ಟಾಟಾ ಸೋಶಿಯಲ್ ಸೈನ್ಸ್ ಸಂಸ್ಥೆಯಿಂದ 115 ನೌಕರರ ಉದ್ಯೋಗ ಕಡಿತ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಮಾಹಿತಿ ತಿಳಿಯುತ್ತಿದ್ದಂತೆ ರತನ್ ಟಾಟಾ ಮಧ್ಯಪ್ರವೇಶಿಸಿದ್ದಾರೆ. ಕೆಲಸ ಕಳೆದುಕೊಂಡು 115 ಮಂದಿಯನ್ನು ಮರುನೇಮಕ ಮಾಡಿಸಿ, ಹೆಚ್ಚುವರಿ ಆರ್ಥಿಕ ನೆರವನ್ನು ನೀಡಿದ್ದಾರೆ.
ಮುಂಬೈ(ಜು.2) ಉದ್ಯಮಿ ರತನ್ ಟಾಟಾ ತಮ್ಮ ಉದ್ಯಮ ಸಾಮ್ರಾಜ್ಯಕ್ಕಿಂತ ಹೆಚ್ಚು ಸಾಮಾಜಿಕ ಕಾರ್ಯಗಳ ಮೂಲಕ ದೇಶದ ಮೂಲೆ ಮೂಲೆಗೆ ತಲುಪಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ರತನ್ ಟಾಟಾ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಇದೀಗ ರತನ್ ಟಾಟಾ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹೀಗೆ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಹೀಗೆ ಟಾಟಾ ಸೋಶಿಯಲ್ ಸೈನ್ಸ್ ಶಿಕ್ಷಣ ಸಂಸ್ಥೆಯಿಂದ(TISS) ಒಟ್ಟು 115 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಮಾಹಿತಿ ತಿಳಿದ ರತನ್ ಟಾಟಾ ಮಧ್ಯಪ್ರವೇಶಿಸಿದ್ದಾರೆ. TISS ಸಂಸ್ಥೆ ಜೊತೆ ಮಾತನಾಡಿ ಬೀದಿಪಾಲಾದ 115 ಮಂದಿಯನ್ನೂ ಮರು ನೇಮಕ ಮಾಡಿಸಿದ್ದಾರೆ.
TISS ಸಂಸ್ಥೆಯ ಆರ್ಥಿಕ ಹೊರೆ ಕಡಿಮೆ ಮಾಡಲು 55 ಉಪನ್ಯಾಸಕರು ಹಾಗೂ 60 ಬೋಧಕೇತರ ಸಿಬ್ಬಂದಿ ಒಟ್ಟು 115 ಮಂದಿಯನ್ನು ಕೆಲಸದಿಂದ ವಜಾ ಮಾಡಿತ್ತು. ಜೂನ್ 28 ರಂದು TISS ಸಂಸ್ಥೆ ಈ ನಿರ್ಧಾರ ಪ್ರಕಟಿಸಿತ್ತು. ಇದು 115 ಸಿಬ್ಬಂದಿಗಳಿಗೆ ಆಘಾತ ನೀಡಿತ್ತು. ಆದರೆ ಜೂನ್ 30 ರಂದು ಈ ಮಾಹಿತಿ ರತನ್ ಟಾಟಾ ಕಿವಿಗೆ ಬಿದ್ದಿದೆ.
ಸಾವು ಬದುಕಿನ ಹೋರಾಟದಲ್ಲಿದ್ದ ನಾಯಿ ಪ್ರಾಣ ಉಳಿಸಿದ ರಕ್ತ ದಾನ, ಧನ್ಯವಾದ ತಿಳಿಸಿದ ರತನ್ ಟಾಟಾ!
ಈ ಮಾಹಿತಿ ಗೊತ್ತಾಗುತ್ತಿದ್ದಂತೆ ರತನ್ ಟಾಟಾ ನೇರವಾಗಿ TISS ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಸ್ಥೆ ಆರ್ಥಿಕ ಹೊರೆ ಎದುರಿಸುತ್ತಿರುವುದಾಗಿ ಮಾಹಿತಿ ನೀಡಿದೆ. ತಕ್ಷಣವೆ ಟಾಟಾ ಶಿಕ್ಷಣ ಟ್ರಸ್ಟ್(TET) ಜೊತೆ ಮಾತುಕತೆ ನಡೆಸಿದ ರತನ್ ಟಾಟಾ ಮಹತ್ವದ ನಿರ್ಧಾರ ಘೋಷಿಸಿದ್ದಾರೆ.
ಟಾಟಾ ಶಿಕ್ಷಣ ಸಂಸ್ಥೆಯಿಂದ ಟಾಟಾ ಟಾಟಾ ಸೋಶಿಯಲ್ ಸೈನ್ಸ್ ಶಿಕ್ಷಣ ಸಂಸ್ಥೆಗೆ ಆರ್ಥಿಕ ನೆರವು ಘೋಷಿಸಿದ್ದಾರೆ. ಇಷ್ಟೇ ಅಲ್ಲ ಕೆಲಸದಿಂದ ವಜಾ ಮಾಡಿದ 115 ನೌಕರರನ್ನು ಮರುನೇಮಕ ಮಾಡುವಂತೆ ರತನ್ ಟಾಟಾ ಸೂಚಿಸಿದ್ದಾರೆ. ತಕ್ಷಣವೇ ವಜಾ ಗೊಂಡಿರುವ ವೇತನ ಬಿಡುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಟಾಟಾ ಶಿಕ್ಷಣ ಸಂಸ್ಥೆಯಿಂದ ಕಳೆದ 6 ತಿಂಗಳಿನಿಂದ ಆರ್ಥಿಕ ಅನುದಾನ ಬಂದಿಲ್ಲ. ಇತ್ತ TISS ಆರ್ಥಿಕ ಹೊರೆ ಹೆಚ್ಚಾಗಿದೆ. ಹೀಗಾಗಿ ಉದ್ಯೋಗ ಕಡಿತ ಬಿಟ್ಟು ಬೇರೆ ಮಾರ್ಗ ಇರಲಿಲ್ಲ ಎಂದು TISS ಹೇಳಿದೆ. ಇತ್ತ ರತನ್ ಟಾಟಾ ಮಧ್ಯಪ್ರವೇಶದಿಂದ ಇದೀಗ ಸಮಸ್ಯೆ ಬಗೆ ಹರಿದಿದೆ. ಇಷ್ಟೇ ಅಲ್ಲ ಬೀದಿಪಾಲಾಗಿದ್ದ ಸಿಬ್ಬಂದಿಗಳು ಮರು ನೇಮಕಗೊಂಡಿದ್ದಾರೆ. ರತನ್ ಟಾಟಾ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮ ನೆರವು ಬೇಕಿದೆ, ಕೂಡುಗೈ ದಾನಿ ರತನ್ ಟಾಟಾ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಮನವಿ!