ರಾಮನಗರ : ನವೆಂಬರ್‌ನಲ್ಲಿ ಬಿಜೆಪಿ ಮುಖಂಡರಿಂದ ಚುನಾವಣೆ

By Kannadaprabha NewsFirst Published Oct 16, 2019, 12:44 PM IST
Highlights

ರಾಮನಗರದಲ್ಲಿ ಮುಂದಿನ ನವೆಂಬರ್ ತಿಂಗಳಲ್ಲಿ  ಬಿಜೆಪಿ ಮುಖಂಡರು ಚುನಾವಣೆಯೊಂದನ್ನು ನಡೆಸಲಿದ್ದಾರೆ. 

ರಾಮನಗರ [ಅ.16]:  ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸಾಂಸ್ಥಿಕ ಚುನಾವಣೆ ಮತ್ತು ಬೂತ್‌ ಕಮಿಟಿ ರಚನೆ ನಡೆಯಲಿದ್ದು, ಅದರಂತೆ ಮುಂದಿನ ನವೆಂಬರ್‌ 11ರಿಂದ 30 ರೊಳಗೆ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಚುನಾವಣಾಧಿಕಾರಿಗಳಾದ ವಿಧಾನ ಪರಿ​ಷತ್‌ ಮಾಜಿ ಸದಸ್ಯ ಅಶ್ವತ್ಥ್ ನಾರಾ​ಯ​ಣ​ಗೌಡ ತಿಳಿಸಿದರು.

ತಾಲೂಕಿನ ಬಿಡದಿ - ಬೈರಮಂಗಲ ರಸ್ತೆಯ ವೈಶಾಲಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಬಿಜೆಪಿ ಸಾಂಸ್ಥಿಕ ಚುನಾವಣೆ ಮತ್ತು ಜಿಲ್ಲಾ ಮಟ್ಟದ ಬೂತ್‌ ಕಮಿಟಿ ರಚನೆ ಕುರಿತ ಚರ್ಚಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ಪ್ರಜಾಸತ್ತತೆ ಹಿನ್ನೆಲೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಅಕ್ಟೋ​ಬರ್‌ 11ರಿಂದ 30ರೊಳಗೆ ಮಂಡಲ ಅಧ್ಯ​ಕ್ಷರ ಚುನಾ​ವಣೆ ಪ್ರಕ್ರಿಯೆ ಪೂರ್ಣ​ಗೊ​ಳ್ಳ​ಲಿದೆ ಎಂದರು.

ಪದಾ​ಧಿ​ಕಾ​ರಿ​ಗಳ ಆಯ್ಕೆ:

ಸದಸ್ಯತ್ವ ನೋಂದಣಿ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೆಪ್ಟೆಂಬರ್‌ 11ರಿಂದ 30ರವರೆಗೆ ಬೂತ್‌ ಸಮಿತಿ ರಚನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1148 ಬೂತ್‌ ರಚನೆಯಾಗಿದ್ದು, ಈಗಾಗಲೇ 682 ಬೂತ್‌ಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಉಳಿದ ಬೂತ್‌ಗಳಿಗೆ ಅಕ್ಟೋಬರ್‌ 19ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿವುದು ಎಂದು ತಿಳಿಸಿದರು.

ಈ ಬಾರಿ ಜಿಲ್ಲೆಯಲ್ಲಿ ಒಟ್ಟು 52,000 ಮಂದಿ ಬಿಜೆಪಿ ಸದಸ್ಯತ್ವ ನೋಂದಣಿಯಾಗಿದ್ದಾರೆ. ಚನ್ನಪಟ್ಟಣದ ನಗರ - 4,200 ಗ್ರಾಮಾಂತರ 9,000, ರಾಮನಗರದ ಟೌನ್‌ 4,500, ಗ್ರಾಮಾಂತರದಲ್ಲಿ 8,500, ಕನಕಪುರದಲ್ಲಿ ನಗರ 4,300 ಹಾಗೂ ಗ್ರಾಮಾಂತರ 6,500 ಹಾಗೂ ಮಾಗಡಿಯಲ್ಲಿ 15,000 ಮಂದಿ ಬಿಜೆಪಿ ತತ್ವ ಸಿದ್ಧಾಂತ ಹಾಗೂ ಅಭಿವೃದ್ಧಿ ಪರ ಧೋರಣೆಯನ್ನು ಮೆಚ್ಚಿ ಸದಸ್ಯತ್ವ ಪಡೆದಿದ್ದಾರೆ. ಈ ದಿಕ್ಕಿನಲ್ಲಿ ನಮ್ಮ ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಹಗಲಿರುಳು ಶ್ರಮ ವಹಿಸಿದ್ದಾರೆ ಎಂದು ಹೇಳಿ​ದರು.

ಶಂಕುಸ್ಥಾಪನೆ:

ಬಿಜೆಪಿ ಜಿಲ್ಲಾ​ಧ್ಯಕ್ಷ ಎಂ. ರುದ್ರೇಶ್‌ ಮಾತನಾಡಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಕ್ಟೋಬರ್‌ 21ರಂದು ಜಿಲ್ಲೆಗೆ ಆಗಮಿಸಲಿದ್ದು, ಅಂದು ಅನೇಕ ಅಭಿವೃದ್ಧಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿ​ಸಿ​ದರು.

ಭೈರ​ವೈಕ್ಯ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಹಾಗೂ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಹುಟ್ಟೂರುಗಳಾದ ರಾಮನಗರ ತಾಲೂಕಿನ ಬಾನಂದೂರು ಹಾಗೂ ಮಾಗಡಿ ತಾಲೂಕಿನ ವೀರಾಪುರ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ. ರವಿ ಘೋಷಿಸಿರುವಂತೆ ತಲಾ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಅದರ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಮನಗರದ ರಂಗರಾಯನಕೆರೆ ಬಳಿ ದಿ. ಕೆಂಗಲ್‌ ಹನುಮಂತಯ್ಯ ಪ್ರತಿಮೆ ಸ್ಥಾಪನೆ ಹಾಗೂ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟಕ್ಕೆ ಲಿಫ್ಟ್‌ ಅಳವಡಿಸುವ ಬಗ್ಗೆಯೂ ಅಂದು ತೀರ್ಮಾನ ಕೈಗೊಳ್ಳಲಾಗುವುದು. ಶೀಘ್ರ​ದ​ಲ್ಲಿ ಕೆಡಿಪಿ ಸಭೆ ನಡೆಸುವಂತೆಯೂ ಡಿಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದು ರುದ್ರೇಶ್‌ ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ಬೆಂಗಳೂರು ವಿಭಾಗ ಉಸ್ತುವಾರಿ ಗೀತಾ ವಿವೇಕಾನಂದ, ಮುಖಂಡರಾದ ರಂಗಧಾಮಯ್ಯ, ಶಿವಕುಮಾರ್‌, ಪದ್ಮನಾಭ್‌, ಆರ್‌.ಎಂ.ಮಲವೇಗೌಡ, ಎಸ್‌.ಆರ್‌.ನಾಗರಾಜು, ಹುಲುವಾಡಿ ದೇವರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಿಜೆಪಿ ಆಂತರಿಕ ಪ್ರಜಾಸತ್ತತೆ ಹಿನ್ನೆಲೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸಾಂಸ್ಥಿಕ ಚುನಾವಣೆ ನಡೆಯಲಿದ್ದು, ಸದಸ್ಯತ್ವ ನೋಂದಣಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು.

-ಅಶ್ವತ್ಥ್ ನಾರಾ​ಯ​ಣ​ಗೌಡ , ಬಿಜೆಪಿ ರಾಜ್ಯ ಚುನಾವಣಾಧಿಕಾರಿ

click me!