
ರಾಯಚೂರು (ಜು.12): ಗಂಡ-ಹೆಂಡತಿ ನಡುವೆ ಸಾಕಷ್ಟು ವಿಚಾರಗಳಿಗೆ ಮನಸ್ತಾಪ ಬರಬಹುದು. ಕೆಲವೊಂದು ಅಲ್ಲಿಂದಲ್ಲಿಗೆ ಮುಗಿದು ಹೋಗುತ್ತದೆ. ಇನ್ನೂ ಕೆಲವು ಕೊಲೆಯವರೆಗೂ ಮುಂದುವರಿಯುತ್ತದೆ. ಪತಿ-ಪತ್ನಿಯ ಕಿತ್ತಾಟಕ್ಕೆ ಇದೇ ಕಾರಣ ಅನ್ನೋದಿಲ್ಲ. ಸಣ್ಣ ವಿಚಾರಗಳಲ್ಲಿನ ಗಲಾಟೆಯೇ ದೊಡ್ಡ ಘಟನೆಗಳಿಗೆ ಕಾರಣವಾಗಬಹುದು.
ಅಂಥದ್ದೊಂದು ಪ್ರಕರಣ ರಾಯಚೂರಿನಲ್ಲಿ ನಡೆದಿದೆ. ನವದಂಪತಿ ನಡುವೆ ಸೆಲ್ಫಿ ವಿಚಾರಕ್ಕೆ ಶುರುವಾದ ಕಿರಿಕ್, ಪತ್ನಿ ಗಂಡನನ್ನು ನದಿಗೆ ನೂಕುವವರೆಗೂ ಮುಂದುವರಿಸಿದೆ. ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೇ ಪತ್ನಿ ನದಿಗೆ ತಳ್ಳಿದ್ದಾಳೆ. ಆದರೆ, ಗಂಡನ ಅದೃಷ್ಟ ಚೆನ್ನಾಗಿತ್ತು. ಸ್ಥಳೀಯ ಮೀನುಗಾರರ ಸಹಾಯದಿಂದ ಬದುಕಿ ಬಂದಿದ್ದಾರೆ.
ರಾಯಚೂರು ಜಿಲ್ಲೆಯ ಗುರ್ಜಾಪುರ ಸೇತುವೆ ಬಳಿ ಘಟನೆ ನಡೆದಿದೆ. ರಾಯಚೂರು- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಗುರ್ಜಾಪುರ ಸೇತುವೆ ಇದಾಗಿದೆ. ಯಾದಗಿರಿ ಜಿಲ್ಲೆಯ ಶಿವಪುರ ಗ್ರಾಮದ ನವದಂಪತಿ ಹೈ ಡ್ರಾಮಾ ಇದೇ ಸೇತುವೆ ಮೇಲೆ ನಡೆದಿತ್ತು.
ಕೊನೆಗೆ ಫೋಟೋ ತೆಗೆಯುವ ನೆಪದಲ್ಲಿ ತುಂಬಿ ಹರಿಯುವ ಕೃಷ್ಣಾ ನದಿಗೆ ಗಂಡನನ್ನು ನೂಕಿದ್ದಾಳೆ. ನದಿಗೆ ಬಿದ್ದ ಪತಿ ಕಾಪಾಡುವಂತೆ ಕೂಗಾಟ ಮಾಡಿದ್ದಾನೆ. ನದಿಯಲ್ಲೇ ಹರಿದುಕೊಂಡು ಹೋಗಿದ್ದ ಪತಿ, ಅಲ್ಲಿಯೇ ಮುಂದಿದ್ದ ಕಲ್ಲುಬಂಡೆಗಳನ್ನು ಹಿಡಿದು ಜೀವ ಉಳಿಸಿಕೊಂಡಿದ್ದಾನೆ. ಕೊನೆಗೆ ತನ್ನನ್ನು ಕಾಪಾಡುವಂತೆ ಬಂಡೆಯ ಮೇಲೆ ನಿಂತು ಗೋಳಾಡಿದ್ದಾನೆ.
ಈ ವೇಳೆ ಅಲ್ಲಿಗೆ ಬಂದ ಮೀನುಗಾರರು ಆದ ಘಟನೆಯನ್ನು ವಿವರವಾಗಿ ಕೇಳಿದ ಬಳಿಕ, ಹಗ್ಗ ಹಾಕಿ ನದಿಗೆ ಬಿದ್ದವನನ್ನು ರಕ್ಷಣೆ ಮಾಡಿದ್ದಾರೆ. ನದಿಯಿಂದ ಹೊರಗೆ ಬಂದ ಪತಿ ತನ್ನ ಪತ್ನಿಯ ವಿರುದ್ಧ ಗರಂ ಆಗಿದ್ದು, ಫೋನ್‌ನಲ್ಲಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.