#WorkfromHome ಮಾಡಿ ತಲೆ ಕೆಡ್ತಿದೆಯಾ? ಹೀಗ್ ರಿಲ್ಯಾಕ್ಸ್ ಆಗಿ...

By Suvarna NewsFirst Published Apr 10, 2020, 6:25 PM IST
Highlights
ಮನೆಯಲ್ಲೇ ಕುಳಿತು ಆಫೀಸ್ ಕೆಲ್ಸ ಮಾಡೋದು ಅಂದ್ಕೊಂಡಷ್ಟು ಸುಲಭವಲ್ಲ. ಇಡೀ ದಿನ ಕೆಲಸದ ಹ್ಯಾಂಗ್‍ಓವರ್‍ನಲ್ಲೇ ಇರಬೇಕಾಗುತ್ತೆ. ಇದ್ರಿಂದ ಹೊರಬರಲು ಕೆಲ್ಸ ಮುಗಿದ ತಕ್ಷಣ ಒಂದಿಷ್ಟು ಚಟುವಟಿಕೆ ಕೈಗೊಳ್ಳೋದು ಅಗತ್ಯ.
ವರ್ಕ್ ಫ್ರಂ ಹೋಂ ಅಂದ ತಕ್ಷಣ ಜಾಸ್ತಿ ಕೆಲ್ಸ ಇರೋಲ್ಲ ಎಂಬ ಭಾವನೆ ಮೂಡುತ್ತೆ. ಆಫೀಸ್‍ಗೆ ಹೋಗಬೇಕಾಗಿಲ್ಲ, ಮನೆಯಲ್ಲೇ ಕುಳಿತು ಆರಾಮವಾಗಿ ಕೆಲಸ ಮಾಡಬಹುದು ಎಂಬುದು ಬಹುತೇಕರ ಲೆಕ್ಕಾಚಾರವಾಗಿರುತ್ತೆ. ಆದ್ರೆ ಯಾವಾಗ ನೀವು ಮನೆಯಲ್ಲಿ ಕುಳಿತು ಕೆಲಸ ಮಾಡಲು ಪ್ರಾರಂಭಿಸುತ್ತೀರೋ ಆಗ ಗೊತ್ತಾಗುತ್ತೆ ಇದು ಎಷ್ಟು ಕಷ್ಟದ ಕೆಲಸ ಎಂಬುದು. ಆಫೀಸ್‍ನಲ್ಲಿ ಎಲ್ಲರೂ ಕೆಲಸ ಮಾಡುವ ಮೂಡ್‍ನಲ್ಲೇ ಇರುತ್ತಾರೆ. ಹೀಗಾಗಿ ಆಫೀಸ್‍ಗೆ ಕಾಲಿಟ್ಟ ತಕ್ಷಣ ನಮ್ಮ ಮನಸ್ಸು ಅಲ್ಲಿನ ವಾತಾವರಣಕ್ಕೆ ಟ್ಯೂನ್ ಆಗಿ ಬಿಡುತ್ತೆ. ಆ ದಿನ ಮಾಡಿ ಮುಗಿಸಬೇಕಾದ ಎಲ್ಲ ಕೆಲಸಗಳನ್ನು ಆರಾಮವಾಗಿ ಪೂರ್ಣಗೊಳಿಸುತ್ತೀರಿ. ಇನ್ನು ಆಫೀಸ್ ಎಂದ ಮೇಲೆ ಅಲ್ಲೊಂದು ಶಿಸ್ತಿರುತ್ತೆ. ಆದ್ರೆ ಮನೆ ಎಂದ ತಕ್ಷಣ ನಮ್ಮಲ್ಲೊಂದು ಉದಾಸೀನತೆ, ಕಂಫರ್ಟ್ ಝೋನ್ ಕ್ರಿಯೇಟ್ ಆಗಿ ಬಿಡುತ್ತೆ. ಇನ್ನು ಮನೆಯಲ್ಲಿ ಒಂದು ಸ್ಥಳದಲ್ಲಿ ಫಿಕ್ಸ್ ಆಗಿ ಕುಳಿತು ಕೆಲಸ ಮಾಡೋದೇ ಎಲ್ಲಕ್ಕಿಂತ ದೊಡ್ಡ ಸವಾಲು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಹತ್ತಾರು ಅಡಚಣೆಗಳು.ಇವೆಲ್ಲದರ ಮಧ್ಯೆ ಕೆಲಸ ಮುಗಿಸೋ ವೇಳೆಗೆ ಜೀವ ಬಾಯಿಗೆ ಬಂದಿರುತ್ತೆ. ಹೀಗಾಗಿ ಮನೆಯಲ್ಲಿ ಆಫೀಸ್ ಕೆಲ್ಸ ಮುಗಿಸಿದ ಬಳಿಕ ಕೆಲವೊಂದು ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಮನಸ್ಸಿಗೆ ರಿಲ್ಯಾಕ್ಸ್ ಸಿಗುವ ಜೊತೆಗೆ ಹೊಸ ಚೈತನ್ಯ ಮೂಡುತ್ತದೆ. ಈ ಲಾಕ್‍ಡೌನ್ ಸಮಯದಲ್ಲಿ ಕೈಗೊಳ್ಳಬಹುದಾದ ಅಂಥ ಕೆಲವು ಚಟುವಟಿಕೆಗಳು ಇಲ್ಲಿವೆ.

ಆಫೀಸ್ ಪಾಲಿಟಿಕ್ಸ್‌ನಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಕೆಲಸ ಮುಗಿದ ತಕ್ಷಣ ಸ್ನಾನ ಮಾಡಿ
ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಆಫೀಸ್‍ಗೆ ಹೋಗೋದು ಬಹುತೇಕರ ಅಭ್ಯಾಸ. ಸ್ನಾನದಿಂದ ಮೈ ಮನಸ್ಸು ಫ್ರೆಶ್ ಆಗಿ ಕೆಲಸ ಮಾಡಲು ಹೊಸ ಉತ್ಸಾಹ ಬರುತ್ತೆ. ಆಫೀಸ್ ಕೆಲಸ ಮುಗಿದ ತಕ್ಷಣ ಕೂಡ ನೀವು ಶವರ್ ಕೆಳಗೆ ನಿಂತು ಸ್ವಲ್ಪ ಹೊತ್ತು ನೀರಿಗೆ ಮೈಯೊಡ್ಡಿದ್ರೆ ಮೈ ಕೊಳೆ ಮಾತ್ರವಲ್ಲ, ಮನಸ್ಸಿನ ಒತ್ತಡವೂ ತೊಳೆದು ಹೋಗುತ್ತೆ. ಈಗಂತೂ ಬೇಸಿಗೆ ಬೇರೆ, ದೇಹ ಬೇಗ ಸುಸ್ತಾಗುತ್ತೆ. ಜೊತೆಗೆ ಬೆವರು ಬೇರೆ. ಹಾಗಾಗಿ ಕೆಲಸ ಮುಗಿದ ತಕ್ಷಣ ಸ್ನಾನ ಮಾಡಿದ್ರೆ ದೇಹದ ಜೊತೆಗೆ ಮನಸ್ಸೂ ಹಗುರವಾಗುತ್ತೆ. ರಿಫ್ರೆಶ್ ಆದ ಫೀಲ್ ಸಿಗುತ್ತೆ.

ಹೊಸ ರೆಸಿಪಿ ಟ್ರೈ ಮಾಡಿ
ಬೆಳಗ್ಗೆಯಿಂದ ರಾತ್ರಿ ತನಕ ಲ್ಯಾಪ್‍ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಿ. ಇದರಿಂದ ಮನಸ್ಸು ಜಡ್ಡುಗಟ್ಟಿರುತ್ತೆ. ಮನಸ್ಸಿಗೆ ಉತ್ಸಾಹ ತುಂಬಲು, ಟೆನ್ಷನ್‍ನಿಂದ ಹೊರಬರಲು ಹೊಸ ಚಟುವಟಿಕೆಯೊಂದನ್ನು ಕೈಗೊಳ್ಳೋದು ಅಗತ್ಯ. ಕ್ರಿಯೇಟಿವ್ ಆಗಿ ಮಾಡಬಹುದಾದ ಚಟುವಟಿಕೆಗಳಲ್ಲಿ ಅಡುಗೆಯೂ ಒಂದು. ಹೊಸ ರೆಸಿಪಿ ಟ್ರೈ ಮಾಡಿ, ಮನೆಮಂದಿಗೆ ಅದರ ರುಚಿ ತೋರಿಸಿ. ಪೂರ್ತಿ ಕೆಲಸವನ್ನು ನೀವೇ ಮಾಡಬೇಕು ಎಂದೇನಿಲ್ಲ. ನಿಮ್ಮ ಪತಿ ಅಥವಾ ಪತ್ನಿ ಅಥವಾ ಕುಟುಂಬದ ಇತರ ಸದಸ್ಯರ ನೆರವು ಪಡೆಯಬಹುದು. ಅಡುಗೆ ಮಾಡುವಾಗ ಹಾಗೂ ಆ ಬಳಿಕ ಸಿಗುವ ಖುಷಿ ಮನಸ್ಸಿನ ಬೇಗುದಿಗಳನ್ನು ದೂರ ಮಾಡಬಲ್ಲದು.

ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?

ವ್ಯಾಯಾಮ ಮಾಡೋಕೆ ಯೋಚ್ನೆ ಮಾಡ್ಬೇಡಿ
ಒಂದೆಡೆ ಕುಳಿತು 8-10 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ಈ ಅವಧಿಯಲ್ಲಿ ಶರೀರ ಸಂಪೂರ್ಣ ವಿಶ್ರಾಂತಿಯಲ್ಲಿರುತ್ತೆ. ಆದ್ರೆ ತಲೆಗೆ ಸಿಕ್ಕಾಪಟ್ಟೆ ಕೆಲಸ ನೀಡಬೇಕಾಗುತ್ತೆ. ಕೆಲಸ ಪೂರ್ಣಗೊಳಿಸುವ ಹೊತ್ತಿಗೆ ತಲೆಯೆಲ್ಲ ಭಾರವಾದ ಅನುಭವ. ಆದ್ರೆ ನಿಮ್ಗೆ ಗೊತ್ತಾ? ಹೀಗಾದ ಸಂದರ್ಭದಲ್ಲಿ ಒಂದಿಷ್ಟು ವ್ಯಾಯಾಮ ಮಾಡಿದ್ರೆ ದೇಹದ ನರನಾಡಿಗಳು ಸಡಿಲವಾಗುವ ಜೊತೆಗೆ ಮಿದುಳು ಕೂಡ ಸುತ್ತಲೂ ಏನಾಗುತ್ತಿದೆ ಎಂಬುದನ್ನು ಗ್ರಹಿಸುವ ಮೂಲಕ ವಾಸ್ತವಕ್ಕೆ ಬರುತ್ತದೆ. ವ್ಯಾಯಾಮ ಮಿದುಳನ್ನು ಕ್ರಿಯಾಶೀಲಗೊಳಿಸುವ ಜೊತೆಗೆ ಚುರುಕು ಮುಟ್ಟಿಸುತ್ತೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 

ಪುಸ್ತಕ ಪ್ರೀತಿಗೆ ಸೂಕ್ತ ಸಮಯ
ಒಂದೊಳ್ಳೆ ಪುಸ್ತಕ ಮನಸ್ಸಿನ ಒತ್ತಡವನ್ನು ದೂರ ಮಾಡಬಲ್ಲದು. ಕೆಲಸ ಮಾಡಿ ಸುಸ್ತಾಗಿದ್ರೆ ಒಂದು ಕಥೆ ಪುಸ್ತಕವನ್ನು ಹಿಡಿದು ಓದಲು ಪ್ರಾರಂಭಿಸಿ. ಸ್ವಲ್ಪ ಸಮಯದಲ್ಲೇ ನೀವು ಆ ಕಥೆಯಲ್ಲಿನ ಪಾತ್ರಗಳೊಂದಿಗೆ ಒಂದಾಗುತ್ತೀರಿ, ಇಷ್ಟು ಹೊತ್ತು ನಿಮ್ಮನ್ನು ಕಾಡುತ್ತಿದ್ದ ಒತ್ತಡ, ಸುಸ್ತು ಎಲ್ಲವೂ ಮಾಯವಾಗುತ್ತೆ.

ಕಣ್ತುಂಬಾ ನಿದ್ರಿಸಲು ಮರೆಯಬೇಡಿ
ಅದೆಷ್ಟೇ ಒತ್ತಡ ಇರಲಿ, ಸುಸ್ತಿರಲಿ, ಕಣ್ತುಂಬಾ ನಿದ್ರೆ ಮಾಡಿ ಎದ್ರೆ ಸಾಕು, ಎಲ್ಲವೂ ಮಾಯವಾಗುತ್ತವೆ. ನಿದ್ರೆಗೆ ಅಂಥ ಮಾಯಾವಿ ಶಕ್ತಿಯಿದೆ. ಈಗ ಮನೆಯಲ್ಲೇ ಕುಳಿತು ಕೆಲಸ ಮಾಡೋದು ಎಂಬ ಕಾರಣಕ್ಕೆ ತಡರಾತ್ರಿ ತನಕ ಮೂವೀ ನೋಡೋದು ಇಲ್ಲವೆ ವಾಟ್ಸ್‍ಆಪ್, ಫೇಸ್‍ಬುಕ್‍ನಲ್ಲಿ ಚಾಟ್ ಮಾಡುತ್ತ ಕುಳಿತುಕೊಂಡ್ರೆ ಮರುದಿನ ನಿಮ್ಮ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿರುತ್ತೆ. ಆದಕಾರಣ ಪ್ರತಿದಿನ ರಾತ್ರಿ ಸರಿಯಾದ ಸಮಯಕ್ಕೆ ಮಲಗಲು ಮರೆಯಬೇಡಿ. 

ನಿದ್ರೆ ಕೊರತೆ ನಿಮ್ಮ ಕರಿಯರ್‌ಗೆ ಎರವಾಗುತ್ತದೆ, ಜೋಕೆ!

ನಗು ನಗುತ್ತಲಿರಿ
ಮನೆಯಲ್ಲೇ ಕೂತು ಕೂತು ಬೇಜಾರಾಗೋದಂತೂ ನಿಜ. ಆದ್ರೆ ಏನ್ ಮಾಡೋದು ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಆಯ್ಕೆಯಿಲ್ಲ. ಆದಕಾರಣ ಮನೆಯೊಳಗೆ ಮನಸ್ಸಿಗೆ ಖುಷಿ ನೀಡುವ, ಬಾಯ್ತುಂಬಾ ನಗಲು ಅವಕಾಶ ಕಲ್ಪಿಸುವ ಸಂಗತಿಗಳನ್ನು ಸೃಷ್ಟಿಸುತ್ತಿರಿ. ಹಾಸ್ಯ ಒತ್ತಡಗಳನ್ನು ಮರೆಯಲು ಸಹಾಯ ಮಾಡುತ್ತೆ. ಆದಕಾರಣ ಪ್ರತಿದಿನ ನಗು ಮೂಡಿಸುವ ವಿಷಯಗಳನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳಿ. 
click me!