ಯಶಸ್ವಿಯಾದ ಬೆಂಗಳೂರು ಉದ್ಯೋಗ ಮೇಳ, 1 ಲಕ್ಷಕ್ಕೂ ಹೆಚ್ಚು ಜನರಿಗೆ ನೌಕರಿ ಭಾಗ್ಯ!

By Kannadaprabha NewsFirst Published Feb 28, 2024, 4:53 PM IST
Highlights

 ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘ಯುವ ಸಮೃದ್ಧಿ ಸಮ್ಮೇಳನ- ಬೃಹತ್ ಉದ್ಯೋಗ ಮೇಳ’ ಯಶಸ್ವಿಯಾಗಿದ್ದು  1 ಲಕ್ಷಕ್ಕೂ ಹೆಚ್ಚು ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಕಲಬುರಗಿ, ಬೆಳಗಾವಿ, ಮೈಸೂರಲ್ಲೂ ಶೀಘ್ರ ಪ್ರಾದೇಶಿಕ ಉದ್ಯೋಗ ಮೇಳ ನಡೆಯಲಿದೆ.

ಬೆಂಗಳೂರು (ಫೆ.28): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘ಯುವ ಸಮೃದ್ಧಿ ಸಮ್ಮೇಳನ- ಬೃಹತ್ ಉದ್ಯೋಗ ಮೇಳ’ ಯಶಸ್ವಿಯಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಕಲಬುರಗಿ, ಬೆಳಗಾವಿ, ಮೈಸೂರು ಮುಂತಾದ ಕಡೆಗಳಲ್ಲಿ ಶೀಘ್ರದಲ್ಲೇ ಪ್ರಾದೇಶಿಕ ಉದ್ಯೋಗ ಮೇಳಗಳನ್ನು ಆಯೋಜಿಸುತ್ತೇವೆ. ಇದು ನಿರಂತರ ಪ್ರಕ್ರಿಯೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

 ಅಗ್ನಿವೀರ ನೇಮಕಾತಿ: ಆನ್‌ಲೈನ್‌ ಅರ್ಜಿಗೆ ಮಾ.22 ಕೊನೇ ದಿನ, ಅರ್ಹತೆಗಳೇನು?

ಉದ್ಯೋಗ ಮೇಳಕ್ಕೆ 580 ಉದ್ಯೋಗದಾತರು ಆಗಮಿಸಿ ಒಂದು ಲಕ್ಷ ಉದ್ಯೋಗ ಅವಕಾಶಗಳನ್ನು ಒದಗಿಸಿದ್ದಾರೆ. ಮೇಳಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಯುವಜನರು, ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದರು. ಇದೊಂದು ಐತಿಹಾಸಿಕ ಉದ್ಯೋಗ ಮೇಳವಾಗಿದ್ದು ಇದೇ ರೀತಿ ಕಲಬುರಗಿ, ಬೆಳಗಾವಿ, ಮೈಸೂರು ಮುಂತಾದ ಕಡೆಗಳಲ್ಲಿ ಪ್ರಾದೇಶಿಕ ಉದ್ಯೋಗ ಮೇಳಗಳನ್ನು ಆಯೋಜಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಉದ್ಯೋಗ ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿಯವರು ರಾಜ್ಯದ ಯುವ ಸಮುದಾಯಕ್ಕೆ ಉದ್ಯೋಗ, ಅಗತ್ಯವಾದ ಕೌಶಲ್ಯ, ಉದ್ಯಮಶೀಲತೆಗೆ ಪ್ರೋತ್ಸಾಹ ಮತ್ತು ಉದ್ಯೋಗ ಹುಡುಕುವ ಅವಧಿಯಲ್ಲಿ ನೆರವಾಗಲು ಯುವನಿಧಿ ಪ್ರೋತ್ಸಾಹಧನ ನೀಡುವ ಮೂಲಕ ಯುವ ಸಮುದಾಯಕ್ಕೆ ಸುಭದ್ರ ಭವಿಷ್ಯ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಯುವ ಸಮುದಾಯಕ್ಕೆ ಕೆಲಸ ಸಿಕ್ಕರೆ ದೇಶದ ಭವಿಷ್ಯ ಭದ್ರವಾಗಿರುತ್ತದೆ. ಹೀಗಾಗಿ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ನಾವು ಪಣ ತೊಟ್ಟಿದ್ದೇವೆ. ಅದಕ್ಕಾಗಿಯೇ ಈ ಮೇಳ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

384 ಕೆಎಎಸ್ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ, ನೇರ ನೇಮಕಾತಿಗೆ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಕೆ

ಈಗ ಇರುವ ಜಿಟಿಟಿಸಿಗಳನ್ನು ಸಶಕ್ತಗೊಳಿಸುವ ಜೊತೆಗೆ ಹೊಸದಾಗಿ ಜಿಟಿಟಿಸಿ ಕೇಂದ್ರಗಳನ್ನು ಆರಂಭಿಸುತ್ತೇವೆ. ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಮತ್ತು ಜಿಟಿಟಿಸಿಗಳಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡುತ್ತೇವೆ. ಇಂದಿನ ಕಾಲದ ಉದ್ಯೋಗಗಳಿಗೆ ಯಾವ ರೀತಿಯ ಕೌಶಲ್ಯ ಬೇಕೋ ಅಂತಹ ಕೌಶಲ್ಯ ನೀಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. 2014-15ರಲ್ಲಿ 2.1ರಷ್ಟು ಇದ್ದ ನಿರುದ್ಯೋಗ ಪ್ರಮಾಣ, ಈಗ ಶೇ.8.40ಕ್ಕೆ ಏರಿಕೆಯಾಗಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎಂದು ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು. ಯುವನಿಧಿ ಮೂಲಕ ಪದವೀಧರರು ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಕ್ರಮವಾಗಿ ₹3,000 ಮತ್ತು ₹1,500 ಕೊಡುತ್ತಿರುವ ಕಾರಣ ಉದ್ಯೋಗ ಹುಡುಕುವ ಅವಧಿಯಲ್ಲಿ ಅವರಿಗೆ ಸಹಕಾರಿಯಾಗುತ್ತಿದೆ ಎಂದು ಅವರು ಹೇಳಿದರು.

ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, 10ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವೀಧರರ ವರೆಗೆ ಎಲ್ಲರೂ ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ಬೃಹತ್ ಉದ್ಯೋಗ ಮೇಳವಿದು ಎಂದರು. ನೆಮ್ಮದಿಯ ಬದುಕು ನೀಡುವ ಉದ್ದೇಶದ ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ 1.40 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಹಣ ಕೊಡುತ್ತಿದ್ದೇವೆ ಎಂದರು. 

ಕೌಶಲ್ಯ ನೀಡಲು ಯುವನಿಧಿ ಪ್ಲಸ್ ಯೋಜನೆಯನ್ನು ಆರಂಭಿಸಲಾಗಿದೆ. ಉದ್ಯೋಗಾರ್ಹ ಕೌಶಲ್ಯ ನೀಡಬೇಕು. ಇಲ್ಲಿ ಸಾಕಷ್ಟು ಅವಕಾಶ ಇವೆ. ಉದ್ಯೋಗ ಸಿಗದಿದ್ದರೆ ಮುಂದೆ ಕೌಶಲ್ಯ ಕೊಟ್ಟು ಪ್ಲೇಸ್ ಮೆಂಟ್ ಕೊಡಿಸುತ್ತೇವೆ ಎಂದು ಅವರು ಹೇಳಿದರು.

- ಬೆಂಗಳೂರಿನಲ್ಲಿ ನಡೆದ ಯುವ ಸಮೃದ್ಧಿ ಹೆಸರಿನ ಬೃಹತ್‌ ಉದ್ಯೋಗ ಮೇಳ

- ಮೇಳಕ್ಕೆ 580 ಉದ್ಯೋಗದಾತರ ಆಗಮನ, ಒಂದು ಲಕ್ಷ ಉದ್ಯೋಗ ಭರವಸ

- ಯುವನಿಧಿ ಮೂಲಕ ಯುವಜನರಿಗೆ ಸುಭದ್ರ ಭವಿಷ್ಯ ಕೊಡಲು ಬದ್ಧ ಎಂದ ಸಿಎಂ

- ಉದ್ಯೋಗ ಮೇಳದಲ್ಲಿ ಕೆಲಸ ಸಿಗದವರಿಗೆ ಸರ್ಕಾರದಿಂದಲೇ ಕೌಶಲ್ಯ ತರಬೇತಿ

click me!