ಲೋಕಸಭೆ ಫಲಿತಾಂಶ ನಂತರ ಜಿಪಂ, ತಾಪಂ ಚುನಾವಣೆ ಮುಹೂರ್ತ?

Published : May 22, 2024, 04:30 AM IST
ಲೋಕಸಭೆ ಫಲಿತಾಂಶ ನಂತರ ಜಿಪಂ, ತಾಪಂ ಚುನಾವಣೆ ಮುಹೂರ್ತ?

ಸಾರಾಂಶ

ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರಕ್ಕೆ ಪಂಚಾಯತ್‌ ಚುನಾವಣೆ ಸೇರಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸುವ ಉದ್ದೇಶವಿದೆ. ಇದಕ್ಕಾಗಿ ಚುನಾವಣೆ ನಡೆಸಲು ಅಡ್ಡಿಯಾಗಿರುವ ಕಾನೂನು ಅಡೆ-ತಡೆಗಳನ್ನು ನಿವಾರಿಸಲು ಮುಂದಾಗಲಿದೆ.

ಬೆಂಗಳೂರು(ಮೇ. 22):  ನೆನೆಗುದಿಗೆ ಬಿದ್ದಿರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆ ಮಳೆಗಾಲದ ನಂತರವೇ ನಡೆಯುವ ಸಂಭವವಿದೆ. ಸದ್ಯ ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರಕ್ಕೆ ಪಂಚಾಯತ್‌ ಚುನಾವಣೆ ಸೇರಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸುವ ಉದ್ದೇಶವಿದೆ. ಇದಕ್ಕಾಗಿ ಚುನಾವಣೆ ನಡೆಸಲು ಅಡ್ಡಿಯಾಗಿರುವ ಕಾನೂನು ಅಡೆ-ತಡೆಗಳನ್ನು ನಿವಾರಿಸಲು ಮುಂದಾಗಲಿದೆ.

ಚುನಾವಣೆ ನಡೆಸುವ ಸಂಬಂಧ ಈಗಾಗಲೇ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಗಡಿ ಹಾಗೂ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ನಿರ್ಧರಿಸಿದ್ದರೂ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸುವುದು ಬಾಕಿ ಇದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಆಕ್ಷೇಪ ಆಹ್ವಾನಿಸಬೇಕಾಗಿದೆ. ಈ ಸಂಬಂಧ ಬಂದ ಆಕ್ಷೇಪಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸುವುದು ಬಾಕಿ ಇದೆ. ಇದಾದ ನಂತರ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗುತ್ತದೆ.

ಬೆಂಗಳೂರು: ಸೆಪ್ಟೆಂಬರ್‌/ಅಕ್ಟೋಬರ್‌ಗೆ ಬಿಬಿಎಂಪಿ ಚುನಾವಣೆ

ಪಂಚಾಯಿತಿಗಳ ಚುನಾವಣೆ ನಡೆಸುವ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ 10 ದಿನದಲ್ಲಿ ಮೀಸಲಾತಿ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಿ, ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಇದಾದ ನಂತರ ಎರಡು ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು. ಅದರಂತೆ ರಾಜ್ಯ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಒಟ್ಟಾರೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ವಾರ್ಡ್‌ಗಳ ಮೀಸಲಾತಿ ಮಾತ್ರ ಈವರೆಗೆ ಅಂತಿಮಗೊಂಡಿಲ್ಲ.

ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದೆ. ಜತೆಗೆ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಇದಾದ ನಂತರ ವಿಧಾನ ಪರಿಷತ್ತಿನ 11 ಸ್ಥಾನಗಳ ಚುನಾವಣೆ ಎದುರಾಗಲಿದೆ. ಈ ಎಲ್ಲ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಇದೆ.

ಜೂನ್‌ ತಿಂಗಳಿಂದ ಮಳೆಗಾಲ ಶುರುವಾಗಲಿರುವುದರಿಂದ ಮಳೆಗಾಲ ಮುಗಿದ ಮೇಲೆ ಅಂದರೆ ಅಕ್ಟೋಬರ್‌ ನಂತರವೇ ಚುನಾವಣೆ ನಡೆಸಬಹುದಾಗಿದೆ. ಅಷ್ಟರೊಳಗೆ ಕಾನೂನಿನ ಎಲ್ಲ ಅಡೆ-ತಡೆಗಳನ್ನು ನಿವಾರಿಸಲು ಸರ್ಕಾರಕ್ಕೆ ಅವಕಾಶವಿದೆ.

ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಆಗೋರು ಯಾರೂ ಇಲ್ಲ: ಸಿಎಂ ಸಿದ್ದರಾಮಯ್ಯ

ಪಂಚಾಯ್ತಿ ಎಲೆಕ್ಷನ್‌ಗೆ ಸಜ್ಜಾಗಿ: ಡಿಕೆಶಿ ಸೂಚನೆ

ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿವಸ ಇರುತ್ತೇನೆಯೋ ಗೊತ್ತಿಲ್ಲ. ಈಗಲೇ 4 ವರ್ಷ ಆಗಿದೆ. ಅಧಿಕಾರ ಬಿಟ್ಟುಕೊಡುವ ಮುನ್ನ ಪಕ್ಷ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುತ್ತೇನೆ. ಮುಂಬರುವ ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯತ್ತ ಕಾರ್ಯಕರ್ತರು, ಮುಖಂಡರು ಗಮನ ಹರಿಸಬೇಕು. ಪಕ್ಷ ಸಂಘಟಿಸಿ ಸಿದ್ಧರಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. 

ಬೇಗ ಮೀಸಲು ಪ್ರಕಟ

ಪಂಚಾಯಿತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಬದ್ಧವಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಚುನಾವಣೆ ನಡೆಸಲು ಮನಸಿಲ್ಲದ ಕಾರಣ ಹಲವಾರು ನೆಪ ಒಡ್ಡಿ ಚುನಾವಣೆ ಮುಂದೂಡಿಕೊಂಡು ಬಂದಿತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಪಂಚಾಯಿತಿಗಳ ಗಡಿ ಮರುವಿಂಗಡಣೆ, ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದಷ್ಟು ಬೇಗ ಮೀಸಲಾತಿ ಪ್ರಕಟಿಸಲಾಗುವುದು ಎಂದು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌