ಬಾಹ್ಯಾಕಾಶದಲ್ಲಿ ಇಸ್ರೋ ಮೈಲಿಗಲ್ಲು; ಹೀಗಿರಲಿದೆ ಚಂದ್ರಯಾನ-2

By Web Desk  |  First Published Jul 14, 2019, 10:29 AM IST

ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15 ರ ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಬಾಹ್ಯಾಕಾಶ ಸಾಧನೆಯನ್ನು ಮತ್ತೊಂದು ಮೈಲಿಗಲ್ಲಿಗೆ ಕೊಂಡೊಯ್ಯುವ ಯೋಜನೆ ಇದಾಗಿದ್ದು, ಇಡೀ ಜಗತ್ತೇ ಇದನ್ನು ಕಾತುರದಿಂದ ವೀಕ್ಷಿಸುತ್ತಿದೆ. 


ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15  ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಭಾರತದ ಬಾಹ್ಯಾಕಾಶ ಸಾಧನೆಯನ್ನು ಮತ್ತೊಂದು ಮೈಲಿಗಲ್ಲಿಗೆ ಕೊಂಡೊಯ್ಯುವ ಯೋಜನೆ ಇದಾಗಿದ್ದು, ಇಡೀ ಜಗತ್ತೇ ಇದನ್ನು ಕಾತುರದಿಂದ ವೀಕ್ಷಿಸುತ್ತಿದೆ. ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನಿಂದ ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಲಾಗುತ್ತಿದ್ದು, ಈ ಗಗನನೌಕೆಯು ಒಂದು ಆರ್ಬಿಟರ್ (ಚಂದ್ರನನ್ನು ಸುತ್ತುವ ಕೃತಕ ಉಪಗ್ರಹ), ವಿಕ್ರಮ್ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಸಾಧನ) ಮತ್ತು ಪ್ರಜ್ಞಾನ್ ಹೆಸರಿನ ರೋವರ್ (ಚಂದ್ರನ ಮೇಲಿಳಿದು ಸುತ್ತಾಡಲಿರುವ ಯಂತ್ರ) ಅನ್ನು ಹೊತ್ತೊಯ್ಯಲಿದೆ. ಚಂದ್ರಯಾನ-2 ನೌಕೆ ಬಾಕ್ಸ್ ಆಕಾರದಲ್ಲಿದ್ದು, 3.84 ಲಕ್ಷ ಕಿ.ಮೀ.ಗಳಷ್ಟು ದೂರ ಸಾಗಿ ಸೆ.6 ಅಥವಾ ಸೆ.7 ರಂದು ಚಂದ್ರನ ಅಂಗಳಕ್ಕೆ ಪದಾರ್ಪಣೆ ಮಾಡಲಿದೆ.

Latest Videos

undefined

ಚಂದ್ರನ ಕಕ್ಷೆಗೆ ತಲುಪಿದ ಬಳಿಕ ಆರ್ಬಿಟರ್‌ನಿಂದ ಲ್ಯಾಂಡರ್ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದಲ್ಲಿ ನಿಧಾನವಾಗಿ ಲ್ಯಾಂಡ್ ಆಗುತ್ತದೆ. ಅಲ್ಲಿ ನೂರಾರು ಕೋಟಿ ವರ್ಷಗಳಷ್ಟು ಹಳೆಯ ದೊಡ್ಡ ದೊಡ್ಡ ಬಂಡೆಗಳಿವೆ. ಸಾಫ್ಟ್‌ಲ್ಯಾಂಡ್ ಆದ ಬಳಿಕ 6 ಚಕ್ರಗಳ, ಸುಮಾರು 20 ಕೆ.ಜಿ. ತೂಕವಿರುವ ರೋವರ್, ಲ್ಯಾಂಡರ್‌ನಿಂದ ನಿಧಾನವಾಗಿ ಬೇರ್ಪಟ್ಟು ಚಂದ್ರನ ಮೇಲ್ಮೈಯಲ್ಲಿ 500 ಮೀಟರ್ ದೂರ ಕ್ರಮಿಸಿ ವಿಶ್ಲೇಷಣೆ ಆರಂಭಿಸುತ್ತದೆ. ಇದು ಭೂಮಿಯ ಲೆಕ್ಕದ 14 ದಿನ ಅಥವಾ ಒಂದು ಲೂನಾರ್ ಡೇವರೆಗೆ ಕಾರ‌್ಯಾಚರಣೆ ನಡೆಸುತ್ತದೆ.

15 ನಿಮಿಷದ ಒಳಗೆ ಆರ್ಬಿಟರ್ ಮೂಲಕ ಭೂಮಿಗೆ ತಾನು ವಿಶ್ಲೇಷಿಸಿದ ಡೇಟಾ ಮತ್ತು ಫೋಟೋಗಳನ್ನು ಕಳಿಸುತ್ತದೆ. ಎಲ್ಲವೂ ಅಂದುಕೊಂಡಂತಾದರೆ, ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಇಳಿಸಿದ ಮೊಟ್ಟಮೊದಲ ದೇಶ ಎಂಬ ಖ್ಯಾತಿ ಭಾರತದ್ದಾಗುತ್ತದೆ. ಅಲ್ಲದೆ ಚಂದ್ರನಲ್ಲಿಗೆ ರೋವರ್ ಕಳುಹಿಸುವ 4 ನೇ ದೇಶ ಭಾರತವಾಗಲಿದೆ. ಸೋವಿಯತ್ ರಷ್ಯಾ, ಅಮೆರಿಕ ಮತ್ತು ಚೀನಾ ಈಗಾಗಲೇ ರೋವರನ್ನು ಚಂದ್ರನ ಕಕ್ಷೆಗೆ ಕಳುಹಿಸಿವೆ. 

ಫ್ಯಾಟ್ ಬಾಯ್ ಜಿಎಸ್‌ಎಲ್‌ವಿ ಎಂಕೆ-3

375 ಕೋಟಿ ವೆಚ್ಚದ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ಗೆ ಇಸ್ರೋ ‘ಫ್ಯಾಟ್ ಬಾಯ್’ ಎಂಬ ಹೆಸರಿಟ್ಟಿದೆ. ಆದರೆ, ತೆಲುಗು ಮಾಧ್ಯಮಗಳು ಇದನ್ನು ‘ಬಾಹುಬಲಿ’ ಎಂದು ಕರೆಯುತ್ತಿವೆ. ಜಿಎಸ್‌ಎಲ್‌ವಿ ಎಂಕೆ-೪ ಟನ್ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 3 ಹಂತಗಳಿವೆ. ಮೊದಲನೇ ಹಂತದಲ್ಲಿ ಎರಡು ಟ್ಯಾಂಕ್‌ಗಳಿದ್ದು ಅವುಗಳಲ್ಲಿ ಇಂಧನ ತುಂಬಲಾಗುತ್ತದೆ. 

ಲಾಂಚ್ ಆದ 140 ಸೆಕೆಂಡ್ ಬಳಿಕ ಇದು ಕಾರ‌್ಯನಿರ್ವಹಿಸಲು ಆರಂಭಿಸುತ್ತದೆ. ಎರಡನೇ ಹಂತದಲ್ಲಿ ಕೋರ್ ಬೂಸ್ಟರ್ ಅಳವಡಿಸಲಾ ಗಿದ್ದು, ಅದು 114 ಸೆಕೆಂಡ್‌ಗಳ ಬಳಿಕ ತೈಲದ ಉರಿಯುವಿಕೆಗೆ ಸಹಾಯ ಮಾಡುತ್ತದೆ. ಕೊನೆಯ ಹಂತದಲ್ಲಿ ಕ್ರಯೋಜನಿಕ್ ಎಂಜಿನ್‌ಗಳನ್ನು ಅಳವಡಿಸಲಾಗಿರುತ್ತದೆ. ರಾಕೆಟ್‌ನಿಂದ ಲಿಕ್ವಿಡ್ ಕೋರ್ ಬೂಸ್ಟರ್ ಪ್ರತ್ಯೇಕವಾದ ಬಳಿಕ ರಾಕೆಟ್ ಮೇಲೇರಲು ಇದು ಸಹಾಯ ಮಾಡುತ್ತದೆ. ಇಸ್ರೋದ ಮುಂದಿನ ಯೋಜನೆಯಾದ ಗಗನಯಾನಕ್ಕೂ ಈ ಜಿಎಸ್‌ಎಲ್‌ವಿ ಎಂಕೆ-೩ ಬಳಸುವ ಉದ್ದೇಶದಿಂದ ಪ್ರಯೋಗಾತ್ಮಕವಾಗಿ ಚಂದ್ರಯಾನ-2 ಗೆ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಮುಂಚಿನ ರಾಕೆಟ್‌ಗಳು 3.3 ಟನ್ ಮತ್ತು 3.4ಟನ್ ಉಪಕರಣ ಹೊರುವ ಸಾಮರ್ಥ್ಯ ಹೊಂದಿದ್ದವು. ಈ ಬಾರಿ ಒಟ್ಟು 3.8 ಟನ್ ಭಾರದ ಉಪಕರಣಗಳಿವೆ.

ಚಂದ್ರಯಾನ-೨ರ ಪ್ರಮುಖ ತಂತ್ರಜ್ಞಾನವಾಗಿರುವ ಲ್ಯಾಂಡರ್‌ಗೆ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಅಗಾಧ ಸೇವೆ ಸಲ್ಲಿಸಿರುವ ವಿಕ್ರಮ್ ಸಾರಾಭಾಯಿ ಅವರ ಸ್ಮರಣಾರ್ಥ ‘ವಿಕ್ರಮ್’ ಎಂದು ಹೆಸರಿಡಲಾಗಿದೆ. ಚಂದ್ರನ ಕಕ್ಷೆಗೆ ತಲುಪಿದ ಬಳಿಕ ಆರ್ಬಿಟರ್‌ನಿಂದ 1250 ಕೆ.ಜಿ. ತೂಕದ ಲ್ಯಾಂಡರ್ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದಲ್ಲಿ ನಿಧಾನವಾಗಿ ಲ್ಯಾಂ ಡ್ ಆಗುತ್ತದೆ. ಅನಂತರ ಲ್ಯಾಂಡರ್‌ನ ಬಾಗಿಲು ತೆರೆದು ರೋವರ್ ಹೊರ ಬರಲಿದೆ.

ಲ್ಯಾಂಡರ್ (ಇದು ಚಂದ್ರನ ಮೇಲೆ ಲಾ ರೋವರ್ ಇಳಿಸುವ ಯಂತ್ರ)

ಇದು ಭೂಮಿಯ ಲೆಕ್ಕದ 14 ದಿನ ಅಥವಾ ಒಂದು ಲೂನಾರ್ ಡೇವರೆಗೆ ಕಾರ‌್ಯಾಚರಣೆ ನಡೆಸುತ್ತದೆ. ಲ್ಯಾಂಡರ್, ಚಂದ್ರನ ಕಕ್ಷೆ ಸುತ್ತುತ್ತಿ ರುವ ಆರ್ಬಿಟರ್‌ಗೆ ಮಾಹಿತಿ ರವಾನಿಸುತ್ತದೆ. ಲ್ಯಾಂಡರನ್ನು 2013 ರಲ್ಲಿಯೇ ಅಹಮದಾಬಾದ್‌ ನ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಸಿದ್ಧಪಡಿಸಿತ್ತು. ಲ್ಯಾಂಡರ್‌ನ ಮಾದರಿಗಳ ಪರೀಕ್ಷೆ ಅಕ್ಟೋಬರ್ 2016 ರಿಂದಲೇ ಚಿತ್ರ ದುರ್ಗದ ಚಳ್ಳಕೆರೆಯಲ್ಲಿ ಆರಂಭವಾಗಿತ್ತು. ಅಲ್ಲಿ ಚಂದ್ರನ ಮೇಲ್ಮೈಯನ್ನು ಹೋಲುವ ಸುಮಾರು 10 ಕುಳಿಗಳನ್ನು ನಿರ್ಮಿಸಿ ಅವು ಗಳನ್ನು ಗುರುತಿಸುವ ಲ್ಯಾಂಡರ್‌ನ ಸೆನ್ಸರ್ ಸಾಮರ್ಥ್ಯದ ಬಗ್ಗೆ ಪರೀಕ್ಷೆ ನಡೆದಿತ್ತು. 

ಚಂದ್ರನ ಸುತ್ತುವ ನೌಕೆ (ಆರ್ಬಿಟರ್)

ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್ ಚಂದ್ರನ ಕಕ್ಷೆ ತಲುಪಿದ ನಂತರ ಅದರೊಳಗಿನಿಂದ ಹೊರಜಿಗಿಯುವ ಆರ್ಬಿಟರ್ ಯಂತ್ರ 100 ಕಿ.ಮೀ. ಎತ್ತರದಿಂದ ಚಂದ್ರನನ್ನು ಪರಿಭ್ರಮಿಸುತ್ತದೆ. ಈ ಯಂತ್ರದಲ್ಲಿ 5 ಉಪಕರಣಗಳಿರುತ್ತವೆ. ಅವುಗಳಲ್ಲಿ 3 ಹೊಸದು, ಉಳಿದ ಎರಡು ಚಂದ್ರಯಾನ-1 ರ ಸುಧಾರಿತ ಯಂತ್ರಗಳು. ಆರ್ಬಿಟರ್ ಹೈ ರೆಸಲ್ಯೂಶನ್ ಕ್ಯಾಮೆರಾ ಮೂಲಕ ಲ್ಯಾಂಡರ್ ಪ್ರತ್ಯೇಕಗೊಳ್ಳುವ ಸ್ಪಷ್ಟ ಚಿತ್ರಣ ನೀಡಲಿದೆ. ಆರ್ಬಿಟರನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಯಾರಿಸಿದೆ. ಇದು ರೋವರ್ ಚಂದ್ರನ ಮೇಲ್ಮೈಯನ್ನು ವಿಶ್ಲೇಷಣೆ ಮಾಡಿ, ಲ್ಯಾಂಡರ್ ಮೂಲಕ ಕಳುಹಿಸುವ ಫೋಟೋ ಮತ್ತು ಡೇಟಾಗಳನ್ನು ಭೂಮಿಗೆ (ಇಸ್ರೋ ಕೇಂದ್ರಕ್ಕೆ) ರವಾನಿಸುವ ಕೆಲಸ ಮಾಡುತ್ತದೆ. ಆರ್ಬಿಟರ್ ತೂಕ 1,400 ಕೆ.ಜಿ.

ರೋವರ್ (ಇದು ಚಂದ್ರನ ಮೇಲೆ ರೋವರ್ ಓಡಾಡುವ ಯಂತ್ರ)

ಚಂದ್ರನ ಮೇಲಿಳಿಯುವ ರೋವರ್ ಸುಮಾರು 20 ಕೆ.ಜಿ. ತೂಕವಿದ್ದು, ಸೌರಶಕ್ತಿ ಮೂಲಕ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಲ್ಯಾಂಡರ್ ಲ್ಯಾಂಡ್ ಆದ 4 ಗಂಟೆಗಳ ಬಳಿಕ 6 ಚಕ್ರಗಳ ರೋವರ್ ತಿರುಗುತ್ತಾ ಕಲ್ಲು ಬಂಡೆಗಳಿಲ್ಲದ, ಕುಳಿಗಳಿಲ್ಲದ ಪ್ರದೇಶದಲ್ಲಿ ಲ್ಯಾಂಡ್ ಆಗುತ್ತದೆ.

ಇದು ಒಂದು ಸೆಕೆಂಡ್‌ಗೆ 1 ಸೆಂಟಿ ಮೀಟರ್ ರೋಲ್ ಆಗುತ್ತದೆ. ಒಟ್ಟು 500 ಮೀಟರ್ ಪ್ರದೇಶವನ್ನು ಕ್ರಮಿಸಿ ಅಲ್ಲಿ ದೊರಕುವ ಕಲ್ಲು ಮತ್ತು ಮಣ್ಣಿನ ಮಾದರಿ ಪಡೆದು, ವಿಶ್ಲೇಷಿಸಿ ಭೂಮಿಗೆ ಆರ್ಬಿಟರ್ ಮೂಲಕ ಡೇಟಾ ಮತ್ತು ಫೋಟೋವನ್ನು ಕಳಿಸುತ್ತದೆ.

ಎಲ್ಲವೂ ಅಂದು ಕೊಂಡಂತಾದರೆ ಚಂದ್ರನ ಮೇಲ್ಮೈನಲ್ಲಿ ನೀರು ಅಥವಾ ಮಂಜು ಇದೆಯೇ ಎಂಬ ಸ್ಪಷ್ಟ ಚಿತ್ರಣ ಈ ಬಾರಿ ಲಭ್ಯವಾಗಲಿದೆ. ಮತ್ತು ಯಾವ ವಿಜ್ಞಾನಿಗಳೂ ಶೋಧಿಸದ ಅಂಶಗಳನ್ನು ಇಸ್ರೋ ವಿಜ್ಞಾನಿಗಳು ಶೋಧಿಸಿದ ಹೆಗ್ಗಳಿಕೆಯೂ ನಮ್ಮದಾಗುತ್ತದೆ.

ಜೊತೆಗೆ ಲಭ್ಯವಿರುವ ಖನಿಜದ ಕುರಿತೂ ಮಾಹಿತಿ ಲಭ್ಯವಾಗಲಿದ್ದು, ಹೈಡೆಫಿನಿಶನ್ ಕ್ಯಾಮೆರಾ ಇರುವುದರಿಂದ ಮಣ್ಣು ಮತ್ತು ಬಂಡೆಗಳ ಸ್ಪಷ್ಟ ಫೋಟೋಗಳು ದೊರೆಯಲಿವೆ. ಇನ್ನೊಂದು ವಿಶೇಷ ಎಂದರೆ, ಲ್ಯಾಂಡರ್ ಮತ್ತು ರೋವರ್ ಮೇಲೆ ತ್ರಿವರ್ಣ ಧ್ವಜದ ಬಣ್ಣವನ್ನು ಪೇಂಟ್ ಮಾಡಲಾಗಿದೆ. ಹಾಗೆಯೇ ರೋವರ್ ಚಕ್ರದ ಮೇಲೆ ಅಶೋಕ ಚಕ್ರವನ್ನು ಪೇಂಟ್ ಮಾಡಲಾಗಿದೆ.

ಚಂದ್ರಯಾನ-2 ನ ಉದ್ದೇಶವೇನು?

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯು ಚಂದ್ರನ ಸ್ಥಳಾಕೃತಿಯ ಸಮೀಕ್ಷೆ, ಖನಿಜಾಂಶಗಳ ಸಮಗ್ರ ವಿಶ್ಲೇಷಣೆ ಮತ್ತು ಚಂದ್ರನ ಮೇಲ್ಮೈನಲ್ಲಿ ಇತರೆ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಇಡೀ ವಿಶ್ವಕ್ಕೇ ಚಂದ್ರನ ಹುಟ್ಟು ಮತ್ತು ವಿಕಾಸದ ಕುರಿತು ಮಾಹಿತಿ ನೀಡಲಿದೆ.

ಜೊತೆಗೆ ಚಂದ್ರನ ಮೇಲ್ಮೈ ವಾತಾವರಣ, ಖನಿಜ ಸಂಪತ್ತು, ಪ್ರಾಕೃತಿಕ ಸಂಪನ್ಮೂಲಗಳು, ಹೈಡ್ರಾಕ್ಸಿಲ್ ಮತ್ತು ನೀರು ಅಥವಾ ಮಂಜು ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಮೂಲಕ ಬಾಹ್ಯಾಕಾಶದಲ್ಲಿ ಭಾರತದ ಮತ್ತೊಂದು ಹೆಜ್ಜೆಗುರುತು ಮೂಡಿಸುವ ಉತ್ಸಾಹದಲ್ಲಿದೆ.

ಅಲ್ಲದೆ ಚಂದ್ರನಲ್ಲಿ ವಸಹಾತು ಸ್ಥಾಪಿಸುವ ಬಗ್ಗೆ ಜಗತ್ತಿನ ಹಲವು ದೇಶಗಳು ಕನಸು ಕಾಣುತ್ತಿವೆ. ಆದರೆ ಅದಕ್ಕೂ ಮೊದಲು ಅಲ್ಲಿ ಗಾಳಿ, ನೀರು, ಇಂಧನ ಇರುವಿಕೆ ಪತ್ತೆಹಚ್ಚಬೇಕಾಗುತ್ತದೆ. ಆ ಕೆಲಸವನ್ನು ಚಂದ್ರಯಾನ-2 ಮಾಡಲು ಹೊರಟಿದೆ. ಭೂಮಿಯಿಂದ ಚಂದ್ರನಲ್ಲಿಗೆ ಒಂದು ಲೀಟರ್ ನೀರು ಕೊಂಡೊಯ್ಯಲು ತಗಲುವ ಖರ್ಚು 30 ಲಕ್ಷ. ಹೀಗಾಗಿ ಚಂದ್ರನಲ್ಲೇ ನೀರು ಸಿಕ್ಕಿದರೆ ಆಗುವ ಉಳಿತಾಯ ಅಪಾರ. ಭವಿಷ್ಯದ ಯೋಜನೆಗಳಿಗೆ ಇದು ಸಹಕಾರಿಯಾಗಲಿದೆ. 

 

click me!