ಬಸ್‌ ಓಡಿದರೂ ಮಸ್ಕಿ ಸಾರಿಗೆ ಘಟಕಕ್ಕೆ ಆದಾಯವೇ ಬರ್ತಿಲ್ಲ!

By Web DeskFirst Published Oct 15, 2019, 3:14 PM IST
Highlights

ಮಸ್ಕಿ ಸಾರಿಗೆ ಘಟಕಕ್ಕೆ ಆದಾಯ ಕಂಠಕ| ಬಸ್‌ ಓಡಿದರೂ ಮಸ್ಕಿ ಘಟಕಕ್ಕೆ ಆದಾಯವಿಲ್ಲ| ಸೌಲಭ್ಯದಲ್ಲೂ ಹಿಂದೆ ಬಿದ್ದ ಮಸ್ಕಿ ಡಿಪೋ| ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಘಟಕ ಮಸ್ಕಿ ತಾಲೂಕು ಕೇಂದ್ರವಾಗುವುದಕ್ಕೂ ಮೊದಲೇ ಆರಂಭವಾಗಿದೆ| ಮಸ್ಕಿ ಸಾರಿಗೆ ಘಟಕದಿಂದ ಪ್ರತಿ ನಿತ್ಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚರಿಸುತ್ತಿವೆ| ಮಾಸಿಕ ಮತ್ತು ವಾರ್ಷಿಕವಾಗಿ ನಿಗದಿಯಿರುವ ಆದಾಯದ ಅಂಕಿ-ಸಂಖ್ಯೆ ಹತ್ತಿರ ಸುಳಿದೇ ಇರುವಷ್ಟು ನಷ್ಟ ಅನುಭವಿಸುತ್ತಿದೆ|

ಇಂದರಪಾಷ ಚಿಂಚರಕಿ

ಮಸ್ಕಿ[ಅ.15]:  ಪಟ್ಟಣದಲ್ಲಿ ಸುಮಾರು 10-12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಸ್ಕಿ ಸಾರಿಗೆ ಇಲಾಖೆ ಘಟಕವು ಆದಾಯವಿಲ್ಲದೇ ಬರೀ ನಷ್ಟವೇ ಅನುಭಿಸುತ್ತಿದ್ದು, ಇದರಿಂದ ಘಟಕದ ಅಭಿವೃದ್ಧಿ ಹಾಗೂ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ.

ಪಟ್ಟಣದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಘಟಕ ಮಸ್ಕಿ ತಾಲೂಕು ಕೇಂದ್ರವಾಗುವುದಕ್ಕೂ ಮೊದಲೇ ಆರಂಭವಾಗಿದೆ. ಮಸ್ಕಿ ಸಾರಿಗೆ ಘಟಕದಿಂದ ಪ್ರತಿ ನಿತ್ಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಮಾಸಿಕ ಮತ್ತು ವಾರ್ಷಿಕವಾಗಿ ನಿಗದಿಯಿರುವ ಆದಾಯದ ಅಂಕಿ-ಸಂಖ್ಯೆ ಹತ್ತಿರ ಸುಳಿದೇ ಇರುವಷ್ಟು ನಷ್ಟ ಅನುಭವಿಸುತ್ತಿದೆ.

ಘಟಕ 2007ರಲ್ಲಿ ಆರಂಭ:

ಮಸ್ಕಿ ಪಟ್ಟಣದಲ್ಲಿ 2007ರಲ್ಲಿ ಮಸ್ಕಿ ಸಾರಿಗೆ ಘಟಕ ತಲೆ ಎತ್ತಿದೆ. ಪಟ್ಟಣದ ಲಿಂಗಸುಗೂರು ರಸ್ತೆಯ ಹೊರವಲಯದಲ್ಲಿ 6 ಎಕರೆ ಜಮೀನಿನಲ್ಲಿ ಸಾರಿಗೆ ಘಟಕ ಆರಂಭಿಸಲಾಯಿತು. ಆರಂಭದಲ್ಲಿ ಡಿಪೋಗೆ ಕಟ್ಟಡ ಬಿಟ್ಟರೆ ಬೇರೆನೂ ಸೌಕರ್ಯವಿರಲಿಲ್ಲ. ಸದ್ಯ ಘಟಕದಲ್ಲಿ 74 ಬಸ್‌ಗಳು ಸಂಚಾರದಲ್ಲಿವೆ. ಈ ಬಸ್‌ಗಳು ಸೇರಿ ಇತರೆ ಮೂಲಗಳಿಂದ ಮಾಸಿಕ 1.50 ಕೋಟಿಯಿಂದ 2 ಕೋಟಿವರೆಗೂ ಆದಾಯ ಗಳಿಕೆಯ ಗುರಿ ನೀಡಲಾಗುತ್ತದೆ. ಆದರೆ, ಸಾರಿಗೆ ಘಟಕ ಆರಂಭವಾಗಿ ಇದುವರೆಗೂ ನಿಗದಿತ ಆದಾಯ ಹರಿದು ಬಂದಿಲ್ಲ. ಮಾಸಿಕವಾಗಿ 50-60 ಲಕ್ಷ ರೂ.ದಂತೆ ಹಾಗೂ ವಾರ್ಷಿಕ 5-6 ಕೋಟಿಯಷ್ಟು ನಷ್ಟದಲ್ಲಿದೆ. ಪ್ರತಿ ವರ್ಷವೂ ನಷ್ಟದಲ್ಲಿಯೇ ಇರುವ ಇಲ್ಲಿನ ಸಾರಿಗೆ ಘಟಕ ವಾರ್ಷಿಕ ವರದಿ ನೀಡಿದಾಗ ಕಲಬುರಗಿ ಈಶಾನ್ಯ ಸಾರಿಗೆ ವಿಭಾಗ ವ್ಯಾಪ್ತಿಯ ಎಲ್ಲ ಡಿಪೋಗಳಿಗಿಂತಲೂ ಅತ್ಯಂತ ಹೆಚ್ಚು ನಷ್ಟ ಅನುಭವಿಸಿದ ಘಟಕವಾಗಿದೆ. ಪ್ರತಿ ವರ್ಷವೂ ಇಲ್ಲಿನ ಡಿಪೋ ನಷ್ಟದಲ್ಲಿಯೇ ಇರುವುದರಿಂದ ಸೌಲಭ್ಯದಲ್ಲೂ ಕೂಡ ಮಸ್ಕಿ ಸಾರಿಗೆ ಘಟಕ ತುಂಬಾ ಬಡವೆನಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಟ್ಟಣದ ಸಾರಿಗೆ ಘಟಕಕ್ಕೆ ಇದುವರೆಗೆ ಕಾಂಪೌಂಡ್‌ ಗೋಡೆ ನಿರ್ಮಾಣ ಬಿಟ್ಟರೆ ಹೇಳಿಕೊಳ್ಳುವಂತಹ ಸೌಲಭ್ಯಗಳೂ ಇಲ್ಲ. ಆದರೆ, ಕಳೆದ ನಾಲ್ಕೈದು ತಿಂಗಳ ಹಿಂದೆ 2 ಕೋಟಿ ರೂ. ಮೊತ್ತದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಡಿಪೋ ಆವರಣ ಪೂರ್ಣ ಸಿಸಿ ರಸ್ತೆಯಾಗಿಲ್ಲ. ಬದಲಾಗಿ ಅಲ್ಲಲ್ಲಿ ಮಾತ್ರ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಪುನಃ 1 ಕೋಟಿ ರೂ. ಸಿಸಿ ರಸ್ತೆಗಾಗಿ ಬಿಡುಗಡೆಯಾಗಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ.

ನೀರಿನ ಕೊರತೆ:

ಘಟಕ ಪ್ರಾರಂಭವಾಗಿನಿಂದಲೂ ವಾಹನಗಳನ್ನು ತೊಳೆಯಲು ಹಾಗೂ ಸಿಬ್ಬಂದಿಗಳ ಬಳಕೆಗೆ ನೀರನ್ನು ಖಾಸಗಿಯವರಿಂದ ಖರೀದಿ ಮಾಡಬೇಕಾದ ಅನಿವಾರ್ಯವಿದೆ. ಕಾರಣ ಈ ಹಿಂದೆ ಘಟಕದ ಆವರಣದಲ್ಲಿ ಅನೇಕ ಬಾರಿ ಬೋರ್‌ವೆಲ್‌ಗಳು ಕೊರೆಸಿದರೂ ಪ್ರಯೋಜನವಾಗಿಲ್ಲ. ಇದರಿಂದಲೂ ಒಂದು ರೀತಿಯಲ್ಲಿ ನಷ್ಟವುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಡಿಪೋ ಆವರಣ ಪೂರ್ಣ ಸಿಸಿ ರಸ್ತೆಯಾಗದ ಕಾರಣ ಡಿಸೇಲ್‌, ಸಣ್ಣ-ಪುಟ್ಟ ರಿಪೇರಿ, ರಾತ್ರಿ ಪಾಳಯದಲ್ಲಿ ನಿಲುಗಡೆಗೆ ಬರುವ ಬಸ್‌ಗಳು ಕೆಸರುಮಯವಾದ ಜಾಗದಲ್ಲಿಯೇ ನಿಲ್ಲುವಂತಾಗಿದೆ. ಮಳೆ ಬಂದರೆ ತೀವ್ರ ಕೆಸರು ಗದ್ದೆ ರೂಪ ತಾಳುವ ಡಿಪೋ ಆವರಣ ಬಸ್‌ಗಳ ಓಡಾಟದಿಂದ ಮತ್ತಷ್ಟುದುಸ್ಥಿತಿಗೆ ತಲುಪುತ್ತಿದೆ. ಆದಾಯ ಗಳಿಕೆಯಲ್ಲೂ ಹಿಂದೆ ಬಿದ್ದಿದ್ದರಿಂದ ಮಸ್ಕಿ ಸಾರಿಗೆ ಘಟಕದ ಅಭಿವೃದ್ಧಿ ಕೂಡ ಕಡೆಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈಗಲಾದರೂ ಸಂಬಂಧ ಪಟ್ಟಅಧಿಕಾರಿಗಳು ಘಟಕಕ್ಕೆ ಬೇಕಾದ ನೀರಿನ ವ್ಯವಸ್ಥೆ ಮಾಡಿ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೌಲಭ್ಯ ಒದಗಿಸಿ ನಷ್ಟಸರಿದೂಗಿಸಲು ಮುಂದಾಗಬೇಕಿದೆ.

ಈ ಬಗ್ಗೆ ಮಾತನಾಡಿದ ಮಸ್ಕಿ ಸಾರಿಗೆ ಘಟಕದ ವ್ಯವಸ್ಥಾಪಕ ರವಿಶಂಕರ್‌ ಅವರು,  2007ರಲ್ಲಿ ಮಸ್ಕಿ ಸಾರಿಗೆ ಘಟಕ ಆರಂಭವಾಗಿದೆ. ಆರಂಭವಾದಾಗಿನಿಂದ ಇಲ್ಲಿಯವರೆಗೂ ನಿಗದಿತ ಆದಾಯ ಬಂದಿಲ್ಲ. ಪಟ್ಟಣದಲ್ಲಿ ವ್ಯಾಪಾರ-ವಹಿವಾಟುಗಳಿಲ್ಲದ ಕಾರಣ ಪಟ್ಟಣಕ್ಕೆ ಪ್ರಯಾಣಿಕರ ಸಂಚಾರ ಮಿತಿಯಲ್ಲಿದೆ ಎಂದು ತಿಳಿಸಿದ್ದಾರೆ. 

ತಾಲೂಕಿನ ಇನ್ನೂ ಹತ್ತಾರು ಗ್ರಾಮಗಳಿಗೆ ಬಸ್‌ ಸೌಲಭ್ಯವಿಲ್ಲ. ಪ್ರಯಾಣಿಕರಿಗೆ ಅವಶ್ಯಕತೆ ಇರುವ ಮಾರ್ಗದಲ್ಲಿ ಬಸ್‌ ಸಂಚಾರ ಪ್ರಾರಂಭಿಸಿದರೆ ಆದಾಯ ಬರುತ್ತದೆ. ಬಸ್‌ಗಳ ಕೊರತೆ ಇದೆ. ಸಂಚಾರ ಆರಂಭಿಸುವಂತೆ ಎರಡ್ಮೂರು ತಿಂಗಳಿಗೊಮ್ಮೆ ವಿವಿಧ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುತ್ತಾರೆ. ಗ್ರಾಮೀಣ ಪ್ರದೆಶಗಳಿಗೆ ಸಮರ್ಪಕವಾಗಿ ಬಸ್‌ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ
ಎಂದು ಸ್ಥಳೀಯ ನಿವಾಸಿಯದ ರಾಜೀವ್‌ ಅವರು ತಿಳಿಸಿದ್ದಾರೆ.  

click me!