
ಏಥೆನ್ಸ್ (ಗ್ರೀಸ್): ಜಗತ್ತಿನ ಸರ್ವಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾದ ಅರಿಸ್ಟಾಟಲ್ ಹಾಗೂ ಜಗತ್ತನ್ನೇ ಗೆಲ್ಲ ಹೊರಟ ಅವರ ಶಿಷ್ಯ ಅಲೆಕ್ಸಾಂಡರ್ ದಿ ಗ್ರೇಟ್ ಅವರ ಐತಿಹಾಸಿಕ ಬಾಂಧವ್ಯದ ಕುರಿತು ಇತಿಹಾಸದ ಪುಟಗಳಲ್ಲಿ ರೋಚಕ ಉಲ್ಲೇಖಗಳಿವೆ. ಆದರೆ, ಗುರುವಿನಿಂದ ಕಲಿಯಲು ಶಿಷ್ಯ ಹಾಗೂ ಸಹಪಾಠಿಗಳು ಕುಳಿತುಕೊಳ್ಳುತ್ತಿದ್ದ ಆ ಭವ್ಯ ತರಗತಿಗಳು ನಿಜವಾಗಿ ಹೇಗಿದ್ದವು? ಈ ಐಕಾನ್ ಜೋಡಿ ಜ್ಞಾನ ಹಂಚಿಕೊಂಡಿದ್ದ ಸ್ಥಳ ಎಲ್ಲಿದೆ? ಎಂಬ ಕುತೂಹಲಕ್ಕೆ ಈಗ ಪುರಾತತ್ತ್ವ ಶಾಸ್ತ್ರಜ್ಞರು ಉತ್ತರ ಕಂಡುಕೊಂಡಿದ್ದಾರೆ.
ಉತ್ತರ ಗ್ರೀಸ್‌ನ ಉತ್ತರ ಭಾಗದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ, ಯುವ ಅಲೆಕ್ಸಾಂಡರ್ ಮತ್ತು ಆತನ ಮಾರ್ಗದರ್ಶಕ ಅರಿಸ್ಟಾಟಲ್ ಅವರ ಆರಂಭಿಕ ಶಿಕ್ಷಣದ ದಿನಗಳ ಮೇಲೆ ಬೆಳಕು ಚೆಲ್ಲುವ ಅತ್ಯಪರೂಪದ ಪುರಾತತ್ತ್ವ ಆವಿಷ್ಕಾರ ಸಂಭವಿಸಿದೆ.
ಗ್ರೀಕ್ ಸರ್ಕಾರ ಮತ್ತು ಹೆಲೆನಿಕ್ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, 'ಮೀಜಾ' ಎಂಬ ಐತಿಹಾಸಿಕ ಸ್ಥಳದಲ್ಲಿರುವ ರಾಯಲ್ ಜಿಮ್ನಾಷಿಯಂ ಸಂಕೀರ್ಣದಲ್ಲಿ ಪುರಾತತ್ತ್ವಜ್ಞರು ಉತ್ಖನನ ನಡೆಸುತ್ತಿದ್ದರು. ಈ ವೇಳೆ ಅಲೆಕ್ಸಾಂಡರನ ಶಾಲೆಯ ಭಾಗವಾಗಿದ್ದ ಅಲಂಕಾರಿಕ ಮೊಸಾಯಿಕ್ ಟೈಲ್ಸ್‌ಗಳಿಂದ ಕಂಗೊಳಿಸುವ ಸುಂದರ ಸಭಾಂಗಣಗಳು ಪತ್ತೆಯಾಗಿವೆ.
ಕಳೆದ ಮೂರು ವರ್ಷಗಳಿಂದ 'ಲಾ ಬ್ರೂಜುಲಾ ವರ್ಡೆ' ಹಾಗೂ 'ಲೈವ್ ಸೈನ್ಸ್' ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ. 30 ಎಕರೆ ವಿಸ್ತೀರ್ಣದ ಈ ಜಿಮ್ನಾಷಿಯಂ ಸಂಕೀರ್ಣದಲ್ಲಿ ಕುಸ್ತಿ ಪಟುಗಳ ತರಬೇತಿ ಅಖಾಡವಾದ ಪ್ಯಾಲೆಸ್ಟ್ರಾ, ಸ್ಟೇಡಿಯಂ ಮತ್ತು ಆರ್ಕೇಡ್‌ಗಳು, ಕ್ರೀಡಾ ತರಬೇತಿಯ ಸ್ಥಳಗಳು. ವಾತಾವರಣ ಎಷ್ಟೇ ಕೆಟ್ಟಿದ್ದರೂ ಅಥ್ಲೀಟ್‌ಗಳು ಓಡಲು ಬಳಸುತ್ತಿದ್ದ 200 ಮೀಟರ್ ಉದ್ದದ ಮುಚ್ಚಿದ ರನ್ನಿಂಗ್ ಟ್ರ್ಯಾಕ್ ಕ್ಸಿಸ್ಟಸ್ ಗಳು.
ಆದರೆ, ಇತ್ತೀಚಿನ ಸಂಶೋಧನೆಯು ಅಲೆಕ್ಸಾಂಡರ್ ಪಡೆದ ಶಿಕ್ಷಣದ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಹೊರಹಾಕಿದೆ. ಕ್ರಿ.ಪೂ. 1 ನೇ ಶತಮಾನದಲ್ಲಿ ಪ್ರಾಚೀನ ಇತಿಹಾಸಕಾರ ಪ್ಲುಟಾರ್ಕ್ ತಮ್ಮ 'ದಿ ಲೈಫ್ ಆಫ್ ಅಲೆಕ್ಸಾಂಡರ್' ಕೃತಿಯಲ್ಲಿ ಬರೆದಂತೆ, ಅಲೆಕ್ಸಾಂಡರನ ತಂದೆ ರಾಜ ಫಿಲಿಪ್ II ತನ್ನ ಮಗ ಮತ್ತು ಮೆಸಿಡೋನಿಯಾದ ನಿಕಟವರ್ತಿ ರಾಜಮನೆತನದ ಮಕ್ಕಳಿಗಾಗಿ ಮೀಜಾ ಎಂಬಲ್ಲಿ ಈ ವಿಶಿಷ್ಟ ಶಾಲೆಯನ್ನು ನಿರ್ಮಿಸಿದ್ದನು.
ಹೆಲೆನಿಕ್ ಸಂಸ್ಕೃತಿ ಸಚಿವಾಲಯದ ಪ್ರಾಚೀನ ವಸ್ತುಗಳ ವಿಭಾಗದ ಗೌರವ ನಿರ್ದೇಶಕಿ ಆಂಜೆಲಿಕಿ ಕೊಟ್ಟಾರಿಡಿ (Angeliki Kottaridi) ನೇತೃತ್ವದ ತಂಡವು ಈ ಕೆಳಗಿನ ಪ್ರಮುಖ ಸ್ಥಳಗಳನ್ನು ಗುರುತಿಸಿದೆ.
ಡಿಡಾಸ್ಕಾಲಿಯನ್ : ಇದು ಬೋಧನಾ ಪ್ರದೇಶವಾಗಿದ್ದು, ವಿದ್ಯಾರ್ಥಿಗಳು ಕಲ್ಲಿನ ಮೇಜುಗಳು ಹಾಗೂ ಕಂಚಿನ ಸ್ಟೈಲಸ್ (ಬರವಣಿಗೆಯ ಕಡ್ಡಿ) ಬಳಸಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು.
ಔತಣಕೂಟ ಸಭಾಂಗಣಗಳು: ಬೋಧನಾ ಕೊಠಡಿಯ ಪಕ್ಕದಲ್ಲೇ ಅತ್ಯಂತ ಅದ್ದೂರಿಯಾದ ಎರಡು ಸಭಾಂಗಣಗಳು ಪತ್ತೆಯಾಗಿವೆ. ಇವು ಐಗೈನಲ್ಲಿರುವ ರಾಜ ಫಿಲಿಪ್ II ರ ಅರಮನೆಯ ವಿನ್ಯಾಸವನ್ನೇ ಹೋಲುವ ಮೊಸಾಯಿಕ್ ನೆಲಹಾಸನ್ನು ಹೊಂದಿವೆ.
"ಈ ಹೋಲಿಕೆಗಳು ಕಾಕತಾಳೀಯವಲ್ಲ. ರಾಜ ಫಿಲಿಪ್ II ತನ್ನ ಮಗ ಅಲೆಕ್ಸಾಂಡರ್ ಮತ್ತು ಮ್ಯಾಸಿಡೋನಿಯನ್ ಉನ್ನತ ಕುಲದ ಮಕ್ಕಳ ಶಿಕ್ಷಣಕ್ಕಾಗಿಯೇ ಈ ಸಂಕೀರ್ಣವನ್ನು ನಿರ್ಮಿಸಿದ್ದನು ಎಂಬುದಕ್ಕೆ ಇದು ದೃಢ ಸಾಕ್ಷಿಯಾಗಿದೆ," ಎಂದು ಕೊಟ್ಟಾರಿಡಿ ಸ್ಪಷ್ಟಪಡಿಸಿದ್ದಾರೆ.
ಕ್ರಿಸ್ತಪೂರ್ವ 4 ನೇ ಶತಮಾನದಲ್ಲಿ ಮ್ಯಾಸಿಡೋನಿಯಾದ ಗಣ್ಯ ಶಿಕ್ಷಣ ಪದ್ಧತಿ ಹೇಗಿತ್ತು ಎಂಬುದಕ್ಕೆ ಈ ಶಾಲೆಯ ವಿನ್ಯಾಸವೇ ಉತ್ತಮ ಉದಾಹರಣೆ. ದೈಹಿಕ ಸಾಮರ್ಥ್ಯದ ತರಬೇತಿ (ಜಿಮ್ನಾಷಿಯಂ) ಮತ್ತು ಬೌದ್ಧಿಕ ಕಲಿಕೆ (ಡಿಡಾಸ್ಕಾಲಿಯನ್) ಎರಡನ್ನೂ ಒಂದೇ ಸೂರಿನಡಿ ತರಲಾಗಿತ್ತು.
ಸಭಾಂಗಣಗಳಲ್ಲಿ ಹಿಂದೆ ಒರಗುವ ಮಂಚಗಳನ್ನು ಬಳಸಲಾಗುತ್ತಿತ್ತು. ಇದು ಗಣ್ಯರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಪ್ರದಾಯವಾದ 'ಸಿಂಪೋಸಿಯಾ' ನಡೆಸಲು ಅನುಕೂಲಕರವಾಗಿತ್ತು. ಅಂದರೆ, ಅರಿಸ್ಟಾಟಲ್‌ನ ತರ್ಕಶಾಸ್ತ್ರ ಹಾಗೂ ದೈಹಿಕ ಕಸರತ್ತಿನ ಜೊತೆಗೆ ರಾಜತಾಂತ್ರಿಕ ನಡವಳಿಕೆಯನ್ನು ಸಹ ಯುವ ಉದ್ಯಮಿ-ನಾಯಕರಿಗೆ ಇಲ್ಲಿ ಕಲಿಸಲಾಗುತ್ತಿತ್ತು.
ಈ ಉತ್ಖನನದ ಸಮಯದಲ್ಲಿ ಮಡಿಕೆ ಚೂರುಗಳು, ಹಳೆಯ ನಾಣ್ಯಗಳು ಮತ್ತು 4 ಕಂಚಿನ ಬರವಣಿಗೆಯ ಸ್ಟೈಲಸ್‌ಗಳು ಪತ್ತೆಯಾಗಿವೆ. ಇವುಗಳನ್ನು ಸ್ವತಃ ಅಲೆಕ್ಸಾಂಡರ್ ಅಥವಾ ಆತನ ಸಹಪಾಠಿಗಳು ಬಳಸಿರಬಹುದು ಎಂದು ಊಹಿಸಲಾಗಿದೆ. ಜೊತೆಗೆ, ಏಥೆನ್ಸ್‌ನಿಂದ ತರಿಸಲಾದ ಅತ್ಯಂತ ಅಮೂಲ್ಯವಾದ ಪವಿತ್ರ ಆಲಿವ್ ಎಣ್ಣೆಯನ್ನು ಸಂಗ್ರಹಿಸಿಡುತ್ತಿದ್ದ ಪಾತ್ರೆಗಳ ಅವಶೇಷಗಳು ಸಹ ಸಿಕ್ಕಿವೆ.
ನೆಬ್ರಸ್ಕಾ ವಿಶ್ವವಿದ್ಯಾಲಯದ ಪ್ರಾಚೀನ ಮೆಡಿಟರೇನಿಯನ್ ಅಧ್ಯಯನದ ನಿರ್ದೇಶಕಿ ಜೀನ್ ರೀಮ್ಸ್ ಮಾತನಾಡಿ, ಲಭ್ಯವಿರುವ ಎಲ್ಲಾ ಆಧಾರಗಳು ಯುವ ಅಲೆಕ್ಸಾಂಡರ್ ಮತ್ತು ಆತನ ಸಹಪಾಠಿಗಳಿಗೆ ಬೋಧಿಸಲು ರಾಜ ಫಿಲಿಪ್, ಅರಿಸ್ಟಾಟಲ್‌ಗೆ ಒದಗಿಸಿಕೊಟ್ಟ ಶಾಲೆ ಇದೇ ಎಂಬುದನ್ನು ಬಲವಾಗಿ ಬೆಂಬಲಿಸುತ್ತವೆ. ಈ ಉತ್ಖನನವು ಕ್ರಿ.ಪೂ. 4 ನೇ ಶತಮಾನದ ಗಣ್ಯರ ಶಿಕ್ಷಣ ಪದ್ಧತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.