
ರಾಯಚೂರು (ಜು.21) ಕೃಷ್ಮ ನದಿ ಸೇತುವೇ ಮೇಲೆ ಫೋಟೋ ತೆಗೆಯುವಾಗ ಪತಿಯನ್ನು ತಳ್ಳಿದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಪತ್ನಿಯೇ ಪತಿ ತಾತಪ್ಪನನ್ನು ನದಿಗೆ ತಳ್ಳಿದ್ದಾಳೆ ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು. ಭಾರಿ ನೀರಿನಲ್ಲೂ ಈಜಿ ಪೊದೆಗಳಲ್ಲಿ ಆಶ್ರಯ ಪಡೆದ ತಾತಪ್ಪನ ಸ್ಥಳೀಯರು ರಕ್ಷಿಸಿದ್ದರು. ನದಿಯಿಂದ ಮೇಲೆ ಬಂದ ಬಳಿಕ ಪತ್ನಿ ವಿರುದ್ಧ ಪತಿ ಆರೋಪ ಮಾಡಿದ್ದು ಮಾತ್ರವಲ್ಲ, ವಿಚ್ಚೇದನಕ್ಕೆ ಮುಂದಾಗಿದ್ದರು. ಈ ಬೆಳವಣಿಗೆ ನಡುವೆ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬದುಕಿ ಬಂದ ತಾತಪ್ಪನ ವಿರುದ್ಧ ಪ್ರಕರಣ ದಾಖಲಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಬಾಲ್ಯ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸಂಪೂರ್ಣ ಕೇಸ್ ಉಲ್ಟಾ
ರಾಯಚೂರಿನ ಗುರ್ಜಾಪುರ ಬ್ಯಾರೇಜ್ ಬಳಿ ನಡೆದಿದ್ದ ಈ ಘಟನೆ ರಾಜ್ಯ ಹಾಗೂ ದೇಶಾದ್ಯಂತ ಸುದ್ದಿಯಾಗಿತ್ತು. ತಾತಪ್ಪನ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ಹಲವು ಬಾರಿ ಹೇಳಿದ್ದಳು ಎಂದು ತಾತಪ್ಪ ಆರೋಪಿಸಿದ್ದ. ಇಷ್ಟೇ ಅಲ್ಲ ಕುಟುಂಬಸ್ಥರು ಸಂಧಾನ ಮಾತುಕತೆಯೂ ನಡೆಸಿದ್ದರು ಎಂದಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಪತ್ನಿ ಉದ್ದೇಶಪೂರ್ವಕವಾಗಿ ನದಿಗೆ ತಳ್ಳಿದ್ದಾಳೆ ಎಂದು ಆರೋಪಿಸಿದ್ದರು. ಆದರೆ ದಿನದಿಂದ ದಿನಕ್ಕೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಕೇಸ್ ಉಲ್ಟಾ ಆಗಿದೆ.
ತಾತಾಪ್ಪ ಗಂಭೀರ ಆರೋಪ ಮಾಡಿದ ಪತ್ನಿ ಅಪ್ರಾಪ್ತೆ ಅನ್ನೋದು ಬಯಲಾಗಿದೆ.15 ವರ್ಷ 8 ತಿಂಗಳ ಅಪ್ರಾಪ್ತೆಯನ್ನ ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢ ಹಿನ್ನಲೆ ಪ್ರಕರಣ ದಾಖಲಾಗಿದೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯವವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ತಾತಪ್ಪ ಹಾಗೂ ಆತನ ತಾಯಿ ಮತ್ತು ಅಪ್ರಾಪ್ತೆಯ ತಾಯಿ ವಿರುದ್ಧ ದೂರು ದಾಖಲಾಗಿದೆ.
ತಾತಪ್ಪನ ಕುಟುಂಬಸ್ಥರ ವಿಚಾರಣೆ ನಡೆಸಿದ ಅಧಿಕಾರಿಗಳ ತಂಡ
ಜುಲೈ 19 ರಂದು ತಾತಪ್ಪನ ಕುಟುಂಬಸ್ಥರನ್ನು ಅಧಿಕಾರಿಗಳ ತಂಡ ವಿಚಾರಣೆ ನಡೆಸಿದ್ದರು. ಮದುವೆ ಆಮಂತ್ರಣ ಪತ್ರಿಕೆ ಹಾಗೂ ಶಾಲಾ ದಾಖಲಾತಿ ಪರಿಶೀಲನೆ ವೇಳೆ ಅಪ್ರಾಪ್ತೆ ವಯಸ್ಸು ಧೃಡವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಮೂವರ ವಿರುದ್ಧದ ಕೇಸ್ ದಾಖಲಾಗಿದೆ. ಈ ಪ್ರಕರಣವನ್ನ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಪ್ರಕರಣ ವಿವರ
ಎ1 ಆರೋಪಿ: ಅಪ್ರಾಪ್ತೆ ಪತಿ ತಾತಪ್ಪ
ಎ2 ಆರೋಪಿ: ತಾತಪ್ಪ ತಾಯಿ ಗದ್ದೆಮ್ಮ
ಎ3 ಆರೋಪಿ: ಅಪ್ರಾಪ್ತೆ ಬಾಲಕಿ ತಾಯಿ ವಿರುದ್ಧವೂ ಕೇಸ್ ದಾಖಲು
ದೇವಸೂಗೂರು ಪಿಡಿಒ ರವಿಕುಮಾರ್ ರಿಂದ ದೂರು ದಾಖಲಿಸಿದ್ದರು. ಇದೀಗ ವಿಚಾರಣೆ ತೀವ್ರಗೊಳ್ಳುತ್ತಿದೆ. ತಾತಪ್ಪ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಪ್ರಾಪ್ತೆಯ ರಕ್ಷಿಸಿದ ಮಕ್ಕಳ ರಕ್ಷಣಾ ಘಟಕ
ತಾತಪ್ಪ ಹಾಗೂ ಇತರ ಇಬ್ಬರ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ, ಯಾದಗಿರಿ ಮಕ್ಕಳಾ ರಕ್ಷಣಾ ಘಟಕದಿಂದ ಈಗಾಗಲೇ
ಅಪ್ರಾಪ್ತೆಯ ರಕ್ಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಅಪ್ರಾಪ್ತೆಯನ್ನು ಸ್ಥಳಾಂತರಿಸಲಾಗಿದೆ. ನಾಳೆಯಿಂದ ಮಹಿಳಾ ಪೊಲೀಸರ ತನಿಖೆ ಆರಂಭಗೊಳ್ಳಲಿದೆ.