಗೋಡೆಯ ಆಕೃತಿಯಲ್ಲ, ಬದಲಾಗಿ ಮೋಡಗಳು ಮತ್ತು ಅನಿಲಗಳ ಚಲನೆಯಿಂದ ರೂಪುಗೊಂಡ ಅಸಾಮಾನ್ಯ ಮಾದರಿಯಾಗಿದೆ.

ಉತ್ತರ ಧ್ರುವದ ಷಡ್ಭುಜಕ್ಕೆ ದಕ್ಷಿಣ ಧ್ರುವದ ಉತ್ತರ

ಶನಿಯ ಉತ್ತರ ಧ್ರುವದಲ್ಲಿರುವ 20,000 ಮೈಲಿ ಅಗಲದ ಷಡ್ಭುಜಾಕೃತಿಯನ್ನು 1980 ರ ದಶಕದಲ್ಲಿ ನಾಸಾದ ವಾಯೇಜರ್ ನೌಕೆಗಳು ಮೊದಲು ಪತ್ತೆಹಚ್ಚಿದ್ದವು, ಮತ್ತು ಅದು ಕಳೆದ 44 ವರ್ಷಗಳಿಂದ ಸ್ಥಿರವಾಗಿ ಮುಂದುವರಿದಿದೆ. ಈಗ ಪತ್ತೆಯಾಗಿರುವ ದಕ್ಷಿಣ ಧ್ರುವದ ದಶಭುಜವು ಇತ್ತೀಚೆಗೆ ರೂಪುಗೊಳ್ಳುತ್ತಿರುವಂತೆ ಕಾಣುತ್ತಿದ್ದು, ಈ ಎರಡೂ ಮೇಲ್ಮೈ ಆಕಾರಗಳನ್ನು ಹೋಲಿಸಿ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಉತ್ತಮ ಅವಕಾಶ ಸಿಕ್ಕಿದೆ.

ಖಗೋಳಶಾಸ್ತ್ರಜ್ಞರ ಸಿದ್ಧಾಂತ ಮತ್ತು ಮುಂದಿನ ಅಧ್ಯಯನ

ಯಾವುದೇ ಘನ ಮೇಲ್ಮೈ ಇಲ್ಲದ ವಾತಾವರಣದಲ್ಲಿ ಇಂತಹ ನಿಯಮಿತ ಮೇಲ್ಮೈಗಳು ಆಕಾರಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಸೂಕ್ತ ವಿವರಣೆ ಹುಡುಕುತ್ತಿದ್ದಾರೆ. ವಾತಾವರಣದ ಪ್ರಬಲ ಅನಿಲ ಅಲೆಗಳು ಜೆಟ್ ಸ್ಟ್ರೀಮ್‌ಗಳನ್ನು ಎದುರಿಸಿದಾಗ ಸಾಗರದ ಅಲೆಗಳಂತೆ ನಿಗದಿತ ಗಡಿಗೆ ಸೀಮಿತಗೊಳ್ಳುತ್ತವೆ. ಗ್ರಹದ ಕ್ಷಿಪ್ರ ತಿರುಗುವಿಕೆ ಮತ್ತು ಗಾಳಿಯ ಚಲನೆಗೆ ತಕ್ಕಂತೆ ಆಕಾರಗಳು ರೂಪುಗೊಳ್ಳುತ್ತವೆ. ಗಾಳಿಯ ಪ್ರವಾಹವು ಗ್ರಹವನ್ನು ಆರು ಬಾರಿ ಸುತ್ತುವಾಗ ಷಡ್ಭುಜಾಕೃತಿ ಸೃಷ್ಟಿಯಾದರೆ, 10 ಬಾರಿ ಸುತ್ತುವಾಗ ದಶಭುಜಾಕೃತಿ ರೂಪುಗೊಳ್ಳುತ್ತದೆ ಎಂಬುದು ಪ್ರಮುಖ ಊಹೆಯಾಗಿದೆ. ಮುಂದಿನ ದಿನಗಳಲ್ಲಿ ಹಬಲ್ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕಗಳ (JWST) ಸಹಾಯದಿಂದ ಈ ದಶಭುಜಾಕೃತಿ ಎಷ್ಟು ಕಾಲ ಉಳಿಯುತ್ತದೆ, ಇದರ ಆಳ ಎಷ್ಟು ಮತ್ತು ಇದು ಶನಿಯ ಋತುಮಾನಗಳ ಬದಲಾವಣೆಗೆ ಸಂಬಂಧಿಸಿದೆಯೇ ಎಂಬುದನ್ನು ವಿಜ್ಞಾನಿಗಳು ಆಳವಾಗಿ ಅಧ್ಯಯನ ಮಾಡಲಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಪೆಸಿಫಿಕ್ ಮಹಾಸಾಗರದ ಕತ್ತಲಲ್ಲಿ ಸೀಲ್ ಸಾಹಸ: 1,700 ಮೀಟರ್ ಆಳಕ್ಕೆ ಧುಮುಕಿ ವಿಜ್ಞಾನಿಗಳನ್ನೇ ಬೆರಗುಗೊಳಿಸಿದ ಜಲಚರ!
GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!