ಶಾಲೆ ಮುಗಿಸ್ಕೊಂಡು ಬಸ್ ನಿಲ್ದಾಣದಲ್ಲಿ ಹಣ್ಣು ಮಾರಾಟ ಮಾಡುವ ಪುಟ್ಟ ಬಾಲಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ರಾಯಚೂರು: ಹಣ್ಣು ಬೇಕಾ ಸರ್ ಅಂತ ತಲೆ ಮೇಲೆ ಪುಟ್ಟಿ ಹೊತ್ತುಕೊಂಡು ಮಾರಾಟ ಮಾಡುವ 10 ವರ್ಷದ ಬಾಲಕ ನಿಮಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಣಿಸುತ್ತಾನೆ. ಪಟಪಟ ಅಂತ ಹೇಳುತ್ತಾ, ಕೈಯಲ್ಲಿ ಸೀಬೆಹಣ್ಣು ಕತ್ತರಿಸಿ ಅದಕ್ಕೆ ಒಂಚೂರು ಉಪ್ಪು ಸೇರಿಸಿ ಗ್ರಾಹಕರಿಗೆ ನೀಡುತ್ತಾರೆ. ಈತನ ಬಳಿಯಲ್ಲಿರುವ ಹಣ್ಣುಗಳಿಗಿಂತ ಈತನ ಮಾತುಗಳೇ ತುಂಬಾ ಸಿಹಿಯಾಗಿರುತ್ತವೆ. ಹಾಗಂತ ಈ ಪೋರ ಬಾಲ ಕಾರ್ಮಿಕನಲ್ಲ. ಶಾಲೆ ಮುಗಿಸ್ಕೊಂಡು ಮನೆಗೆ ಹೋಮ್ ವರ್ಕ್ ಪೂರ್ಣಗೊಳಿಸಿದ ನಂತರವೇ ವ್ಯಾಪಾರಕ್ಕೆ ಇಳಿಯುತ್ತಾನೆ. ಅಂದ್ರೆ ಅಮ್ಮನಿಗೆ ವ್ಯಾಪಾರದಲ್ಲಿ ಸಹಾಯ ಮಾಡಲು ಬರುತ್ತಾನೆ ಈ ಆಕಾಶ್. ಸದ್ಯ ಆಕಾಶ್ ಸೀಬೆ ಹಣ್ಣು ಮಾರಾಟ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸರ್ಕಾರಿ ಶಾಲೆಯ ಮಕ್ಕಳ ಜೀವನ ಕೇವಲ ಓದು, ಆಟಕ್ಕೆ ಮಾತ್ರ ಸೀಮಿತವಾಗಿರಲ್ಲ. ಈ ಪುಟ್ಟ ಪುಟ್ಟ ಮಕ್ಕಳ ಮೇಲೆ ಹಲವು ಜವಾಬ್ದಾರಿಗಳಿರುತ್ತವೆ. ಶಾಲೆಯಿಂದ ಬರುತ್ತಲೇ ತಂದೆ-ತಾಯಿ ಕೆಲಸದಲ್ಲಿ ಕೈಗೂಡಿಸಿ ಕುಟುಂಬಕ್ಕೆ ನೆರವು ಆಗ್ತಾರೆ. ಇಷ್ಟೆಲ್ಲಾ ಕೆಲಸ ಮಾಡಿದರೂ ಓದಿನಲ್ಲಿಯೂ ಸದಾ ಮುಂದಿರುತ್ತಾರೆ. ಗ್ರಾಮೀಣ ಭಾಗದ ಕೆಲ ಮಕ್ಕಳು ಶಾಲೆಗೆ ಬರುವ ಮುನ್ನವೇ ಮನೆಯ ಅರ್ಧ ಕೆಲಸಗಳನ್ನು ಮಾಡಿರುತ್ತಾರೆ. ಶಾಲೆಯಿಂದ ಹಿಂದಿರುಗಿದ ನಂತರವೂ ಕೆಲಸ ಮಾಡುತ್ತಿರುತ್ತಾರೆ. ಈ ಮಾತುಗಳಿಗೆ 4ನೇ ಕ್ಲಾಸ್ ಆಕಾಶ ಸಾಕ್ಷಿಯಾಗಿದ್ದಾನೆ. ಜೀವನ ಅಂದ್ರೆ ಹಿಂಗೂ ಇರುತ್ತೆ ಎಂಬ ಶೀರ್ಷಿಕೆಯಡಿಯಲ್ಲಿ ಆಕಾಶ್, ಹಣ್ಣು ಮಾರಾಟ ಮಾಡುವ ವಿಡಿಯೋ ವೈರಲ್ ಆಗಿದೆ.
undefined
ಕನ್ನಡಿಗ ದೇವರಾಜ್ (@sgowda79) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸರ್ಕಾರಿ ಶಾಲೆಯಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ ನಂತರ ಲಿಂಗಸುಗೂರು ತಾಲೂಕಿನ KSRTC ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ ಎಂಬ ಸಾಲುಗಳನ್ನು ಬರೆದುಕೊಳ್ಳಲಾಗಿದೆ.
ಮನ ಕಲುಕಿದ ಡೆಲಿವರಿ ಬಾಯ್ ಪರಿಸ್ಥಿತಿ: 2 ವರ್ಷದ ಮಗಳ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ!
ವೈರಲ್ ವಿಡಿಯೋ
ವ್ಯಕ್ತಿಯೊಬ್ಬರು ಏನು ನಿನ್ನ ಹೆಸರು? ಯಾವ ಕ್ಲಾಸ್ ಎಂದು ಹೇಳುತ್ತಾರೆ. ಅದಕ್ಕೆ ಬಾಲಕ ಆಕಾಶ್, ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದೇನೆ ಎಂದು ಹೇಳುತ್ತಾನೆ. ಈ ಹಣ್ಣುಗಳು ನಮ್ಮದೇ, ಶಾಲೆ ಮುಗಿಸ್ಕೊಂಡು ಈಗ ಮಾರಲು ಬಂದಿನ್ರಿ. ಮುಂಜಾನೆ ನಮ್ಮ ಅಮ್ಮ ಖರೀದಿ ಮಾಡಿರ್ತಾರೆ. ನನ್ನ ಅಮ್ಮ ಸಹ ಇಲ್ಲೇ ಕೆಲಸ ಮಾಡ್ತಾರೆ. 10 ರೂಪಾಯಿಗೆ 3, 20ಕ್ಕೆ ಏಳು ಹಣ್ಣು ಮಾರಾಟ ಮಾಡ್ತೀನಿ ಅಂತ ಆಕಾಶ್ ಹೇಳಿದಾಗ, ಹಾಗಾದ್ರೆ ಎಷ್ಟು ಲಾಭ ಮಾಡ್ತೀಯಾ ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಾರೆ. ನಾನು ಯಾವುದೇ ಲಾಭ ತೆಗೆದುಕೊಳ್ಳಲ್ಲಾ ರೀ, ಎಲ್ಲಾ ನಮ್ಮ ಮಮ್ಮಿಗೆ ಕೊಡ್ತೀನ್ರಿ. ನನಗೆ ಬುಕ್ ಎಲ್ಲಾನೂ ನಮ್ಮ ಮಮ್ಮಿನೇ ಕೊಡಿಸ್ತಾರೆ. ಅದಕ್ಕೆ ಎಲ್ಲಾ ರೊಕ್ಕಾ ಅಮ್ಮನಿಗೆ ಕೊಡ್ತೀನ್ರಿ ಎಂದು ಆಕಾಶ್ ಹೇಳುತ್ತಾನೆ.
ಗಡಿಯಾರ ಚೌಕ ಬಳಿ ನಾವು ಬಾಡಿಗೆ ಮನೆಯಲ್ಲಿದ್ದೀವಿ. ಮನೆಯಲ್ಲಿ ನಾನು, ನಮ್ಮಣ್ಣ, ಅವ್ವ ಮತ್ತು ಅಪ್ಪ ಇದ್ದೀವಿ. ಹಿಂದಿ, ಗಣಿತ, ಪರಿಸರ ಮತ್ತು ಕನ್ನಡ ಹೋಮ್ ವರ್ಕ್ ಕೊಟ್ಟಿದ್ರು. ಅದನ್ನು ಮುಗಿಸ್ಕೊಂಡು ಬಂದಿದ್ದೀನಿ ಎಂದು ಬಾಲಕ ಆಕಾಶ್ ಹೇಳುತ್ತಾನೆ. ಈ ವಿಡಿಯೋಗೆ 2 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಕಲ್ಯಾಣ ಕರ್ನಾಟಕ ಮಕ್ಕಳ ದಿನಚರಿ ಹೀಗೆಯೇ ಇರುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ
ಜೀವನ ಅಂದ್ರೆ ಹಿಂಗೂ ಇರುತ್ತೆ...
ಸರ್ಕಾರಿ ಶಾಲೆಯಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ ನಂತರ ಲಿಂಗಸುಗೂರು ತಾಲೂಕಿನ KSRTC ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ. pic.twitter.com/GeoyIUT9SW