ಟಿಸಿಎಸ್‌ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸುದೀರ್ಘ ಸೇವೆ ಕೇವಲ 30 ನಿಮಿಷದಲ್ಲಿ ಅಂತ್ಯ!

Published : Oct 25, 2025, 03:01 PM IST
TCS

ಸಾರಾಂಶ

13 ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಸೇವೆ ಸಲ್ಲಿಸಿದ್ದ ಟೆಕ್ಕಿಯೊಬ್ಬರನ್ನು ಕೇವಲ 30 ನಿಮಿಷಗಳಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಐಟಿ ಉದ್ಯೋಗಿಗಳ ವೇದಿಕೆ (FITE) ಆರೋಪಿಸಿದೆ.  

ಟಿಸಿಎಸ್‌ನಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿದ್ದ ಟೆಕ್ಕಿಯೊಬ್ಬರು ಕೇವಲ 30 ನಿಮಿಷಗಳಲ್ಲಿ ರಾಜೀನಾಮೆ ನೀಡುವಂತೆ ಸಂಸ್ಥೆಯಿಂದ ಒತ್ತಾಯಿಸಲಾಗಿದೆ ಎಂದು ಐಟಿ ಉದ್ಯೋಗಿಗಳ ವೇದಿಕೆ (ಎಫ್‌ಐಟಿಇ) ಆರೋಪಿಸಿದೆ . ಟಿಸಿಎಸ್ ಪಾವತಿಸಿದ ಆರೋಗ್ಯ ವಿಮೆಗೆ ₹60,000 ಪಾವತಿಸಲು ಉದ್ಯೋಗಿಗೆ ಸೂಚಿಸಲಾಗಿದೆ. ಅವರಿಗೆ ವೇತನವನ್ನು ನಿರಾಕರಿಸಲಾಯಿತು ಮತ್ತು ಕೇವಲ ಮೂರು ತಿಂಗಳ ಒಟ್ಟು ವೇತನವನ್ನು ಮಾತ್ರ ಪಡೆಯಲಾಯಿತು. ಕೇವಲ ಅರ್ಧಗಂಟೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಯ್ತು. ಏನಾದ್ರೂ ಸಹಾಯ ಮಾಡಿ ಎಂದು ಮೆಸೇಜ್ ಹಾಕಿರುವ ಸ್ಟ್ರೀನ್ ಶಾಟ್ ವೈರಲ್ ಆಗಿದೆ. ಐಟಿ ಉದ್ಯೋಗಿಗಳಿಗಾಗಿ ವೇದಿಕೆ FITE ಇದನ್ನು ಟ್ವೀಟ್ ಮಾಡಿ ಪ್ರಶ್ನಿಸಿದೆ.

ಇತ್ತೀಚಿನ ದಿನಗಳಲ್ಲಿ TCS ವಜಾ ಸಾಮಾನ್ಯ

ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ವಜಾಗೊಳಿಸುವಿಕೆ ಕ್ರಮಗಳು ಕಂಪನಿಯ ಸಾವಿರಾರು ನೌಕರರ ಮನಸ್ಸಿನಲ್ಲಿ ಆತಂಕ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿವೆ. ಕಳಪೆ ಕಾರ್ಯಕ್ಷಮತೆ, ಹೊಸ ಯೋಜನೆಗಳ ಕೊರತೆ, ಹಾಗೂ ಅಮೆರಿಕಾ ಮತ್ತು ಯುರೋಪ್‌ನ ಆರ್ಥಿಕ ಮಂದಗತಿಯಂತಹ ಕಾರಣಗಳನ್ನು ಉಲ್ಲೇಖಿಸಿ ಅನೇಕ ನೌಕರರನ್ನು ಕಂಪನಿ ಬಿಟ್ಟುಹೋಗುವಂತೆ ಕೇಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಗಸ್ಟ್ ತಿಂಗಳಲ್ಲಿ ಟಿಸಿಎಸ್ ಸುಮಾರು 12,000 ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆ ಘೋಷಿಸಿತ್ತು. ಕಂಪನಿಯ ಹೇಳಿಕೆಯ ಪ್ರಕಾರ, ಇದು ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಳವಡಿಕೆಯಿಂದ ಉಂಟಾದ ಕಾರ್ಯಪದ್ಧತಿ ಬದಲಾವಣೆಯ ಭಾಗವೆಂದು ಹೇಳಲಾಗಿತ್ತು. ಆದರೆ, ವಿವಿಧ ಐಟಿ ಉದ್ಯೋಗಿ ಸಂಘಟನೆಗಳು ನಿಜವಾದ ವಜಾಗೊಳಿಸುವಿಕೆಯ ಸಂಖ್ಯೆ ಕಂಪನಿ ಹೇಳಿದುದಕ್ಕಿಂತ ಬಹಳ ಹೆಚ್ಚಿನದು 50,000ರಿಂದ 1 ಲಕ್ಷದವರೆಗೆ ಇರಬಹುದು ಎಂದು ಆರೋಪಿಸಿವೆ.

ಐಟಿ ಮತ್ತು ಐಟಿಇಎಸ್ ನೌಕರರ ಒಕ್ಕೂಟ (UNITE)ನ ಪ್ರಧಾನ ಕಾರ್ಯದರ್ಶಿ ಅಲಗುನಂಬಿ ವೆಲ್ಕಿನ್ ಅವರ ಪ್ರಕಾರ, ಟಿಸಿಎಸ್ ನೌಕರರನ್ನು ಬಲವಂತವಾಗಿ ರಾಜೀನಾಮೆ ನೀಡಲು ಒತ್ತಡ ಹೇರುತ್ತಿದೆ. ಕೆಲವು ಮಾನವ ಸಂಪನ್ಮೂಲ ಅಧಿಕಾರಿಗಳು ಕಾನೂನು ಕ್ರಮಗಳ ಬೆದರಿಕೆ ಹಾಕುತ್ತಾ, ಸಂಬಳ, ಭವಿಷ್ಯ ನಿಧಿ ಹಾಗೂ ಗ್ರಾಚ್ಯುಟಿ ಪಾವತಿಗಳನ್ನು ತಡೆಹಿಡಿಯುವುದಾಗಿ ಹೇಳುತ್ತಿದ್ದಾರೆ. ಕೆಲವರು ಕಾರ್ಮಿಕ ವಕೀಲರ ಸಹಾಯವೂ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಚೆನ್ನೈನ ಸಿರುಸೇರಿ ಕ್ಯಾಂಪಸ್‌ನಲ್ಲಿ, ಉದ್ಯೋಗಿಗಳನ್ನು ಸಪರೇಷನ್ ಸಭೆಗಳನ್ನು ಕರೆದು (Separation Meetings) ಅವರ ಸಹೋದ್ಯೋಗಿಗಳಿಂದ ಪ್ರತ್ಯೇಕಿಸಲಾಗುತ್ತಿದೆ ಎಂದು ವೆಲ್ಕಿನ್ ವಿವರಿಸಿದ್ದಾರೆ. ಈ ಸಭೆಗಳಿಗೆ ಮೂರು ಪ್ರತ್ಯೇಕ ಕೊಠಡಿಗಳಿದ್ದು, ಅಲ್ಲಿ ಮಾನವ ಸಂಪನ್ಮೂಲ ಪ್ರತಿನಿಧಿ, ಸಾಮಾನ್ಯ ವೈದ್ಯರು ಮತ್ತು ಮನೋವೈದ್ಯರು ಹಾಜರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಈ ಎಲ್ಲ ಆರೋಪಗಳನ್ನು ಟಿಸಿಎಸ್ ಕಂಪನಿ ತಳ್ಳಿ ಹಾಕಿದೆ. ಈ ಹಿಂದೆ ನಾವು ಸ್ಪಷ್ಟಪಡಿಸಿದಂತೆ, ವಜಾಗೊಳಿಸುವಿಕೆಯ ಪರಿಣಾಮವು ನಮ್ಮ ಒಟ್ಟು ಉದ್ಯೋಗಿಗಳ ಶೇಕಡಾ 2ರಷ್ಟಿನವರಿಗೂ ಮಾತ್ರ ಸೀಮಿತವಾಗಿದೆ. ಪ್ರತಿಯೊಬ್ಬರ ವೈಯಕ್ತಿಕ ಪರಿಸ್ಥಿತಿಯನ್ನು ಗಮನಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಆದರೆ, ಕೆಲಸ ಕಳೆದುಕೊಂಡ ಹಲವಾರು ನೌಕರರು ಕಂಪನಿಯ ವಿವರಣೆಗೂ ವಿಭಿನ್ನವಾದ ವಾಸ್ತವವನ್ನು ಬಯಲಿಗೆಳೆದಿದ್ದಾರೆ. ಸೆಪ್ಟೆಂಬರ್ 8ರಂದು ಕೊನೆಯ ಕೆಲಸದ ದಿನವಾಗಿದ್ದ ಟಿಸಿಎಸ್‌ನ ಮಾಜಿ ಉದ್ಯೋಗಿಯೊಬ್ಬರು, ಕೆಲಸದಿಂದ ತೆರವಾಗಿದ್ದ ಕೆಲವರನ್ನು ಮಾನವ ಸಂಪನ್ಮೂಲ ಅಧಿಕಾರಿಗಳು ನಿರ್ಗಮಿಸಿದ ನಂತರವೂ ಸಂಪರ್ಕಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಕಂಪನಿಯನ್ನು ಬಿಟ್ಟು 15 ದಿನಗಳಾದ ಬಳಿಕವೂ HR ಅಧಿಕಾರಿಗಳು ಕರೆ ಮಾಡಿ, ನಿಮಗೆ ಮನೋವೈದ್ಯರನ್ನು ಭೇಟಿ ಮಾಡುವ ಆಸಕ್ತಿಯಿದೆಯೇ? ಎಂದು ವಿಚಾರಿಸಿದರು. ಅದು ನಮಗೆ ಆಶ್ಚರ್ಯ ಉಂಟುಮಾಡಿತು ಎಂದು ಮಾಜಿ ನೌಕರರು ಹೇಳಿದ್ದಾರೆ. ಈ ಘಟನೆಗಳ ಸರಮಾಲೆಯಿಂದ, ಐಟಿ ವಲಯದಲ್ಲಿ ಸಂಸ್ಥೆಯೊಳಗಿನ ಉದ್ಯೋಗ ಭದ್ರತೆ, ಕೃತಕ ಬುದ್ಧಿಮತ್ತೆಯ ಪರಿಣಾಮ, ಹಾಗೂ ಮಾನವ ಸಂಪನ್ಮೂಲ ನೀತಿಗಳ ನೈತಿಕತೆ ಕುರಿತ ಚರ್ಚೆಗಳು ಮತ್ತೊಮ್ಮೆ ಚುರುಕುಗೊಂಡಿವೆ.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?