
ಮೊದಲೆಲ್ಲಾ ಭಾರತೀಯರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ತಮ್ಮ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದರು. ಆದರ ಜನರೇಷನ್ ಜೆಡ್ ಉದ್ಯೋಗಿಗಳು ಜನರೇಷನ್ ವೈ ಹಾಗೂ ಎಕ್ಸ್ ರೀತಿ ತಲೆತಗ್ಗಿಸಿಕೊಂಡು ಮ್ಯಾನೇಜರ್ ಹೇಳುವುದನ್ನೆಲ್ಲಾ ಕೇಳಿಕೊಂಡು ಕಿವಿ ಮುಚ್ಚಿಕೊಂಡು ಕೇಳಲು ಸಿದ್ಧರಿಲ್ಲ, ಅವರದ್ದು ಟೈಮ್ ಅಂದ್ರ ಟೈಮ್, ರೂಲ್ಸ್ ಅಂದ್ರೆ ರೂಲ್ಸ್, ಕೆಲಸದ ಅವಧಿ 8 ಗಂಟೆಯಾಗುತ್ತಿದ್ದರೆ, 8 ಗಂಟೆಯಾಗುತ್ತಿದ್ದಂತೆ ರೈಟ್ ಎಂದು ಹೊರಟು ಬಿಡುತ್ತಾರೆ. ಕಂಪನಿಗಳಲ್ಲಿ ತಮಗಿರುವ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವವರು ಕೂಡ ಅವರೇ ರಜೆಗಳು, ಆರೋಗ್ಯ ಸವಲತ್ತುಗಳು, ಇತರ ಸೌಲಭ್ಯಗಳನ್ನು ಅವರು ಧೈರ್ಯವಾಗಿಯೇ ಕೇಳುತ್ತಾರೆ. ಇದರಿಂದಾಗಿ ಇತ್ತೀಚೆಗೆ ಕೆಲ ಸಂಸ್ಥೆಗಳಲ್ಲಿ ಹೆಚ್‌ಆರ್ ನಿಯಮಗಳೇ ಬದಲಾಗುತ್ತಿದೆ. ಜನರೇಷನ್ ಜೆಡ್ ಜೊತೆ ಕೆಲಸ ಮಾಡಿಸಿಕೊಳ್ಳುವುದು ಕಷ್ಟ ಎಂದು ಸಂಸ್ಥೆಗಳೇ ಹೇಳುತ್ತಿವೆ.
ಜನರೇಷನ್ ಝೆಡ್ ಉದ್ಯೋಗಿಯ ವೀಡಿಯೋದಲ್ಲೇನಿದೆ?
ಹೀಗಿರುವಾಗ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಷಕಾರಿ ಅಥವಾ ಟಾಕ್ಸಿಕ್ ಕೆಲಸದ ಸಂಸ್ಕೃತಿಯ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಜನರೇಷನ್ ಎಕ್ಸ್ ಹಾಗೂ ವೈ ಹಾಗೂ ಅದರ ಹಿಂದಿನ ತಲೆಮಾರುಗಳು ಬಾಯ್ ಮುಚ್ಚಿಕೊಂಡು ಮಾಡುತ್ತಿದ್ದ ಕೆಲಸಗಳು ಈಗ ಜನರೇಷನ್ ಜೆಡ್‌ಗೆ ಟಾಕ್ಸಿಕ್ ಎಂದೆನಿಸುತ್ತಿದೆ. ಅದೇ ರೀತಿ ಈಗ ಯುವತಿಯೊಬ್ಬಳು ತನ್ನ ಕಚೇರಿಯ ಟಾಕ್ಸಿಕ್ ಕೆಲಸದ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ತಮ್ಮ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ. Shatakshi Pandey ಎಂಬಾಕೆ ತನ್ನ ಕಚೇರಿಯ ಕೆಲಸದ ಸಂಸ್ಕೃತಿ ಬಗ್ಗೆ ಮಾತನಾಡಿದ್ದು, ವೈರಲ್ ಆಗ್ತಿದೆ.
ಕೆಲಸದ ಅವಧಿ ಮುಗಿದ ಮೇಲೆ ಕೆಲಸ ಹೇಳಿದ ಉದ್ಯೋಗಿ:
ಪ್ರಿಯ ಎಕ್ಸ್ ಹಾಗೂ ವೈ ತಲೆಮಾರಿನ ಜನರೇ ಕಠಿಣ ಪರಿಶ್ರಮದ ಹೆಸರಿನಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ವೈಭವೀಕರಿಸಬೇಡಿ ಎಂದು ಆಕೆ ಹೇಳಿದ್ದಾಳೆ. ವೀಡಿಯೊದಲ್ಲಿ ಆಕೆ, 'ತೋ ಮೈ ಅಭಿ ಘರ್ ವಾಪಿಸ್ ಜಾ ರಹಿ ಹೂನ್ ಆಫೀಸ್ ಸೆ, ಔರ್ ಮೇರಿ ಜೋ ರಿಪೋರ್ಟಿಂಗ್ ಮ್ಯಾನೇಜರ್ ಹೈ, ಉನ್ಹೋನೆ ಮುಝೆ ಬೋಲಾ ಕಿ 'ಥೋಡಾ ಸಾ ಔರ್ ಕಾಮ್ ಹೈ ಶತಾಕ್ಷಿ, ದೇ ರಹಾ ಹೂನ್ ಕರ್ ದೋ.' ಮೈನೆ ಉಂಕೋ ಕಹಾ 'ನಹಿ ಸರ್, ಆಜ್ ಮುಝೆ ಟೈಮ್ ಪರ್ ನಿಕಲ್ನಾ ಹೈ ಎಂದು ಹೇಳಿದ್ದಾಗಿ ಹಿಂದಿಯಲ್ಲಿ ಹೇಳಿಕೊಂಡಿದ್ದಾಳೆ. ಅದರರ್ಥ ನಾನೀಗ ಮನೆಗೆ ಹೋಗುತ್ತಿದ್ದೇನೆ, ಹಾಗೂ ನನ್ನ ರಿಪೋರ್ಟಿಂಗ್ ಮ್ಯಾನೇಜರ್ ನನಗೆ ಶತಾಕ್ಷಿ, ಸ್ವಲ್ಪ ಹೆಚ್ಚು ಕೆಲಸವಿದೆ, ನಾನು ಅದನ್ನು ನಿಮಗೆ ನಿಯೋಜಿಸುತ್ತಿದ್ದೇನೆ, ದಯವಿಟ್ಟು ಅದನ್ನು ಮಾಡಿ ಎಂದು ಹೇಳಿದರು. ನಾನು ಆತನಿಗೆ ಇಲ್ಲ ಸರ್, ನಾನು ಇಂದು ಸಮಯಕ್ಕೆ ಸರಿಯಾಗಿ ಹೊರಡಬೇಕು ಎಂದು ಹೇಳಿದ್ದಾಗಿ ಹೇಳಿಕೊಂಡಿದ್ದಾಳೆ.
ಹಾಗೆಯೇ ಮಾತು ಮುಂದುವರೆಸಿದ ಆಕೆ ನಾನು ಸರಿಯಾದ ಸಮಯಕ್ಕೆ ಹೊರಡಲು ಬಯಸುತ್ತೇನೆ ಹಾಗಂತ ನಾನು ಬೇಗನೆ ಹೊರಡಲು ಪ್ರಯತ್ನಿಸುತ್ತಿಲ್ಲ. ನಾನು ನನ್ನ ಕೆಲಸದ ಸಮಯವನ್ನು ಪೂರ್ಣಗೊಳಿಸಿದ್ದೇನೆ, ನಾನು ಹೆಚ್ಚುವರಿ ಸಮಯ ಕಚೇರಿಯಲ್ಲಿ ಉಳಿಯಲು ಬಯಸುವುದಿಲ್ಲ, ಏಕೆಂದರೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ ಇದಕ್ಕೆ ಆಕೆಯ ಮ್ಯಾನೇಜರ್ ಪ್ರತಿಕ್ರಿಯಿಸಿದ ರೀತಿಯನ್ನು ಆಕೆ ಹಂಚಿಕೊಂಡಿದ್ದಾಳೆ.
ನಿಮಗೇ ಗೊತ್ತು? ನಾನು ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7 ಗಂಟೆಗೆ ತಲುಪಿದೆ. 7:30 ಕ್ಕೆ ಆಫೀಸ್‌ಗೆ ಬಂದೆ, ಮತ್ತು ನಾನು ಈಗ ಸಂಜೆ 6:30 ರವರೆಗೆ ಇಲ್ಲಿದ್ದೇನೆ. ಸರಿ, ನೀವು ಕೆಲಸ ಮಾಡಲು ಸಮಯವನ್ನು ನೀಡಿದ್ದೀರಿ,ಸರಿ, ನೀವು ಮನೆಗೆ ಹೋಗಬಹುದು ಎಂದರು. ಈ ಮನೋವಿಜ್ಞಾನ, ಈ ಮನಸ್ಥಿತಿ, ಈ ಕಂಡೀಷನಿಂಗ್ ಎಲ್ಲಿಂದ ಬರುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಒಬ್ಬ ವ್ಯಕ್ತಿ ದಿನಕ್ಕೆ ಎರಡು ಹೊತ್ತು ಊಟ ಸಂಪಾದಿಸಲು ಕೆಲಸ ಮಾಡುತ್ತಾನೆ, ಆದರೆ ಆ ಊಟವನ್ನೂ ನೆಮ್ಮದಿಯಿಂದ ತಿನ್ನಲು ಸಾಧ್ಯವಾಗದಿದ್ದರೆ, ಅದರ ಅರ್ಥವೇನು? ಅನಗತ್ಯವಾಗಿ ನಿಮ್ಮ ಕಷ್ಟಗಳನ್ನು ವೈಭವೀಕರಿಸುವುದು. ಅದು ಏಕೆ ಮುಖ್ಯ? ಇದೆಂತಹ ನರಕ? ನೀವು ಅದನ್ನು ವೈಭವೀಕರಿಸುವುದು ಏಕೆ? ಅತಿಯಾದ ಕೆಲಸದಿಂದ ನಿಮ್ಮನ್ನು ಕೊಲ್ಲುವುದು ಹೆಮ್ಮೆಪಡುವ ವಿಷಯವಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನೀವು ನನ್ನನ್ನು ಕೆಲಸದಿಂದ ವಜಾಗೊಳಿಸಿದರೂ ನನಗೆ ಚಿಂತೆಯಿಲ್ಲ, ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆಕೆಯ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ದೊಡ್ಡ ವಿಷಯಗಳನ್ನು ಸಾಧಿಸಲು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವುದು ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೆ ಇರಲಿ ಈ ಯುವತಿ ಅಭಿಪ್ರಾಯದ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.