
ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸದ ಮಧ್ಯೆ ಟೀ ಬ್ರೇಕ್ ಊಟದ ಬ್ರೇಕ್, ಲಂಚ್ ಬ್ರೇಕ್, ಸ್ಮೋಕಿಂಗ್ ಬ್ರೇಕ್ ಅಂತ ತುಸು ಕಾಲ ವಿರಾಮ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಹೀಗೆ ಬ್ರೇಕ್ ತೆಗೆದುಕೊಂಡು ಉದ್ಯೋಗಿಯೊಬ್ಬನನ್ನು ಸಂಸ್ಥೆ ಕೆಲಸದಿಂದ ವಜಾ ಮಾಡಿದ್ದು, ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಂದಹಾಗೆ ಉದ್ಯೋಗಿ ಬ್ರೇಕ್ ತೆಗೆದುಕೊಂಡಿದ್ದು, ಸ್ಮೋಕಿಂಗ್ ಮಾಡಲು. ಗುರುಗ್ರಾಮ್‌ನ ಸ್ಟಾರ್ಟ್‌ಅಪ್ ಕಂಪನಿಯೊಂದು ಹೀಗೆ ತನ್ನ ಉದ್ಯೋಗಿಯನ್ನು ವಜಾ ಮಾಡಿದ್ದು, ಇದಕ್ಕೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುಗ್ರಾಮ್ ಮೂಲದ ಸ್ಟಾರ್ಟ್‌ಅಪ್‌ನಿಂದ ತಮ್ಮನ್ನು ಹಠಾತ್ತನೆ ವಜಾಗೊಳಿಸಲಾಗಿದೆ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದ್ದು, ಅದು ಆನ್‌ಲೈನ್‌ನಲ್ಲಿ ಚರ್ಚೆಗೂ ಗ್ರಾಸವಾಗಿದೆ. ಕಂಪನಿಯಲ್ಲಿ ಕೇವಲ 20 ದಿನಗಳ ಕಾಲ ಕೆಲಸ ಮಾಡಿದ್ದ ಉದ್ಯೋಗಿಯೂ ತನಗೆ ಅಟಿಟ್ಯೂಡ್ ಸಮಸ್ಯೆ ಇದೆ ಹಾಗೂ ಡೌನ್ ಟು ಅರ್ಥ್ ನೇಚರ್ ಇಲ್ಲ ಎಂದು ಹೇಳಿ ನಾನು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಸಂಸ್ಥೆ ನನ್ನನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಡೆಲ್ಲಿ ಕಮ್ಯುನಿಟಿ ಎಂಬ ರೆಡಿಟ್ ಖಾತೆಯಿಂದ ಪೋಸ್ಟ್ ಆದ ಮಾಹಿತಿಯಂತೆ, ಸಂಸ್ಥೆಗೆ ಸೇರಿ ಕೇವಲ ಮೂರು ದಿನವಾಗುತ್ತಿದ್ದಂತೆ ಇದೆಲ್ಲವೂ ಶುರುವಾಯ್ತು. ಅವರ ಬಾಸ್ ಅವರಿಗೆ ನಿಮ್ಮೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ, ನಿಮಗೆ ಅತೀಯಾದ ಅಟಿಟ್ಯೂಡ್ ಸಮಸ್ಯೆ ಇದೆ ಎಂದು ಹೇಳಿದರು. ನಾನು ಗುರಗಾಂವ್‌ನಲ್ಲಿರುವ ಈ ಸ್ಟಾರ್ಟ್‌ಅಪ್‌ಗೆ ಸೇರಿಕೊಂಡೆ ಮತ್ತು ಮೂರನೇ ದಿನ ನನ್ನ ಉದ್ಯೋಗದಾತ ಈ ರೀತಿ ಆರೋಪಗಳನ್ನು ಮಾಡಲು ಶುರು ಮಾಡಿದರು, ನನಗೆ ಇನ್ನೂ ಏನೂ ಅರ್ಥವಾಗಿರಲಿಲ್ಲ, ನನಗೆ ಯಾವುದೇ ಆಟಿಟ್ಯೂಡ್ ಇಲ್ಲ, ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದೆ, ಆದರೂ ಅವನು ಹಾಗೆ ಏಕೆ ಹೇಳುತ್ತಿದ್ದಾನೆಂದು ನನಗೆ ಅರ್ಥವಾಗಲಿಲ್ಲ ಬರೆದುಕೊಂಡಿದ್ದಾರೆ.
ಇದರಿಂದ ಗೊಂದಲಕ್ಕೊಳಗಾಗಿದ್ದರೂ, ಅವರು ತಮ್ಮ ಉದ್ಯೋಗದಾತರಿಗೆ ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಆದರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಏಕೆಂದರೆ ನಾನು ಇತರ ಇಬ್ಬರು ಹೊಸ ಉದ್ಯೋಗಿಗಳೊಂದಿಗೆ ಚಹಾ, ಸ್ಮೋಕ್‌ಗೆ ವಿರಾಮ ತೆಗೆದುಕೊಳ್ಳುವುದು ಅವರಿಗೆ ಸಮಸ್ಯೆ ಆಗಿತ್ತು, ಕೆಲಸದ ಸ್ಥಳದಲ್ಲಿ ಗುಂಪುಗಳನ್ನು ರಚಿಸದಂತೆ ಎಚ್ಚರಿಕೆ ನೀಡಿದರು. ನಂತರ ಅವನು ಆಫೀಸ್‌ನಿಂದ ಸಮಯಕ್ಕೆ ಸರಿಯಾಗಿ ಹೊರಡುವ ಬಗ್ಗೆಯೂ ದೂರುಗಳು ಬಂದವು. ನೀವು ನಿಖರವಾಗಿ 7 ಗಂಟೆಗೆ ಹೊರಡುತ್ತಿದ್ದೀರಿ, ಇದು ಒಳ್ಳೆಯದಲ್ಲ ಎಂದು ಅವರಿಗೆ ಹೇಳಲಾಗಿತ್ತು ಎಂದು ಅವರು ನೆನಪಿಸಿಕೊಂಡರು.
ಹೀಗೆಯೇ ಮುಂದುವರಿದು ಕೆಲಸಕ್ಕೆ ಸೇರಿದ 20ನೇ ದಿನಕ್ಕೆ ಅವರಿಗೆ ಅವರನ್ನು ತಮ್ಮ ಮಾಮೂಲಿ ಸ್ಥಳದ ಬದಲು ನಿರ್ದೇಶಕರ ಕ್ಯಾಬಿನ್‌ನಿಂದ ಕೆಲಸ ಮಾಡುವಂತೆ ಕೇಳಲಾಯಿತು. ಅದಕ್ಕೂ ಅವರು ಒಪ್ಪಿಕೊಂಡರು. ಹಾಗೆಯೇ ಅದೇ ದಿನ ಸಂಜೆ 7 ಗಂಟೆಗೆ ಕ್ಯಾಬಿನ್‌ನ ಹೊರಗೆ ಅವರ ಸಹೋದ್ಯೋಗಿ ಹೊರಟು ಹೋಗಿದ್ದಾರೆಯೇ ಎಂದು ಪರಿಶೀಲಿಸಿದಕ್ಕೆ ಸಿಟ್ಟುಗೊಂಡ ಬಾಸ್ ಹೆಚ್‌ಆರ್‌ಗೆ ಕರೆ ಮಾಡಿ ಕೂಡಲೇ ಈ ಉದ್ಯೋಗಿಯನ್ನು ತಕ್ಷಣ ಕೆಲಸದಿಂದ ತೆಗೆದುಹಾಕುವಂತೆ ಹೇಳಿದರು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ನಂತರ ಆ ಉದ್ಯೋಗಿ ಈ ವಿಚಾರದ ಬಗ್ಗೆ ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇದಾದ ನಂತರ ಆ ಸಂಸ್ಥೆಯೂ ಕಂಪನಿಯ ಮತ್ತೊಬ್ಬ ಹೊಸ ಉದ್ಯೋಗಿಯನ್ನು ಕೂಡ ತೆಗೆದು ಹಾಕಿದೆ ಎಂದು ಅವರು ಹೇಳಿಕೊಂಡರು. ಅಲ್ಲದೇ ಅವರನ್ನು ವಜಾಗೊಳಿಸದ ಪತ್ರ ನೀಡದೆ ಆಟ ಆಡಿಸಿದ್ದಲ್ಲದೇ ಅಂತಿಮವಾಗಿ ಸಂಧಾನಕ್ಕೆ ಬರುವಂತೆ ಕರೆಯಿತು. ಈ ವೇಳೆ ನಿರ್ದೇಶಕರು ಸಂಭಾಷಣೆಯನ್ನು ರೆಕಾರ್ಡ್ ಮಾಡಿದರು ಆದರೆ ಸಂಭಾಷಣೆಯಲ್ಲಿರುವಂತೆ ಮಾಡಲು ನಿರಾಕರಿಸಿದರು ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯೋಗವು ಅಪ್‌ಡೇಟ್ ನೀಡುವವರೆಗೆ ನಾನು ಕಂಪನಿಯ ಹೆಸರು ಬಹಿರಂಗಪಡಿಸಬಹುದೇ ಇಲ್ಲದೇ ಎಂದು ಖಚಿತತೆ ಇಲ್ಲದ ಕಾರಣ ನಾನು ಕಂಪನಿಯ ಹೆಸರನ್ನು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಂಸ್ಥೆಯ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.