
ಸೋಶಿಯಲ್ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಕೇವಲ ಹವ್ಯಾಸವಾಗಿ ಉಳಿದಿಲ್ಲ. ಅದೊಂದು ಉದ್ಯೋಗವಾಗಿದೆ. ಅನೇಕರು ಕಂಟೆಂಟ್ ಕ್ರಿಯೇಷನ್ ಕೆಲ್ಸವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಅದ್ರ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಅದಕ್ಕೆ ಸಾರಾ ಆನ್ ಕೂಡ ಉದಾಹರಣೆ.
ಅಮೆರಿಕದ ಮಹಿಳೆ ಸಾರಾ ಆನ್ (Sarah Ann) ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬಿಡುವಿನ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ದರು. ಸೋಶಿಯಲ್ ಮೀಡಿಯಾ ವಿಡಿಯೋ ಮೂಲಕವೇ ಅವರು ಕೇವಲ ಏಳು ತಿಂಗಳಲ್ಲಿ ಬ್ರ್ಯಾಂಡ್ ಡೀಲ್ಗಳ ಮೂಲಕ ಬರೋಬ್ಬರಿ 1.75 ಕೋಟಿ ರೂಪಾಯಿ ಮೌಲ್ಯದ ಆಫರ್ ಪಡೆದಿದ್ದಾರೆ. ಈ ಯಶಸ್ಸಿನ ಬಳಿಕ ನರ್ಸ್ ಕೆಲಸಕ್ಕೆ ರಾಜೀನಾಮೆ ನೀಡಿ ಫುಲ್ಟೈಮ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಕಾಲ ನರ್ಸ್ ಕೆಲಸ ಮಾಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದರು ಸಾರಾ. ತಮ್ಮ ದೈನಂದಿನ ಜೀವನ, ಕೆಲಸದ ಅನುಭವಗಳು ಹಾಗೂ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ವಿಚಾರಗಳನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಆರಂಭದಲ್ಲಿ ತಮ್ಮ ವಿಡಿಯೋಗಳನ್ನು ಯಾರು ನೋಡುತ್ತಾರೆ ಎಂಬ ಅನುಮಾನ ಅವರಲ್ಲಿತ್ತು. ಅದರಲ್ಲೂ ನರ್ಸ್ ಮತ್ತು ಸಿಂಗಲ್ ಮದರ್ ಆಗಿರುವ ತಮ್ಮ ಜೀವನದ ಬಗ್ಗೆ ಜನರಿಗೆ ಆಸಕ್ತಿ ಇರುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ದಿನ ಕಳೆದಂತೆ ಅವರ ವಿಡಿಯೋಗಳಿಗೆ ವೀಕ್ಷಕರು ಹೆಚ್ಚಾಗತೊಡಗಿದರು. ಇದರಿಂದ ಬ್ರ್ಯಾಂಡ್ಗಳ ಗಮನವೂ ಅವರತ್ತ ಸೆಳೆಯಿತು. ಮೇ ತಿಂಗಳಲ್ಲಿ ಅವರಿಗೆ ಮೊದಲ ಬ್ರ್ಯಾಂಡ್ ಡೀಲ್ ಸಿಕ್ಕಿತು. ನಂತರ ಒಂದರ ಹಿಂದೆ ಒಂದರಂತೆ ಹಲವು ಬ್ರ್ಯಾಂಡ್ಗಳ ಜೊತೆ ಕೆಲಸ ಮಾಡುವ ಅವಕಾಶ ದೊರೆಯಿತು.
ಸಾರಾ ಆನ್ ತಮ್ಮ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಷನ್ನಿಂದ ಗಳಿಸಿದ ಹಣದ ಸಂಪೂರ್ಣ ಲೆಕ್ಕಾಚಾರ ಹಂಚಿಕೊಂಡಿದ್ದಾರೆ. ಮೇ ತಿಂಗಳಿಂದ ನವೆಂಬರ್ವರೆಗೆ ಬ್ರ್ಯಾಂಡ್ ಪಾರ್ಟ್ನರ್ಶಿಪ್ಗಳ ಮೂಲಕ ಒಟ್ಟು 1,87,785 ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 1.75 ಕೋಟಿ ರೂಪಾಯಿ ಮೌಲ್ಯದ ಆದಾಯದ ಒಪ್ಪಂದಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮೊತ್ತ ಕೇವಲ ಬ್ರ್ಯಾಂಡ್ ಡೀಲ್ಗಳಿಂದ ಬಂದಿರುವುದು. ಡಿಜಿಟಲ್ ಪ್ರಾಡಕ್ಟ್ಗಳು, ಸೋಶಿಯಲ್ ಮೀಡಿಯಾ ವೀಕ್ಷಣೆಗಳಿಂದ ಬರುವ ಹಣ ಹಾಗೂ ಅಫಿಲಿಯೇಟ್ ಲಿಂಕ್ಗಳ ಆದಾಯ ಇದರಲ್ಲಿ ಸೇರಿಲ್ಲ. ಆದರೆ ಈ ಸಂಪೂರ್ಣ ಮೊತ್ತ ಅವರ ಕೈಗೆ ಬಂದಿಲ್ಲ. ಬ್ರ್ಯಾಂಡ್ಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ನೆರವಾಗುವ ಏಜೆನ್ಸಿಗೆ ಕಮಿಷನ್ ನೀಡಬೇಕು. ಜೊತೆಗೆ ತೆರಿಗೆ ಪಾವತಿಗಾಗಿ ಒಂದಷ್ಟು ಹಣವನ್ನು ಮೀಸಲಿಡಬೇಕಾಗುತ್ತದೆ.
ಸಾರಾ ಆನ್ ಅವರ ಪ್ರಕಾರ, ಏಜೆನ್ಸಿ ಕಮಿಷನ್ ಮತ್ತು ತೆರಿಗೆಗಾಗಿ ಶೇಕಡಾ 25ರಿಂದ 35ರಷ್ಟು ಹಣವನ್ನು ಪ್ರತ್ಯೇಕವಾಗಿ ತೆಗೆದಿಟ್ಟ ಬಳಿಕ ಅವರ ಬಳಿ 88,071 ಡಾಲರ್ ಅಂದರೆ ಸುಮಾರು 82 ಲಕ್ಷ ರೂಪಾಯಿ ಉಳಿದಿದೆ. ಇನ್ನೊಂದು ವಿಶೇಷ ಸಂಗತಿಯೆಂದರೆ, ಕೇವಲ ಏಳು ತಿಂಗಳ ಕಂಟೆಂಟ್ ಕ್ರಿಯೇಷನ್ ಆದಾಯವು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಒಂದು ವರ್ಷದಲ್ಲಿ ಗಳಿಸುತ್ತಿದ್ದ ಸಂಬಳಕ್ಕಿಂತಲೂ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರು ನರ್ಸ್ ಕೆಲಸ ತೊರೆದು ಪೂರ್ಣಾವಧಿ ಕಂಟೆಂಟ್ ಕ್ರಿಯೇಷನ್ನಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.